ಸಿನಿಸ್ಮೃತಿ ಅಂಕಣ: ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳ ಹೆಜ್ಜೆಗುರುತು
ಚೇತನ್ ನಾಡಿಗೇರ್ ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರಗಳು ವಿದೇಶದಲ್ಲಿ ನಡೆಯುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದು ಮತ್ತು ಪ್ರಶಸ್ತಿ ಪಡೆಯುವುದು ಹೊಸ ವಿಷಯವೇನಲ್ಲ. ಇತಿಹಾಸದ ಪುಟಗಳನ್ನು ಕೆದಕಿದರೆ ಕನ್ನಡದ ಕೆಲವು ಚಿತ್ರಗಳು ಪ್ರತಿಷ್ಠಿತ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

Cine Smrithi Column: ವರ್ಷದ ಆರಂಭದಲ್ಲೇ ಕನ್ನಡ ಚಿತ್ರರಂಗಕ್ಕೊಂದು ಸಿಹಿಸುದ್ದಿ ಸಿಕ್ಕಿದೆ. ನಟೇಶ್ ಹೆಗ್ಡೆ ನಿರ್ದೇಶನದ ‘ವಾಘಾಚಿಪಾಣಿ’ (Tiger's Pond) ಚಿತ್ರವು ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಫೋರಂ ವಿಭಾಗಕ್ಕೆ ಆಯ್ಕೆಯಾಗಿದ್ದು, ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರೋತ್ಸವವು ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿದೆ.
ಕನ್ನಡ ಚಿತ್ರಗಳು ವಿದೇಶದಲ್ಲಿ ನಡೆಯುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದು ಮತ್ತು ಪ್ರಶಸ್ತಿ ಪಡೆಯುವುದು ಹೊಸ ವಿಷಯವೇನಲ್ಲ. ಇತಿಹಾಸದ ಪುಟಗಳನ್ನು ಕೆದಕಿದರೆ, ಇದುವರೆಗೂ ಕನ್ನಡದ ಕೆಲವು ಚಿತ್ರಗಳು ಪ್ರತಿಷ್ಠಿತ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಪಡೆದಿರುವುದರ ಜೊತೆಗೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವುದನ್ನು ಗಮನಿಸಬಹುದು.
ಮುನ್ನುಡಿ ಬರೆದ ‘ಸಂಸ್ಕಾರ’
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿ ಪಡೆದ ಮೊದಲ ಚಿತ್ರವೆಂದರೆ ಅದು ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ‘ಸಂಸ್ಕಾರ’. ಗಿರೀಶ್ ಕಾರ್ನಾಡ್, ಸ್ನೇಹಲತಾ ರೆಡ್ಡಿ, ಪಿ. ಲಂಕೇಶ್ ಮುಂತಾದವರು ಅಭಿನಯಿಸಿದ್ದ ಯು.ಆರ್. ಅನಂತಮೂರ್ತಿ ಕಾದಂಬರಿ ಆಧರಿಸಿದ ಈ ಚಿತ್ರವು ಲೊಕಾರ್ನನೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 1972ರಲ್ಲಿ Bronze Leopard ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಕನ್ನಡ ಚಿತ್ರವೊಂದಕ್ಕೆ ಬಂದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದೇ. ಅಲ್ಲಿಂದ ಹಲವು ಚಿತ್ರಗಳು ಬೇರೆಬೇರೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
47 ವರ್ಷಗಳ ನಂತರ ವೆನೀಸ್ ಚಿತ್ರೋತ್ಸವದಲ್ಲಿ ‘ಘಟಶ್ರಾದ್ಧ’
ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದಿರುವ ವೆನಿಸ್ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ ಚಿತ್ರವನ್ನು Restored Classics ವಿಭಾಗದಡಿ ಕಳೆದ ವರ್ಷ ಪ್ರದರ್ಶಿಸಲಾಯಿತು. ಕನ್ನಡ ಚಿತ್ರವೊಂದು ವೆನೀಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು ಅದೇ ಮೊದಲು ಎನ್ನುವುದು ಒಂದು ವಿಶೇಷವಾದರೆ, ಈ ಚಿತ್ರವು ಬಿಡುಗಡೆಯಾದ 47 ವರ್ಷಗಳ ನಂತರ ಆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವುದು ಇನ್ನೊಂದು ವಿಶೇಷ. ಈ ಚಿತ್ರೋತ್ಸವದಲ್ಲಿ ಡಾ. ಗಿರೀಶ್ ಕಾಸರವಳ್ಳಿ ಸಹ ಭಾಗವಹಿಸಿದ್ದು, ಅವರನ್ನು ವಿಶೇಷವಾಗಿ ಸನ್ಮಾನಿಸಲಾಗಿತ್ತು.
ಹೊಸಬರಿಗೆ ಅಂತಾರಾಷ್ಟ್ರೀಯ ಮನ್ನಣೆ
2016ರಲ್ಲಿ ಬಿಡುಗಡೆಯಾದ ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ ಚಿತ್ರವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತಂದುಕೊಟ್ಟ ಪ್ರಮುಖ ಚಿತ್ರ. ‘ತಿಥಿ’ ಚಿತ್ರವು ಲೊಕಾರ್ನೋ ಚಿತ್ರೋತ್ಸವದಲ್ಲಿ Golden Leopard ಪ್ರಶಸ್ತಿ ಪಡೆಯಿತು. ಮರಕ್ಕೆಚ್ ಮತ್ತು ಪಾಮ್ ಸ್ಪ್ರಿಂಗ್ಸ್ ಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೃಷ ಪ್ರಶಸ್ತಿ, ಸ್ಯಾನ್ ಫ್ರಾನ್‍ಸಿಸ್ಕೋ ಚಿತ್ರೋತ್ಸವದಲ್ಲಿ Golden Gate Persistence of Vision Award ಎಂಬ ಪ್ರಶಸ್ತಿಯು ಈ ಚಿತ್ರಕ್ಕೆ ಸಿಕ್ಕಿತ್ತು. 19ನೇ ಶಾಂಘಾಯ್ ಚಿತ್ರೋತ್ಸವದಲ್ಲಂತೂ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆಗಾರ ಎಂಬ ಎರಡು ಪ್ರಶಸ್ತಿಗಳು ಸಿಕ್ಕಿದವು. ಮೊದಲ BRICS ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಪಡೆಯಿತು. ಹಾಗೆಯೇ 13ನೇ ಸ್ಟುಗಾರ್ಟ್‍ನ ಭಾರತೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿತ್ತು. ಸಂಪೂರ್ಣ ಹೊಸಬರ ತಂಡವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು ಇದೇ ಮೊದಲು.
ಬೂಸಾನ್‍ನಲ್ಲಿ ‘ಶಿವಮ್ಮ’ ಮತ್ತು ‘ಪೆದ್ರೋ’
ದಕ್ಷಿಣ ಕೊರಿಯಾದ ಬೂಸಾನ್‍ನಲ್ಲಿ ಪ್ರತೀ ವರ್ಷ ನಡೆಯುವ ಬೂಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜಯಶಂಕರ್ ಆರ್ಯರ್ ನಿರ್ದೇಶನದ ಮತ್ತು ರಿಷಭ್ ಶೆಟ್ಟಿ ನಿರ್ಮಾಣದ ‘ಶಿವಮ್ಮ ಎರೆಹಂಚಿನಾಳ’ ಚಿತ್ರವು ಪ್ರದರ್ಶನಗೊಳ್ಳುವುದರ ಜೊತೆಗೆ New Currents Award ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬೂಸಾನ್‍ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಶಿವಮ್ಮ ಆದರೆ, ನಟೇಶ್ ಹೆಗ್ಡೆ ನಿರ್ದೇಶನದ ಮೊದಲ ಚಿತ್ರ ‘ಪೆದ್ರೋ’ ಎರಡನೆಯ ಚಿತ್ರವಾಗಿತ್ತು.
ಕ್ಯಾನ್ಸ್ ಚಿತ್ರೋತ್ಸವದಲ್ಲಿ ಸೂರ್ಯಕಾಂತಿ
2024ರವರೆಗೂ ಪ್ರತಿಷ್ಠಿತ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಯಾವೊಂದು ಕನ್ನಡದ ಚಿತ್ರವೂ ಪ್ರಶಸ್ತಿ ಪಡೆದಿರಲಿಲ್ಲ. ಅಂಥದ್ದೊಂದು ಕೊರತೆಯನ್ನು ನೀಗಿಸಿದ್ದು ಕನ್ನಡದ ಕಿರುಚಿತ್ರ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು’ (Sunflowers were the first ones to know). ಮೈಸೂರು ಮೂಲದ ಚಿದಾನಂದ ಎಸ್. ನಾಯ್ಕ್ ನಿರ್ದೇಶನದ ಈ ಕನ್ನಡದ ಕಿರುಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಈ ಚಿತ್ರವನ್ನು ಫಿಲಂ ಆ್ಯಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ನಿರ್ಮಿಸಿದೆ. ಚಿದಾನಂದ್ ನಾಯ್ಕ್ ಇದೇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗ 2025ರ ಆಸ್ಕರ್ ಪ್ರಶಸ್ತಿಗೆ ಈ ಚಿತ್ರವು ಅರ್ಹತೆ ಪಡೆದಿದೆ.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಇನ್ನಷ್ಟು, ಮತ್ತಷ್ಟು
ಇದಲ್ಲದೆ ಕನ್ನಡದ ಇನ್ನಷ್ಟು, ಮತ್ತಷ್ಟು ಚಿತ್ರಗಳು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ. ಪ್ರಮುಖವಾಗಿ ಇದರಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರಗಳೇ ಹೆಚ್ಚು. ‘ಘಟಶ್ರಾದ್ಧ’ ಚಿತ್ರವು Restored Classics ವಿಭಾಗದಡಿ ಕಳೆದ ವರ್ಷ ಜಾಫ್ನಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನವಾಗಿತ್ತು. ‘ನಾಯಿ ನೆರಳು’ ಚಿತ್ರವು ಬ್ಯಾಂಕಾಕ್, ಸಿಂಗಾಪೂರ್, ಪಾಮ್ ಸ್ಪ್ರಿಂಗ್ಸ್ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡರೆ, ಕರಾಚಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದಿತ್ತು. ‘ದ್ವೀಪ’ ಚಿತ್ರವು ಡರ್ಬನ್, ಮಾಸ್ಕೋ, ರಾಟರ್ಡ್ಯಾಮ್ ಮತ್ತು ನ್ಯೂಯಾರ್ಕ್‍ನ ಹ್ಯೂಮನ್ ರೈಟ್ಸ್ ವಾಚ್ ಇಂಟರ್‍ನ್ಯಾಷನಲ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ‘ತಾಯಿ ಸಾಹೇಬ’ ಚಿತ್ರವು ವ್ಯಾಂಕೌರ್ ಚಿತ್ರೋತ್ಸವದಲ್ಲಿ, ತಬರನ ಕಥೆ ಚಿತ್ರವು ಟೋಕ್ಯೋ, ರಷ್ಯಾ, ತಾಷ್ಕೆಂಟ್ ಮುಂತಾದ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ
ಲೇಖಕ ಚೇತನ್ ನಾಡಿಗೇರ್ ಪರಿಚಯ
ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರ ‘ಖುಷಿಯಿಂದ ರಮೇಶ್’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್ ಶಾಟ್ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.
