‘ಗಟ್ಟಿಮೇಳ’ ಧಾರಾವಾಹಿ ನಟಿಗೆ ಕ್ಯಾನ್ಸರ್: ನನಗೆ ಕೆಲಸ ಸಿಗೋವಾಗ್ಲೇ ದೇವರು ಕಾಯಿಲೆ ಕೊಡ್ತಾನೆ ಎಂದ ಕಮಲಶ್ರೀ
ಸಂದರ್ಶನ-ಪದ್ಮಶ್ರೀ ಭಟ್: ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಕಮಲಶ್ರೀ ಅವರಿಗೆ ಇಳಿ ವಯಸ್ಸಿನಲ್ಲಿ ಕ್ಯಾನ್ಸರ್ ಕಾಯಿಲೆ ಬಂದಿದೆ. ಈ ಕುರಿತು ಅವರು ʼಪಂಚಮಿ ಟಾಕ್ಸ್ʼ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಗಟ್ಟಿಮೇಳ, ಬದುಕು, ಕಾವೇರಿ ಕನ್ನಡ ಮೀಡಿಯಂ, ಕನಕ, ಲಕ್ಷ್ಮೀ ಬಾರಮ್ಮ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಕಮಲಶ್ರೀ ಅವರಿಗೆ ಕ್ಯಾನ್ಸರ್ ಕಾಯಿಲೆ ಬರಸಿಡಿಲು ಬಡಿದಂತಾಗಿದೆ. ಹೌದು, ಅವರು ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಅವರು ʼಪಂಚಮಿ ಟಾಕ್ಸ್ ಯುಟ್ಯೂಬ್ʼ ಚಾನೆಲ್ ಜೊತೆಗೆ ಮಾತನಾಡಿದ್ದಾರೆ.
ಸರ್ಜರಿ ಮಾಡೋಕಾಗಲ್ಲ
ವಯಸ್ಸು ಎಪ್ಪತ್ತೈದು ದಾಟಿರೋದರಿಂದ ಕಮಲಶ್ರೀ ಅವರಿಗೆ ಈಗ ಸರ್ಜರಿ ಮಾಡೋಕೆ ಆಗೋದಿಲ್ಲ, ಕಿಮಿಯೋಥೆರಪಿ ಮಾಡಲೂ ಆಗೋದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ದುಬಾರಿ ಮಾತ್ರೆಗಳನ್ನು ಕೊಟ್ಟು ಕ್ಯಾನ್ಸರ್ ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಇದರಿಂದ ಈಗ ಅರವತ್ತು ಶೇಕಡ ಗುಣ ಆಗಿದೆ ಎಂದು ನಟಿ ಹೇಳಿದ್ದಾರೆ.
ಕಲಾವಿದರಿಂದ ಸಹಾಯ
ʼಗಟ್ಟಿಮೇಳʼ ಧಾರಾವಾಹಿ ಮುಗಿಯುತ್ತಿದ್ದಂತೆ ನನಗೆ ಕ್ಯಾನ್ಸರ್ ಇರೋದು ಗೊತ್ತಾಯ್ತು. ನನ್ನಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುವಷ್ಟು ಹಣ ಇರಲಿಲ್ಲ. ಹೀಗಾಗಿ ನಾನು ಈ ಬಗ್ಗೆ ನಟಿ ಗಿರಿಜಾ ಲೋಕೇಶ್ ಅವರ ಜೊತೆ ಮಾತನಾಡಿದೆ. ಗಿರಿಜಾ ಅವರ ಸಲಹೆ ಮೇರೆಗೆ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದೆ. ಆಮೇಲೆ ನಟಿ ಉಮಾಶ್ರೀ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಿದರು. ಅದಕ್ಕೆ ಅವರೇ ಹಣ ಕೊಟ್ಟರು. ವೈದ್ಯರ ಬಳಿ ಕೂಡ ಉಮಾಶ್ರೀ ಮಾತನಾಡಿ, “ಬಡ ಕಲಾವಿದೆ, ಅವರ ಬಳಿ ಜಾಸ್ತಿ ಹಣ ತಗೋಬೇಡಿ, ನಾನು ಹಣ ಕೊಡ್ತೀನಿ. ಕಲಾವಿದರಾದ ಅವರನ್ನು ನಾವು ನೋಡಿಕೊಳ್ಳಬೇಕು ಎಂದಿದ್ದರು. ಗಿರಿಜಾ ಲೋಕೇಶ್, ಉಮಾಶ್ರೀ ಅವರು ಆಗಾಗ ಬ್ಯಾಂಕ್‌ಗೆ ಹಣ ಹಾಕುತ್ತಾರೆ. ಯಾರೋ ಪುಣ್ಯಾತ್ಮರು ಇಪ್ಪತ್ತೈದು ಕೆಜಿ ಅಕ್ಕಿ ತಂದುಕೊಟ್ಟರು. ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ, ಅನು ಪೂವಮ್ಮ, ಮೈಸೂರು ಮಾಲತಿ, ಪದ್ಮ, ವೀಣಾ ವೆಂಕಟೇಶ್ ಮುಂತಾದವರು ಹಣ ಸಹಾಯ ಮಾಡಿದ್ದಾರೆ, ದವಸ-ಧಾನ್ಯಗಳನ್ನು ತಂದುಕೊಟ್ಟಿದ್ದಾರೆ, ಹೀಗೆ ಜೀವನ ನಡೆಯುತ್ತಿದೆ ಎಂದು ಕಮಲಶ್ರೀ ಹೇಳಿದ್ದಾರೆ.
ಕೆಲಸ ಸಿಗೋವಾಗ್ಲೇ ಹೀಗೆ
“ನನ್ನ ಅಕ್ಕನ ಮಗಳು ಆಗಾಗ ಮನೆಗೆ ಬಂದು ನನ್ನ ನೋಡಿಕೊಳ್ಳುತ್ತಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ. ಹೀಗೆ ನೆರೆ ಮನೆಯವರು, ಸಂಬಂಧಿಕರು ಸಹಾಯ ಮಾಡುತ್ತಾರೆ. ಈಗ ನನಗೆ ನಟಿಸಲು ಆಗುತ್ತಿಲ್ಲ. ತುಂಬ ಹೊತ್ತು ನಿಂತುಕೊಳ್ಳೋಕೆ ಆಗೋದಿಲ್ಲ. ಶೂಟಿಂಗ್ ಅಂದ್ರೆ ಬೆಳಗ್ಗೆಯಿಂದ ಸಂಜೆವರೆಗೆ ಇರಬೇಕಾಗುತ್ತದೆ. ಅಲ್ಲಿ ಏಳೋದು, ಬೀಳೋದು ಕೂಡ ಇರುತ್ತದೆ. ಒಳ್ಳೆ ಹೆಸರು ಬರುತ್ತಿರುವಾಗ, ಕೆಲಸ ಸಿಗುವಾಗ ದೇವರು ನನಗೆ ಕಾಯಿಲೆ ಕೊಟ್ಟು ಮೂಲೆಯಲ್ಲಿ ಕೂರಿಸಿದ್ದಾರೆ ಏನೋ ಮಾಡೋದು?” ಎಂದು ನಟಿ ಕಮಲಶ್ರೀ ಅವರು ಹೇಳಿದ್ದಾರೆ.
ಪದೇ ಪದೇ ಕಾಯಿಲೆ
“ನನಗೆ ಟ್ಯೂಮರ್ ಆಗಿತ್ತು, ಟಿಬಿ ಆಗಿತ್ತು, ಈಗ ಕ್ಯಾನ್ಸರ್ ಬಂದಿದೆ. ನಾನು ಆದಷ್ಟು ಬೇಗ ಈ ಕಾಯಿಲೆಯಿಂದ ಗುಣಮುಖ ಆಗ್ತೀನಿ, ಮತ್ತೆ ನಟಿಸ್ತೀನಿ ಎನ್ನುವ ನಂಬಿಕೆ ಇದೆ. ನಾನು ಯಾವುದೇ ಆಸ್ಪತ್ರೆಗೆ ಹೋದರೂ, ದೇವಸ್ಥಾನಕ್ಕೆ ಹೋದರೂ ಅಲ್ಲಿ ಜನರು ಮುತ್ತಿಕೊಂಡು ಮಾತಾಡಿಸುತ್ತಾರೆ. ಇನ್ನೊಂದು ಕಡೆ ನೀವು ನೆಗೆಟಿವ್ ಕ್ಯಾರೆಕ್ಟರ್ ಮಾಡಬೇಡಿ ಅಂತ ಹೇಳುತ್ತಾರೆ. ಹೀಗಾಗಿ ನಾನು ನೆಗೆಟಿವ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ” ಎಂದು ಕಮಲಶ್ರೀ ಅವರು ಹೇಳಿದ್ದಾರೆ.
"ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಕಾವೇರಿ ಅಜ್ಜಿ ಪಾತ್ರ ಮಾಡುತ್ತಿದ್ದೆ. ಆದರೆ ಆಗಲೇ ಕ್ಯಾನ್ಸರ್ ಇರೋದು ಗೊತ್ತಾಗಿತ್ತು. ನಟಿಸಲು ಆಗದೆ ಧಾರಾವಾಹಿ ಬಿಟ್ಟೆ. ನಾನು ಮಾಡುತ್ತಿದ್ದ ಪಾತ್ರವನ್ನು ಮೈಸೂರು ಮಾಲತಿ ಅವರು ಮಾಡುತ್ತಿದ್ದಾರೆ. ಮೈಸೂರು ಮಾಲತಿ ನನ್ನ ಗೆಳತಿ. ಅವಳು ಕೂಡ ನನಗೆ ಸಹಾಯ ಮಾಡಿದ್ದಾಳೆ” ಎಂದು ಕಮಲಶ್ರೀ ಹೇಳಿದ್ದಾರೆ.
ಸಂದರ್ಶನ-ಪದ್ಮಶ್ರೀ ಭಟ್
ಇದನ್ನೂ ಓದಿ: Ramachari Serial: ವೈಶಾಖಾ ಕಾಲಿಗೆ ಪೆಟ್ಟು ಕೊಟ್ಟ ಚಾರು; ನೋವಾದರೂ ನಾಟಕ ಮುಂದುವರಿಸಿದ ಚತುರೆ ವೈಶಾಖಾ