Good Bad Ugly Review: ನಾಯಕನ ವೈಭವ, ಕಥೆ ಪೇಲವ; ಅಜಿತ್‌ ಕುಮಾರ್‌, ತ್ರಿಶಾ ನಟನೆಯ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Good Bad Ugly Review: ನಾಯಕನ ವೈಭವ, ಕಥೆ ಪೇಲವ; ಅಜಿತ್‌ ಕುಮಾರ್‌, ತ್ರಿಶಾ ನಟನೆಯ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ವಿಮರ್ಶೆ

Good Bad Ugly Review: ನಾಯಕನ ವೈಭವ, ಕಥೆ ಪೇಲವ; ಅಜಿತ್‌ ಕುಮಾರ್‌, ತ್ರಿಶಾ ನಟನೆಯ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ವಿಮರ್ಶೆ

Good Bad Ugly movie review: ಸ್ಟೈಲಿಶ್ ಗ್ಯಾಂಗ್‌ಸ್ಟರ್ ಕಥೆಯಲ್ಲಿ ಆಕ್ಷನ್ ಮತ್ತು ನಾಸ್ಟಾಲ್ಜಿಯಾ ಸಮಿಶ್ರಣದೊಂದಿಗೆ ಅಜಿತ್ ಕುಮಾರ್ ನಟಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ನ ಲತಾ ಶ್ರೀನಿವಾಸನ್‌ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾದ ವಿಮರ್ಶೆ ಮಾಡಿದ್ದಾರೆ.

Good Bad Ugly Review: ನಾಯಕನ ವೈಭವ, ಕಥೆ ಪೇಲವ; ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ವಿಮರ್ಶೆ
Good Bad Ugly Review: ನಾಯಕನ ವೈಭವ, ಕಥೆ ಪೇಲವ; ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ವಿಮರ್ಶೆ

Good Bad Ugly movie review: ಗುಡ್ ಬ್ಯಾಡ್ ಅಗ್ಲಿ ತಾನು ಯಾವ ಗುಂಪಿನ ಸಿನಿಮಾ ಎಂದು ಮರೆಮಾಚಲು ‌ಯತ್ನಿಸಿಲ್ಲ. ಇದು ಅಬ್ಬರದ, ಲವಲವಿಕೆಯ, ನಾಯಕನ ವಿಜ್ರಂಭನೆಯ ಸಿನಿಮಾ ಎಂದು ನಿರ್ಲಜ್ಜವಾಗಿ, ಘಂಟಾಘೋಷವಾಗಿ ಸಿನಿಮಾದ ಉದ್ದಕ್ಕೂ ತೋರಿಸಿಕೊಟ್ಟಿದೆ. ಆದರೆ, ಗಟ್ಟಿ ಕಥೆಯಿಲ್ಲದೆ, ಅಭಿಮಾನಿಗಳನ್ನು ಮೆಚ್ಚಿಸಲು ಮಾಡಿರುವ ಸಿನಿಮಾವಾಗಿದೆ. ತೆಳುವಾದ ಕಥೆಯನ್ನು ವಿಸ್ತರಿಸಿ ಹೇಳಿದಂತೆ ಇದೆ.

ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಕಥೆಯೇನು?

