ಮಂಜುಮ್ಮೆಲ್ ಬಾಯ್ಸ್ ಬಳಿಕ ಗುಡ್ ಬ್ಯಾಡ್ ಅಗ್ಲಿಗೂ ಎದುರಾಯ್ತು ಸಂಕಷ್ಟ; ನೋಟಿಸ್ ನೀಡಿ 5 ಕೋಟಿ ಕೇಳಿದ ಇಳಯರಾಜ
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅಜಿತ್ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಈ ಚಿತ್ರತಂಡಕ್ಕೆ ನೋಟಿಸ್ ಕಳುಹಿಸಿದ್ದು ಮಾತ್ರವಲ್ಲ, 5 ಕೋಟಿ ಪರಿಹಾರ ಕೇಳಿದ್ದಾರೆ. ಕಾರಣವೇನು ನೋಡಿ.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಚಲನಚಿತ್ರಗಳಲ್ಲಿ ಬಳಸುವುದನ್ನು ಸಹಿಸುವುದಿಲ್ಲ. ಯಾವುದೇ ಚಿತ್ರದಲ್ಲಿ ಅವರ ಹಾಡುಗಳನ್ನು ಅನುಮತಿಯಿಲ್ಲದೇ ಬಳಸಿದರೆ ನೋಟಿಸ್ ನೀಡುತ್ತಾರೆ. ಕಳೆದ ವರ್ಷ, ಮಲಯಾಳಂ ಚಿತ್ರ ಮಂಜುಮ್ಮಲ್ ಬಾಯ್ಸ್ ನಿರ್ಮಾಪಕರಿಗೆ ನೋಟಿಸ್ ಕಳುಹಿಸಲಾಗಿತ್ತು. ಈ ವಿವಾದ ಹಲವು ದಿನಗಳ ಕಾಲ ನಡೆಯಿತು. ಅಲ್ಲದೇ ಚಿತ್ರತಂಡ ದುಬಾರಿ ದಂಡ ತೆರಬೇಕಾಗಿತ್ತು. ಈಗ ತಮಿಳಿನ ಅಜಿತ್ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಚಿತ್ರಕ್ಕೂ ಇಂಥದ್ದೇ ಸಂಕಷ್ಟ ಎದುರಾಗಿದೆ. ಈ ಚಿತ್ರಕ್ಕೂ ನೋಟಿಸ್ ನೀಡಿದ್ದಾರೆ ಇಳಯರಾಜ.
ಮೂರು ಹಾಡುಗಳ ಬಳಕೆ
ಇಳಯರಾಜ ಅವರು ತಾವು ಸಂಯೋಜಿಸಿದ ಮೂರು ಹಳೆಯ ಹಾಡುಗಳನ್ನು ಬಳಸಿಕೊಂಡಿದ್ದಕ್ಕಾಗಿ ‘ಗುಡ್ ಬ್ಯಾಡ್ ಅಗ್ಲಿ‘ ಚಿತ್ರದ ನಿರ್ಮಾಪಕರಿಗೆ ನೋಟಿಸ್ ಕಳುಹಿಸಿದ್ದಾರೆ. ನಟ್ಟುಪುರ ಪಟ್ಟು ಚಿತ್ರದ ‘ಒತ್ತ ರುಬೈಯುಂ ತಾರೆ’, ವಿಕ್ರಮ್‌ನ ‘ಇನ್ ಜೋಡಿ ಮಂಜಲ್ ಕುರಿವಿ’, ಸಕಲ ಕಲಾ ವಲ್ಲವನ್ ಚಿತ್ರದ ‘ಇಳಮೈ ಇದೋ ಇದೋ’ ಹಾಡುಗಳನ್ನು ತಮ್ಮ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಇಳಯರಾಜ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈ ಮೂರು ಹಾಡುಗಳು ಸ್ವಲ್ಪ ಸಮಯದವರೆಗೆ ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿವೆ.
5 ಕೋಟಿ ರೂ ಪರಿಹಾರ, ಕ್ಷಮೆಯಾಚನೆಗೆ ಆಗ್ರಹ
ಗುಡ್ ಬ್ಯಾಡ್ ಅಗ್ಲಿ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅವರಿಗೆ ತಮ್ಮ ಅನುಮತಿಯಿಲ್ಲದೇ ತಾವು ಸಂಯೋಜಿಸಿದ ಹಾಡುಗಳನ್ನು ಬಳಸಿಕೊಂಡಿದ್ದಕ್ಕಾಗಿ 5 ಕೋಟಿ ರೂಪಾಯಿ ಕೇಳಿದ್ದಾರೆ ಇಳೆಯರಾಜ. ಅವರು ನಿರ್ಮಾಪಕರಿಂದ ಲಿಖಿತ ಕ್ಷಮೆಯಾಚನೆಯನ್ನು ಬಯಸುವುದಾಗಿಯೂ ಹೇಳಿದ್ದಾರೆ. ಹಾಡುಗಳನ್ನು ತಕ್ಷಣ ಸಿನಿಮಾದಿಂದ ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಸೂಚನೆಗಳಿಗೆ ಮೈತ್ರಿ ಮೂವಿ ಮೇಕರ್ಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ಕಲೆಕ್ಷನ್ ಮಾಡಿದ ಗುಡ್ ಬ್ಯಾಡ್ ಅಗ್ಲಿ
ಗುಡ್ ಬ್ಯಾಡ್ ಅಗ್ಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ತಮಿಳಿನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ಗಳಿಕೆ ಮಾಡಿ ಮುನ್ನುಗುತ್ತಿದೆ. ಈ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನವಿದೆ. ಮಿಶ್ರ ವಿಮರ್ಶೆಗಳ ಹೊರತಾಗಿಯೂ, ಚಿತ್ರ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇದರಲ್ಲಿ ಅಜಿತ್ ಕುಮಾರ್ ಹಾಗೂ ತ್ರಿಶಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಜಿ.ವಿ.ಪ್ರಕಾಶ್ ಕುಮಾರ್ ‘ಗುಡ್ ಬ್ಯಾಡ್ ಅಗ್ಲಿ‘ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅರ್ಜುನ್ ದಾಸ್, ಪ್ರಭು, ಪ್ರಸನ್ನ, ಪ್ರಿಯಾ ಪ್ರಕಾಶ್ ವಾರಿಯರ್, ಸುನಿಲ್ ಮತ್ತು ರಾಹುಲ್ ದೇವ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ರವಿಶಂಕರ್ ಮತ್ತು ನವೀನ್ ಯೆರ್ನೇನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಮೇಲೆ ಸುಮಾರು 200 ಕೋಟಿಯಷ್ಟು ಬಂಡವಾಳ ಹಾಕಲಾಗಿದೆ.

ವಿಭಾಗ