Gandhada Gudi: ಗಂಧದ ಗುಡಿಗೆ 50 ವರ್ಷ: ಅರಣ್ಯಸಂರಕ್ಷಣೆ ಸಾರಿದ ಭಾರತದ ಮೊದಲ ಸಿನೆಮಾ
Sandalwood movie on forest conservation ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ನೆಲೆಯಲ್ಲಿ ದೇಶದಲ್ಲಿಯೇ ಬಂದ ಮೊದಲ ಚಿತ್ರ ಗಂಧದ ಗುಡಿ( Gandhadagudi). ಈಗಲೂ ಅರಣ್ಯ ಸಂರಕ್ಷಣೆಯಲ್ಲಿ ಗಂಧದ ಗುಡಿ ಚಿತ್ರದ ಛಾಪು ಇದ್ದೇ ಇದೆ. ಈ ಚಿತ್ರ ಬಿಡುಗಡೆಯಾಗಿ ಐದು ದಶಕಗಳು ಆದವು. ಈಗಲೂ ಕನ್ನಡ ನಾಡಿನವರ ಮನಸಿನಲ್ಲಿ ಗಂಧದ ಗುಡಿ ಹಸಿರಾಗಿಯೇ ಇದೆ.
ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ...
ಈ ಹಾಡು ಕಿವಿ ಮೇಲೆ ಬಿದ್ದರೆ ಸಾಕು. ನಮ್ಮ ಭವ್ಯ ಅರಣ್ಯ ಹಾಗೂ ವನ್ಯಜೀವಿಗಳ ಲೋಕವೇ ತೆರೆದುಕೊಳ್ಳುತ್ತದೆ. ಕನ್ನಡ ನಾಡಿನ ಹಚ್ಚ ಹಸಿರು, ವನ್ಯಜೀವಿಗಳ ಲೋಕ, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದ ಗಂಧದಗುಡಿ ಬಿಡುಗಡೆಯಾಗಿ ಇದೇ ತಿಂಗಳಿಗೆ ಐದು ವಸಂತಗಳು ಆದವು. 1973ರ ಸೆಪ್ಟಂಬರ್‌ನಲ್ಲಿಯೇ ಈ ಚಿತ್ರ ಬಿಡುಗಡೆ ಕಂಡಿತು. ಆನಂತರ ಹಲವು ಭಾಷೆಗಳಲ್ಲಿ ಗಂಧದಗುಡಿ ಚಿತ್ರದ ಘಮಲು ಪಸರಿಸಿತ್ತು. ಗಂಧದ ಗುಡಿ ಭಾಗ 2, ಗಂಧದ ಗುಡಿ ಸಾಕ್ಷ್ಯಚಿತ್ರದ ಬಿಡುಗಡೆ ಮೂಲಕ ಈಗಲೂ ಈ ಚಿತ್ರ ಜನರ ಮನಸಿನಲ್ಲಿ ಹಸಿರಾಗಿಯೇ ಇದೆ.
ಗಂಧದ ಗುಡಿ ಎನ್ನುವ ಅಪ್ಪಟ ಕನ್ನಡ ಸಿನೆಮಾ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದ ಭಾರತದ ಮೊದಲ ಕಾಡಿನ ಹಿನ್ನೆಲೆಯ ಚಿತ್ರ. ಈಗಲೂ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಒಳಹೊಕ್ಕರೆ ಗಂಧದ ಗುಡಿಯೇ ನೆನಪಾಗುವಂತದ್ದು. ಗಂಧದ ಗುಡಿಯೊಂದಿಗೆ ಕನ್ನಡದ ವರನಟ ಡಾ.ರಾಜಕುಮಾರ್ ಹಾಗೂ ಕಾಡಿನ ಪ್ರೀತಿಯ ಚಿತ್ರಗಳನ್ನು ನಿರ್ಮಿಸಿದ ಕನ್ನಡಿಗರೇ ಆದ ಎಂ.ಪಿ.ಶಂಕರ್ ಕೂಡ ನೆನಪಾಗುತ್ತಾರೆ.