ಅವನು ಒಬ್ಬ ಭಯಾನಕ ಗ್ಯಾಂಗ್‌ಸ್ಟಾರ್‌. ಹೆಸರು ರೆಡ್ ಡ್ರಾಗನ್. ಅವನ ಹೆಂಡತಿ ರಮ್ಯಾ (ತ್ರಿಶಾ ಕೃಷ್ಣನ್) ಮತ್ತು ಮಗ ವಿಹಾನ್‌ಗಾಗಿ ಈತ ಒಳ್ಳೆಯವನಾಗಲು ಮುಂದಾಗುತ್ತಾನೆ. ರೆಡ್ ಡ್ರಾಗನ್ - ಅಕಾ ಎಕೆ (ಅಜಿತ್ ಕುಮಾರ್) - ಮುಂಬೈ ಪೊಲೀಸರಿಗೆ ಶರಣಾಗುತ್ತಾನೆ. ರಮ್ಯಾ ಮತ್ತು ವಿಹಾನ್ ಹೊಸ ಜೀವನ ಆರಂಭಿಸಲು ಸ್ಪೇನ್‌ಗೆ ತೆರಳುತ್ತಾರೆ. ವಿಹಾನ್‌ಗೆ ತನ್ನ ತಂದೆ ಜೈಲಿನಲ್ಲಿಲ್ಲ, ವ್ಯವಹಾರದ ನಿಮಿತ್ತ ಹೊರಗಿದ್ದಾರೆ ಎಂದು ಹೇಳಿರುತ್ತಾರೆ. ವಾರಕ್ಕೊಮ್ಮೆ ಅಪ್ಪ ಕಾಲ್‌ ಮಾಡುತ್ತಾನೆ. ಹೀಗಾಗಿ, ಮಗ ನಂಬುತ್ತಾನೆ. ವಿಹಾನ್‌ನ 18ನೇ ಹುಟ್ಟುಹಬ್ಬದ ಸಮಯಕ್ಕೆ ಎಕೆ ಜೈಲಿನಿಂದ ಬಿಡುಗಡೆಯಾಗುತ್ತಾನೆ. ಆದರೆ ಎಕೆ ಮತ್ತು ರಮ್ಯಾ ಮುಂಬೈ ತೊರೆಯಲು ಸಿದ್ಧರಾಗುತ್ತಾರೆ. ಸ್ಥಳೀಯ ದರೋಡೆಕೋರರು ದಾಳಿ ನಡೆಸುತ್ತಾರೆ. ಕೋಪಗೊಂಡ ರಮ್ಯಾ ಸ್ಪೇನ್‌ಗೆ ತಲುಪುವ ಮುನ್ನ ಆ ದರೋಡೆಕೋರರನ್ನು ಮಟ್ಟಹಾಕಲು ಎಕೆಗೆ ಒತ್ತಾಯಿಸುತ್ತಾಳೆ. ನಂತರ ಸಿನಿಮಾದಲ್ಲಿ ಆಘಾತಕಾರಿ ತಿರುವು ಎದುರಾಗುತ್ತದೆ. ವಿಹಾನ್‌ನನ್ನು ಕಿಡ್ನ್ಯಾಪ್‌ ಮಾಡಲಾಗಿದೆ. ಅವನನ್ನು ಕಿಡ್ನ್ಯಾಪ್‌ ಮಾಡಿದ್ದು ಯಾರು? ಆತನನ್ನು ಕಾಪಾಡಲು ಏಕೆ ಏನು ಮಾಡುತ್ತಾನೆ ಎಂದು ತಿಳಿಯಲು ಸಿನಿಮಾ ನೋಡಬಹುದು.

ಅಭಿಮಾನಿಗಳನ್ನು ರಂಜಿಸಲು ಮಾಸ್‌ ಅವತಾರದಲ್ಲಿ ಬಂದ ಅಜಿತ್‌

ಅಜಿತ್ ಕುಮಾರ್ ತಮ್ಮ ಅಭಿಮಾನಿಗಳು ಬಯಸುತ್ತಿದ್ದ ಮಾಸ್, ಕಮರ್ಷಿಯಲ್ ಎಂಟರ್‌ಟೈನರ್‌ ಅವತಾರವನ್ನು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ನೀಡಿದ್ದಾರೆ. ನಿರ್ದೇಶಕ ಅಧಿಕ್ ರವಿಚಂದ್ರನ್ ತಮಿಳು ಚಿತ್ರರಂಗಕ್ಕೆ ಪರಿಚಿತವಲ್ಲದ ಕ್ಲಾಸಿಕ್ ಗ್ಯಾಂಗ್‌ಸ್ಟರ್-ಗಾನ್-ಕ್ಲೀನ್ ಟ್ರೋಪ್‌ನಲ್ಲಿ ಬೇರೂರಿರುವ ಕಥೆಯನ್ನು ಹೆಣೆದಿದ್ದಾರೆ. ಇದೇ ಸಮಯದಲ್ಲಿ ಅಜಿತ್‌ ಕುಮಾರ್‌ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ.

ಚಿತರದ ಮೊದಲಾರ್ಧದಲ್ಲಿ ಸಾಕಷ್ಟು ಅಜಿತ್‌ಗಾಗಿ ಸಾಕಷ್ಟು ಉತ್ಕೃಷ್ಟ ಕ್ಷಣಗಳನ್ನು ತುಂಬಲಾಗಿದೆ. ಹಲವು ಹೊಡೆದಟ, ಹಾಡುಗಳು ತುಂಬಿವೆ. ಸೆಕೆಂಡ್‌ ಹಾಫ್‌ನಲ್ಲಿ ಫ್ಲ್ಯಾಶ್‌ಬ್ಯಾಕ್‌ಗಳು, ಅಚ್ಚರಿಯ ಅತಿಥಿ ಪಾತ್ರಗಳು ಮತ್ತು ಅತ್ಯಧಿಕ ಹೊಡೆದಾಟದ ದೃಶ್ಯಗಳು ಇವೆ. ಇಂಟರ್‌ವಲ್‌ ತನಕ ಸಿನಿಮಾ ವೇಗದಿಂದ ಸಾಗಿದರೆ, ಇಂಟರ್‌ವಲ್‌ ಬಳಿಕ ಅನಾವಶ್ಯಕವಾಗಿ ಎಳೆದಂತೆ ಭಾಸವಾಗುತ್ತದೆ. ಜಮ್ಮಿ ಮತ್ತು ಜಕಾಬಾ ನಡುವಿನ ಸಂಭಾಷಣೆ ಸುದೀರ್ಘವಾಗಿದೆ. ಇಂತಹ ಹಲವು ದೃಶ್ಯಗಳನ್ನ ಟ್ರಿಮ್‌ ಮಾಡಬಹುದಿತ್ತು.

ಅಜಿತ್‌ ಒನ್‌ಮ್ಯಾನ್‌ ಶೋ

ಚಿತ್ರವನ್ನು ಸಂಪೂರ್ಣವಾಗಿ ಅಜಿತ್‌ ಕುಮಾರ್‌ ತನ್ನ ವಿಶಾಲ ಭುಜಗಳ ಮೂಲಕ ಹೊತ್ತುಕೊಂಡಿದ್ದಾರೆ. ಪರದೆಯ ಮೇಲೆ ಆಕರ್ಷಕವಾಗಿ ಕಾಣಿಸಿದ್ದಾರೆ. ಅಭಿಮಾನಿಗಳಿಂದ ಸಿಳ್ಳೆ ಗಿಟ್ಟಿಸಿಕೊಳ್ಳಲು ಸಾಕಷ್ಟು ದೃಶ್ಯಗಳನ್ನು ನೀಡಲಾಗಿದೆ. ಆದರೆ, ಈ ಚಿತ್ರದ ನ್ಯೂನ್ಯತೆ ಖಳನಾಯಕರ ದಂಡು. ಅರ್ಜುನ್ ದಾಸ್, ಜಾಕಿ ಶ್ರಾಫ್, ರಾಹುಲ್ ದೇವ್, ರಘುರಾಮ್, ಟಿನ್ನು ಆನಂದ್, ಶೈನ್ ಟಾಮ್ ಚಾಕೊ ಮತ್ತು ಪ್ರದೀಪ್ ಕಬ್ರಾ ಮುಂತಾದವರು ಖಳನಾಯಕರಾಗಿ‌ ಕೊಂಚ ಹೊತ್ತು ಮಾತ್ರ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ, ಈ ಖಳನಾಯಕರು ಪ್ರೇಕ್ಷಕರ ಮನದಲ್ಲಿ ಆಳವಾದ ಪ್ರಭಾವ ಬೀರುವಲ್ಲಿ ಸೋಲುತ್ತಾರೆ. ರಮ್ಯಾ ಪಾತ್ರದಲ್ಲಿ ತ್ರಿಶಾ ಸಹಜವಾಗಿ ನಟಿಸಿದ್ದಾರೆ. ಆದರೆ, ಅವರಿಗೆ ನೀಡಲಾದ ಕಥೆ ಮುಂದೆನಾಗಬಹುದು ಎಂದು ಊಹಿಸುವಂತೆ ಇದೆ. ಸುನಿಲ್, ಪ್ರಸನ್ನ, ಸಿಮ್ರಾನ್, ಪ್ರಭು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ ಮತ್ತು ಪ್ರಿಯಾ ವಾರಿಯರ್ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿದ್ದಾರೆ.

