Friends Vasu: ಗಾಂಧಿನಗರದ ಬಗ್ಗೆ ಬಹಳ ಜಿಗುಪ್ಸೆ ಬಂದಿದೆ.. ಆಕ್ಟಿಂಗ್ ಬಿಟ್ಟು ವ್ಯವಸಾಯ ಮಾಡುತ್ತಿರುವ 'ಫ್ರೆಂಡ್ಸ್' ವಾಸು ಸಂದರ್ಶನ
ಬೆಂಗಳೂರಿನಲ್ಲಿರಲು ಬೇಸರವಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಕ್ಕೆ ಬಂದೆ. ಇಲ್ಲಿ ನಮ್ಮದು 2 ಎಕರೆ ಜಮೀನು ಇದೆ. 10 ಎಕರೆ ಭೋಗ್ಯಕ್ಕೆ ಪಡೆದು ಬಾಳೆ ನೆಟ್ಟಿದ್ದೇನೆ. ಸಾವಯವ ವ್ಯವಸಾಯ ಮಾಡುತ್ತಿದ್ದೇನೆ. ಪತ್ನಿ-ಮಗ ಬೆಂಗಳೂರಿನಲ್ಲಿದ್ದಾರೆ, ಆಗ್ಗಾಗ್ಗೆ ಹೋಗಿ ಬರುತ್ತೇನೆ.
ಸಿನಿಮಾ ಕನಸು ಕಂಡು ಗಾಂಧಿನಗರಕ್ಕೆ ಬಂದ ಎಷ್ಟೋ ಮಂದಿ ದೊಡ್ಡ ಸಕ್ಸಸ್ ಕಂಡಿದ್ದಾರೆ, ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗಿದ್ದಾರೆ. ಚಿತ್ರರಂಗದ ಆರಂಭದ ದಿನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ಸ್ಟಾರ್‌ಗಳಾಗಿ ಮೆರೆದವರಿದ್ದಾರೆ, ಸಕ್ಸಸ್ ಕಂಡು ನಂತರ ತೆರೆ ಮರೆಗೆ ಸರಿದಿರುವ ಅನೇಕ ಕಲಾವಿದರಿದ್ದಾರೆ. ವಾಸು ಕೂಡಾ ಈ ಸಾಲಿಗೆ ಸೇರುತ್ತಾರೆ. ವಾಸು ಎಂಬ ಪದಕ್ಕಿಂತ 'ಫ್ರೆಂಡ್ಸ್' ಖ್ಯಾತಿಯ ವಾಸು ಎಂದರೆ ಎಲ್ಲರಿಗೂ ಅವರು ಯಾರು ಅನ್ನೋದು ಅರ್ಥವಾಗುತ್ತದೆ.
ವಾಸು, ನಾಯಕನಾಗಿ ಕರಿಯರ್ ಆರಂಭಿಸಿದ್ದು 'ಫ್ರೆಂಡ್ಸ್' ಚಿತ್ರದ ಮೂಲಕ. 2002 ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ವಾಸು ಜೊತೆಗೆ ಮಾಸ್ಟರ್ ಆನಂದ್, ಶ್ಯಾಮ್, ಶರಣ್ ಹಾಗೂ ಇನ್ನಿತರರು ನಟಿಸಿದ್ದರು. ನಾಯಕಿಯಾಗಿ ರಿತಿಕಾ ಇದ್ದರು. ಈ ಸಿನಿಮಾದ ದೇವರು ವರವನು ಕೊಟ್ರೇ..., ತಿರುಪತಿ ತಿರುಮಲ ವೆಂಕಟೇಶ..ಹಾಡುಗಳು ಇಂದಿಗೂ ಬಹಳ ಫೇಮಸ್. 'ಫ್ರೆಂಡ್ಸ್' ಬಳಿಕ 5-6 ಸಿನಿಮಾಗಳಲ್ಲಿ ವಾಸು ನಟಿಸಿದರು. ಆದರೆ '5 ಈಡಿಯಟ್ಸ್' ಚಿತ್ರದ ನಂತರ ಅವರು ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ವಾಸು ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅವರು ಚಿತ್ರರಂಗ ಬಿಟ್ಟಿದ್ದು ಏಕೆ? ಎಲ್ಲದಕ್ಕೂ ಅವರೇ ಉತ್ತರ ನೀಡುತ್ತಾರೆ. ಹಿಂದುಸ್ತಾನ್ ಟೈಮ್ಸ್ ಕನ್ನಡ ವೆಬ್‌ಸೈಟ್ ಜೊತೆಗಿನ ವಾಸು ಸಂದರ್ಶನ ಇಲ್ಲಿದೆ.
ನೀವು ಮೂಲತ: ಎಲ್ಲಿಯವರು?
ನನ್ನ ಪೂರ್ತಿ ಹೆಸರು ವಾಸುದೇವ್ ರೆಡ್ಡಿ. ಮೂಲತ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟೂರು ಎಂಬ ಗ್ರಾಮಕ್ಕೆ ಸೇರಿದವನು. ಮೊದಲು ಅದು ಕೋಲಾರಕ್ಕೆ ಸೇರಿತ್ತು. ನನ್ನ ತಂದೆ-ತಾಯಿಗೆ ಮೂವರು ಮಕ್ಕಳು. ನಾನೇ ದೊಡ್ಡವನು. ಒಬ್ಬ ತಮ್ಮ, ತಂಗಿ ಇದ್ದಾರೆ. ನಮ್ಮದು ರೈತ ಕುಟುಂಬ, ಆಗ ಬಹಳ ಬಡತನ ಇತ್ತು. ಸ್ಕೂಲ್‌ನಲ್ಲಿ ಓದುವಾಗಲೇ ಅಪ್ಪನಿಗೆ ವ್ಯವಸಾಯದಲ್ಲಿ ಸಹಾಯ ಮಾಡುತ್ತಿದ್ದೆ. ಆದರೆ ಓದು ತಲೆಗೆ ಹತ್ತಲಿಲ್ಲ, ಹೆಚ್ಚು ಸಿನಿಮಾ ನೋಡುತ್ತಿದ್ದೆ. 10ನೇ ಕ್ಲಾಸ್ ಫೇಲ್ ಆದ ನಂತರ ಬೆಂಗಳೂರಿಗೆ ಬಂದೆ.
ಬಾಲ್ಯದಲ್ಲೇ ಸಿನಿಮಾ ಬಗ್ಗೆ ಆಸಕ್ತಿ ಇತ್ತಾ, ಬೆಂಗಳೂರಿಗೆ ಬಂದಿದ್ದೇಕೆ?
ನಾನು ಎಂದಿಗೂ ನಟನಾಗಬೇಕು ಎಂದುಕೊಂಡಿರಲಿಲ್ಲ. ಆದರೆ ಸ್ಕೂಲ್‌ಗೆ ಚಕ್ಕರ್ ಹಾಕಿ ಟೆಂಟ್‌ನಲ್ಲಿ ತೆಲುಗು ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೆ. ಅದಕ್ಕಾಗಿ ಮನೆಯಲ್ಲಿ ದುಡ್ಡು ಕದಿಯುತ್ತಿದ್ದೆ. ಸ್ಕೂಲ್ ನಂತರ ಲಾರಿಗೆ ಮರಳು ತುಂಬಿಸಲು ಹೋಗುತ್ತಿದ್ದೆ. ರಸ್ತೆಯಲ್ಲಿ ದೊರೆತ ಹೊಂಗೆಕಾಯಿ, ಹುಣಿಸೆಹಣ್ಣನ್ನು ಕದ್ದು, ಮಾರಿ ಕಾಸು ಸಂಪಾದಿಸುತ್ತಿದ್ದೆ. ಆದರೆ ನನಗೆ ಆಗ ಕನ್ನಡ ಚಿತ್ರಗಳ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆದಾಗ ಮನೆಯಲ್ಲಿ ಅಮ್ಮ ನನಗೆ ಚೆನ್ನಾಗಿ ಹೊಡೆದು, ರೂಮ್‌ಗೆ ಕೂಡಿ ಹಾಕಿ ಮೆಣಸಿನಕಾಯಿ ಹೊಗೆ ಕೊಟ್ಟಿದ್ದರು. ನನಗೆ ಅದು ಟಾರ್ಚರ್ ಎನಿಸಿ ಯಾರಿಗೂ ತಿಳಿಯದಂತೆ ನಮ್ಮೂರಿಗೆ ಬರುತ್ತಿದ್ದ ಮರಳು ಲಾರಿ ಹತ್ತಿ ಬೆಂಗಳೂರಿನ ಮಾರತಹಳ್ಳಿಗೆ ಬಂದೆ.
