Gaalipata 2 Telecasting in TV: ಸಿನಿಪ್ರಿಯರಿಗೆ ಡಬಲ್ ಮನರಂಜನೆ..ಎರಡು ದಿನಗಳು ಟಿವಿಯಲ್ಲಿ ಪ್ರಸಾರವಾಗ್ತಿದೆ 'ಗಾಳಿಪಟ 2'
ಎರಡು ದಿನಗಳು ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿರುವುದು ಸಿನಿಪ್ರಿಯರಿಗೆ ಖುಷಿ ನೀಡಿದೆ. ಜೀ ಕನ್ನಡ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ.
2008 ರಲ್ಲಿ ಬಿಡುಗಡೆಯಾದ 'ಗಾಳಿಪಟ' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಯೋಗರಾಜ ಭಟ್ಟರು 'ಗಾಳಿಪಟ-2' ಚಿತ್ರವನ್ನು ಅನೌನ್ಸ್ ಮಾಡಿದ್ದರು. ಸಾಕಷ್ಟು ಅಡೆ-ತಡೆಗಳ ನಡುವೆಯೂ ಸಿನಿಮಾ ಆಗಸ್ಟ್ 12 ರಂದು ತೆರೆ ಕಂಡಿತ್ತು. ಸಿನಿಮಾ ಬಿಡುಗಡೆ ತಡವಾದರೂ ಚಿತ್ರ ದೊಡ್ಡ ಯಶಸ್ಸು ಗಳಿಸಿದೆ. ಚಿತ್ರ ಸಾಕಷ್ಟು ಲಾಭ ಕೂಡಾ ಮಾಡಿದೆ.
'ಗಾಳಿಪಟ-2' ಸಿನಿಮಾ ದಾಖಲೆ ಬರೆದಿದೆ. ವಿದೇಶದಲ್ಲಿ ಕೂಡಾ ಜನರು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಮಿಸ್ ಮಾಡಿಕೊಂಡವರು ಈಗ ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದು. 'ಗಾಳಿಪಟ-2' ಸಿನಿಮಾ ಕಿರುತೆರೆಯಲ್ಲೇ ಪ್ರಸಾರವಾಗುತ್ತಿದೆ. ನವೆಂಬರ್ 5 ಹಾಗೂ 6 ರಂದು ಸಂಜೆ 4.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಎರಡು ದಿನಗಳು ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿರುವುದು ಸಿನಿಪ್ರಿಯರಿಗೆ ಖುಷಿ ನೀಡಿದೆ. ಜೀ ಕನ್ನಡ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ.
ಆರಂಭದಲ್ಲಿ ಚಿತ್ರಕ್ಕೆ ಆಯ್ಕೆಯಾಗಿದ್ದ ಶರಣ್ ಹಾಗೂ ರಿಷಿ
'ಗಾಳಿಪಟ' ಚಿತ್ರದಲ್ಲಿ ರಾಜೇಶ್ ಕೃಷ್ಣನ್, ಗಣೇಶ್, ದಿಗಂತ್ ಮೂವರ ಕಾಂಬಿನೇಷನ್ ಅಭಿಮಾನಿಗಳನ್ನು ಸಖತ್ ಮೋಡಿ ಮಾಡಿತ್ತು. 'ಗಾಳಿಪಟ 2' ಚಿತ್ರ ಅನೌನ್ಸ್ ಆದಾಗ ಮೊದಲು, ರಿಷಿ ಹಾಗೂ ಶರಣ್ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಗಾಳಿಪಟ ಚಿತ್ರದಲ್ಲಿ ನಟಿಸಿದ್ದ ಮೂವರೇ ಈ ಸಿನಿಮಾದಲ್ಲಿ ಕೂಡಾ ನಟಿಸಿದರೆ ಚೆನ್ನಾಗಿತ್ತು ಎಂಬ ಮಾತು ಎಲ್ಲಾ ಕಡೆಯಿಂದ ಕೇಳಿಬಂತು. ಆದ್ದರಿಂದ ರಿಷಿ ಹಾಗೂ ಶರಣ್ ಒಪ್ಪಿಗೆ ಪಡೆದ ಭಟ್ಟರು ಆ ಜಾಗಕ್ಕೆ ದಿಗಂತ್ ಹಾಗೂ ಗಣೇಶ್ ಅವರನ್ನು ಕರೆತಂದರು.
ಆದರೆ ಮೊದಲ ಚಿತ್ರದಲ್ಲಿ ನಟಿಸಿದ್ದ ಗಾಯಕ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ, ಯುಟರ್ನ್ ನಿರ್ದೇಶಕ ಪವನ್ ಕುಮಾರ್ ಅವರನ್ನು ಕರೆತರಲಾಗಿದೆ. ಈ ನಡುವೆ ಎರಡು ಬಾರಿ ಕೋವಿಡ್ ಲಾಕ್ಡೌನ್ನಿಂದ ಸಿನಿಮಾ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಕಳೆದ ವರ್ಷದ ಅಂತ್ಯದಲ್ಲಿ ಸಿನಿಮಾ ಚಿತ್ರೀಕರಣ ಮುಗಿದಿತ್ತು. ಆದರೆ ಸಿನಿಮಾ ಬಿಡುಗಡೆಯಾಗುವುದು ತಡವಾಗಿದ್ದರಿಂದ ಅಭಿಮಾನಿಗಳು ಬಹಳ ಬೇಸರ ವ್ಯಕ್ತಪಡಿಸಿದ್ದರು. ಅಡೆತಡೆಗಳಿಗೂ ಕೊನೆಗೆ ಆಗಸ್ಟ್ 12 ರಂದು ಚಿತ್ರ ತೆರೆ ಕಂಡಿತ್ತು. ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ನಿರ್ದೇಶಕ ಯೋಗರಾಜ್ ಧನ್ಯವಾದ ಅರ್ಪಿಸಿದ್ದರು. ಜೊತೆಗೆ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ, ಹಿರಿಯ ನಟ ಅನಂತ್ ನಾಗ್, ಗಣೇಸ್ ಸೇರಿ ಎಲ್ಲಾ ತಂತ್ರಜ್ಞರಿಗೆ ಕೂಡಾ ಧನ್ಯವಾದ ಹೇಳಿದ್ದರು.
ಯೋಗರಾಜ್ ಭಟ್ ಅವರನ್ನು ಲೂಸ್ ಎಂದಿದ್ದ ಮಗಳು
'ಗಾಳಿಪಟ 2' ಸಿನಿಮಾ ತೆರೆ ಕಂಡ ದಿನ ನಿರ್ದೇಶಕ ಯೋಗರಾಜ್ ಭಟ್ ಚಿತ್ರಮಂದಿರದ ಹೊರಗೆ ನೆರೆದಿದ್ದ ಯುವಜನತೆಯೊಂದಿಗೆ ತಮಟೆ ಬಾರಿಸಿ ಖುಷಿ ಪಟ್ಟಿದ್ದರು. ಕೆಲವು ಅಭಿಮಾನಿಗಳಂತೂ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಕಿಸ್ ಮಾಡುತ್ತಾ, ಅವರನ್ನು ಎತ್ತಿ ಮೆರೆಸಿದ್ದರು. ಈ ಎಲ್ಲಾ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಖುಷಿಗೆ ನಮ್ಮ ತಂದೆ ಲೂಸ್ ಆಗಿದ್ದಾರೆ ಎಂದು ಅವರ ಮಗಳು ತಮಾಷೆಯಾಗಿ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು.