Dr Rajkumar Movies: ಬಾಲ್ಯದಲ್ಲಿ ನೋಡಿದ ಅಣ್ಣಾವ್ರ ಆ ಸಿನಿಮಾ ನನಗೆ ಬಹಳ ಇಷ್ಟ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ: ಭವ್ಯಾಗೌಡ
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar Movies: ಬಾಲ್ಯದಲ್ಲಿ ನೋಡಿದ ಅಣ್ಣಾವ್ರ ಆ ಸಿನಿಮಾ ನನಗೆ ಬಹಳ ಇಷ್ಟ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ: ಭವ್ಯಾಗೌಡ

Dr Rajkumar Movies: ಬಾಲ್ಯದಲ್ಲಿ ನೋಡಿದ ಅಣ್ಣಾವ್ರ ಆ ಸಿನಿಮಾ ನನಗೆ ಬಹಳ ಇಷ್ಟ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ: ಭವ್ಯಾಗೌಡ

ಇದು 'ನನ್ನಿಷ್ಟದ ರಾಜ್ ಸಿನಿಮಾ' ವಿಶೇಷ ಸರಣಿ (Dr Rajkumar Movies). ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ ಪ್ರಯುಕ್ತ (Dr Rajkumar Birth Anniversary) 'ಎಚ್‌ಟಿ ಕನ್ನಡ' ಈ ಸರಣಿಯನ್ನು ಪ್ರಸ್ತುತಪಡಿಸುತ್ತಿದೆ. ನೀವಿಷ್ಟಪಡುವ ಸಾಕಷ್ಟು ಜನರು ಕನ್ನಡಿಗರ ಪ್ರೀತಿಯ 'ಅಣ್ಣಾವ್ರು' ಅಭಿನಯದ ತಮ್ಮಿಷ್ಟದ ಚಿತ್ರಗಳನ್ನು ನೆನಪಿಸಿಕೊಳ್ಳಲಿದ್ದಾರೆ.

ಡಾ. ರಾಜ್‌ಕುಮಾರ್‌ ಅಭಿನಯದ 'ಶಬ್ಧವೇಧಿ' ಚಿತ್ರದ ದೃಶ್ಯ (ಎಡಚಿತ್ರ), ಕಿರುತೆರೆ ನಟಿ ಭವ್ಯಾಗೌಡ (ಮಧ್ಯದ ಚಿತ್ರ) 'ಗಂಧದಗುಡಿ' ಚಿತ್ರದ ದೃಶ್ಯ (ಬಲಚಿತ್ರ).
ಡಾ. ರಾಜ್‌ಕುಮಾರ್‌ ಅಭಿನಯದ 'ಶಬ್ಧವೇಧಿ' ಚಿತ್ರದ ದೃಶ್ಯ (ಎಡಚಿತ್ರ), ಕಿರುತೆರೆ ನಟಿ ಭವ್ಯಾಗೌಡ (ಮಧ್ಯದ ಚಿತ್ರ) 'ಗಂಧದಗುಡಿ' ಚಿತ್ರದ ದೃಶ್ಯ (ಬಲಚಿತ್ರ). (PC: Dr Rajkumar Movies)

ನಟಸಾರ್ವಭೌಮ ಡಾ. ರಾಜ್‌ಕುಮಾರ್ (Kannada Film Actor Dr Rajkumar) ಅವರನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಈಗ ಅವರ ನೆನಪು ನೇವರಿಸಲು ಕಾರಣವಿದೆ. ಇದೇ ಏ 24ರಂದು ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ (Dr Rajkumar Birth Anniversary). ಕನ್ನಡ ಮನಸ್ಸುಗಳು ಇಷ್ಟಪಡುವ ಹಲವು ಸಹೃದಯರು 'ನನ್ನ ನೆಚ್ಚಿನ ರಾಜ್‌ ಸಿನಿಮಾ' ಸರಣಿಯಲ್ಲಿ ಅಣ್ಣಾವ್ರ ಚಿತ್ರಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯ (Geetha Serial)ನಾಯಕಿ, ಭವ್ಯ ಗೌಡ (Bhavya Gowda) ಡಾ. ರಾಜ್‌ಕುಮಾರ್‌ ಅಭಿನಯದ 'ಗಂಧದಗುಡಿ' (Gandhada Gudi) ಹಾಗೂ 'ಶಬ್ಧವೇಧಿ' (Shabdavedhi) ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಇಲ್ಲಿಂದಾಚೆಗಿರುವುದು ಭವ್ಯಗೌಡ ಅವರದ್ದೇ ಮಾತು…

ಡಾ. ರಾಜ್‌ ಅಭಿನಯದ 'ಗಂಧದಗುಡಿ' ಹಾಗೂ 'ಶಬ್ಧವೇಧಿ' ಸಿನಿಮಾಗಳು ನನಗಿಷ್ಟ

ಅಣ್ಣಾವ್ರು ಅಭಿನಯಿಸಿರುವ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ಚೆಂದ. ಯಾವ ಸಿನಿಮಾಗಳನ್ನು ಮತ್ತೊಂದು ಸಿನಿಮಾಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಅವರ ಪ್ರತಿಯೊಂದು ಸಿನಿಮಾದಲ್ಲೂ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ನಾನು ಆಗ ಸ್ಕೂಲ್‌ನಲ್ಲಿ ಓದುತ್ತಿದ್ದೆ. ಅಪ್ಪ ನನ್ನನ್ನು 'ಗಂಧದಗುಡಿ' ಸಿನಿಮಾ ನೋಡಲು ನಮ್ಮನ್ನೂ ಕರೆದೊಯ್ದಿದ್ದರು. ಸ್ಕೂಲ್‌ನಲ್ಲಿ ಆಗ ಕಾಡು, ಪ್ರಾಣಿ, ಪಕ್ಷಿಗಳ ಬಗ್ಗೆ ಪಾಠ ಕೇಳುತ್ತಿದ್ದೆವು. ಅದನ್ನು 'ಗಂಧದಗುಡಿ' ಚಿತ್ರದಲ್ಲಿ ನೋಡಿ, ಒಂದೊಳ್ಳೆ ಅನುಭವ ಆಯ್ತು. ಕಾಡನ್ನು ಉಳಿಸಲು ನಾಯಕ ಹೋರಾಡುವ ರೀತಿ ನನಗೆ ಬಹಳ ಇಷ್ಟ. ನನ್ನ ಅಪ್ಪನಂತೂ ಡಾ. ರಾಜ್‌ಕುಮಾರ್‌ ಅವರ ದೊಡ್ಡ ಅಭಿಮಾನಿ. ಅವರು ರಾಜ್‌ಕುಮಾರ್‌ ಅವರ ಬಗ್ಗೆ ನಮಗೆ ಹೇಳುತ್ತಲೇ ಇದ್ದರು. 'ಗಂಧದಗುಡಿ' ಚಿತ್ರದಲ್ಲಿ ನಾವಾಡುವ ನುಡಿಯೇ ಕನ್ನಡನುಡಿ.. ಹಾಡು ಬಹಳ ಇಷ್ಟ. ಬಾಲ್ಯದಲ್ಲಿ ನೋಡಿದ ಆ ಸಿನಿಮಾ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ.

ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ 'ಶಬ್ಧವೇಧಿ' ಕೂಡಾ ನನಗೆ ಬಹಳ ಇಷ್ಟ. ದಾರಿ ತಪ್ಪುವ ಯುವಜನತೆಯನ್ನು ಸರಿ ದಾರಿಗೆ ತರುವ ಪೊಲೀಸ್‌ ಅಧಿಕಾರಿಯಾಗಿ, ಕರ್ತವ್ಯದ ಮುಂದೆ ಕುಟುಂಬವನ್ನೂ ಲೆಕ್ಕಿಸದ ವ್ಯಕ್ತಿಯಾಗಿ ಅಣ್ಣಾವ್ರು ಬಹಳ ಚೆನ್ನಾಗಿ ನಟಿಸಿದ್ದಾರೆ. ಈ ಚಿತ್ರದ ಓ ಓ ಪ್ರೇಮ ಕಾಶ್ಮೀರ.. ಹಾಡನ್ನಂತೂ ನಾನು ಇಂದಿಗೂ ಗುನುಗುತ್ತಿರುತ್ತೇನೆ. ಡಾ. ರಾಜ್‌ ಹಾಗೂ ಜಯಪ್ರದಾ ಅವರ ಕೆಮಸ್ಟ್ರಿ ಈ ಚಿತ್ರದಲ್ಲಿ ಚೆನ್ನಾಗಿದೆ.

ಹಾಗೇ 'ಆಕಸ್ಮಿಕ' ಚಿತ್ರದ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡು ಬಹಳ ಇಷ್ಟ. 'ಬಬ್ರುವಾಹನ' ಚಿತ್ರದ ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ.. ಸೇರಿದಂತೆ ಆ ಯುದ್ಧಭೂಮಿಯ ಡೈಲಾಗ್‌ಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಮ್ಮ ಮನೆಯಲ್ಲಿ ಅಪ್ಪ, ರಾಜಣ್ಣನ ದೊಡ್ಡ ಅಭಿಮಾನಿ. ನನ್ನ ತಂದೆ ಡಾ. ರಾಜ್‌ಕುಮಾರ್‌ ಹಾಡಿರುವ ಭಕ್ತಿಗೀತೆಗಳು ಇಲ್ಲದೆ ದೇವರ ಪೂಜೆ ಮಾಡುವುದಿಲ್ಲ. ರಾಜ್‌ಕುಮಾರ್‌ ನಿಧನರಾದಾಗ ನಾನು ಸ್ಕೂಲ್‌ನಲ್ಲಿ ಓದುತ್ತಿದ್ದೆ. ಆಗ ನಾವು ಮನೆ ದೇವರ ಜಾತ್ರೆಯಲ್ಲಿದ್ದೆವು. ದೇವರ ದರ್ಶನ ಆಗುತ್ತಿದ್ದಂತೆ ಅಪ್ಪನಿಗೆ ವಿಚಾರ ತಿಳಿದಿದೆ. ಕೂಡಲೇ ಅವರು ನಮ್ಮನ್ನು ಮನೆಗೆ ಕಳಿಸಿ, ಅಣ್ಣಾವ್ರನ್ನು ನಾನು ನೋಡಲೇಬೇಕು ಎಂದು ಹೊರಟುಬಿಟ್ಟರು. ಆ ಸುದ್ದಿ ಕೇಳಿ ಅಪ್ಪ ಬಹಳ ಶಾಕ್‌ ಆಗಿದ್ದರು. ಕೆಲವು ದಿನಗಳ ಕಾಲ ಅವರು ಅದೇ ಬೇಸರದಲ್ಲಿದ್ದರು. ಆ ಸಂದರ್ಭವನ್ನು ಈಗ ನೆನಪಿಸಿಕೊಂಡರೆ, ಡಾ. ರಾಜ್‌ಕುಮಾರ್‌ ಅವರ ವ್ಯಕ್ತಿತ್ವ ಎಂತದ್ದು ಎಂದು ತಿಳಿಯುತ್ತಿದೆ.

ಪ್ರತಿಯೊಬ್ಬ ಕಲಾವಿದರಿಗೂ ಜೀವನದಲ್ಲಿ ಒಮ್ಮೆ ಡಾ. ರಾಜ್‌ಕುಮಾರ್‌ ಅವರನ್ನು ನೋಡಬೇಕು ಎಂಬ ಆಸೆ ಇರುತ್ತದೆ. ಆದರೆ ನನಗೆ ಅವರನ್ನು ನೋಡುವ ಭಾಗ್ಯ ಎಂದಿಗೂ ಸಿಗಲಿಲ್ಲ. ಈಗ ಅವರು ಇರಬೇಕಿತ್ತು ಎನ್ನಿಸುತ್ತಿದೆ. ನಮ್ಮಂತ ಹೊಸ ಕಲಾವಿದರಿಗೆ ಅವರು ದಾರಿದೀಪ. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರು ನಡೆದುಕೊಂಡು ಬಂದ ದಾರಿಯಲ್ಲೇ ಅವರ ಮಕ್ಕಳು ಕೂಡಾ ನಡೆಯುತ್ತಿದ್ದಾರೆ. ಆದ್ದರಿಂದಲೇ ಅದು ದೊಡ್ಮನೆ ಎಂದೇ ಹೆಸರಾಗಿದೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಅವರು ಬಿಳಿ ಪಂಚೆ, ಷರ್ಟ್‌ ಧರಿಸಿ ಬಹಳ ಸರಳವಾಗಿದ್ದರು. ಇದು ಎಲ್ಲರಿಗೂ ಮಾದರಿ.

Whats_app_banner