ಜೀವನಕ್ಕೆ ಯಾವ ಕೆಲಸ ಶುರು ಮಾಡಿದ್ರಿ?
ಗೊತ್ತಿಲ್ಲದ ಊರಿಗೆ ಬಂದಿದ್ದೇನೆ. ಹಸಿವಾದರೆ ಹೊಟ್ಟೆ ತುಂಬಿಸಿಕೊಳ್ಳಲು ಏನಾದರೂ ಕೆಲಸ ಬೇಕು. ಆದ್ದರಿಂದ ಬಿಲ್ಡಿಂಗ್ ಕಟ್ಟುವ ಸ್ಥಳಗಳಿಗೆ ಹೋಗಿ ಅಲ್ಲಿ ಕೆಲಸ ಕೇಳಿದೆ. ಸಿಮೆಂಟ್ ಮಿಕ್ಸ್ ಮಾಡುವ ಕೆಲಸ ಸಿಕ್ತು. ಪಕ್ಕದಲ್ಲೇ ಹಾಕಿದ್ದ ಟೆಂಟ್‌ನಲ್ಲಿ ಉಳಿದುಕೊಂಡೆ. ಸಿಮೆಂಟ್ ಕೆಲಸ ಮಾಡಿ ಕೈ-ಕಾಲಿಗೆ ಗಾಯವಾಗಿತ್ತು. ಅದು ಬೇಸರ ಎನಿಸಿ ಮಣಿ ಎಂಬುವರ ಬಳಿ ಎಲೆಕ್ಟ್ರಿಕ್ ಕೆಲಸಕ್ಕೆ ಸೇರಿದೆ. ಸಮೀಪದಲ್ಲೇ ಇದ್ದ ಹೋಟೆಲ್‌ನವರಿಗೆ ನೀರು, ಸೌದೆ ತಂದುಕೊಡುತ್ತಿದ್ದೆ. ಅದರ ಬದಲಿಗೆ ಅವರು ನನಗೆ ತಿಂಡಿ, ಊಟ ಕೊಡುತ್ತಿದ್ದರು. ಆದರೆ ಮಣಿ ನನಗೆ ಕೊಡುತ್ತಿದ್ದು ಕೋಟಾ ನೋಟು ಆಗಿತ್ತು. ಆತ ಈ ದಂಧೆಯಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋದ ನಂತರ ಆ ಕೆಲಸ ಬಿಟ್ಟೆ.
ಮತ್ತೆ ನಿಮ್ಮ ಊರಿಗೆ ವಾಪಸ್ ಹೋಗಿದ್ದು ಯಾವಾಗ?
ಒಮ್ಮೆ ನನಗೆ ಬಹಳ ಜ್ವರ ಬಂದಿತ್ತು. ಆಗ ತಂದೆ-ತಾಯಿ ನೆನಪಾಗಿ ಅವರಿಗೆ ಪತ್ರ ಬರೆದೆ. ಬೆಂಗಳೂರಿಗೆ ಬಂದು ನನ್ನನ್ನು ಮನೆಗೆ ವಾಪಸ್ ಕರೆದರು. ಆದರೆ ಆಗಲೇ ಸಂಪಾದನೆ ಆರಂಭಿಸಿದ್ದರಿಂದ ಮತ್ತೆ ಓದಲು ಮನಸ್ಸಾಗಲಿಲ್ಲ. ಜೀವನದಲ್ಲಿ 10ನೇ ಕ್ಲಾಸ್ ಕೂಡಾ ಪಾಸ್ ಆಗಲಿಲ್ಲ. 5-6 ವರ್ಷಗಳು ಸಂಪಾದನೆ ಮಾಡಿ ಊರಿಗೆ ಹೋಗಿ ತಂಗಿ ಮದುವೆ ಮಾಡಿದೆ. ಕೆಲವು ದಿನಗಳ ನಂತರ ನನ್ನ ಮದುವೆ ಆಯ್ತು.
ಚಿತ್ರರಂಗದ ನಂಟು ಶುರುವಾಗಿದ್ದು ಹೇಗೆ?
ಬೆಂಗಳೂರಿನಲ್ಲಿ ನನಗೆ ಪರಿಚಯವಾದ ರಾಮಚಂದ್ರಪ್ಪ ಎನ್ನುವವರು ಕಪಾಲಿ ಥಿಯೇಟರ್ ಬಳಿ ಇದ್ದ ಆರ್.ಕೆ ಕಲರ್ ಲ್ಯಾಬ್‌ನಲ್ಲಿ ಕೆಲಸಕ್ಕೆ ಸೇರಿಸಿದರು. ಬೆಳಗ್ಗೆ ಬಂದು ಕಪಾಲಿ ಚಿತ್ರಮಂದಿರದ ಎದುರು ಕಸ ಗುಡಿಸಿ, ಲ್ಯಾಬ್ ಒಳಗೆ ಕೆಮಿಕಲ್ ಮಿಕ್ಸಿಂಗ್ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ನನಗೆ ಸಿನಿಮಾದವರ ಪರಿಚಯ ಶುರುವಾಯ್ತು. ಸ್ಟಿಲ್ ಗಾಂಧಿ ಅವರಿಂದ ನನಗೆ ಸ್ಟಿಲ್ ಫೋಟೋಗ್ರಾಫರ್ ಕೆಲಸ ಸಿಕ್ತು. ಅಲ್ಲಿಂದ ಅವರು ನನ್ನನ್ನು ನಿರ್ಮಾಪಕಿ ಜಯಶ್ರೀ ದೇವಿ ಅವರ ಬಳಿ ಕೆಲಸಕ್ಕೆ ಸೇರಿಸಿದರು. ಜಯಶ್ರೀ ಅವರು ನನ್ನನ್ನು ಮಗನಂತೆ ಸಾಕಿದರು. ಚಿತ್ರರಂಗದ ನಂಟು ಬೆಳೆಯುತ್ತಾ ಹೋದಂತೆ ಆಕ್ಟಿಂಗ್ ಬಗ್ಗೆ ಕೂಡಾ ಆಸಕ್ತಿ ಶುರುವಾಯ್ತು.
ಮೊದಲು ಆಕ್ಟಿಂಗ್ ಮಾಡಿದ್ದು ಯಾವ ಚಿತ್ರದಲ್ಲಿ, ಹೀರೋ ಆಗಿ ಅವಕಾಶ ಸಿಕ್ಕಿದ್ದು ಹೇಗೆ?
ಜಯಶ್ರೀ ಅಮ್ಮನ ಬಳಿ ನಾನು ಅಸೋಸಿಯೇಟ್ ಆಗಿ ಕೆಲಸಕ್ಕೆ ಸೇರಿದ ನಂತರ ಮೊದಲ ಬಾರಿಗೆ ಶಶಿಕುಮಾರ್ ನಟನೆಯ 'ಭವಾನಿ' ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದೆ. ಅಮೃತವರ್ಷಿಣಿ, ನಿಶ್ಯಬ್ಧ, ತವರಿನ ಸಿರಿ, ಸಖ ಸಖಿ, ದೇವರು ಕೊಟ್ಟ ತಂಗಿ ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದೆ. ಒಮ್ಮೆ ತೆಲುಗು ಸ್ಟಾರ್ ನಟ ಚಿರಂಜೀವಿ ಅವರೊಂದಿಗೆ ಮಾತನಾಡುವಾಗ ತೆಲುಗಿನಲ್ಲಿ '6 ಟೀನ್ಸ್' ಸಿನಿಮಾ ಹಿಟ್ ಆಗಿದೆ. ಇದನ್ನು ಕನ್ನಡದಲ್ಲಿ ಟ್ರೈ ಮಾಡಬಹುದು ಎಂದರು. ಅಮ್ಮನ ಬಳಿ ಮಾತನಾಡಿದೆ. ಆದರೆ ಅವರು ಕಾರಣಾಂತರಗಳಿಂದ ಆ ಸಿನಿಮಾ ನಿರ್ಮಾಣ ಮಾಡಲು ಒಪ್ಪಲಿಲ್ಲ. ನಂತರ ನಾನೇ '6 ಟೀನ್ಸ್' ರೀಮೇಕ್ ರೈಟ್ಸ್ ಪಡೆದೆ. ಆ ಚಿತ್ರಕ್ಕೆ 'ಫ್ರೆಂಡ್ಸ್' ಎಂದು ಹೆಸರಿಟ್ಟು ನಾನೇ ಹೀರೋ ಆದೆ. ಎಂ.ಸಿ. ನೇಹಾ ನನ್ನೊಂದಿಗೆ ಈ ಚಿತ್ರ ನಿರ್ಮಾಣಕ್ಕೆ ಕೈ ತೋರಿಸಿದರು. ಎಂ.ಡಿ. ಶ್ರೀಧರ್ ನಮ್ಮ ಸಿನಿಮಾ ನಿರ್ದೇಶನ ಮಾಡಿದರು. ಸಿನಿಮಾ ಹಿಟ್ ಆಯ್ತು. ಹಾಡುಗಳೂ ಬಹಳ ಫೇಮಸ್ ಆಯ್ತು. ಡಾ. ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್ ಹಾಗೂ ಇತರ ಖ್ಯಾತ ನಟರು ಮನೆಗೆ ಕರೆಸಿ ನನಗೆ ಸನ್ಮಾನ ಮಾಡಿದರು.
ನಂತರ ನಟಿಸಿದ 'ದೇವರು ವರವನು ಕೊಟ್ರೆ', 'ಡ್ರೀಮ್ಸ್' ಸಿನಿಮಾಗಳು ಕೂಡಾ ಒಳ್ಳೆ ಲಾಭ ಮಾಡಿತು. ಆದರೆ 'ಕನಸಿನ ಲೋಕ' ಫ್ಲಾಪ್ ಆಯ್ತು. ನನ್ನ ನಿರ್ಮಾಣದಲ್ಲಿ ಗಣೇಶ್ ಜೊತೆ ನಟಿಸಿದ್ದ 'ಕೌನ್ ಬನೇಗಾ ಕೋಟ್ಯಧಿಪತಿ' ಸಿನಿಮಾ ಅರ್ಧಕ್ಕೆ ಸ್ಟಾಪ್ ಆಯ್ತು. '5 ಈಡಿಯಟ್ಸ್' ಕೂಡಾ ಸಕ್ಸಸ್ ಕಾಣಲಿಲ್ಲ. ಇದಾದ ನಂತರ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದು ಬಿಟ್ಟರೆ ಮತ್ತೆ ಹೀರೋ ಆಗಿ ನಟಿಸಲಿಲ್ಲ.
ಚಿತ್ರರಂಗದಿಂದ ದೂರಾಗಿದ್ದೇಕೆ?
'5 ಈಡಿಯಟ್ಸ್' ಚಿತ್ರಕ್ಕೆ ನಾಲ್ಕು ಜನರು ಬಂಡವಾಳ ಹೂಡಿದ್ದೆವು. ಆದರೆ ಸಿನಿಮಾ ಫ್ಲಾಪ್ ಆಯ್ತು. ಇದರಿಂದ ಹಣ ಕಳೆದುಕೊಂಡೆ. ನಾಗರಭಾವಿಯಲ್ಲಿದ್ದ ಸೈಟ್ ಮಾರಬೇಕಾಯ್ತು. ಈ ಚಿತ್ರದ ಜಿಂಕಿಚಕ..ಚಿಂಗಿಜಕ.. ಹಾಡು ಬಹಳ ಟ್ರೋಲ್ ಆಯ್ತು. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ಹಿಂದಿಯವರು ಕೂಡಾ ಇದನ್ನು ಟ್ರೋಲ್ ಮಾಡಿದ್ದರು. ಸದ್ಯಕ್ಕೆ ನಟನೆಯಿಂದ ದೂರ ಇದ್ದೇನೆ, ಆದರೆ ಚಿತ್ರರಂಗದ ಕೆಲವರೊಂದಿಗೆ ಈಗಲೂ ಸಂಪರ್ಕದಲ್ಲಿದ್ದೇನೆ. 'ಕುರುಕ್ಷೇತ್ರ' ಚಿತ್ರಕ್ಕೆ ಎಕ್ಸ್‌ಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೆ.
ಇಷ್ಟಾದರೂ ನನಗೆ ಚಿತ್ರರಂಗದವರ ಬಗ್ಗೆ ಬೇಸರ ಇದೆ. ಜಯಶ್ರೀ ಅಮ್ಮ, ಶ್ರೀ ಮಂಜುನಾಥ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ, ಹಬ್ಬ, ಸ್ನೇಹಲೋಕ, ನವಶಕ್ತಿವೈಭವ, ಬಂಗಾರದ ಮನೆ ಸೇರಿದಂತೆ ಎಂತಹ ಒಳ್ಳೆ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಟ್ಟ ನಿರ್ಮಾಪಕಿ. ಆದರೆ ಅವರು ನಿಧನರಾದಾಗ ಅವರ ಅಂತಿಮ ದರ್ಶನ ಪಡೆಯಲು ಇಂಡಸ್ಟ್ರಿಯಿಂದ ನಾಲ್ಕೈದು ಮಂದಿ ಹೊರತು ಬೇರೆ ಯಾರೂ ಬರಲಿಲ್ಲ. ಅನ್ನ ನೀಡಿದ ನಿರ್ಮಾಪಕಿಗೆ ಯಾರೂ ಕೃತಜ್ಞತೆ ತೋರಲಿಲ್ಲ. ಇಂದಿಗೂ ಈ ಬೇಸರ ಇದೆ.
ಈಗ ಏನು ಮಾಡುತ್ತಿದ್ದೀರ?
ಜಯಶ್ರೀ ಅಮ್ಮ ನಮ್ಮನ್ನು ಬಿಟ್ಟು ಹೋದ ನಂತರ ದಿಕ್ಕೇ ತೋಚದಂತಾಗಿತ್ತು. ಆ ವೇಳೆಗೆ ಕೊರೊನಾ ಶುರುವಾಯ್ತು. ನನಗೆ ಬೆಂಗಳೂರಿನಲ್ಲಿರಲು ಬೇಸರವಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಕ್ಕೆ ಬಂದೆ. ಇಲ್ಲಿ ನಮ್ಮದು 2 ಎಕರೆ ಜಮೀನು ಇದೆ. 10 ಎಕರೆ ಭೋಗ್ಯಕ್ಕೆ ಪಡೆದು ಬಾಳೆ ನೆಟ್ಟಿದ್ದೇನೆ. ಸಾವಯವ ವ್ಯವಸಾಯ ಮಾಡುತ್ತಿದ್ದೇನೆ. ಪತ್ನಿ-ಮಗ ಬೆಂಗಳೂರಿನಲ್ಲಿದ್ದಾರೆ, ಆಗ್ಗಾಗ್ಗೆ ಹೋಗಿ ಬರುತ್ತೇನೆ. ಮಗ ಸಿವಿಲ್ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಶನಿವಾರ-ಭಾನುವಾರ ಇಲ್ಲಿಗೆ ಬಂದು ವ್ಯವಸಾಯದಲ್ಲಿ ಸಹಾಯ ಮಾಡುತ್ತಾನೆ.
ಹೊಸದಾಗಿ ಯೂಟ್ಯೂಬ್ ಆರಂಭಿಸಿದ್ದೇನೆ. ಅಡುಗೆ ಹಾಗೂ ರೈತರಿಗೆ ಸಹಾಯವಾಗುವಂತ ವಿಡಿಯೋಗಳನ್ನು ಮಾಡುತ್ತಿದ್ದೇನೆ. ಚಿತ್ರರಂಗದಲ್ಲಿರುವಾಗ ನನಗೆ ಪರಿಚಯ ಆಗಿದ್ದ ಗಂಗಾಧರ್ ಎನ್ನುವವರಿಂದ ವಾಸ್ತು ಕಲಿತಿದ್ದೆ, ಈಗ ಜನರಿಗೆ ವಾಸ್ತುಗೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಿದ್ದೇನೆ. ಅದಕ್ಕೆ ದುಡ್ಡು ಕೊಡುತ್ತಾರೆ. ಇಂತಿಷ್ಟೇ ಕೊಡಿ ಎಂದು ನಾನು ಡಿಮ್ಯಾಂಡ್ ಮಾಡುವುದಿಲ್ಲ. ನಾನು ದೊಡ್ಡ ಬಂಗಲೆ, ಫೈವ್ ಸ್ಟಾರ್ ಹೋಟೆಲ್, ಎಸಿ ರೂಮ್‌ನಲ್ಲಿ ಇದ್ದವನು. ಈಗ ಪುಟ್ಟ ಮನೆಯಲ್ಲಿದ್ದೇನೆ. ಆದರೂ ಇದೇ ಶಾಶ್ವತ ಅನ್ನೋದು ಈಗ ಅರಿವಾಗಿದೆ.
ಮತ್ತೆ ಆಕ್ಟಿಂಗ್ ಮಾಡ್ತೀರಾ?
ಚಿತ್ರರಂಗದವರ ಬಗ್ಗೆ ಬೇಸರ ಇರುವುದು ನಿಜ. ಆದರೆ ಸಿನಿಮಾ ನನಗೆ ಅನ್ನ ಕೊಟ್ಟಿದೆ. ಅದನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಆಕ್ಟಿಂಗ್‌ಗೆ ಬಹಳ ಅವಕಾಶಗಳು ಬರುತ್ತಿದೆ. ಒಳ್ಳೆ ಕ್ಯಾರೆಕ್ಟರ್ ಸಿಕ್ಕರೆ ಖಂಡಿತ ಮಾಡುತ್ತೇನೆ. ಜಯಶ್ರೀ ಅಮ್ಮನಿಗೆ ತೆಲುಗು ನಟ ನಂದಮೂರಿ ಬಾಲಕೃಷ್ಣ ಸಂಬಂಧಿ ಆಗಬೇಕು. ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಬೆಂಗಳೂರಿಗೆ ಬಂದಾಗಲೆಲ್ಲಾ ಅವರನ್ನು ಭೇಟಿ ಮಾಡಿ ಬರುತ್ತೇನೆ. ಶಿವಣ್ಣ ಜೊತೆ ಕೂಡಾ ಉತ್ತಮ ಒಡನಾಟ ಇದೆ. ಅದನ್ನು ಹೊರತುಪಡಿಸಿ ಯಾರೊಬ್ಬರೂ ಕೂಡಾ ನನಗೆ ಕರೆ ಮಾಡಿ ಹೇಗಿದ್ದೀಯ ಅಂತ ಕೇಳಿಲ್ಲ. ನನ್ನೊಂದಿಗೆ ಸಿನಿಮಾ ಮಾಡಿದವರು ಈಗ ಒಳ್ಳೆ ಸ್ಥಾನದಲ್ಲಿದ್ದಾರೆ. ಎಲ್ಲರೂ ತಾವಾಯಿತು, ತಮ್ಮ ಕೆಲಸ ಆಯ್ತು ಅಂತ ಇದ್ದಾರೆ. ನನ್ನ ಬಳಿ ಎಲ್ಲಾ ಇದ್ದಾಗ ಜೊತೆಗಿದ್ದ ಜನರು, ನಾನು ಕಷ್ಟದಲ್ಲಿದ್ದಾಗ ಹತ್ತಿರ ಸುಳಿದಿಲ್ಲ. ಸಿನಿಮಾಗೆ ಸಂಬಂಧಿಸಿದಂತೆ ಕೆಲವು ಪ್ಲ್ಯಾನ್‌ಗಳಿವೆ, ಒಂದೊಳ್ಳೆ ಟೈಮ್‌ಗಾಗಿ ಕಾಯುತ್ತಿದ್ದೇನೆ.
ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಬರುವವರಿಗೆ ಏನು ಸಲಹೆ ಕೊಡ್ತೀರ?
ಮೊಬೈಲ್ ಬಂದ ನಂತರ ಸಿನಿಮಾಗೆ ವ್ಯಾಲ್ಯೂ ಇಲ್ಲದಂತಾಗಿದೆ. ಮೊದಲೆಲ್ಲಾ ಅಷ್ಟು ಸ್ಪರ್ಧೆ ಇರಲಿಲ್ಲ. ಈಗ ಬಹಳ ಕಾಂಪಿಟೇಷನ್ ಇದೆ. ಮಾಡಿದ ಎಲ್ಲಾ ಸಿನಿಮಾಗಳು ಗೆಲ್ಲುವುದಿಲ್ಲ, ಎಲ್ಲಾ ಸಿನಿಮಾ ಲಾಭ ಮಾಡುವುದಿಲ್ಲ. ಈಗ ಯಾರು ಬೇಕಾದರೂ ಸಿನಿಮಾಗೆ ಬರಬಹುದು, ಆದರೆ ಗೆಲ್ಲುವುದು ಕೂಡಾ ಸುಲಭದ ಮಾತಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಹಳ ಎಚ್ಚರದಿಂದ ಮುಂದಿನ ಹೆಜ್ಜೆ ಇಡಿ ಎಂದಷ್ಟೇ ಹೇಳುತ್ತೇನೆ.
ವಾಸು ಮತ್ತೆ ಚಿತ್ರರಂಗಕ್ಕೆ ಬರಲಿ, ಸ್ಯಾಂಡಲ್‌ವುಡ್‌ಗೆ ಉತ್ತಮ ಸಿನಿಮಾಗಳನ್ನು ನೀಡಲಿ, ಅವರ ಇನ್ನಿತರ ಕನಸುಗಳು ನೆರವೇರಲಿ ಎಂಬುದೇ ನಮ್ಮ ಹಾರೈಕೆ.