ಬಾಲಿವುಡ್‍ನಲ್ಲಿ ಸ್ಟಾರ್ ಮಕ್ಕಳ ಮತ್ತು ಸಂಬಂಧಿಗಳ ಸಿನಿಮಾ ಜಾತ್ರೆ; ಅದೃಷ್ಟ ಪರೀಕ್ಷೆಯಲ್ಲಿ ಯಾರಾಗ್ತಾರೆ ಪಾಸ್‌? ಸಿನಿಸ್ಮೃತಿ ಅಂಕಣ
ಕನ್ನಡ ಸುದ್ದಿ  /  ಮನರಂಜನೆ  /  ಬಾಲಿವುಡ್‍ನಲ್ಲಿ ಸ್ಟಾರ್ ಮಕ್ಕಳ ಮತ್ತು ಸಂಬಂಧಿಗಳ ಸಿನಿಮಾ ಜಾತ್ರೆ; ಅದೃಷ್ಟ ಪರೀಕ್ಷೆಯಲ್ಲಿ ಯಾರಾಗ್ತಾರೆ ಪಾಸ್‌? ಸಿನಿಸ್ಮೃತಿ ಅಂಕಣ

ಬಾಲಿವುಡ್‍ನಲ್ಲಿ ಸ್ಟಾರ್ ಮಕ್ಕಳ ಮತ್ತು ಸಂಬಂಧಿಗಳ ಸಿನಿಮಾ ಜಾತ್ರೆ; ಅದೃಷ್ಟ ಪರೀಕ್ಷೆಯಲ್ಲಿ ಯಾರಾಗ್ತಾರೆ ಪಾಸ್‌? ಸಿನಿಸ್ಮೃತಿ ಅಂಕಣ

ನೆಟ್‍ಫ್ಲಿಕ್ಸ್ ಈ ವರ್ಷದ ತನ್ನ ಹೊಸ ಸಿನಿಮಾಗಳು ಮತ್ತು ಕಾರ್ಯಕ್ರಮಗಳನ್ನು ಕಳೆದ ವಾರ ಮುಂಬೈನಲ್ಲಿ ಘೋಷಣೆ ಮಾಡಿದೆ. ವಿಶೇಷವೆಂದರೆ, ಬಾಲಿವುಡ್‍ ಸ್ಟಾರ್ ನಟರಾದ ಸೈಫ್‍ ಅಲಿ ಖಾನ್‍ ಮಗ ಇಬ್ರಾಹಿಂ ಖಾನ್‍ ನಟನೆಯ ಮೊದಲ ಚಿತ್ರ, ಶಾರೂಖ್‍ ಖಾನ್‍ ಮಗ ಆರ್ಯನ್‍ ನಿರ್ದೇಶನದ ಮೊದಲ ಕಾರ್ಯಕ್ರಮ ಸಹ ಸೇರಿದೆ.

ಬಾಲಿವುಡ್‍ನಲ್ಲಿ ಸ್ಟಾರ್ ಮಕ್ಕಳ ಮತ್ತು ಸಂಬಂಧಿಗಳ ಸಿನಿಮಾ ಜಾತ್ರೆ; ಅದೃಷ್ಟ ಪರೀಕ್ಷೆಯಲ್ಲಿ ಯಾರಾಗ್ತಾರೆ ಪಾಸ್‌?
ಬಾಲಿವುಡ್‍ನಲ್ಲಿ ಸ್ಟಾರ್ ಮಕ್ಕಳ ಮತ್ತು ಸಂಬಂಧಿಗಳ ಸಿನಿಮಾ ಜಾತ್ರೆ; ಅದೃಷ್ಟ ಪರೀಕ್ಷೆಯಲ್ಲಿ ಯಾರಾಗ್ತಾರೆ ಪಾಸ್‌?

ಸಿನಿಸ್ಮೃತಿ ಅಂಕಣ: ಹಿಂದಿ ಚಿತ್ರರಂಗದ ಸಾಕಷ್ಟು ನಟರ ಮಕ್ಕಳ, ಸಂಬಂಧಿಕರು ಈಗಾಗಲೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. 70ರ ದಶಕದಲ್ಲಿ ರಾಜ್‍ ಕಪೂರ್ ಮಕ್ಕಳಾದ ರಣಧೀರ್ ಕಪೂರ್ ಮತ್ತು ರಿಷಿ ಕಪೂರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 80ರ ದಶಕದಲ್ಲಿ ಧರ್ಮೇಂದ್ರ ಮಗ ಸನ್ನಿ ಡಿಯೋಲ್‍, ಸುನೀಲ್‍ ದತ್ ಮಗ ಸಂಜಯ್‍ ದತ್‍, ರಾಜೇಂದ್ರ ಕುಮಾರ್ ಮಗ ಕುಮಾರ್ ಗೌರವ್‍, ರಾಜ್‍ ಕಪೂರ್ ಮಗ ರಾಜೀವ್ ಕಪೂರ್, ದೇವ್ ಆನಂದ್‍ ಮಗ ಸುನೀಲ್ ಆನಂದ್‍, ಶಶಿ ಕಪೂರ್ ಮಗಳು ಸಂಜನಾ ಕಪೂರ್ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ಸಂಖ್ಯೆಯಲ್ಲಿ ಸ್ಟಾರ್ ಮಕ್ಕಳು ಮತ್ತು ಸಂಬಂಧಿಕರು ಚಿತ್ರರಂಗಕ್ಕೆ ಬಂದು ಹೋಗಿದ್ದಾರೆ. ಕೆಲವರು ಇಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿದರೆ, ಇನ್ನೂ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಮಕ್ಕಳ ಪ್ರಾಬಲ್ಯ ಜಾಸ್ತಿ ಇರುವುದರಿಂದಲೇ, ಕೆಲವು ವರ್ಷಗಳ ಹಿಂದೆ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ದೊಡ್ಡ ಕೂಗು ಕೇಳಿಬಂದಿತ್ತು.

ಈಗ ಮತ್ತೆ ಬಾಲಿವುಡ್‍ಗೆ ಸ್ಟಾರ್ ಮಕ್ಕಳು ಮತ್ತು ಸಂಬಂಧಿಕರು ತಮ್ಮ ಅದೃಷ್ಟವನ್ನು ಅರಸಿ ಬರುತ್ತಿದ್ದಾರೆ. ಈಗಾಗಲೇ ಕೆಲವರು ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಚಿತ್ರರಂಗಕ್ಕೆ ಬಂದಿದ್ದಾಗಿದೆ. ಈ ವರ್ಷ ಇನ್ನಷ್ಟು ಮಕ್ಕಳ ಆಗಮನವಾಗಲಿಕ್ಕಿದ್ದು, ಅವರನ್ನು ಕುತೂಹಲದಿಂದ ನೋಡಲಾಗುತ್ತಿದೆ. ಬಾಲಿವುಡ್‍ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಒಂದಿಷ್ಟು ಮಂದಿಯ ಪಟ್ಟಿ ಇಲ್ಲಿದೆ.

ಮೊದಲ ಚಿತ್ರದಲ್ಲಿ ‘ಮಹಾರಾಜ’ನಾಗಲಿಲ್ಲ

ಆಮೀರ್ ಖಾನ್‍ ಮಗ ಜುನೈದ್‍ ಖಾನ್‍ ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಅದರಲ್ಲೂ ಬಾಲಿವುಡ್‍ನ ಜನಪ್ರಿಯ ನಿರ್ಮಾಣ ಸಂಸ್ಥೆ ಯಶ್‍ರಾಜ್‍ ಫಿಲಂಸ್‍ ಈ ಚಿತ್ರದ ಹಿಂದಿತ್ತು. ಆದರೆ, ಕಳೆದ ವರ್ಷ ಬಿಡುಗಡೆಯಾದ ಜುನೈದ್‍ ಖಾನ್‍ ಅಭಿನಯದ ಮೊದಲ ಚಿತ್ರ ‘ಮಹಾರಾಜ್‍’ ಆ ನಿರೀಕ್ಷೆಗೆ ನಿಲುಕಲಿಲ್ಲ. ಈ ಚಿತ್ರ ನೆಟ್‍ಫ್ಲಿಕ್ಸ್ನಲ್ಲಿ ಬಿಡುಗಡೆಯಾಯಿತು. ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರಿಂದ, ಬರೀ ಒಟಿಟಿ ನೋಡುವವರಿಗೆ ಮಾತ್ರ ಸೀಮಿತವಾಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ಬಹುಶಃ ದೊಡ್ಡ ಸುದ್ದಿ, ನಿರೀಕ್ಷೆ ಇರುತ್ತಿತ್ತೇನೋ? ಆದರೆ, ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ. ಜುನೈದ್‍ ಖಾನ್‍ ಅಭಿನಯದ ‘ಲವ್‍ಯಾಪ’ ಕಳೆದ ವಾರ ಬಿಡುಗಡೆಯಾಗಿದೆ. ಅದ್ವೈತ್‍ ಚಂದನ್‍ ನಿರ್ದೇಶನದ ಈ ಚಿತ್ರವು ತುಂಬಾ ದೊಡ್ಡ ಸುದ್ದಿಯೇನೂ ಆಗಿಲ್ಲ.

