Game Changer Review: ಅಪ್ಪಣ್ಣ ಪಾತ್ರದಲ್ಲಿ ಇಷ್ಟವಾಗುವ ರಾಮ್‌ ಚರಣ್‌, ಉಳಿದಂತೆ ಬರೀ ಹೀರೋಯಿಸಂ- ಗೇಮ್‌ ಚೇಂಜರ್‌ ಸಿನಿಮಾ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Game Changer Review: ಅಪ್ಪಣ್ಣ ಪಾತ್ರದಲ್ಲಿ ಇಷ್ಟವಾಗುವ ರಾಮ್‌ ಚರಣ್‌, ಉಳಿದಂತೆ ಬರೀ ಹೀರೋಯಿಸಂ- ಗೇಮ್‌ ಚೇಂಜರ್‌ ಸಿನಿಮಾ ವಿಮರ್ಶೆ

Game Changer Review: ಅಪ್ಪಣ್ಣ ಪಾತ್ರದಲ್ಲಿ ಇಷ್ಟವಾಗುವ ರಾಮ್‌ ಚರಣ್‌, ಉಳಿದಂತೆ ಬರೀ ಹೀರೋಯಿಸಂ- ಗೇಮ್‌ ಚೇಂಜರ್‌ ಸಿನಿಮಾ ವಿಮರ್ಶೆ

Game Changer Movie Review: ಜಿಲ್ಲಾಧಿಕಾರಿಯಾಗಿದ್ದುಕೊಂಡು ಭ್ರಷ್ಟ ರಾಜಕಾರಣದ ವಿರುದ್ಧ ಹೋರಾಡುವ ಕಥೆ ಇರುವ ಗೇಮ್‌ ಚೇಂಜರ್‌ ಸಿನಿಮಾ ಹೇಗಿದೆ? ಈ ಸಿನಿಮಾದ ಕಥೆಯೇನು? ರಾಮ್‌ ಚರಣ್‌, ಕಿಯಾರ ಅಡ್ವಾಣಿ ನಟನೆ ಹೇಗಿದೆ? ಶಂಕರ್‌ ಎಸ್‌ ನಿರ್ದೇಶನದ ಗೇಮ್‌ ಚೇಂಜರ್‌ ಸಿನಿಮಾದ ವಿಮರ್ಶೆ ಇಲ್ಲಿದೆ.

Game Changer Review: ಗೇಮ್‌ ಚೇಂಜರ್‌ ಸಿನಿಮಾ ವಿಮರ್ಶೆ
Game Changer Review: ಗೇಮ್‌ ಚೇಂಜರ್‌ ಸಿನಿಮಾ ವಿಮರ್ಶೆ

