Gharat Ganpati: ಅವಿಭಕ್ತ ಕುಟುಂಬಗಳು ಮಾಯವಾಗುತ್ತಿರುವ ಸಂದರ್ಭಕ್ಕೆ ತಕ್ಕ ಸಿನಿಮಾ; ವಾರಾಂತ್ಯಕ್ಕೆ ನೋಡಿ ‘ಘರತ್ ಗಣಪತಿ’
Gharat Ganpati: ಅವಿಭಕ್ತ ಕುಟುಂಬಗಳಿದ್ದರೂ ಆ ಕುಟುಂಬದಲ್ಲಿ ಅಭಿಪ್ರಾಯ ವ್ಯತ್ಯಾಸಗಳಿರುವುದು ಸಹಜ. ಆದರೆ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿರುವ ಸಂದರ್ಭಕ್ಕೆ ತಕ್ಕಂತೆ ರೂಪುಗೊಂಡ ಸಿನಿಮಾ ಎಂದರೆ ಅದು ‘ಘರತ್ ಗಣಪತಿ’. ಈ ವಾರಾಂತ್ಯಕ್ಕೆ ಮನೆಯವರೆಲ್ಲ ಒಟ್ಟಾಗಿ ಈ ಸಿನಿಮಾ ನೋಡಿ.

ಘರತ್ ಗಣಪತಿ ಇದೊಂದು ಮರಾಠಿ ಸಿನಿಮಾ. ಅವಿಭಜಿತ ಕುಟುಂಬಗಳಲ್ಲೂ ಆರ್ಥಿಕ ವಿಭಜನೆಯಾದಾಗ ಯಾವ ರೀತಿ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ. ಹಿರಿಯರ ನೋವು, ಕಿರಿಯರ ಪಾಡು, ದುಡಿಯುವ ಮನಸ್ಸು, ಹತಾಷೆ, ಪ್ರೀತಿ ಎಲ್ಲ ಭಾವನೆಗಳೂ ಈ ಸಿನಿಮಾದಲ್ಲಿದೆ. ಎಲ್ಲ ವಯೋಮಾನದವರೂ ನೋಡಿ ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂಬ ಮನಸ್ಥಿತಿಯನ್ನು ತಂದುಕೊಡುವ ಸಿನಿಮಾ ಇದಾಗಿದೆ. ತುಂಬಾ ಜನರ ಮನೆಯ ಸಮಸ್ಯೆಯನ್ನು ಒಂದೇ ಒಂದು ಗಣೇಶ ಚತುರ್ಥಿಯ ಆಚರಣೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಈ ಸಿನಿಮಾದ ಹೆಸರು ‘ಘರತ್ ಗಣಪತಿ' ಎಂಬುದಾಗಿದೆ.
ಕುಟುಂಬಗಳಲ್ಲಿ ಮೂಡದಿರಲಿ ಬಿರುಕು
ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಜ್ಜ, ಅಜ್ಜಿ, ಅತ್ತೆ, ಮಾವ, ದೊಡ್ಡಮ್ಮ, ದೊಡ್ಡಪ್ಪ, ಅಕ್ಕ, ತಮ್ಮ ಹೀಗೆ ಹೇಳುತ್ತಾ ಹೋದರೆ ಸಂಬಂಧಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಹಿಂದೆ ಈ ಎಲ್ಲರೂ ಒಂದೇ ಮನೆಯಲ್ಲಿ ಒಟ್ಟಾಗಿ ಬಾಳ್ವೆ ಮಾಡುತ್ತಿದ್ದರು. ನಂತರ ಕ್ರಮೇಣ ಸಮಾಜದಲ್ಲಿ ಬದಲಾವಣೆ ಉಂಟಾಯಿತು. ಮನೆಯಲ್ಲಿ ಜನ ಹೆಚ್ಚಾದ ಹಾಗೆ ಆಸ್ತಿ ಕೂಡ ಹೆಚ್ಚಬೇಕು, ಇಲ್ಲವಾದರೆ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ ಎಂಬ ಸಂದರ್ಭ ಬರುತ್ತದೆ. ಅಂತಹ ಸಂದರ್ಭದಲ್ಲಿ ಕೆಲವರು ತಮ್ಮ ಹಿತಾಸಕ್ತಿಯಿಂದ ಪೇಟೆಕಡೆ ಪ್ರಯಾಣ ಬೆಳೆಸುತ್ತಾರೆ. ಆಗ ಮನೆಯಲ್ಲಿ ಒಡಕು ಆರಂಭವಾಗುತ್ತದೆ. ಇದೇ ಕಥೆಯನ್ನು ಘರತ್ ಗಣಪತಿ ಸಿನಿಮಾ ಹೊಂದಿದೆ. ಆದರೆ, ಒಗ್ಗಟ್ಟನ್ನು ತಂದುಕೊಳ್ಳಲು ನಾವು ಮಾಡಿಕೊಳ್ಳಬೇಕಾದ ಬದಲಾವಣೆ ಏನು ಎಂಬ ಅಂಶವನ್ನೂ ಈ ಸಿನಿಮಾದಲ್ಲಿ ತಿಳಿಸಿದ್ದಾರೆ.
ಸಂಸ್ಕಾರ, ಸಂಸ್ಕೃತಿ, ಆಚಾರ ಮತ್ತು ವಿಚಾರಗಳ ಹೂರಣ
ಈ ಸಿನಿಮಾದಲ್ಲಿ ಹಿಂದಿನ ಪದ್ದತಿಗಳು, ಹಿರಿಯರು ಕಿರಿಯರಿಗೆ ಕೊಡಬೇಕಾದ ಸ್ವಾತಂತ್ರ್ಯ, ಕಿರಿಯರು - ಹಿರಿಯರಿಗೆ ಕೊಡಬೇಕಾದ ಗೌರವ ಎಲ್ಲದರ ಬಗ್ಗೆ ತಿಳಿಸಿದ್ದಾರೆ. ಮನೆಯ ಮೊಮ್ಮಗ ಬೇರೊಂದು ಊರಿನ ಹೆಣ್ಣನ್ನು ಮದುವೆ ಆಗುತ್ತೇನೆ ಎನ್ನುತ್ತಾನೆ, ಆಗ ಹುಡುಗಿ ಅವನ ಪ್ರೇಯಸಿ ಅವನ ಮನೆಗೆ ಬಂದು ಅಲ್ಲಿನ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಹೇಗೆ ಕಷ್ಟಪಡುತ್ತಾಳೆ ಎನ್ನುವುದನ್ನು ತೋರಿಸಿದ್ದಾರೆ. ಮನೆಯ ಹಿರಿಯರು ತಮ್ಮ ಕಣ್ಣಮುಂದೆ ಮಕ್ಕಳು ಬೇರೆಯಾಗದಿರಲಿ, ಎಲ್ಲ ಒಂದಾಗಿ ಬಾಳಲಿ ಎಂಬ ಆಸೆ ಹೊತ್ತಿದ್ದರೂ ಮಕ್ಕಳ ಇಷ್ಟವೇ ತಮ್ಮಿಷ್ಟ ಎಂದು ಬದುಕು ಬದಲಿಸಿಕೊಳ್ಳುತ್ತಾರೆ. ಹೀಗೆ ಸಾಕಷ್ಟು ವಿಚಾರಗಳು ಇದರಲ್ಲಿದೆ. ಕುಟುಂಬ ಇರುವಲ್ಲಿ ಅಭಿಪ್ರಾಯ ವ್ಯತ್ಯಾಸಗಳನ್ನು ಹೊಂದಾಣಿಕೆ ಮಾಡುವ ಹಿರಿಯರು ನಂತರ ಎಲ್ಲರನ್ನೂ ಕೂಡಿಸುತ್ತಾರೆ. ಆದರೆ ಆ ರೀತಿಯ ಅಭಿಪ್ರಾಯ ವ್ಯತ್ಯಾಸಗಳನ್ನು ಯಾವ ರೀತಿ ಹೊಂದಾಣಿಕೆ ಮಾಡಿಸುತ್ತಾರೆ ಎಂಬ ವಿಚಾರವೇ ಈ ಸಿನಿಮಾದಲ್ಲಿ ಮಹತ್ವ ಹೊಂದಿದೆ.
ಅಶ್ವಿನಿ ಭಾವೆ, ಅಜಿಂಕ್ಯ ದೇವ್, ಸಂಜಯ್ ಮೋನೆ, ಶುಭಂಗಿ ಲಟ್ಕರ್ ಮತ್ತು ಶುಭಂಗಿ ಗೋಖಲೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ತೋರಿಸಲಾದ ನೈಸರ್ಗಿಕ ಸೊಬಗು, ಹಬ್ಬದ ವಾತಾವರಣ, ಆಚರಣೆ, ಪರಿಸರ ಎಲ್ಲವೂ ಸುಂದರವಾಗಿ ಮೂಡಿಬಂದಿದೆ. ಸಿನಿಮಾದ ಮೇಕಿಂಗ್ ಉತ್ತಮವಾಗಿದೆ.
ಇಲ್ಲಿ ವೀಕ್ಷಿಸಿ
2024 ಜುಲೈನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಈಗಲೂ ಒಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್ ಪ್ರೈಂ ಒಟಿಟಿಯಲ್ಲಿ ನೀವು ಈ ಸಿನಿಮಾ ನೋಡಬಹುದು.
