Ghost Movie Poster: ಹಾಲಿವುಡ್‌ ಚಿತ್ರದ ಪೋಸ್ಟರ್‌ಗೆ ಶಿವಣ್ಣನ ಮುಖ ಸೇರಿಸಿ ಎಡಿಟ್‌..'ಘೋಸ್ಟ್‌' ನಿರ್ದೇಶಕ ಹೇಳಿದ್ದೇನು..?
ಕನ್ನಡ ಸುದ್ದಿ  /  ಮನರಂಜನೆ  /  Ghost Movie Poster: ಹಾಲಿವುಡ್‌ ಚಿತ್ರದ ಪೋಸ್ಟರ್‌ಗೆ ಶಿವಣ್ಣನ ಮುಖ ಸೇರಿಸಿ ಎಡಿಟ್‌..'ಘೋಸ್ಟ್‌' ನಿರ್ದೇಶಕ ಹೇಳಿದ್ದೇನು..?

Ghost Movie Poster: ಹಾಲಿವುಡ್‌ ಚಿತ್ರದ ಪೋಸ್ಟರ್‌ಗೆ ಶಿವಣ್ಣನ ಮುಖ ಸೇರಿಸಿ ಎಡಿಟ್‌..'ಘೋಸ್ಟ್‌' ನಿರ್ದೇಶಕ ಹೇಳಿದ್ದೇನು..?

ಟ್ವಿಟ್ಟರ್‌ ಯೂಸರ್‌ ಒಬ್ಬರು 1983ರ ಹಾಲಿವುಡ್‌ನ 'ಸ್ಕೇರ್‌ಫೇಸ್‌' ಚಿತ್ರದ ಟೋನಿ ಮೊಂಟನಾ ಎಂಬ ನಟನೊಬ್ಬನ ಪೋಸ್ಟರನ್ನು ಹಂಚಿಕೊಂಡು, ಈ ಪೋಸ್ಟರ್‌ಗೆ ಶಿವಣ್ಣ ಅವರ ಮುಖದ ಫೋಟೋ ಎಡಿಟ್‌ ಮಾಡಲಾಗಿದೆ ಎಂದು ಹೇಳಿದ್ದಾರೆ. ಸ್ಕೇರ್‌ಫೇಸ್‌ ಹಾಗೂ ಘೋಸ್ಟ್‌ ಎರಡೂ ಪೋಸ್ಟರ್‌ಗಳನ್ನು ಅವರು ಹಂಚಿಕೊಂಡಿದ್ದಾರೆ.

 'ಘೊಸ್ಟ್‌' ಚಿತ್ರದ ಪೋಸ್ಟರ್‌
'ಘೊಸ್ಟ್‌' ಚಿತ್ರದ ಪೋಸ್ಟರ್‌ (PC: Twitter)

'ಆನಂದ್‌' ಚಿತ್ರದಿಂದ ಇದುವರೆಗೂ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರಿಗೆ ಚಿತ್ರರಂಗದಲ್ಲಿ ಅಷ್ಟೇ ಬೇಡಿಕೆ ಇದೆ. ಶಿವಣ್ಣ ಕೈಯಲ್ಲಿ ಈಗ 8 ಸಿನಿಮಾಗಳಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆ ಕಂಡಿದ್ದ 'ವೇದ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಈ ಸಿನಿಮಾ ಒಟಿಟಿಯಲ್ಲಿ ಕೂಡಾ ಬಿಡುಗಡೆಯಾಗುತ್ತಿದೆ.

ಸದ್ಯಕ್ಕೆ ಶಿವರಾಜ್‌ಕುಮಾರ್‌ ಅಭಿನಯದ 'ಘೊಸ್ಟ್‌' ಸಿನಿಮಾ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರದ ಪೋಸ್ಟರ್‌ಗಳು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿವೆ. ಚಿತ್ರತಂಡ ಬಿಡುಗಡೆ ಮಾಡಿದ್ದ 'ಒನ್ಸ್ ಎ ಗ್ಯಾಂಗ್‌ಸ್ಟರ್ ಆಲ್‌ವೇಸ್ ಎ ಗ್ಯಾಂಗ್‌ಸ್ಟರ್' ಹೆಸರಿನ ಪೋಸ್ಟರ್‌ ಬಹಳ ಗಮನ ಸೆಳೆದಿತ್ತು. ಈ ಪೋಸ್ಟರ್‌ನಲ್ಲಿ ಶಿವಣ್ಣ ಬಹಳ ಯಂಗ್‌ ಕಾಣುತ್ತಿದ್ದು ಸಿಗರೇಟ್‌ ಸೇದುತ್ತಾ, ಕೋಟ್‌ ಧರಿಸಿ ಬಲಗೈಯನ್ನು ಸೊಂಟದ ಮೇಲಿಟ್ಟು ಸ್ಟೈಲ್‌ ಆಗಿ ನಿಂತಿರುವ ಪೋಸ್ಟರ್‌ ನೋಡಿ ಶಿವಣ್ಣ ಅಭಿಮಾನಿಗಳು ಹುಬ್ಬೇರಿಸಿದ್ದರು. ಆದರೆ ಇದೀಗ ಆ ಪೋಸ್ಟರ್‌ ಬಾಲಿವುಡ್‌ ಸಿನಿಮಾವೊಂದರ ಕಾಪಿ ಎಂದು ತಿಳಿದುಬಂದಿದ್ದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಟ್ವಿಟ್ಟರ್‌ ಯೂಸರ್‌ ಒಬ್ಬರು 1983ರ ಹಾಲಿವುಡ್‌ನ 'ಸ್ಕೇರ್‌ಫೇಸ್‌' ಚಿತ್ರದ ಟೋನಿ ಮೊಂಟನಾ ಎಂಬ ನಟನೊಬ್ಬನ ಪೋಸ್ಟರನ್ನು ಹಂಚಿಕೊಂಡು, ಈ ಪೋಸ್ಟರ್‌ಗೆ ಶಿವಣ್ಣ ಅವರ ಮುಖದ ಫೋಟೋ ಎಡಿಟ್‌ ಮಾಡಲಾಗಿದೆ ಎಂದು ಹೇಳಿದ್ದಾರೆ. ಸ್ಕೇರ್‌ಫೇಸ್‌ ಹಾಗೂ ಘೋಸ್ಟ್‌ ಎರಡೂ ಪೋಸ್ಟರ್‌ಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಟ್ವೀಟ್‌ಗೆ ನಿರ್ದೇಶಕ ಶ್ರೀನಿವಾಸ್‌ ಪ್ರತಿಕ್ರಿಯಿಸಿದ್ದಾರೆ. ''ಇದನ್ನು ನನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ಲುಕ್‌ ಟೆಸ್ಟ್‌ಗಾಗಿ ಯತೀಶ್‌ ಎಂಬ ಶಿವಣ್ಣನ ಅಭಿಮಾನಿಯೊಬ್ಬರು ಇದನ್ನು ಸ್ಕೆಚ್‌ ಮಾಡಿ ನಮಗೆ ಕಳಿಸಿದ್ದರು. ಆದರೆ ಇನ್ಮುಂದೆ ನಾವು ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರುತ್ತೇವೆ'' ಎಂದಿದ್ದಾರೆ.

ಈ ಟ್ವೀಟ್‌ಗೆ ಪರ ವಿರೋಧ ಕಮೆಂಟ್‌ ಬರುತ್ತಿದೆ. ಇದು ಚಿತ್ರತಂಡದ ಗಮನಕ್ಕೆ ಬಾರದೆ ಆಗಿರುವ ತಪ್ಪು, ಶ್ರೀನಿ ಕೂಡಾ ಈ ಪೋಸ್ಟರ್‌ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ವಾದ ಮಾಡಿಲ್ಲ, ಇದನ್ನು ಕಾಪಿ ಅಂತ ಏಕೆ ಅಂದುಕೊಳ್ಳುತ್ತೀರಿ, ಸ್ಫೂರ್ತಿ ಎಂದು ತಿಳಿದುಕೊಳ್ಳಿ ಎಂದರೆ ಇನ್ನೂ ಕೆಲವರು, ಅಭಿಮಾನಿಗಳಿಗೆ ಬೇರೆ ಚಿತ್ರದ ಪೋಸ್ಟರ್‌ ಸೇರಿಸಿ ಈ ರೀತಿ ಮೋಸ ಮಾಡುವುದು ತಪ್ಪು ಎಂದು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕ ಶ್ರೀನಿ, ಇನ್ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ.

'ಘೋಸ್ಟ್‌' ಚಿತ್ರವನ್ನು ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಶ್ರೀನಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮೋಷನ್‌ ಟೀಸರ್‌ ಬಿಡುಗಡೆಯಾಗಿದ್ದು ಬಹಳ ವೈರಲ್‌ ಆಗುತ್ತಿದೆ. 'ಘೋಸ್ಟ್' ಹೆಸರು ಕೇಳಿ, ಇದು ಹಾರರ್‌ ಸಿನಿಮಾ ಇರಬಹುದು ಎನ್ನಲಾಗಿತ್ತು. ಅದರೆ ಚಿತ್ರ ಬಿಡುಗಡೆ ಮಾಡಿರುವ ಪೋಸ್ಟರ್‌ ನೋಡಿದರೆ ಇದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಎಂಬುದು ತಿಳಿಯುತ್ತಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಗ್ಯಾಂಗ್‌ಸ್ಟರ್‌ ಅವತಾರದಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಕನ್ನಡದಲ್ಲಿ ತಯಾರಾಗಲಿದ್ದು ನಂತರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್‌ ಆಗಲಿದೆ. ಚಿತ್ರದಲ್ಲಿ ಕೆಜಿಎಫ್‌ ಖ್ಯಾತಿಯ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Whats_app_banner