Game Changer Review: ಫ್ಲೈಓವರ್‌ನಲ್ಲಿ ವಾಹನಗಳು ಸಾಗುತ್ತಿವೆ. ಫ್ಲೈಓವರ್‌ನ ನಡುವೆ ಬಿರುಕು ಮೂಡಿ ದೊಡ್ಡ ಹಳ್ಳ ಸೃಷ್ಟಿಯಾಗಿ ವಾಹನಗಳು ಪಟಪಟ ಎಂದು ಕೆಳಕ್ಕೆ ಉದುರುತ್ತವೆ. ಭ್ರಷ್ಟ ಸರಕಾರದ ಕಳಪೆ ಕಾಮಗಾರಿಗಳನ್ನು ರೋಚಕವಾಗಿ ತೋರಿಸುವಲ್ಲಿ ನಿರ್ದೇಶಕ ಶಂಕರ್‌ ಜನಪ್ರಿಯರು. ಇದು ಕೂಡ ಇಂಡಿಯನ್‌ ಸಿನಿಮಾದಂತೆ ಭ್ರಷ್ಟ ಸರಕಾರದ ವಿರುದ್ಧ ಹೋರಾಟವೇ ಎಂಬ ಸಂದೇಹವನ್ನು ಇಟ್ಟುಕೊಂಡೇ ಸಿನಿಮಾ ನೋಡಬೇಕಾಗುತ್ತದೆ. "ಫೈಟಿಂಗ್‌... ಹಾಡು... ಫೈಟಿಂಗ್‌... ಹಾಡು... ಫೈಟಿಂಗ್‌.... ಹಾಡು..." ಹೀಗೆ ಸಿನಿಮಾದ ಮೊದಲ ಗಂಟೆಯಲ್ಲಿ ಮೂರು ಹಾಡು ಮುಗಿದಾಗ ಸಂದೇಹಗೊಂಡು ಪಕ್ಕದಲ್ಲಿದ್ದ ಶಶಿಕರ್‌ ಬಳಿಯಲ್ಲಿ "ಈ ಸಿನಿಮಾದಲ್ಲಿ ಜಾಸ್ತಿ ಕಥೆ ಇಲ್ಲ. ಅದಕ್ಕೆ ಸಾಂಗ್‌ ಜಾಸ್ತಿ ಹಾಕಿದ್ದಾರೆ" ಅಂದೆ. ಅದಕ್ಕೆ ಅವರು "ಇಲ್ಲ ಇದು ಶಂಕರ್‌ ಸ್ಪೆಷಲ್‌, ಎಆರ್‌ ರೆಹಮಾನ್‌ ಜತೆ ಸೇರಿಕೊಂಡು ಕಲರ್‌ ಫುಲ್‌ ಹಾಡುಗಳನ್ನು ನೀಡುವುದರಲ್ಲಿ ಇವರು ಮೊದಲಿನಿಂದಲೂ ಫೇಮಸ್‌" ಅಂದ್ರು. ಕಿಯಾರ ಅಡ್ವಾಣಿ, ರಾಮ್‌ ಚರಣ್‌ ಕಾಂಬಿನೇಷನ್‌, ತೆಲುಗು ನಟ ಸುನಿಲ್‌ "ಸೈಡ್‌ ಸತ್ಯ" ಪಾತ್ರದಲ್ಲಿ ಅಡ್ಡಲಾಗಿ ನಡೆದಾಡುವ ಸೀನ್‌ಗಳನ್ನು "ಎಂಜಾಯ್‌" ಮಾಡುತ್ತ ಹೋದಂತೆ ಅನಿರೀಕ್ಷಿತವಾಗಿ ಜಿಲ್ಲಾಧಿಕಾರಿಯಾಗಿದ್ದ ನಾಯಕ ರಾಮ್‌ ನಂದನ್‌ಗೆ (ರಾಮ್‌ ಚರಣ್‌) ಮುಖ್ಯಮಂತ್ರಿ ಪಟ್ಟ ಸಿಗುತ್ತದೆ. ಅಲ್ಲಿಂದ ಅನ್‌ಪ್ರಿಡೆಕ್ಟೆಬಲ್‌ ಕಥೆ ಆರಂಭವಾಗುತ್ತದೆ.

ಫ್ಲ್ಯಾಶ್‌ಬ್ಯಾಕ್‌ನಲ್ಲಿ ರಾಮ್‌ ಚರಣ್‌ ಅದ್ಭುತ ನಟನೆ

ಇಂಟರ್‌ವಲ್‌ ಬಳಿಕ ಸ್ವಲ್ಪ ಹೊತ್ತಿನಲ್ಲಿ ಫ್ಲ್ಯಾಶ್‌ಬ್ಯಾಕ್‌ ಕಥೆ ಆರಂಭವಾಗುತ್ತದೆ. ಇಲ್ಲಿ ತನ್ನ ತಂದೆ ಅಪ್ಪಣ್ಣನ ಪಾತ್ರದಲ್ಲೂ ರಾಮ್‌ ಚರಣ್‌ ನಟಿಸಿದ್ದಾರೆ. ತೊದಲು ಮಾತಿನ ತಂದೆಯ ಪಾತ್ರದಲ್ಲಿ ರಾಮ್‌ ಚರಣ್‌ ನಟನೆ ಅದ್ಭುತ, ಅಮೋಘ ಎನ್ನಲು ಅಡ್ಡಿಯಿಲ್ಲ. ಅಲ್ಲಿಯವರೆಗೆ ಹೀರೋಯಿಸಂನಲ್ಲಿ ಕಾಣಿಸಿಕೊಂಡ ರಾಮ್‌ ಚರಣ್‌ ಅಪ್ಪಣ್ಣ ಪಾತ್ರದಲ್ಲಿ ಜೀವಿಸಿದ್ದಾರೆ. ಇದೇ ಸಮಯದಲ್ಲಿ ಅಪ್ಪಣ್ಣನ ಪತ್ನಿ ಪಾರ್ವತಿಯಾಗಿ ಅಂಜಲಿ ನಟನೆಯೂ ಸೂಪರ್ಬ್‌. ಸುಮಾರು ಅರ್ಧ ಗಂಟೆಯ (ಅಂದಾಜು) ಫ್ಲ್ಯಾಶ್‌ಬ್ಯಾಕ್‌ ಸೀನ್‌ ಹಳೆಯ ನಿರ್ದೇಶಕ ಶಂಕರ್‌ರನ್ನು ನೆನಪಿಸುತ್ತದೆ. ಫ್ಲ್ಯಾಶ್‌ಬ್ಯಾಕ್‌ ಹೊರತುಪಡಿಸಿದ ದೃಶ್ಯಗಳಲ್ಲಿ ಪಾರ್ವತಿಯು ಮನೋರೋಗಿ ಪಾತ್ರದಲ್ಲಿ ಗುರುತೇ ಸಿಗದಂತೆ ನಟಿಸಿದ್ದಾರೆ. ರಾಜಕಾರಣಿ ಮೋಪಿದೇವಿ ಪಾತ್ರದಲ್ಲಿ ಎಸ್‌ಜೆ ಸೂರ್ಯ ನಟನೆಯೂ ಭಯಂಕರ.

ಜಿಲ್ಲಾಧಿಕಾರಿಯಾಗಿದ್ದ ನಾಯಕ ಚುನಾವಣಾಧಿಕಾರಿಯಾಗುತ್ತಾನೆ. ರಾಜ್ಯದ ಚುನಾವಣೆಯ ಹೊಣೆ ಹೊತ್ತುಕೊಳ್ಳುತ್ತಾನೆ. ಅಯ್ಯೋ ಅದು ಹೇಗೆ? ನಾಯಕ ಡಿಸಿಯಾದ ಬಳಿಕ ಸಿಎಂ ಆದ್ರಲ್ವ ಎನ್ನುವಿರಾ. ಇಂಟರ್‌ವಲ್‌ ಫ್ಲ್ಯಾಶ್‌ಬ್ಯಾಕ್‌ ಬಳಿಕ ಹಲವು ಅನ್‌ಪ್ರಿಡೆಕ್ಟೆಬಲ್‌ ಸೀನ್‌ಗಳು ಇವೆ. ಕ್ಲೈಮ್ಯಾಕ್ಸ್‌ನಲ್ಲಿ ಅಂತೂ ಜೆಸಿಬಿಗಳಲ್ಲಿ ರಾಶಿರಾಶಿ ರೌಡಿಗಳನ್ನು ಮಣ್ಣು ತುಂಬಿದಂತೆ ತುಂಬಿ ಲಾರಿಗಳಿಗೆ ಲೋಡ್‌ ಮಾಡುವಂತಹ ದೃಶ್ಯಗಳಿವೆ. ಮತ ಎಣಿಕೆ ನಡೆಯುವ ಸ್ಥಳಕ್ಕೆ ರೌಡಿಗಳು ನುಗ್ಗಿ ವಿವಿ ಪ್ಯಾಟ್‌ಗಳನ್ನು ಹೊಡೆಯಲು ಪ್ರಯತ್ನಿಸುವುದಂತೂ ಅನ್‌ಪ್ರಿಡೆಕ್ಟೆಬಲ್‌ ಮಾತ್ರವಲ್ಲ ಅನ್‌ಬಿಲಿವೇಬಲ್‌!

ಸಿನಿಮಾದ ಕಥೆ ಏನು?