ಈ ಸಿನಿಮಾದ ಪ್ರಮುಖ ಸೋಲು ತೆಳುವಾದ ಕಥೆ. ಇದು ಭಾವನಾತ್ಮಕವಾಗಿ ಗಟ್ಟಿಯಾದ ಕಥೆಯಲ್ಲ. ಚಿತ್ರದ ನಿರೂಪಣೆಯೂ ಅತ್ಯುತ್ತಮವಾಗಿಲ್ಲ. ಸಂಭಾಷಣೆಗಳು ಹೇರಳವಾಗಿವೆ. ಚಿತ್ರವು ನಾಸ್ಟಾಲ್ಜಿಯಾವನ್ನು ಹೆಚ್ಚು ಅವಲಂಬಿಸಿದೆ. ಅಜಿತ್‌ ಅವರ ಹಳೆಯ ಸಿನಿಮಾಗಳ ಛಾಯೆಯಿದೆ. ಜತೆಗೆ ಇತರೆ ಸಿನಿಮಾಗಳ ಜನಪ್ರಿಯ ಸಾಲುಗಳನ್ನೂ ಈ ಸಿನಿಮಾದಲ್ಲಿ ಉಲ್ಲೇಖಿಸಲಾಗಿದೆ. ಉದಾಹರಣೆಗೆ ಯಶ್‌ ನಟನೆಯ ಕನ್ನಡ ಸಿನಿಮಾ ಕೆಜಿಎಫ್‌ನ ಜನಪ್ರಿಯ ಡೈಲಾಗ್‌ "ವಯೊಲೆನ್ಸ್‌, ವಯೋಲೆನ್ಸ್‌, ವಯೋಲೆನ್ಸ್‌... ಐ ಲವ್‌ ವಯೋಲೆನ್ಸ್‌" ಕೂಡ ಈ ಚಿತ್ರದಲ್ಲಿದೆ. ಇನ್ನೊಂದು ದೃಶ್ಯದಲ್ಲಿ ವಿಜಯ್‌ ಅವರ "ಐ ಆಮ್‌ ವೇಟಿಂಗ್‌" ಎಂಬ ಡೈಲಾಗ್‌ ಅನ್ನೂ ಹೇಳುತ್ತಾರೆ.

ಜಿವಿ ಪ್ರಕಾಶ್ ಕುಮಾರ್ ಅವರ ಹಿನ್ನೆಲೆ ಸಂಗೀತವು ಸಿನಿಮಾದ ದೃಶ್ಯಗಳಿಗೆ ನ್ಯಾಯ ಒದಗಿಸಿದೆ. ಹಲವಾರು ಹಾಡುಗಳು ಈಗಾಗಲೇ ಜನಪ್ರಿಯತೆ ಪಡೆದಿವೆ. ಅಭಿನಂದನ್ ರಾಮಾನುಜಂ ಅವರ ಛಾಯಾಗ್ರಹಣ ಪ್ರಭಾವಶಾಲಿಯಾಗಿದೆ. ಆದರೂ ವಿಜಯ್ ವೇಲುಕುಟ್ಟಿ ಎಡಿಟಿಂಗ್‌ನಲ್ಲಿ ಇನ್ನಷ್ಟು ಕುಶಲತೆ ತೋರಬೇಕಿತ್ತು.

ಒಟ್ಟಾರೆ, ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಅಜಿತ್ ಕುಮಾರ್‌ ಅವರ ಮಾಸ್‌ ಫ್ಯಾನ್ಸ್‌ಗೆ ಮಾಡಿರುವ ಸಿನಿಮಾ ಇದೆಂದು ಹೇಳಬಹುದು. ತಮ್ಮ ವಿಂಟೇಜ್ ನಾಯಕನನ್ನು ದೊಡ್ಡ ಪರದೆಯ ಮೇಲೆ ಮತ್ತೆ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಮಾತ್ರ ಇದು ಖುಷಿ ನೀಡಬಹುದು. ಉಳಿದ ಎಲ್ಲರಿಗೂ ಇದು ನಿರಾಶೆ ತರಬಹುದು.

ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ವಿಮರ್ಶೆ

ತಾರಾಗಣ: ಅಜಿತ್‌ ಕುಮಾರ್‌, ತ್ರಿಶಾ ಕೃಷ್ಣನ್‌

ನಿರ್ದೇಶನ: ಅಧಿಕ್‌ ರವಿಚಂದ್ರನ್‌

ಸ್ಟಾರ್‌ರೇಟಿಂಗ್‌: ★★★ (ಐದರಲ್ಲಿ)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner