ದೊಡ್ಮನೆ ಸೊಸೆಯಂದಿರ ಚಿತ್ರ ನಿರ್ಮಾಣ ಸಾಹಸ; ಯುವ ಬೆನ್ನಿಗೆ ಅಶ್ವಿನಿ ಪುನೀತ್, ಧೀರೇನ್ ಚಿತ್ರಕ್ಕೆ ಗೀತಾ ಶಿವರಾಜಕುಮಾರ್ ನಿರ್ಮಾಪಕಿ
ದೊಡ್ಮನೆ ಸೊಸೆಯಂದಿರಾದ ಗೀತಾ ಶಿವರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸದ್ಯ ಸಿನಿಮಾ ನಿರ್ಮಾಣದಲ್ಲಿಯೇ ಸಕ್ರಿಯರಾಗಿದ್ದಾರೆ. ಅದರಂತೆ ಈಗಾಗಲೇ ಯುವ ಅವರ ಎರಡನೇ ಚಿತ್ರದ ನಿರ್ಮಾಣದಲ್ಲಿ ಅಶ್ವಿನಿ ಕೈ ಜೋಡಿಸಿದರೆ, ಇತ್ತ ಧೀರೇನ್ ಅವರ ಎರಡನೇ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ.
Dr Rajkumar Family: ಡಾ. ರಾಜಕುಮಾರ್ ಕುಟುಂಬದ ಮೂರು ತಲೆಮಾರಿನ ಐವರು ನಾಯಕರ ಚಿತ್ರಗಳನ್ನು ನಿರ್ಮಿಸಿ ಹೊಸ ಹೆಗ್ಗಳಿಕೆಗೆ ಪಾತ್ರವಾದವರು ಪಾರ್ವತಮ್ಮ ರಾಜಕುಮಾರ್. ಡಾ. ರಾಜಕುಮಾರ್ ಅಲ್ಲದೆ, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತು ವಿನಯ್ ರಾಜಕುಮಾರ್ ಅಭಿನಯದ ಚಿತ್ರಗಳನ್ನು ತಮ್ಮ ವಜ್ರೇಶ್ವರಿ ಕಂಬೈನ್ಸ್, ಪೂರ್ಣಿಮಾ ಎಂಟರ್‌ಪ್ರೈಸಿಸ್ ಮೂಲಕ ನಿರ್ಮಿಸಿದ್ದರು.
ಅವರ ನಂತರ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಡಿ ಯಾವೊಂದು ಚಿತ್ರವೂ ನಿರ್ಮಾಣವಾಗಿಲ್ಲ. ‘ರನ್ ಆ್ಯಂಟೋನಿ’ ಚಿತ್ರದ ನಂತರ ಯಾವೊಂದು ಚಿತ್ರವೂ ಹೊರಬಂದಿಲ್ಲ. ಈ ಮಧ್ಯೆ, ಗೀತಾ ಶಿವರಾಜಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಪಕಿಯರಾದರು. ತಮ್ಮ ಸಂಸ್ಥೆಗಳ ಮೂಲಕ ಚಿತ್ರಗಳನ್ನು ನಿರ್ಮಿಸತೊಡಗಿದರು.
ಈ ಪೈಕಿ ಯುವ ರಾಜಕುಮಾರ್ ಅವರ ಜೊತೆಗೆ ಅಶ್ವಿನಿ ಪುನೀತ್ ರಾಜಕುಮಾರ್ ನಿಂತಿದ್ದಾರೆ. ಯುವ ಅಭಿನಯದ ಎರಡನೇ ಚಿತ್ರವನ್ನು ಅಶ್ವಿನಿ ಪುನೀತ್ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಯುವ ಅಭಿನಯದ ‘ಎಕ್ಕ’ ಚಿತ್ರವನ್ನು ಅವರು ನಿರ್ಮಿಸುತ್ತಿದ್ದಾರೆ. ಈಗ ಧೀರನ್ ಬೆನ್ನಿಗೆ ಶಿವರಾಜಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ನಿಂತಿದ್ದಾರೆ. ಗೀತಾ ಪಿಕ್ಚರ್ಸ್ ನಿರ್ಮಾಣದ ನಾಲ್ಕನೆಯ ಚಿತ್ರದಲ್ಲಿ ಧೀರೆನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
‘ಶಿವ 143’ ಎಂಬ ಚಿತ್ರದ ಮೂಲಕ ನಾಯಕರಾದವರು ಡಾ. ರಾಜಕುಮಾರ್ ಅವರ ಮೊಮ್ಮಗ ಮತ್ತು ರಾಮ್‍ಕುಮಾರ್ ಅವರ ಮಗ ಧೀರೆನ್. ಈ ಚಿತ್ರ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ, ಅಷ್ಟೇನೂ ಸದ್ದು ಮಾಡದೆ ಮಾಯವಾಯಿತು. ಆ ನಂತರ ‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು ನಿರ್ದೇಶನದಲ್ಲಿ ಧೀರೆನ್ ನಟಿಸುತ್ತಿರುವ ಸುದ್ದಿಯಾಯಿತು. ಆ ಚಿತ್ರ ಕಾರಣಾಂತರಗಳಿಂದ ಶುರುವಾಗಲಿಲ್ಲ. ಈ ಮಧ್ಯೆ, KRG ಸ್ಟುಡಿಯೋಸ್ ನಿರ್ಮಾಣದ ಹೊಸ ಚಿತ್ರದಲ್ಲೂ ಧೀರೆನ್ ನಟಿಸುತ್ತಿದ್ದಾರೆ ಎಂಬ ವಿಷಯ ಕೇಳಿಬಂತು. ಈ ಚಿತ್ರ ಪ್ರಾರಂಭವಾಗುವ ಮೊದಲೇ ಗೀತಾ ಪಿಕ್ಚರ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ಧೀರೆನ್ ನಟಿಸುತ್ತಿರುವ ಸುದ್ದಿ ಬಂದಿದೆ.
ಡಿ. 6, ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಗೀತಾ ಪಿಕ್ಚರ್ಸ್‍ನ ನಾಲ್ಕನೇ ಚಿತ್ರವನ್ನು ಘೋಷಿಸಲಾಗಿದೆ. ಈ ಚಿತ್ರದಲ್ಲಿ ಧೀರೆನ್ ರಾಮ್‍ಕುಮಾರ್ ನಾಯಕನಾಗಿ ನಟಿಸಿದರೆ, ‘ಶಾಖಾಹಾರಿ’ ಚಿತ್ರವನ್ನು ನಿರ್ದೇಶಿಸಿದ್ದ ಸಂದೀಪ್ ಸುಂಕದ್ ನಿರ್ದೇಶನ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಧೀರೆನ್ ರಾಮ್‌ಕುಮಾರ್, ‘ಕಳೆದ ಕೆಲವು ವರ್ಷಗಳಲ್ಲಿ ಕೆಲವು ಆಫರ್‌ಗಳು ಬಂದರೂ, ನಾನು ನಿರಾಕರಿಸಿದ್ದೆ. ನನ್ನ ಎರಡನೇ ಸಿನಿಮಾ ನನ್ನ ಪ್ರತಿಭೆ ತೋರಿಸುವ ವೇದಿಕೆ ಆಗಬೇಕು ಎಂಬ ಆಸೆ ಇತ್ತು. ಅದಕ್ಕೆ ತಕ್ಕ ಕಥೆಯನ್ನು ಸಂದೀಪ್ ತಂದಿದ್ದಾರೆ. ಸಂದೀಪ್ ಅವರು ಕಥೆ ಹೇಳಿದಾಗ ಖುಷಿಯಾಯ್ತು. ‘ಶಾಖಾಹಾರಿ’ ಚಿತ್ರವು ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ OTT ಮೂಲಕ ದೊಡ್ಡ ಹೆಸರು ಮಾಡಿತ್ತು. ಇಂಥಾ ತಂಡದ ಜೊತೆಗೆ ಕೆಲಸ ಮಾಡುವುದು ನನಗೆ ಸಂತೋಷ’ ಎಂದರು. ಸದ್ಯಕ್ಕೆ ಚಿತ್ರವನ್ನು ಘೋಷಿಸವ ಪೋಸ್ಟರ್ ಮಾತ್ರ ಬಿಡುಗಡೆಯಾಗಿದ್ದು, ಮಿಕ್ಕ ವಿಷಯಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.
ವರದಿ: ಚೇತನ್ ನಾಡಿಗೇರ್
ವಿಭಾಗ