ರಾಮ್‌ ನಂದನ್‌ ಎಂಬ ಜಿಲ್ಲಾಧಿಕಾರಿ ಹೊಸದಾಗಿ ವಿಶಾಖಪಟ್ಟಣಂಗೆ ನೇಮಕಗೊಳ್ಳುತ್ತಾರೆ. ಜಿಲ್ಲೆಯಲ್ಲಿರುವ ಅಪರಾಧಿಗಳನ್ನು ನಿರ್ಣಾಮ ಮಾಡುವ ಇಂಡಿಯನ್‌ ಆಗುತ್ತಾನೆ. ಇಂತಹ ಸಮಯದಲ್ಲಿ ಮೋಪಿದೇವಿಯ ವೈರತ್ವ ಕಟ್ಟಿಕೊಳ್ಳಬೇಕಾಗುತ್ತದೆ. ಮೋಪಿದೇವಿಯು ರಾಜ್ಯದ ಕ್ಯಾಬಿನೆಟ್‌ ಮಿನಿಸ್ಟರ್‌ ಮತ್ತು ಸಿಎಂನ ಮಗ. ಇಲ್ಲಿ ಮುಖ್ಯಮಂತ್ರಿ ಬೊಬ್ಲಿಲಿ ಸತ್ಯಮೂರ್ತಿಗೆ ಸಾರ್ವಜನಿಕ ಸಭೆಯಲ್ಲಿ ಮನೋರೋಗಿ ಪಾರ್ವತಿ ಕಾಣಿಸುತ್ತಾಳೆ. ಆಕೆಯ ಮಾತುಗಳನ್ನು ಕೇಳಿ ಮುಖ್ಯಮಂತ್ರಿಗೆ ಹೃದಯಾಘಾತವಾಗುತ್ತದೆ. ಅಪ್ಪ ಸತ್ತ ಬಳಿಕ ಸಿಎಂ ಆಗಲು ಮೋಪಿದೇವಿ ಪ್ರಯತ್ನಿಸುತ್ತಾನೆ. ಆದರೆ, ಸತ್ಯಮೂರ್ತಿಯ ಕೊನೆಯ ಆಸೆ ಎಲ್ಲವನ್ನೂ ಉಲ್ಟಾ ಮಾಡುತ್ತದೆ. ಇದರೊಂದಿಗೆ ಪಾರ್ವತಿಯ ಫ್ಲ್ಯಾಶ್‌ಬ್ಲ್ಯಾಕ್‌ ಕೂಡ ಇರುತ್ತದೆ. ಸತ್ಯಮೂರ್ತಿಗೆ ರಾಮ್‌ ನಂದನ್‌ ಏನಾಗಬೇಕು? ಹಣ ನೀಡದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಗೇಮ್‌ ಚೇಂಜರ್‌ನಲ್ಲಿದೆ.

ಸಿನಿಮಾದ ಕೊನೆಗೊಂದು ಆಶಯ

ಪ್ರಜೆಗಳನ್ನು ಮಕ್ಕಳಂತೆ ಕಾಪಾಡುವ ಸರಕಾರವಿರುವ ಸುಖಿ ರಾಜ್ಯದ ಕಲ್ಪನೆಯ ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ಇಂತಹ ಅದ್ಭುತ ಕನಸನ್ನು ಈ ಚಿತ್ರವೂ ಹೊಂದಿದೆ. ಕರೆ ಮಾಡಿದಾಗ ಅಂಬ್ಯುಲೆನ್ಸ್‌ ಬರುವಂತೆ, ಆರ್ಡರ್‌ ಮಾಡಿದಾಗ ಜೊಮೆಟೊದಲ್ಲಿ ತಿಂಡಿ ತಿನಿಸುಗಳು ಬಂದಂತೆ ಜನರು ತಮ್ಮ ಸಮಸ್ಯೆಗಳ ಕುರಿತು ಕರೆ ಮಾಡಿ ತಿಳಿಸಿದ ತಕ್ಷಣ ಸಹಾಯಕ್ಕೆ ಧಾವಿಸಿ ಬರುವ "24X7" ಸಹಾಯವಾಣಿ ಇರುವ ಸರಕಾರದ ಕಲ್ಪನೆಯನ್ನು ಸಿನಿಮಾದ ಕೊನೆಯಲ್ಲಿ ಜನರ ಮನಸ್ಸಲ್ಲಿ ಮೂಡಿಸುವ ಯತ್ನವಿದೆ.

ನಟನೆ ಮತ್ತು ತಾಂತ್ರಿಕ ಅಂಶಗಳು

ಇದು ರಾಮ್‌ ಚರಣ್‌ ಸಿನಿಮಾ. ಇವರ ನಟನೆ ಕುರಿತು ಎರಡು ಮಾತಿಲ್ಲ. ಐಎಎಸ್‌ ಅಧಿಕಾರಿಯಂತೆ ಸೌಮ್ಯ, ಗಂಭೀರ ಮುಖಭಾವ, ಫೈಟಿಂಗ್‌ನಲ್ಲಿ ಎಂದಿನಂತೆ ಆರ್‌ಆರ್‌ಆರ್‌ ರೌದ್ರಾವತಾರ ನೋಡಬಹುದು. ಐಎಎಸ್‌ ರಾಮ್‌ ನಂದನ್‌ ಪಾತ್ರದಲ್ಲಿ ನಾಯಕನ ಹೀರೋಯಿಸಂ ಮೇಳೈಸಿದೆ. ತನ್ನ ಹೀರೋಯಿಸಂ ಬದಿಗಿಟ್ಟು ಅಪ್ಪಣ್ಣ ಪಾತ್ರದಲ್ಲಿ ನಟಿಸಿದ್ದಾರೆ.

ನಾಯಕಿ ಕಿಯಾರ ಅಡ್ವಾಣಿ ದೀಪಿಕಾ ಪಾತ್ರದಲ್ಲಿ ಮುದ್ದಾಗಿ ನಟಿಸಿದ್ದಾರೆ. ಕಥೆಗಿಂತ ಡ್ಯಾನ್ಸಿಂಗ್‌ನಲ್ಲಿ ಇವರ ಪ್ರತಿಭೆ ಹೆಚ್ಚು ಕಾಣಿಸುತ್ತದೆ. ಬ್ರಹ್ಮಾನಂದಂ ಒಂದೇ ಸೀನ್‌ನಲ್ಲಿ ನಟಿಸಿ ಮರೆಯಾಗುತ್ತಾರೆ. ಕನ್ನಡ ನಟ ಅಚ್ಯುತ್‌ ಕುಮಾರ್‌ ನಾಯಕನ ಕೈಯಿಂದ ಆಕಸ್ಮಿಕವಾಗಿ ಪೆಟ್ಟು ತಿನ್ನುವ ಒಂದು ದೃಶ್ಯಕ್ಕೆ ಸೀಮಿತ. ಸಿನಿಮಾದ ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಉತ್ತಮ. ಚಿತ್ರದ ನಿರೂಪಣೆ, ಬರವಣಿಗೆ ಗಟ್ಟಿಯಾಗಿಲ್ಲದೆ ಇದ್ದರೂ ಹಿನ್ನೆಲೆ ಸಂಗೀತದಿಂದ ತಮನ್‌ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ಚಿತ್ರದ ಸಂಕಲನ ಇನ್ನಷ್ಟು ಉತ್ತಮವಾಗಿರಬೇಕಿತ್ತು, ಕೆಲವು ದೃಶ್ಯಗಳು "ಉದ್ದ" ಫೀಲ್‌ ನೀಡುತ್ತದೆ. ಕತ್ತರಿ ಪ್ರಯೋಗ ಇನ್ನಷ್ಟು ಚುರುಕಾಗಿರಬೇಕಿತ್ತೇನೋ. ಫ್ಲ್ಯಾಶ್‌ಬ್ಯಾಕ್‌ ಮತ್ತು ಕೆಲವು ಹಾಡುಗಳಲ್ಲಿ ಸಿನಿಮಾಟೊಗ್ರಫಿ ಉತ್ತಮವಾಗಿದೆ. ಚಿತ್ರದ ನಿರ್ಮಾಣ ಗುಣಮಟ್ಟವೂ ಅತ್ಯುತ್ತಮ ಅಲ್ಲದೆ ಇದ್ದರೂ ಉತ್ತಮವಾಗಿದೆ. ನಾಯಕನ ಪ್ರಭಾವಳಿಯಿಂದಾಗಿ ಗೇಮ್‌ ಚೇಂಜರ್‌ ಒಂದು ಬಾರಿ ನೋಡಬಹುದಾದ ಸಿನಿಮಾ ಎನ್ನಲಡ್ಡಿಯಿಲ್ಲ.

  • ಸಿನಿಮಾ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

______________

ಸಿನಿಮಾದ ಹೆಸರು: ಗೇಮ್‌ ಚೇಂಜರ್‌

ಭಾಷೆ: ಮೂಲ ತೆಲುಗು, ಕನ್ನಡದಲ್ಲಿಯೂ ಬಿಡುಗಡೆಯಾಗಿದೆ

ತಾರಾಗಣ: ರಾಮ್‌ ಚರಣ್‌, ಕಿಯಾರ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಶ್ರೀಕಾಂತ್‌, ಜಯರಾಮ್‌, ಸುನಿಲ್‌ ಮತ್ತು ಇತರರು

ನಿರ್ದೇಶನ: ಶಂಕರ್‌ ಷಣ್ಮುಗಂ

ನಿರ್ಮಾಪಕರು: ದಿಲ್‌ರಾಜು

ಸಂಗೀತ: ಎಸ್‌. ತಮನ್‌

ಎಚ್‌ಟಿ ಕನ್ನಡ ರೇಟಿಂಗ್‌: 3/5
_____________________________

Whats_app_banner