Game Changer Collection: ಗೇಮ್ ಚೇಂಜರ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು; ವಿವಿಆರ್ ದಾಖಲೆ ಮುರಿದ ರಾಮ್ ಚರಣ್
Game Changer box office collection: ತೆಲುಗು ಸ್ಟಾರ್ ನಟ ರಾಮ್ ಚರಣ್ ಅವರಿಗೆ ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಗೇಮ್ ಚೇಂಜರ್ ಜನವರಿ 10 ರಂದು ಬಿಡುಗಡೆಯಾಗಿದ್ದು, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ವಿವರ ಇಲ್ಲಿದೆ.
ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಆರು ವರ್ಷಗಳ ಬಳಿಕ ಸಿಂಗಲ್ ಹೀರೋ ಆಗಿ ನಟಿಸಿರುವ ಸಿನಿಮಾ ಗೇಮ್ ಚೇಂಜರ್. ಈ ಚಿತ್ರ ಸಂಕ್ರಾಂತಿಯ ವಿಶೇಷವಾಗಿ ನಿನ್ನೆ (ಜವನರಿ 10, ಶುಕ್ರವಾರ) ತೆಲುಗು ರಾಜ್ಯಗಳು ಸೇರಿದಂತೆ ದೇಶದಾದ್ಯಂತ ತೆರೆ ಕಂಡಿದೆ. ಮಗಧೀರನ ಫ್ಯಾನ್ಸ್ ಸಿನಿಮಾಗೆ ಬಹುಪರಾಕ್ ಹೇಳಿದರೆ, ರಾಮ್ ಚರಣ್‌ಗೆ ಇದು ವಿವಿಆರ್ ನಂತರ ಮತ್ತೊಂದು ಸೋಲಿನ ಚಿತ್ರ ಎಂದು ಕೆಲ ಪ್ರೇಕ್ಷಕರು ಹೇಳುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆಗಳ ನಡುವೆ ಗೇಮ್ ಚೇಂಜರ್ ಮೊದಲ ದಿನ ಬಾಕ್ಸ್ ಆಫೀಸ್ ಕಲೆಕ್ಷಲ್‌ನಲ್ಲಿ ಹಿಂದಿನ ವಿವಿಆರ್ (ವಿನಯ ವಿಧೇಯ ರಾಮ) ಅನ್ನು ಮೀರಿಸಿದೆ.
ಗೇಮ್ ಚೇಂಜರ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು
ಸ್ಯಾಕ್ನಿಲ್ ವೆಬ್‌ಸೈಟ್ ಪ್ರಕಾರ, ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ತೆಲುಗಿನ ಗೇಮ್ ಚೇಂಜರ್, ಭಾರತದ ಬಾಕ್ಸ್ ಆಫೀಸ್ ನಲ್ಲಿ 47.13 ಕೋಟಿ ಸಂಗ್ರಹಿಸಿದ್ದು, 50 ಕೋಟಿ ಕಲೆಕ್ಷನ್ ಕಡೆಗೆ ದಾಪುಗಾಲು ಇಟ್ಟಿದೆ. ಈ ಚಿತ್ರವು ಬಿಡುಗಡೆಯಾದ ಮೊದಲ ದಿನ ತೆಲುಗು ಭಾಷೆಯಲ್ಲಿ 38 ಕೋಟಿ ರೂ., ತಮಿಳಿನಲ್ಲಿ 2 ಕೋಟಿ ರೂ. ಹಿಂದಿಯಲ್ಲಿ 7ಕೋಟಿ ರೂ. ಗಳಿಸಿದೆ. ಕನ್ನಡದಲ್ಲಿ 0.1 ಕೋಟಿ ರೂಪಾಯಿ ಹಾಗೂ ಮಲಯಾಳಂನಲ್ಲಿ 0.03 ಕೋಟಿ ರೂಪಾಯಿ ಸಂಗ್ರಹಿಸಿದೆ.