ರೂಪುಗೊಂಡ ಗಂಧದ ಗುಡಿ
ಕನ್ನಡ ಚಿತ್ರರಂಗದಲ್ಲಿ ನಟರಾಗಿ ನಂತರ ನಿರ್ಮಾಪಕರಾಗಿ ಬೆಳೆದವರು ಮೈಸೂರಿನವೇ ಆದ ಎಂ.ಪಿ.ಶಂಕರ್. ಅವರಿಗೂ ಕಾಡಿನ ಕುರಿತು ಏನಾದರೂ ಸಿನೆಮಾ ಮಾಡಬೇಕು ಎನ್ನುವ ಬಯಕೆ. ಅದಕ್ಕಾಗಿ 1969ರಲ್ಲಿ ಕಾಡಿನ ರಹಸ್ಯ ಎನ್ನುವ ಚಿತ್ರ ಮಾಡಿದ್ದರು. ಮುಂದೆ ಬಂಗಾರದ ಮನುಷ್ಯದಲ್ಲಿ ಡಾ.ರಾಜ್ ಅವರೊಂದಿಗೆ ಅಭಿನಯಿಸಿದ್ದರು ಎಂ.ಪಿ.ಶಂಕರ್. ಅರಣ್ಯದ ಕುರಿತು ನಾವೇ ಒಂದು ಚಿತ್ರ ಮಾಡೋಣ. ಕಾಡಿನ ಕಥೆಯೊಂದನ್ನು ನಾನೇ ಸಿದ್ದಪಡಿಸಿದ್ದೇನೆ ಎಂದು ಎಂ.ಪಿ.ಶಂಕರ್ ಕೇಳಿಕೊಂಡಿದ್ದರು. ಕಥೆಯನ್ನು ಕೇಳಿ ರಾಜಕುಮಾರ್ ಖುಷಿಯಾಗಿ ಖಂಡಿತ ಮಾಡೋಣ ಎಂದು ಹೇಳಿದ್ದರು. ಅರಣ್ಯ ಸಂರಕ್ಷಣೆಯ ದನಿಗೆ ನಮ್ಮದೂ ಬಲ ಇರಲಿ ಎನ್ನುವುದು ಡಾ.ರಾಜ್ ಅವರ ಆಶಯವೂ ಆಗಿತ್ತು. ಚಿತ್ರಕ್ಕೆ ಕೊಟ್ಟ ಹೆಸರು ಗಂಧದ ಗುಡಿ. ಕರುನಾಡು ಗಂಧದ ಬೀಡು ಆಗಿದ್ದರಿಂದ ಅದರ ಮಹತ್ವವನ್ನು ಸಾರಲೆಂದೇ ಈ ಹೆಸರು ಇಟ್ಟಿದ್ದಕ್ಕೆ ಡಾ.ರಾಜ್ ಪ್ರೀತಿಯಿಂದಲೇ ಅನುಮತಿಸಿದ್ದರು.
1972ರಲ್ಲಿಯೇ ಮೈಸೂರು ಜಿಲ್ಲೆಯ ನಾಗರಹೊಳೆ, ಬಂಡೀಪುರ ಪ್ರದೇಶದಲ್ಲಿ ಶೂಟಿಂಗ್. ರಾಜಕುಮಾರ್ ಜತೆಗೆ ವಿಷ್ಣುವರ್ಧನ್ ಕೂಡ ಇದ್ದರು. ದೊಡ್ಡ ತಾರಾಗಣದ ಚಿತ್ರ. ವಿಜಯ್ ನಿರ್ದೇಶನ. ಡಿ.ವಿ.ರಾಜಾರಾಂ ಅವರ ಕ್ಯಾಮರಾ. ರಾಜನ್ ನಾಗೇಂದ್ರ ಅವರ ಸಂಗೀತವಿದ್ದ ಚಿತ್ರ.
ಆನೆಗಳ ಖೆಡ್ಡಾ ಸ್ಥಗಿತಗೊಂಡಿದ್ದ ಎಚ್‌ಡಿಕೋಟೆ ತಾಲ್ಲೂಕಿನ ಕಾಕನಕೋಟೆಯಲ್ಲಿಯೇ ಹೆಚ್ಚಿನ ಚಿತ್ರೀಕರಣ. ಮಾಸ್ತಿಗುಡಿ ಅರಣ್ಯದಲ್ಲಿ ದಸರಾ ಆನೆಗಳ ನಡುವೆ ಗಂಧದ ಗುಡಿ ರೂಪುಗೊಂಡಿತು. ಚಿತ್ರ . 1973ರ ಸೆಪ್ಟಂಬರ್ 14ರಂದು ಬಿಡುಗಡೆಯೂ ಆಯಿತು. ನೂರು ದಿನ ಹಲವು ನಗರಗಳಲ್ಲಿ ಪ್ರದರ್ಶನಗೊಂಡಿತು. 25 ವಾರಗಳ ಪ್ರದರ್ಶನ ಕಂಡು ಜನಮನ್ನಣೆ ಪಡೆಯಿತು. ಅರಣ್ಯ ಸಂರಕ್ಷಣೆಯ ಕೂಗಿಗೆ ಬಲವನ್ನು ನೀಡಿತು ಗಂಧದ ಗುಡಿ. ರಾಜಕುಮಾರ್ ಅವರ 150ಮೇ ಚಿತ್ರ. ಜನ ಗಂಧದ ಗುಡಿ ಚಿತ್ರವನ್ನು ಇಷ್ಟಪಟ್ಟಿದ್ದರಿಂದ ಹದಿಮೂರೇ ವರ್ಷದಲ್ಲಿ 1986 ರಲ್ಲಿ ಮರು ಬಿಡುಗಡೆ ಕಂಡಿದ್ದು ದಾಖಲೆಯಾಯಿತು.
ಗಂಧದ ಗುಡಿ ವಿಶೇಷ
ದೇಶದಲ್ಲಿ ಮೊದಲನೇ ಅರಣ್ಯ ಸಂರಕ್ಷಣೆಯ ಜಾಗೃತಿ ಚಿತ್ರ. ಇಡೀ ಚಿತ್ರದಲ್ಲಿ ಅರಣ್ಯ, ವನ್ಯಜೀವಿ ಮಹತ್ವವನ್ನು ಸಾರುವ ಕೆಲಸವಾಗಿತ್ತು. ಇದೇ ಚಿತ್ರ ಮರು ವರ್ಷವೇ 1974ರಲ್ಲಿ ಮಲೆಯಾಳದಲ್ಲಿ ಚಂದನ ಕಾಡು ಎನ್ನುವ ಹೆಸರಲ್ಲಿ ಡಬ್ ಆಯಿತು. ಆರು ವರ್ಷದ ನಂತರ ಹಿಂದಿಯಲ್ಲಿ ಕರ್ತವ್ಯ ಎನ್ನುವ ಹೆಸರಿನಲ್ಲಿ ಬಿಡುಗಡೆ ಕಂಡಿತು. ಅಡವಿ ರಾಮುಡು ಎನ್ನುವ ಕಾಡಿನ ಹಿನ್ನೆಲೆಯ ಚಿತ್ರವನ್ನು ಮಾಡಲು ತೆಲುಗಿನ ದಿಗ್ಗಜ ನಟ ಎನ್‌ಟಿ ರಾಮರಾವ್ ಅವರನ್ನು ಪ್ರೇರೇಪಿಸಿತು. 1977ರಲ್ಲಿ ತೆಲುಗಿನಲ್ಲಿ ಬಂದ ಅಡವಿರಾಮುಡು ಕೂಡ ಸೂಪರ್ ಹಿಟ್ ಆಗಿತ್ತು.
ಆನಂತರ ಹತ್ತಾರು ಚಿತ್ರಗಳು ಅರಣ್ಯ, ವನ್ಯಜೀವಿಗಳು, ಮೃಗಾಲಯದ ಪ್ರಾಣಿಗಳ ಕುರಿತು ಬಂದವು.
ಗಂಧದ ಗುಡಿ ಯಶಸ್ಸಿನಿಂದ ಪ್ರಭಾವಿತರಾದ ಎಂ.ಪಿ.ಶಂಕರ್ ಮುಂದೆ ಕಾಡಿನ ರಾಜ, ರಾಮಲಕ್ಷ್ಮಣ, ಮೃಗಾಲಯಗಳನ್ನು ಮಾಡಿದರು. ಅಲ್ಲದೇ ಅರಣ್ಯದ ಕುರಿತಾಗಿ ಎಪ್ಪತ್ತು ಹಾಗೂ ಎಂಬತ್ತರ ದಶಕದಲ್ಲಿ ಹಲವು ಚಿತ್ರಗಳು ಅರಣ್ಯದ ಕುರಿತೇ ಬಂದವು.
ಇಂದಿರಾಗಾಂಧಿ ಪ್ರಭಾವ
ಅದು ಎಪ್ಪತ್ತರ ದಶಕದ ಆರಂಭ. ಆಗಲೇ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಕೂಗು ಜೋರಾಗಿಯೇ ಇತ್ತು. ಕಾಡಿನ ಬೇಟೆಯೂ ನಿರಂತರವಾಗಿ ನಡೆದೇ ಇತ್ತು. ಅದು ಮೋಜಿನ ಬೇಟೆ ಬೇರೆ. ಮತ್ತೊಂದು ಆನೆಗಳನ್ನು ಸೆರೆ ಹಿಡಿದು ಅವುಗಳನ್ನು ಹಿಂಸಿಸಿ ಖೆಡ್ಡಾ ಮೂಲಕ ಪಳಗಿಸುವ ಚಟುವಟಿಕೆಯೂ ನಡೆಯುತ್ತಿತ್ತು. ಗಂಧದ ಮರಗಳ ಅಕ್ರಮ ಸಾಗಣೆಯೂ ಅರಣ್ಯ ಇಲಾಖೆ ಚಿಂತೆಗೆ ಕಾರಣವಾಗಿತ್ತು ಈ ವೇಳೆ ಅರಣ್ಯ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿದ್ದವು. ಆಗ ಭಾರತದ ಪ್ರಧಾನಿಯಾಗಿದ್ದವರು ಉಕ್ಕಿನ ಮಹಿಳೆ ಇಂದಿರಾಗಾಂಧಿ. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಪ್ರತ್ಯೇಕ ಕಾಯಿದೆ ರೂಪಿಸಬೇಕು ಎನ್ನುವ ಸಲಹೆ ಕೇಳಿ ಬಂದಾಗ ಇಂದಿರಾಗಾಂಧಿ ಆಗಲಿ ಎಂದರು. ಆಗಲೇ ಭಾರತದಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಜಾರಿಗೊಂಡಿತು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಆದೇಶಗಳು ಹೊರಬಿದ್ದವು. ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಇದ್ದ ಆನೆಗಳ ಖೆಡ್ಡಾ ಆಪರೇಷನ್ ಬಂದ್ ಆಯಿತು. ಹುಲಿಗಳನ್ನು ಸಂರಕ್ಷಿಸಬೇಕು ಎನ್ನುವ ಆಶಯದೊಂದಿಗೆ ಹುಲಿ ಯೋಜನೆಯೂ ಶುರುವಾಯಿತು. ಅಂದರೆ ಅರಣ್ಯ ಉಳಿಸುವ ಗಂಭೀರ ಪ್ರಯತ್ನ ಶುರುವಾಗಿದ್ದೇ ಆಗಿನಿಂದ
ರಾಜ್ ಕುಟುಂಬದ ಕಾಡು ಪ್ರೇಮ
ಕನ್ನಡದ ವರನಟ ಡಾ.ರಾಜಕುಮಾರ್ ಹಾಗೂ ಅವರ ಕುಟುಂಬದ ಕಾಡು ಪ್ರೇಮ ದೊಡ್ಡದು. ಡಾ.ರಾಜಕುಮಾರ್ ಜನಿಸಿದ್ದು ಇಂತಹ ಕಾಡಿನ ಹಿನ್ನೆಲೆಯ ಊರಿನಲ್ಲಿಯೇ. ಆಗಿನ ಮೈಸೂರು ಜಿಲ್ಲೆ ಈಗಿನ ಚಾಮರಾಜನಗರ ಜಿಲ್ಲೆಯ ಸಿಂಗಾನಲ್ಲೂರು ಕೊಳ್ಳೆಗಾಲ ಅರಣ್ಯದ ಭಾಗ. ಅವರು ಆಡಿಬೆಳೆದಿದ್ದು ಚಾಮರಾಜನಗರ ತಾಲ್ಲೂಕಿನ ಗಾಜನೂರಿನಲ್ಲಿ. ಇವೆಲ್ಲವೂ ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ದಟ್ಟ ಅರಣ್ಯದ ಹಿನ್ನೆಲೆಯ ಪ್ರದೇಶಗಳೇ. ಕಾಡಿನ ಪರಿಸರದ ಪರಿಚಯ, ಅದರ ಮೇಲೆ ಅಭಿಮಾನವಿದ್ದ ಡಾ.ರಾಜ್‌ಕುಮಾರ್ ಅವರು ಗಂಧದಗುಡಿ ಚಿತ್ರದಲ್ಲಿ ಅಭಿನಯಿಸಿ ಇತಿಹಾಸವನ್ನೇ ನಿರ್ಮಿಸಿದರು.
