Friday Release: ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿವು, ಶರಣ್ ಛೂ ಮಂತರ್‌ನಿಂದ ರಾಮ್ ಚರಣ್ ಗೇಮ್ ಚೇಂಜರ್‌ವರೆಗೆ
Friday Release Movies: ಈ ವಾರ ಮೂರು ಕನ್ನಡದ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಅದರೊಟ್ಟಿಗೆ ಗೇಮ್ ಚೇಂಜರ್ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬಗ್ಗೆ ಜನರು ಹೆಚ್ಚು ಕುತೂಹಲ ಇಟ್ಟುಕೊಂಡಿದ್ದಾರೆ.
2025 ಆರಂಭವಾಗುತ್ತಿದ್ದಂತೆ ಹೊಸ ವರ್ಷಕ್ಕೆ ಹೊಸ ಸಿನಿಮಾಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ವೀಕ್ಷಕರೂ ವರ್ಷದಿಂದ ವರ್ಷಕ್ಕೆ ಸಿನಿಮಾಗಳ ಬಗ್ಗೆ ಕ್ರೇಜ್ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಈ ವಾರವೂ ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿವೆ. ಈಗಾಗಲೇ ಪ್ರಚಾರವನ್ನು ಮುಗಿಸಿ ಶುಕ್ರವಾರ ಜನವರಿ 10ರಂದು ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ಒಟ್ಟು ಮೂರು ಸಿನಿಮಾಗಳು ನಾಳೆ ಅಂದರೆ ಜನವರಿ 10ರಂದು ತೆರೆಕಾಣಲಿದೆ.
ಶರಣ್ ಅಭಿನಯದ 'ಛೂ ಮಂತರ್'
ಕನ್ನಡದ ಸ್ಟಾರ್ ನಟ ಹಾಗೂ ಹಾಸ್ಯ ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಶರಣ್, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್, ರಂಜನಿ ರಾಘವನ್, ನರಸಿಂಹ ಜಾಲಹಳ್ಳಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ "ಛೂ ಮಂತರ್" ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಸಿನಿಮಾ ನಾಳೆ ತೆರೆಕಾಣಲಿದೆ
ಸಂಜು ವೆಡ್ಸ್ ಗೀತಾ 2 ಸಿನಿಮಾ
ಶೀನಗರ್ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಯಾದೆ ಮುಂದೂಡಿಕೆ ಆಗುವ ಸಾಧ್ಯತೆಯೂ ಇದೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿನಿಮಾಗೆ ಸ್ಟೇ ತರಲಾಗಿದೆ ಎಂಬ ಸುದ್ದಿಗಳೂ ಹರಿದಾಡುತ್ತಿದೆ.
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾ
ಈ ಸಿನಿಮಾ ಕೂಡ ಕನ್ನಡದ ಸಿನಿಮಾ ಆಗಿದ್ದು ಜನವರಿ 10ರಂದು ಬಿಡುಗಡೆಯಾಗಲಿದೆ. ಮಜವಾದ ಟೀಸರ್ ಹಾಗೂ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ವೀಕ್ಷಕರ ಗಮನಸೆಳೆದಿದೆ. ಈ ಸಿನಿಮಾವನ್ನು ಕೇಶವ್ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಲೀಪ್ ರಾಜ್ ನಾಯಕನಾಗಿ ಹಾಗೂ ಶಿಲ್ಪಾ ಮಂಜುನಾಥ್, ಅಪೂರ್ವ ಭಾರದ್ವಾಜ್ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಮಧುಸೂದನ್ ಗೋವಿಂದ್, ವಂಶಿ ಕೃಷ್ಣ ಶ್ರೀನಿವಾಸ್, ಪ್ರಸನ್ನ ವಿ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಹಾಗೂ ಹರ್ಷ ಕುಮಾರ್ ಛಾಯಾಗ್ರಹಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ.
ಗೇಮ್ ಚೇಂಜರ್ ಸಿನಿಮಾ
'ಆರ್‌ಆರ್‌ಆರ್' ಬಳಿಕ ರಾಮ್ ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ 'ಗೇಮ್ ಚೇಂಜರ್' ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾ ಬಳಗದಲ್ಲಿದ್ದಾರೆ.