ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್ ಪಟ್ಟ ಪಡೆದ ತಮಿಳಿನ ʻಗುಡ್ ಬ್ಯಾಡ್ ಅಗ್ಲಿʼ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ
ನಟ ತಲಾ ಅಜಿತ್ ಕುಮಾರ್ ನಟನೆಯ ʻಗುಡ್ ಬ್ಯಾಡ್ ಅಗ್ಲಿʼ ಚಿತ್ರ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಇದೀಗ ಇದೇ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.

ಕಾಲಿವುಡ್ ಸ್ಟಾರ್ ಹೀರೋ ತಲಾ ಅಜಿತ್ ಕುಮಾರ್ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಒಟಿಟಿ ಕಡೆ ಮುಖ ಮಾಡುತ್ತಿವೆ. ಫೆಬ್ರವರಿಯಲ್ಲಿ ʻವಿದಾಮುಯರ್ಚಿʼ ಚಿತ್ರದ ಮೂಲಕ ಆಗಮಿಸಿದ್ದ ಅಜಿತ್, ಕಳೆದ ತಿಂಗಳಷ್ಟೇ ʻಗುಡ್ ಬ್ಯಾಡ್ ಅಗ್ಲಿʼ ಚಿತ್ರದೊಂದಿಗೆ ಮತ್ತೆ ಚಿತ್ರಮಂದಿರಗಳಿಗೆ ಬಂದಿದ್ದರು. ಈಗ ಇದೇ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿದೆ.
ಏಪ್ರಿಲ್ 10ರಂದು ತೆರೆಕಂಡಿದ್ದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದರೆ, ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಸುನಿಲ್, ರಾಹುಲ್ ದೇವ್, ಯೋಗಿ ಬಾಬು, ಪ್ರಿಯಾ ಪ್ರಕಾಶ್ ವಾರಿಯರ್, ಟಾಮ್ ಚಾಕೊ ಸೇರಿ ಇನ್ನೂ ಹಲವರು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿದ್ದರು.
ʻಗುಡ್ ಬ್ಯಾಡ್ ಅಗ್ಲಿʼ ಚಿತ್ರವನ್ನು ಟಾಲಿವುಡ್‌ನ ಅತಿದೊಡ್ಡ ನಿರ್ಮಾಣ ಕಂಪನಿ ಮೈತ್ರಿ ಮೂವಿ ಮೇಕರ್ಸ್ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಕಾಲಿವುಡ್ ನಟ ಅಜಿತ್ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದು ಕೊಂಚ ದೊಡ್ಡ ಬಜೆಟ್‌ನ ಸಿನಿಮಾ ಎಂದೇ ಹೇಳಲಾಗಿತ್ತು. ಕಾಲಿವುಡ್ ಮೂಲಗಳು ಹೇಳುವಂತೆ ಗುಡ್ ಬ್ಯಾಡ್ ಅಗ್ಲಿ ಚಿತ್ರ ಬಿಡುಗಡೆಗೂ ಮುನ್ನವೇ 100 ಕೋಟಿ ರೂಪಾಯಿ ಬಿಜಿನೆಸ್ ಮಾಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿಯೂ ಒಳ್ಳೆಯ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ವಿಶ್ವದಾದ್ಯಂತ ಒಟ್ಟು 200 ಪ್ಲಸ್ ಕೋಟಿ ಬಾಚಿಕೊಂಡಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ತಮಿಳುನಾಡಿನಲ್ಲಿ 2400 ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ರೋಮಿಯೋ ಪಿಕ್ಚರ್ಸ್ ತಮಿಳುನಾಡಿನ ವಿತರಣೆಯ ಹಕ್ಕುಗಳನ್ನು ಪಡೆದರೆ, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆಯ ಹಕ್ಕುಗಳನ್ನು ಪಡೆದಿತ್ತು. ಶ್ರೀಗೋಕುಲಂ ಮೂವೀಸ್ ಕೇರಳದ ವಿತರಣೆ ಹಕ್ಕು ಖರೀದಿಸಿತ್ತು. ಮೊದಲ ದಿನವೇ 40 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಭಾರತದಲ್ಲಿ 23 ದಿನಗಳಲ್ಲಿ 179.1 ಕೋಟಿ ರೂ.ಗಳ ಗಳಿಕೆ ಕಂಡಿದೆ. ಇದರಲ್ಲಿ ಕರ್ನಾಟಕದಲ್ಲಿ 14.3 ಕೋಟಿ ರೂ. ತೆಲುಗು ರಾಜ್ಯಗಳಲ್ಲಿ 6.38 ಕೋಟಿ ರೂ. ತಮಿಳುನಾಡಿನಲ್ಲಿ 151.16 ಕೋಟಿ ರೂ., ಕೇರಳದಲ್ಲಿ 5.13 ಕೋಟಿ ಸೇರಿದೆ. ವಿದೇಶಗಳಲ್ಲಿ 66 ಕೋಟಿ ಬಾಚಿಕೊಂಡಿದೆ.
ಗುಡ್ ಬ್ಯಾಡ್ ಅಗ್ಲಿ ಯಾವ ಒಟಿಟಿಯಲ್ಲಿ?
ಗುಡ್ ಬ್ಯಾಡ್ ಅಗ್ಲಿ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ಸಂಸ್ಥೆ ಪಡೆದುಕೊಂಡಿದೆ. ಕೆಲ ಮೂಲಗಳ ಪ್ರಕಾರ 95 ಕೋಟಿಗೆ ಖರೀದಿಸಿದೆ ಎಂದು ಹೇಳಲಾಗಿದೆ. ಇದೀಗ ಇದೇ ಸಿನಿಮಾದ ಅಧಿಕೃತ ಒಟಿಟಿ ದಿನವನ್ನು ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ. ಮೇ 8ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಮೂಲ ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಈ ಸಿನಿಮಾ ಒಟಿಟಿಯಲ್ಲಿ ಅದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.