ಸ್ವಲ್ಪ ಕಲರ್ ಇದ್ದೀನಿ ಅಂತ ಅದೇ ಪಾತ್ರಕ್ಕೆ ಫಿಕ್ಸ್ ಆಗಿಬಿಟ್ಟೆ; 'ಪಿನಾಕ' ಸಿನಿಮಾ ಟೀಸರ್ ಬಿಡುಗಡೆಯಲ್ಲಿ ಮುಂಗಾರು ಮಳೆ ನೆನದ ಗಣೇಶ್
ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹೊಸ ಪಾತ್ರದ ಬಗ್ಗೆ ಮಾತನಾಡುತ್ತಾ ಮುಂಗಾರು ಮಳೆಗೆ ಹೀರೋ ಆಗಿದ್ದರ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
![ಸ್ವಲ್ಪ ಕಲರ್ ಇದ್ದೀನಿ ಅಂತ ಅದೇ ಪಾತ್ರಕ್ಕೆ ಫಿಕ್ಸ್ ಆಗಿಬಿಟ್ಟೆ ಎಂದ ಗಣೇಶ್ ಸ್ವಲ್ಪ ಕಲರ್ ಇದ್ದೀನಿ ಅಂತ ಅದೇ ಪಾತ್ರಕ್ಕೆ ಫಿಕ್ಸ್ ಆಗಿಬಿಟ್ಟೆ ಎಂದ ಗಣೇಶ್](https://images.hindustantimes.com/kannada/img/2025/01/02/550x309/_oan_a_dse_yq_1735817134583_1735817143213.png)
ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಇಷ್ಟು ವರ್ಷಗಳಲ್ಲಿ, ಯಾವ ಚಿತ್ರಗಳಲ್ಲೂ ನೋಡದ ಗಣೇಶ್ ಅವರ ಹೊಸ ಅವತಾರವನ್ನು ಈ ಸಿನಿಮಾದಲ್ಲಿ ನೋಡಬಹುದು. ಗಣೇಶ್ ಅವರ ಮಾತಿನಲ್ಲಿ ‘ಭೂತ, ಪ್ರೇತ, ಪಿಶಾಚಿಗಳ ಹಸಿವ ನೀಗಿಸೋ ಮಾರಣಹೋಮ, ಸೃಷ್ಟಿ-ಸಮಷ್ಠಿಯನ್ನು ನಡಗಿಸೋ ಘೋರ ಸಂಗ್ರಾಮ …’ ಎನ್ನುವಂತಹ ಸಂಭಾಷಣೆಗಳನ್ನು ಕೇಳಬಹುದು. ಈತ ರುದ್ರನೋ, ಕ್ಷುದ್ರನೋ? ಎಂಬ ಪ್ರಶ್ನೆ ಬರಬಹುದು. ಒಟ್ಟಾರೆ, ‘ಪಿನಾಕ’ದಲ್ಲಿ ಬೇರೆಯದೇ ತರಹ ನಟ ಗಣೇಶ್ ಕಾಣುತ್ತಾರೆ.
ನಾನು ಒಳ್ಳೆಯ ಕಲರ್ ಇದ್ದೀನಿ ಎಂದು ಅದೇ ತರಹದ ಪಾತ್ರಗಳು ಸಿಕ್ಕವು
ಗಣೇಶ್ ಅಭಿನಯದ ‘ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗಿ 18 ವರ್ಷಗಳಾಗಿವೆ. ಇದುವರೆಗೂ ಅವರು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಇಂಥದ್ದೊಂದು ಪಾತ್ರ ಮಾಡುತ್ತಿದ್ದಾರೆ. ‘ನಾನು ಮೊದಲು ಚಿತ್ರದಲ್ಲಿ ನಟಿಸಿದ್ದು ನೆಗೆಟಿವ್ ಪಾತ್ರದಲ್ಲಿ. ಚಿತ್ರ ಫ್ಲಾಪ್ ಆಯ್ತು. ಆ ನಂತರ ಸಾಕಷ್ಟು ಸೈಕಲ್ ಹೊಡೆದು, ಹೀರೋ ಪಾತ್ರದವರೆಗೂ ಬಂದೆ. ‘ಮುಂಗಾರು ಮಳೆ’ ಚಿತ್ರದಲ್ಲಿ ನಾನೇನಲ್ಲವೋ ಅದನ್ನು ಮಾಡಿದೆ. ನಾನು ಮಧ್ಯಮ ವರ್ಗದ ಕುಟುಂಬದವನು. ಆದರೆ, ಶ್ರೀಮಂತನಾಗಿ ಆ ಚಿತ್ರದಲ್ಲಿ ನಟಿಸಿದೆ. ನಾನು ಒಳ್ಳೆಯ ಕಲರ್ ಇದ್ದೀನಿ ಎಂದು ಅದೇ ತರಹದ ಪಾತ್ರಗಳು ಸಿಕ್ಕವು. ಜನ ಏನು ಇಷ್ಟಪಡುತ್ತಾರೋ ನಾನೂ ಅದನ್ನೇ ಮುಂದುವರೆಸಿಕೊಂಡು ಹೋದೆ’ ಎಂದರು ಗಣೇಶ್.
ನನಗೂ ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ
18 ವರ್ಷಗಳ ಕಾಲ ಅದೇ ತರಹ ಮಾಡಿದೆ ಎಂದ ಗಣೇಶ್, ‘ನಾನೊಬ್ಬ ಬದಲಾಗಬೇಕು ಎಂದು ಮನಸ್ಸು ಮಾಡಿದರೆ ಸಾಧ್ಯವಿಲ್ಲ. ನನ್ನಿಂದ ಬೇರೆ ಏನೋ ಮಾಡಿಸಬೇಕು ಎಂದು ನಿರ್ದೇಶಕರಿಗೂ ಯೋಚನೆ ಇರಬೇಕು. ನನಗೂ ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ. ಆದರೆ, ಆ ತರಹದ ಕಥೆಗಳು ಬರಲಿಲ್ಲ. ಕಥೆಯ ಜೊತೆಗೆ ಈ ತರಹದ ಪ್ರಯೋಗ ಮಾಡುವವರು ಮುಖ್ಯ. ಈಗ ಈ ಚಿತ್ರದಲ್ಲಿ ಅಂಥದ್ದೊಂದು ಕಥೆ ಮತ್ತು ಪ್ರಯೋಗ ಮಾಡುವ ನಿರ್ಮಾಪಕರು ಸಿಕ್ಕಿದ್ದರಿಂದ ಈ ಚಿತ್ರ ಸಾಧ್ಯವಾಯಿತು’ ಎಂದರು.
ಎಲ್ಲವೂ ನೈಜ ಅಭಿನಯ
‘ಪಿನಾಕ’ ಟೀಸರ್ ಕುರಿತು ಮಾತನಾಡುವ ಗಣೇಶ್, ‘ಈ ಪಾತ್ರದ ಮೇಕಪ್‍ಗಾಗಿ ಮೂರು ತಾಸು ಹಿಡಿಯಿತು. ಇನ್ನು, ಇದರಲ್ಲಿ ಬುರುಡೆ ಮೇಲೆ ಬೆಂಕಿ ಇರುತ್ತದೆ, ಅದರ ಮೇಲೆ ನಡೆಯುವ ದೃಶ್ಯವಿದೆ. ಅದಕ್ಕೆ ಡ್ಯೂಪ್ ಹಾಕೋಣ, ಬೇರೆಯವರಿಂದ ಮಾಡಿಸೋಣ ಎಂದು ನಿರ್ದೇಶಕ ಧನಂಜಯ್ ಹೇಳಿದರು. ನಾನೇ ಒಮ್ಮೆ ಪ್ರಯತ್ನಿಸುತ್ತೇನೆ ಎಂದರೆ. ಧನಂಜಯ್ ನಡೆದು ತೋರಿಸಿದರು. ಶಾಟ್ ಶುರುವಾದಾಗ, ನಾನು ನಡೆದೆ. ನಾಲ್ಕನೇ ಬುರುಡೆ ಮೇಲೆ ಕಾಲಿಡುವ ಹೊತ್ತಿಗೆ ಕಾಲು ಸುಟ್ಟಿತ್ತು. ಇಲ್ಲಿ ಯಾವುದನ್ನೂ ಫೇಕ್ ಮಾಡಿಲ್ಲ. ಎಲ್ಲವನ್ನೂ ನೈಜವಾಗಿ ಮಾಡಿದ್ದು’ ಎಂದರು.
ಈ ಚಿತ್ರದ ಟೀಸರನ್ನು ಗಣೇಶ್, ಇಂದು ಬೆಳಿಗ್ಗೆ ಮನೆಯವರಿಗೆ ತೋರಿಸಿದರಂತೆ. ‘ಎಲ್ಲರೂ ಚೆನ್ನಾಗಿದೆ ಎಂದರು. ಅದರಲ್ಲೂ ಮಗನಿಗೆ ‘ಥರ ಥರ …’ ಸಂಭಾಷಣೆ ಇಷ್ಟವಾಯಿತು. ಮನೆಯವರು, ಸ್ನೇಹಿತರು, ಅಭಿಮಾನಿಗಳು ಖುಷಿಯಾಗಬಹುದು. ಚಿತ್ರ ಚೆನ್ನಾಗಿದೆ ಎಂದಾಗ ನಮಗೂ ಖುಷಿಯಾಗುತ್ತದೆ. ಆದರೆ, ಚಿತ್ರಮಂದಿರದ ಎದುರು ಹೌಸ್‍ಫುಲ್ ಬೋರ್ಡ್ ಬಿದ್ದರೆ ಆಗುವ ಖುಷಿಯೇ ಬೇರೆ’ ಎಂದರು.
‘ಪಿನಾಕ’ ಚಿತ್ರಕ್ಕೆ ಕಳೆದ ಒಂದೂವರೆ ವರ್ಷಗಳಿಂದ ತಯಾರಿಗಳು ನಡೆಯುತ್ತಿದೆಯಂತೆ. ‘ಸುಮಾರು ಒಂದೂವರೆ ವರ್ಷಗಳ ಹಿಂದೆ ವಿಶ್ವಪ್ರಸಾದ್ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ‘ಕಾರ್ತಿಕೇಯ 2’ ತರಹ ನಮ್ಮ ಚಂದಮಾಮ ಶೈಲಿಯ ತಂತ್ರ, ಮಂತದ ಕಥಯನ್ನು ಮಿಕ್ಸ್ ಮಾಡಿ ಯಾಕೆ ಒಂದು ಚಿತ್ರ ಮಾಡಬಾರದು ಎಂದು ಹೇಳಿದೆ. ಅವರು ಈ ಎಳೆ ಹೇಳಿದರು. ಬಹಳ ಇಷ್ಟವಾಯಿತು. ಸುಮಾರು 500 ವರ್ಷಗಳ ಹಿಂದೆ ಕಥೆ ಪ್ರಾರಂಭವಾಗಿ, ಇಲ್ಲಿಯವರೆಗೂ ಮುಂದುವರೆಯುತ್ತದೆ. ಕಥೆ ಮಾಡುವುದಕ್ಕೇ ಒಂದೂವರೆ ವರ್ಷಗಳ ಕಾಲ ಆಗಿದೆ. ಯಾವಾಗ ಕೇಳಿದರೂ ಬರವಣಿಗೆ ನಡೆಯುತ್ತಿದೆ ಎಂದು ಧನಂಜಯ್ ಹೇಳುತ್ತಿದ್ದರು. ಈಗ ಕಥೆ-ಚಿತ್ರಕಥೆ ಸಂಪೂರ್ಣವಾಗಿದ್ದು ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ರುದ್ರ ಮತ್ತು ಕ್ಷುದ್ರದ ನಡುವಿನ ಸಂಘರ್ಷವಿದೆ. ಪುರಾಣ ಮತ್ತು ಇತಿಹಾಸದ ಮಿಕ್ಸ್ ಈ ಚಿತ್ರದಲ್ಲಿದೆ’ ಎಂದರು.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: ಕೃಷ್ಣಂ ಪ್ರಣಯ ಸಖಿ ಬಳಿಕ ಪಿನಾಕ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿದ ಗಣೇಶ್; ಗೋಲ್ಡನ್ ಸ್ಟಾರ್ ಹೊಸ ಸಿನಿಮಾದ ಟೀಸರ್ ರಿಲೀಸ್
![Whats_app_banner Whats_app_banner](https://kannada.hindustantimes.com/static-content/1y/wBanner.png)