ಗಂಧದ ಗುಡಿ ಚಿತ್ರದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅರಣ್ಯ ಇಲಾಖೆ ಅಧಿಕಾರಿಯಾಗಿ ಅಭಿನಯಿಸಿದರು ಡಾ.ರಾಜ್‌ಕುಮಾರ್. ಕುಮಾರ್ ಎಂಬ ಐಎಫ್‌ಎಸ್ ಅಧಿಕಾರಿಯಾಗಿ ಅರಣ್ಯದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ರಾಜ್ ಅಭಿನಯ ಪ್ರಭಾವಶಾಲಿಯಾಗಿತ್ತು. ರಾಜೇಂದ್ರ ಎಂಬ ಅಂಬಾರಿ ಹೊರುತ್ತಿದ್ದ ಆನೆಯ ದಂತಗಳ ಮೇಲೆ ಕುಳಿತು ಹಸುರಿನ ಬನಸಿರಿಗೆ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು.. ಎಂದು ಹಾಡುತ್ತಿದ್ದುದನ್ನು ಮರೆಯಲಾಗದು. ಮತ್ತೊಬ್ಬ ನಟ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿಷ್ಣುವರ್ಧನ್ ಇದರಲ್ಲಿ ಡಾ.ರಾಜ್ ಎದುರಾಳಿ ಪಾತ್ರದಲ್ಲಿ ಅಭಿನಯಿಸಿದ್ದರು.
ಗಂಧದ ಗುಡಿ ಪ್ರಭಾವ ಮುಂದಿನ ಎರಡು ದಶಕವಾದರೂ ಇತ್ತು. ಡಾ.ರಾಜ್ ಪುತ್ರ ಶಿವರಾಜಕುಮಾರ್ ಅವರ ನಾಯಕತ್ವದಲ್ಲಿ ಗಂಧದ ಗುಡಿ ಭಾಗ ಎರಡು 1995 ರಲ್ಲಿ ಬಿಡುಗಡೆ ಕಂಡಿತು. ಶಿವರಾಜಕುಮಾರ್ ಕೂಡ ಅರಣ್ಯ ಅಧಿಕಾರಿಯಾಗಿ ಅಕ್ರಮಗಳನ್ನು ತಡೆಯಲು ಹೋರಾಡುವ ಚಿತ್ರವದು.
ಇದಾಗಿ ಎರಡೂವರ ದಶಕಗ ಬಳಿಕ ಅಂದರೆ 2021ರಲ್ಲಿ ಗಂಧದ ಗುಡಿ ಎನ್ನುವ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ್ದರು ಪುನೀತ್ ರಾಜಕುಮಾರ್ . ಅಮೋಘ ವರ್ಷ ನಿರ್ದೇಶನ, ಪ್ರತೀಕ್ ಶೆಟ್ಟಿ ಕ್ಯಾಮರಾದಲ್ಲಿ ಸಾಕ್ಷ್ಯಚಿತ್ರ ಕಾಡಿನ ಮಹತ್ವವನ್ನು ಸಾರುವ ಪ್ರಯತ್ನ ಮಾಡಿತು. ಆದರೆ ಸಾಕ್ಷ್ಯಚಿತ್ರ ಬಿಡುಗಡೆ ಮುನ್ನೇ ಪುನೀತ್ ಕಾಲವಾದರು. 2022ರಲ್ಲಿ ಸಾಕ್ಷ್ಯಚಿತ್ರ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದಿತ್ತು. ಹೀಗೆ ಗಂಧದ ಗುಡಿ ಹಾಗೂ ಅರಣ್ಯದ ಕುರಿತು ಡಾ.ರಾಜ್ ಕುಟುಂಬದವರು ಅಭಿನಯಿಸಿ ಸಂದೇಶ ಸಾರುವ ಪ್ರಯತ್ನ ಮಾಡಿದ್ದನ್ನು ಮರೆಯಲಾಗದು. ಈಗಲೂ ಗಂಧದ ಗುಡಿ ಹಾಗೂ ಡಾ.ರಾಜ್ ಅಭಿನಯ ಜನರ ಮನಸಲ್ಲಿ ಹಸಿರಾಗಿಯೇ ಇದೆ.
-ಕುಂದೂರು ಉಮೇಶಭಟ್ಟ
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)