Game Changer OTT: ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ ರಾಮ್‌ ಚರಣ್‌ ಗೇಮ್‌ ಚೇಂಜರ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Game Changer Ott: ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ ರಾಮ್‌ ಚರಣ್‌ ಗೇಮ್‌ ಚೇಂಜರ್‌ ಸಿನಿಮಾ

Game Changer OTT: ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ ರಾಮ್‌ ಚರಣ್‌ ಗೇಮ್‌ ಚೇಂಜರ್‌ ಸಿನಿಮಾ

Game Changer OTT Release: ರಾಮ್ ಚರಣ್, ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಗೇಮ್ ಚೇಂಜರ್ ಸಿನಿಮಾ ಜ 10ರಂದು ಬಿಡುಗಡೆ ಆಗಿದೆ. ಪಾಸಿಟಿವ್‌ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾದ ಒಟಿಟಿ ಹಕ್ಕುಗಳೂ ಈಗಾಗಲೇ ಮಾರಾಟವಾಗಿದ್ದು, ಅಮೆಜಾನ್ ಪ್ರೈಮ್ ವಿಡಿಯೋ ಪಾಲಾಗಿದೆ.

ಅಮೆಜಾನ್‌ ಪ್ರೈಂ ವಿಡಿಯೋ ಗೇಮ್‌ ಚೇಂಜರ್‌
ಅಮೆಜಾನ್‌ ಪ್ರೈಂ ವಿಡಿಯೋ ಗೇಮ್‌ ಚೇಂಜರ್‌

Game Changer OTT: ಟಾಲಿವುಡ್‌ ನಟ ರಾಮ್ ಚರಣ್ ನಟನೆಯ ಗೇಮ್ ಚೇಂಜರ್‌ ಸಿನಿಮಾ ಸದ್ಯ ಪ್ರೇಕ್ಷಕರ ವಲಯದಿಂದ ಮೆಚ್ಚುಗೆ ಪಡೆದುಕೊಂಡಿದೆ. ಪಾಸಿಟಿವ್‌ ವಿಮರ್ಶೆಗಳೂ ಚಿತ್ರದ ಕೈ ಹಿಡಿದಿವೆ. ಆದರೆ, ನಿರೀಕ್ಷಿತ ಪ್ರಮಾಣದ ಗಳಿಕೆ ಕಾಣಲು ಅದ್ಯಾಕೋ ಈ ಸಿನಿಮಾ ಕೊಂಚ ಹಿಂದುಳಿದಿದೆ. ನಿರ್ದೇಶಕ ಶಂಕರ್‌ ಸಿನಿಮಾ ಅನ್ನೋ ಕಾರಣಕ್ಕೂ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಆದರೆ, ಅದ್ಯಾವುದೂ ವರ್ಕೌಟ್‌ ಆಗಿಲ್ಲ. ಈ ನಡುವೆ ಇದೇ ಸಿನಿಮಾದ ಒಟಿಟಿ ಅಪ್‌ಡೇಟ್‌ ಸಹ ಹೊರಬಿದ್ದಿದೆ.

ಗೂಗಲ್‌ನಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಕಾಂಬಿನೇಷನ್‌ನ ಪೊಲಿಟಿಕಲ್‌ ಆಕ್ಷನ್ ಸಿನಿಮಾ ಗೇಮ್ ಚೇಂಜರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 10ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಸ್ಟೋರಿ, ಮೇಕಿಂಗ್‌ ಮತ್ತು ಶಂಕರ್‌ ನಿರ್ದೇಶನ, ರಾಮ್‌ ಚರಣ್‌ ಡಬಲ್‌ ಶೇಡ್‌ಗೆ ಪ್ರೇಕ್ಷಕರಿಂದಲೂ ಬಹುಪರಾಕ್‌ ಪಡೆದುಕೊಳ್ಳುತ್ತಿದೆ.

ಒಟಿಟಿ ಹಕ್ಕು ಪಡೆದ ಅಮೆಜಾನ್‌ ಪ್ರೈಂ

ಇದೀಗ ಇದೇ ಸಿನಿಮಾ ಚಿತ್ರಮಂದಿರದಲ್ಲಿರುವಾಗಲೇ ಯಾವ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ದಾಖಲೆಯ 100 ಕೋಟಿ ರೂ ಮೊತ್ತಕ್ಕೆ ಖರೀದಿಸಿದೆ ಎಂದು ಹೇಳಲಾಗುತ್ತಿದೆ. ಅದರಂತೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆರರಿಂದ ಎಂಟು ವಾರಗಳ ನಂತರ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಗೇಮ್‌ ಚೇಂಜರ್‌ ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇಂಡಿಯನ್‌ 2 ಸಿನಿಮಾ ಸೋಲಿನ ಬಳಿಕ ಶಂಕರ್‌ ನಿರ್ದೇಶನದ ಸಿನಿಮಾ ಈ ಗೇಮ್ ಚೇಂಜರ್. ಪೊಲಿಟಿಕಲ್ ಆಕ್ಷನ್ ಎಂಟರ್ಟೈನರ್ ಆಗಿರುವ ಈ ಸಿನಿಮಾದಲ್ಲಿ ರಾಮ್ ಚರಣ್ ಎದುರು ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಎಸ್ ಜೆ ಸೂರ್ಯ, ಶ್ರೀಕಾಂತ್, ನವೀನ್ ಚಂದ್ರ ಮತ್ತು ಸುನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

400 ಕೋಟಿ ಬಜೆಟ್‌ನ ಸಿನಿಮಾ

ಈ ಚಿತ್ರದಲ್ಲಿ ರಾಮ್ ನಂದನ್ ಮತ್ತು ಅಪ್ಪಣ್ಣ ಎಂಬ ಎರಡು ಶೇಡ್‌ಗಳಲ್ಲಿ ರಾಮ್‌ಚರಣ್ ಕಂಡಿದ್ದಾರೆ. ಮುಖ್ಯಮಂತ್ರಿ ಮತ್ತು ಸರ್ಕಾರಿ ಅಧಿಕಾರಿಗಳ ನಡುವಿನ ಜಗಳದ ಹಿನ್ನೆಲೆಯಲ್ಲಿ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಸುಮಾರು 400 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ ದಿಲ್ ರಾಜು. ಮೊದಲ ದಿನ ಈ ಚಿತ್ರ 51 ಕೋಟಿ ರೂ ಗಳಿಸಿದೆ ಎಂದು ಸ್ಯಾಕ್ನಿಲ್‌ ವರದಿ ಮಾಡಿದೆ. ವಿತರಕರ ವಲಯದ ಲೆಕ್ಕಾಚಾರ ನೀಡಿದರೆ, ಕಲೆಕ್ಷನ್‌ ಮೊತ್ತ ಇನ್ನೂ ಜಾಸ್ತಿ ಇದೆ ಎನ್ನಲಾಗುತ್ತಿದೆ.

ಜ 14ರಿಂದ ನಾನಾ ಹೈರಾನಾ ಹಾಡು..

ಗೇಮ್ ಚೇಂಜರ್ ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ನಾನಾ ಹೈರಾನಾ.. ಹಾಡನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವುದಿಲ್ಲ ಎಂದು ಚಿತ್ರದ ಮೇಕರ್ಸ್‌ ಘೋಷಿಸಿದ್ದಾರೆ. ಅದೇ ರೀತಿ ಜನವರಿ 14ರಿಂದ ಈ ಹಾಡನ್ನು ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡಬಹುದು ಎಂದೂ ತಿಳಿಸಿದೆ.

Whats_app_banner