ಈ ಚಿತ್ರವು ತೆಲುಗು ಆವೃತ್ತಿಯ ಬೆಳಗಿನ ಪ್ರದರ್ಶನಗಳಿಗೆ ಶೇ 55.82 ಮತ್ತು ಮಧ್ಯಾಹ್ನದ ಪ್ರದರ್ಶನಗಳಿಗೆ ಶೇ 39.33 ರಷ್ಟು ಆಕ್ಯುಪೆನ್ಸಿಯನ್ನು ಹೊಂದಿತ್ತು. ಸಂಜೆ ಪ್ರದರ್ಶನಗಳು 50.53 ರಷ್ಟಿತ್ತು. ಹಿಂದಿಯ 4ಡಿಎಕ್ಸ್ ಆವೃತ್ತಿಯ ಮಧ್ಯಾಹ್ನದ ಪ್ರದರ್ಶನಗಳು ಶೇಕಡಾ 82 ರಷ್ಟು ಆಕ್ಯುಪೆನ್ಸಿಯನ್ನು ಹೊಂದಿತ್ತು ಎಂದು ವರದಿಯಾಗಿದೆ.
ರಾಮ್ ಚರಣ್ ಅವರ ಈ ಸಿನಿಮಾ, ಬೋಯಪತಿ ಶ್ರೀನು ನಿರ್ದೇಶನದ ವಿನಯ ವಿಧೇಯ ರಾಮ (ವಿವಿಆರ್) ಮತ್ತು ಚಿರಂಜೀವಿ ಅವರೊಂದಿಗೆ ಕೊರಟಾಲ ಶಿವ ಅವರ ಆಚಾರ್ಯ ಚಿತ್ರದ ಓಪನಿಂಗ್ ಅನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಆದರೆ, ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಮೊದಲ ದಿನದ ಕಲೆಕ್ಷನ್ ಅನ್ನು ಮೀರಿಸಲು ವಿಫಲವಾಯಿತು.
ಗೇಮ್ ಚೇಂಜರ್ ಆರು ವರ್ಷಗಳಲ್ಲಿ ರಾಮ್ ಚರಣ್ ಅವರ ಮೊದಲ ಸಿಂಗಲ್ ಹೀರೋ ಆಗಿ ಕಾಣಿಸಿಕೊಂಡಿರುವ ಚಿತ್ರವಾಗಿದೆ. ಚರಣ್ ಕೊನೆಯ ಬಾರಿಗೆ 2019 ರಲ್ಲಿ ಬೋಯಪತಿ ಶ್ರೀನು ನಿರ್ದೇಶನದ ವಿನಯ ವಿಧೇಯ ರಾಮ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೂಂಡಿದ್ದರು. ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ಗೇಮ್ ಚೇಂಜರ್ ಹಿಂದಿಕ್ಕಿದೆ.
ವಿವಿಆರ್ ಬಳಿಕ 2022 ರಲ್ಲಿ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಬಿಡುಗಡೆಯಾದ ಮೊದಲ ದಿನ 133 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಅದೇ ವರ್ಷ ತಂದೆ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದಲ್ಲಿ ನಟಿಸಿದ್ದರು. ಇದರ ಮೊದಲ ದಿನದ ಕಲೆಕ್ಷನ್ 37.10 ಕೋಟಿ ರೂಪಾಯಿ. ಅದರ ನಂತರ, ರಾಮ್ 2023 ರಲ್ಲಿ ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ನಂದನ್ ಎಂಬ ಐಎಎಸ್ ಅಧಿಕಾರಿ ಮತ್ತು ಅಪ್ಪಣ್ಣ ಎಂಬ ಕಾರ್ಯಕರ್ತನಾಗಿ ರಾಮ್ ನಟಿಸಿದ್ದು, ಕಿಯಾರಾ, ಅಂಜಲಿ ಜೊತೆಯಾಗಿದ್ದಾರೆ. "ಗೇಮ್ ಚೇಂಜರ್ ಭಾರತೀಯ ರಾಜಕೀಯದಲ್ಲಿನ ಭ್ರಷ್ಟಾಚಾರವನ್ನು ತೆರೆದಿಡುತ್ತದೆ. ಆದರೆ ಈ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ ಎನ್ನುವ ಮಾತುಗಳನ್ನು ಚಿತ್ರ ನೋಡಿದವರು ಹೇಳುತ್ತಿದ್ದಾರೆ.