ಹತ್ತಿರವಾಗುವುದಕ್ಕೆ ಬರುತ್ತಿದ್ದಾರೆ ಇಬ್ರಾಹಿಂ ಅಲಿ ಖಾನ್‍

ಸೈಫ್‍ ಅಲಿ ಖಾನ್‍ ಮಗಳು ಸಾರಾ ಅಲಿ ಖಾನ್‍ ಈಗಾಗಲೇ ಬಾಲಿವುಡ್‍ನಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದಿಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಆಕೆಯ ಸಹೋದರ ಇಬ್ರಾಹಿಂ ಅಲಿ ಖಾನ್‍ ಸರದಿ. ಈ ವರ್ಷ ಬಿಡುಗಡೆಯಾಗಲಿರುವ ‘ನಾದಾನಿಯಾನ್‍’ ಚಿತ್ರದ ಮೂಲಕ ಇಬ್ರಾಹಿಂ ನಟನೆಗೆ ಎಂಟ್ರಿ ಕೊಟ್ಟಿದ್ದು, ಅವರ ಮೊದಲ ಚಿತ್ರವನ್ನು ಕರಣ್‍ ಜೋಹರ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಕರಣ್‍ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕೀ ಪ್ರೇಮ್‍ ಕಹಾನಿ’ ಚಿತ್ರದಲ್ಲಿ ಇಬ್ರಾಹಿಂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಚಿತ್ರ ತಯಾರಿಕೆಯ ಬಗ್ಗೆ ಒಂದಿಷ್ಟು ಕಲಿತಿದ್ದರು. ಇದೀಗ ಅವರು ಹೀರೋ ಆಗಿದ್ದು, ಈ ವರ್ಷ ಚಿತ್ರ ನೆಟ್‍ಫ್ಲೆಕ್ಸ್ನಲ್ಲಿ ಬಿಡುಗಡೆಯಾಗಲಿದೆ.

ಸ್ಟಾರ್ ನಟನ ಮಗ ನಿರ್ದೇಶಕನಾದಾಗ

‘ಬಾಲಿವುಡ್‍ ಬಾದ್‍ಷ’ ಎಂದೇ ಜನಪ್ರಿಯರಾಗಿರುವ ಶಾರೂಖ್‍ ಖಾನ್‍ ಮಗಳು ಸುಹಾನಾ ಖಾನ್‍, ಈಗಾಗಲೇ ‘ದಿ ಆರ್ಚೀಸ್‍’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಚಿತ್ರವಲ್ಲದೆ, ಒಂದಿಷ್ಟು ಜಾಹೀರಾತುಗಳಲ್ಲೂ ಸುಹಾನಾ ಕಾಣಿಸಿಕೊಂಡಿದ್ದಾರೆ. ಈಗ ಅವರ ಸಹೋದರ ಆರ್ಯನ್‍ ಖಾನ್‍ ‘The Ba***ds of Bollywood’ ಎಂಬ ಕಾರ್ಯಕ್ರಮದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ನೆಟ್‍ಫ್ಲಿಕ್ಸ್‌ಗಾಗಿ ಶಾರೂಖ್‍ ಖಾನ್‍ ಅವರ ರೆಡ್‍ ಚಿಲ್ಲೀಸ್‍ ಎಂಟರ್‌ಟೈನ್‌ಮೆಂಟ್‍ ಸಂಸ್ಥೆಯು ‘ಕ್ಲಾಸ್‍ ಆಫ್‍ 83’, ‘ಬಾರ್ಡ್ ಆಫ್‍ ಬ್ಲಡ್‍’, ‘ಡಾರ್ಲಿಂಗ್ಸ್’, ‘ಬೇತಾಲ್‍’ ಮುಂತಾದ ಸಿನಿಮಾಗಳು ಮತ್ತು ವೆಬ್‍ಸರಣಿಗಳನ್ನು ರೂಪಿಸಿತ್ತು. ಇದೀಗ ‘The Ba***ds of Bollywood’ ಕಾರ್ಯಕ್ರಮವನ್ನು ರೆಡ್‍ ಚಿಲ್ಲೀಸ್‍ ಮತ್ತು ನೆಟ್‍ಫ್ಲಿಕ್ಸ್ ಜೊತೆಯಾಗಿ ನಿರ್ಮಿಸುತ್ತಿವೆ. ಈ ಕಾರ್ಯಕ್ರಮದ ಟೀಸರ್‌ನಲ್ಲಿ ಶಾರೂಖ್ ಖಾನ್‍ ಸಹ ಕಾಣಿಸಿಕೊಂಡಿರುವುದು ವಿಶೇಷ.

ಖುಷಿಖುಷಿಯಾಗಿ ಚಿತ್ರರಂಗಕ್ಕೆ ಎಂಟ್ರಿ

ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾಗಿದೆ. ಈಗ ಆಕೆಯ ಸಹೋದರಿ, ಖುಷಿ ಕಪೂರ್ ಕುಟುಂಬದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 2003ರಲ್ಲಿ ನೆಟ್‍ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ದಿ ಆರ್ಚೀಸ್‍’ ಚಿತ್ರದ ಮೂಲಕ ಖುಷಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇತ್ತೀಚೆಗೆ ಬಿಡುಗಡೆಯಾದ ಜುನೈದ್‍ ಖಾನ್‍ ಅಭಿನಯದ ‘ಲವ್‍ಯಾಪ’ ಚಿತ್ರದಲ್ಲೂ ಅವರು ನಾಯಕಿಯಾಗಿದ್ದರು. ಈ ವರ್ಷ ಬಿಡುಗಡೆಯಾಗಲಿರುವ ಇಬ್ರಾಹಿಂ ಅಲಿ ಖಾನ್‍ ಅಭಿನಯದ ‘ನಾದಾನಿಯಾನ್‍’ ಚಿತ್ರದಲ್ಲೂ ಖುಷಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅಮಿತಾಭ್‍ ಮೊಮ್ಮಗನ ಅದೃಷ್ಟ ಪರೀಕ್ಷೆ

ಅಮಿತಾಭ್‍ ಬಚ್ಚನ್‍ ಅವರ ಮೊಮ್ಮಗ ಅಗಸ್ತ್ಯ ನಂದ ಸಹ ಈ ಸ್ಟಾರ್ ಕಿಡ್‍ಗಳ ಸಾಲಿಗೆ ಸೇರಿದವರು. ಈಗಾಗಲೇ ಅಗಸ್ತ್ಯ, ‘ದಿ ಆರ್ಚೀಸ್‍’ ಚಿತ್ರದಲ್ಲಿ ಆರ್ಚಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರ ಹೆಚ್ಚು ಸದ್ದು ಮಾಡದಿದ್ದರೂ, ಅಗಸ್ತ್ಯನ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಇದೀಗ ‘ಇಕ್ಕೀಸ್‍’ ಎಂಬ ಚಿತ್ರದಲ್ಲಿ ಅಗಸ್ತ್ಯ ನಟಿಸುತ್ತಿದ್ದು, ಆ ಚಿತ್ರ ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪಟ್ಟಿ ದೊಡ್ಡದೇ ಇದೆ …

ಹಾಗಂತ ಇಷ್ಟಕ್ಕೇ ಮುಗಿಯುತ್ತದೆ ಎಂದಲ್ಲ. ಪಟ್ಟಿ ದೊಡ್ಡದಿದೆ. ಜನವರಿಯಲ್ಲಿ ಬಿಡುಗಡೆಯಾದ ‘ಆಜಾದ್‍’ ಎಂಬ ಚಿತ್ರದ ಮೂಲಕ ಅಜಯ್‍ ದೇವಗನ್‍ ಸಂಬಂಧಿ ಅಮಾನ್ ದೇವಗನ್‍ ಮತ್ತು ರವೀನಾ ಟಂಡನ್‍ ಪುತ್ರಿ ರಾಶಾ ಟಂಡನ್‍ ಚಿತ್ರರಂಗಕ್ಕೆ ಪರಿಚಿತರಾದರು. ಸಂಜಯ್‍ ಕಪೂರ್ ಮಗಳು ಶನಾಯಾ ಕಪೂರ್, ‘ಆಂಖೋ ಕೀ ಗುಸ್ತಾಕಿಯಾಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಕ್ಷಯ್‍ ಕುಮಾರ್ ಸಂಬಂಧಿ ಸಿಮರ್ ಭಾಟಿಯಾ, ‘ಇಕ್ಕೀಸ್‍’ ಚಿತ್ರದ ಮೂಲಕ ನಟಿಯಾಗುತ್ತಿದ್ದಾರೆ. ರಾಜೇಶ್‍ ಖನ್ನ ಅವರ ಮೊಮ್ಮಗಳು ನಮೋನಿ ಶರಣ್‍, ಸಹ ಅಗಸ್ತ್ಯ ನಂದಾ ಅಭಿನಯದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ಚೇತನ್ ನಾಡಿಗೇರ್ ಪರಿಚಯ

ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್‍ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್‍ ಅರವಿಂದ್‍ ಅವರ ‘ಖುಷಿಯಿಂದ ರಮೇಶ್‍’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್‍ ಶಾಟ್‍ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್‍ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿ ಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

Manjunath Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner