ಕನ್ನಡ ಸುದ್ದಿ  /  Entertainment  /  Flash Back Column Not Rajinikanth Or Amitabh Dr Rajkumar Movie Was First To Be Remade In 7 Languages In India Mnk

Flash Back: ಈ ಒಂದು ವಿಚಾರದಲ್ಲಿ ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ಗೂ ಮೀರಿದವರು ಡಾ. ರಾಜ್‌ಕುಮಾರ್!

Anuraga Aralitu: ಕಲರ್‌ಫುಲ್‌ ಸಿನಿಮಾ ಲೋಕದ ಕೆಲವು ಕೌತುಕ ಕಥೆಗಳು, ತೆರೆ ಹಿಂದೆ ಅವಿತ ಸ್ವಾರಸ್ಯಕರ ಘಟನಾವಳಿಗಳ ಒಂದು ಇಣುಕು ನೋಟ ಈ ಫ್ಲಾಶ್‌ ಬ್ಯಾಕ್‌. ಇನ್ಮುಂದೆ ಪ್ರತಿ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಈ ಒಂದು ವಿಚಾರದಲ್ಲಿ ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ಗೂ ಮೀರಿದವರು ಡಾ. ರಾಜ್‌ಕುಮಾರ್!
ಈ ಒಂದು ವಿಚಾರದಲ್ಲಿ ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ಗೂ ಮೀರಿದವರು ಡಾ. ರಾಜ್‌ಕುಮಾರ್!

Dr Rajkumar: ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಅಲಿಯಾಸ್‌ ಡಾ. ರಾಜ್‌ಕುಮಾರ್‌, ಕರುನಾಡು ಮಾತ್ರವಲ್ಲದೆ ಅದರಾಚೆಗೂ ಹರಡಿಕೊಂಡವರು. ಕನ್ನಡ ಚಿತ್ರರಂಗದ ಮುಕುಟವೂ ಇವರೇ. ಮುತ್ತುರಾಜ ಎಂಬ ಹೆಸರಿಗೆ ತಕ್ಕಂತೆ ಅವರು ನೀಡಿದ ಒಂದೊಂದು ಚಿತ್ರವೂ ಮುತ್ತೇ! ಇದೀಗ ಅವರ ನೂರಾರು ಸಿನಿಮಾಗಳ ಪೈಕಿ ಒಂದು ಸಿನಿಮಾದ ವಿಶೇಷತೆ ಇಲ್ಲಿದೆ. ಆ ಚಿತ್ರವೇ ಅನುರಾಗ ಅರಳಿತು.

ಡಾ. ರಾಜ್‌ ಅವರ ಸಿನಿಮಾಗಳಲ್ಲಿ ಬಹುಪಾಲು ಕಾದಂಬರಿ ಆಧರಿತ ಚಿತ್ರಗಳೇ. ಅದೇ ರೀತಿ ಎಂ.ಎಸ್‌. ರಾಜಶೇಖರ್‌ ನಿರ್ದೇಶನದಲ್ಲಿ 1986, ಮೇ 16ರಂದು ರಾಜ್‌ಕುಮಾರ್‌, ಮಾಧವಿ, ಗೀತಾ ಮುಖ್ಯಭೂಮಿಕೆ ನಿಭಾಯಿಸಿದ ಅನುರಾಗ ಅರಳಿತು ಸಿನಿಮಾ ಕೂಡ ಕಾದಂಬರಿ ಆಧರಿತ ಚಿತ್ರ. ಎಚ್.ಜಿ. ರಾಧಾದೇವಿ ಬರೆದ ಅನುರಾಗದ ಅಂತಃಪುರ ಕಥೆಯನ್ನು ನಿರ್ದೇಶಕ ರಾಜಶೇಖರ್‌ ಸಿನಿಮಾರೂಪಕ್ಕೆ ತಂದಿದ್ದರು.

ಸಿನಿಮಾ ಮೂಡಿಬಂದ ಶೈಲಿ, ಉಪೇಂದ್ರ ಕುಮಾರ್‌ ಸಂಗೀತ, ಉದಯಶಂಕರ್‌ ಅವರ ಚಿತ್ರಕಥೆ ಹಾಡುಗಳಿಗೆ ಸಾಹಿತ್ಯ ಎಲ್ಲವೂ ಹದವಾಗಿ ಬೆರೆತ ಪರಿಣಾಮ ಅನುರಾಗ ಅರಳಿತು ಸಿನಿಮಾ ಹಿಟ್‌ ಪಟ್ಟಿಗೆ ಸೇರಿತ್ತು. ಆ ಕಾಲದಲ್ಲಿಯೇ ಬೆಳ್ಳಿತೆರೆ ಮೇಲೆ ಕಮಾಲ್‌ ಮಾಡಿ ಭರ್ಜರಿ ಶತದಿನೋತ್ಸವನ್ನೂ ಆಚರಿಸಿಕೊಂಡಿತ್ತು. ಗಂಗಾ ಯಮುನಾ ಸಂಗಮ.. ಶ್ರೀಕಂಠ ವಿಷಕಂಠ.. ಹೀಗೆ ಚಿತ್ರದ ಐದೂ ಹಾಡುಗಳೂ ಕೇಳುಗರ ಮನೆಸೆಳೆದಿದ್ದವೂ, ಈಗಲೂ ಆ ಹಾಡಿನ ಘಮ ಹಾಗೆಯೇ ಉಳಿದಿದೆ.

ಆದರೆ, ಈ ಸಿನಿಮಾ ಬಗ್ಗೆ ಹೇಳಬೇಕಾದ ವಿಷ್ಯಾ ಬೇರೆನೇ ಇದೆ. ಅದೇನೆಂದರೆ, ಕನ್ನಡದಲ್ಲಿ ಈವರೆಗೂ ಯಾರೂ ಮಾಡದ, ಪರಭಾಷೆಯ ಸ್ಟಾರ್‌ ನಟರಿಗೂ ನಿಲುಕದ ಸಾಧನೆಯ ಕಿರೀಟವೊಂದು ಈ ಸಿನಿಮಾ ಮೂಲಕ ರಾಜ್‌ ಮುಡಿಗೇರಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಭಾಷೆಗಳಿಗೆ ಈ ಸಿನಿಮಾ ರಿಮೇಕ್‌ ಆಗಿತ್ತು. ಗಮನದಲ್ಲಿರಲಿ ಇದು ಘಟಿಸಿದ್ದು 1986ರ ಸಮಯದಲ್ಲಿ. ‘ಅನುರಾಗ ಅರಳಿತು’ ಸಿನಿಮಾ ಬಿಡುಗಡೆ ಆದ ಬಳಿಕ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದಲೂ ಡಿಮಾಂಡ್‌ ಸೃಷ್ಟಿಸಿಕೊಂಡಿತು.

ಯಾವ್ಯಾವ ಭಾಷೆಯಲ್ಲಿ ರಿಮೇಕ್‌? ಹೀರೋಗಳ್ಯಾರು?

ಸರಿ ಸುಮಾರು 35 ವರ್ಷಗಳ ಹಿಂದೆ ಭಾರತೀಯ ಸಿನಿಮಾರಂಗದಲ್ಲಿ ಯಾವೊಂದು ಸಿನಿಮಾ ಏಳು ಭಾಷೆಗಳಿಗೆ ರಿಮೇಕ್‌ ಆದ ಉದಾಹರಣೆ ಇಲ್ಲ. ಅಂಥದ್ದೊಂದು ದಾಖಲೆ ಈ ಸಿನಿಮಾಕ್ಕೆ ದಕ್ಕಿದ್ದು ಕನ್ನಡದ ಹೆಮ್ಮೆ. 1992ರಲ್ಲಿ ತಮಿಳಿನಲ್ಲಿ ಮನ್ನನ್‌ ಹೆಸರಿನಲ್ಲಿ ಅನುರಾಗ ಅರಳಿತು ಚಿತ್ರ ರಿಮೇಕ್‌ ಆಯಿತು. ಸೂಪರ್‌ಸ್ಟಾರ್‌ ರಜನಿಕಾಂತ್‌ ನಾಯಕನಾಗಿ ನಟಿಸಿದರೆ, ಪಿ ವಾಸು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಅದಾದ ಬಳಿಕ ಅದೇ ವರ್ಷ ತೆಲುಗಿನಲ್ಲಿ 'ಘರಾನಾ ಮೊಗುಡು" ಹೆಸರಲ್ಲಿ ತೆರೆಕಂಡಿತು. ಇಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಹೀರೋ ಆಗಿದ್ದರು. ಹೀಗೆ ರಿಮೇಕ್‌ ಆದಲ್ಲೆಲ್ಲ ಹಿಟ್‌ ಆಗುತ್ತಲೇ ಹೋಯಿತು ಈ ಸಿನಿಮಾ.

ಎರಡು ವರ್ಷಗಳ ಬಳಿಕ ಅಂದರೆ 1994ರಲ್ಲಿ ಹಿಂದಿಯಲ್ಲಿ ಲಾಡ್ಲಾ ಹೆಸರಿನಲ್ಲಿ ಈ ಸಿನಿಮಾ ರಿಮೇಕ್‌ ಆಗಿ ಬಿಡುಗಡೆ ಆಯಿತು. ಅನಿಲ್‌ ಕಪೂರ್‌, ಶ್ರೀದೇವಿ ಮತ್ತು ರವೀನಾ ಟಂಡನ್‌ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದರು. ಮತ್ತೆರಡು ವರ್ಷಗಳ ಬಳಿಕ 1996ರಲ್ಲಿ ಮಾಲ್‌ ಹತಾಯ್‌ ಹೆಸರಲ್ಲಿ ಸಿಂಹಳ ಭಾಷೆಯಲ್ಲಿ, 1998ರಲ್ಲಿ ಸಿಂಧೂರ ನುಹೇನ್ ಖೇಲಾ ಘರಾ ಹೆಸರಲ್ಲಿ ಒಡಿಯಾ ಭಾಷೆಗೆ, ‘ಶಮಿ ಸ್ತಿರ್ ಜುದ್ದೋ’ ಹೆಸರಿಲ್ಲಿನ ಬೆಂಗಾಲಿಗೂ ರಿಮೇಕ್‌ ಆಯಿತು ಈ ಸಿನಿಮಾ.

ಇಲ್ಲಿಗೆ ಮುಗಿದಿಲ್ಲ. ಕನ್ನಡ ಸಿನಿಮಾವೊಂದು ಮೊದಲ ಬಾರಿಗೆ ಒಡಿಯಾ, ಬೆಂಗಾಲಿ ಭಾಷೆಯಲ್ಲಿ ರಿಮೇಕ್‌ ಆಗಿ ಬಿಡುಗಡೆ ಆಗಿದ್ದು ಅನುರಾಗ ಅರಳಿತು ಸಿನಿಮಾ ಮೂಲಕವೇ. ಶ್ರೀಲಂಕಾದ ಸಿಂಹಳ ಭಾಷೆಯಲ್ಲಿಯೂ ರಿಮೇಕ್‌ ಆಗಿ ವಿದೇಶಿ ಭಾಷೆಯಲ್ಲಿಯೂ ರಿಮೇಕ್‌ ಆಯಿತು. ಅಚ್ಚರಿಯ ವಿಚಾರ ಏನೆಂದರೆ ರಾಜ್‌ಕುಮಾರ್‌ ಸಿನಿಮಾಗಳೇ 50ಕ್ಕೂ ಅಧಿಕ ಬಾರಿ ಬೇರೆ ಬೇರೆ ಭಾಷೆಗಳಿಗೆ ರಿಮೇಕ್‌ ಆದ ಉದಾಹರಣೆಗಳಿವೆ.

IPL_Entry_Point