ಪ್ರಭೆ ಕಳೆದುಕೊಂಡು ʻಕಂದುʼ ಬಣ್ಣಕ್ಕೆ ತಿರುಗಿದ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆ; ಮುರಳೀಧರ್ ಖಜಾನೆ ಬರಹ
ಒಂದು ಕಾಲದಲ್ಲಿ ದಕ್ಷಿಣ ಏಷಿಯಾದ ಅತಿ ಪುರಾತನವಾದ Film Institute ಎನ್ನಿಸಿಕೊಂಡಿದ್ದ GFTI ಇತ್ತೀಚಿನ ದಿನಗಳಲ್ಲಿ ತನ್ನ ಬಣ್ಣ ಕಳೆದುಕೊಂಡು ʼಸೇಪಿಯಾʼ (ಕಂದು) ಬಣ್ಣಕ್ಕೆ ತಿರುಗಿದೆ. ಇದಕ್ಕೆ ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳೇ ಕಾರಣವೆನ್ನದೆ ಬೇರೆ ದಾರಿ ಇಲ್ಲ. (ಮುರಳೀಧರ ಖಜಾನೆ ಬರಹ)

ಒಂದು ಕಾಲದಲ್ಲಿ ದಕ್ಷಿಣ ಏಷಿಯಾದ ಅತಿ ಪುರಾತನವಾದ Film Institute ಎನ್ನಿಸಿಕೊಂಡಿದ್ದ GFTI ಇತ್ತೀಚಿನ ದಿನಗಳಲ್ಲಿ ತನ್ನ ಬಣ್ಣ ಕಳೆದುಕೊಂಡು ʼಸೇಪಿಯಾʼ (ಕಂದು) ಬಣ್ಣಕ್ಕೆ ತಿರುಗಿದೆ. ಇದಕ್ಕೆ ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳೇ ಕಾರಣವೆನ್ನದೆ ಬೇರೆ ದಾರಿ ಇಲ್ಲ.
ಪುಣೆಯಲ್ಲಿರುವ The Film and Televsion Institute (FTII) ಹಾಗೂ ಕೋಲ್ಕತಾದ The Satyajit Ray Film Television Institute (SRFTI) ಎರಡೂ ಸಂಸ್ಥೆಗಳಿಗೆ ಇತ್ತೀಚೆಗೆ ವಿಶ್ವವಿದ್ಯಾಲಯವೆಂದು ಭಾವಿಸಲಾದ ಸಂಸ್ಥೆಯ ಸ್ಥಾನಮಾನ ದೊರಕಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಹೀಗೆಂದು ಪ್ರಕಟಣೆ ನೀಡಿದೆ.
ದೇಶದ ಈ ಎರಡು ಖ್ಯಾತ Film and Television ಸಂಸ್ಥೆಗಳಿಗೆ ಈ ಸ್ಥಾನಮಾನ ದೊರಕಿರುವುದರಿಂದ ಆಗುವ ಲಾಭವೇನು ಎಂದು ಯೋಚಿಸಿದರೆ; ಈ ಎರಡೂ ಸಂಸ್ಥೆಗಳಿಗೆ ಇನ್ನು ಮುಂದೆ ಡಾಕ್ಟೋರೆಲ್, ಸಂಶೋಧನೆ, ಹಾಗೂ ಹೊಸ ರೀತಿಯ ಚಲನಚಿತ್ರ ಮತ್ತು ದೂರದರ್ಶನ ಸಂಬಂಧಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ಹಮ್ಮಿಕೊಳ್ಳುವ ಅವಕಾಶ ಲಭ್ಯವಾಗುತ್ತದೆ.
ಭಾವಿಸಲಾದ ವಿವಿ ಸ್ಥಾನ
ಪುಣೆಯಲ್ಲಿರುವ The Film and Televsion Institute (FTII) ಹಾಗೂ ಕೋಲ್ಕತಾದ The Satyajit Ray Film Television Institute (SRFTI) ಎರಡೂ ಸಂಸ್ಥೆಗಳಿಗೆ ಈ ವಿಶ್ವವಿದ್ಯಾಲಯವೆಂದು ಭಾವಿಸಲಾದ ಸಂಸ್ಥೆಯ ಸ್ಥಾನಮಾನ ದೊರಕಿರುವುದು ವಿಶ್ವವಿದ್ಯಾಲಯ ಅನುದಾನ ಆಯೋಗ ತನ್ನ ಕಾಯ್ದೆಯಡಿಯಲ್ಲಿ ಅನುಮತಿ ನೀಡಿರುವ ಕಾರಣದಿಂದ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸೌಲಭ್ಯದಿಂದಾಗಿ ಈ ಎರಡೂ ಸಂಸ್ಥೆಗಳು, ದೇಶದ ಇತರ ಈ ಮಾದರಿಯ ಶಿಕ್ಷಣ ಸಂಸ್ಥೆಗಳೊಂದಿಗೆ ತನ್ನ Ranking ನಲ್ಲಿ ಸ್ಪರ್ಧಿಸಬಹುದು.
ಈ ಸ್ಪರ್ಧೆಗೆ National Institutional Ranking Frame Work ನ ಅಡಿಯಲ್ಲಿ Academic Bank of Credits (ABC) ಅವಕಾಶ ಕಲ್ಪಿಸುವುದರಿಂದಾಗಿ ಆ ಸಂಸ್ಥೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ದೊರೆಯುತ್ತದೆ. ಇತ್ತೀಚೆಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಅಡಿಯಲ್ಲಿ ಈ ಎರಡೂ ಸಂಸ್ಥೆಗಳಿಗೆ ಈ ಸೌಲಭ್ಯ ದೊರೆತಿರುವುದರಿಂದ ಈ ಚಲನಚಿತ್ರ ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಯಾರ ಮಧ್ಯಪ್ರವೇಶವೂ ಇಲ್ಲದೆ, ಯಾವುದೇ ಅಡೆತಡೆ ಇಲ್ಲದೆ ತನ್ನದೇ ಆದ ತಜ್ಞತೆಯನ್ನು ಸಾಧಿಸಬಹುದು. ಆದರೆ ಈ ಎರಡೂ ಸಂಸ್ಥೆಗಳು ಈ ಭಾವಿಸಲಾದ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ಉಳಿಸಿಕೊಳ್ಳಲು ಕೆಲವು ಷರತ್ತುಗಳಿರುತ್ತವೆ. ಅವುಗಳನ್ನು ಈ ಎರಡೂ ಪ್ರತಿಷ್ಠಿತ ಸಂಸ್ಥೆಗಳು ಮುಂದಿನ ಮೂರು ವರ್ಷಗಳಲ್ಲಿ ಪೂರೈಸಬೇಕಾಗುತ್ತದೆ. ಈ ಎರಡೂ ಸಂಸ್ಥೆಗಳೂ ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯ ಅನುದಾನ ಆಯೊಗದ ಷರತ್ತನ್ನು ಒಪ್ಪಿಕೊಂಡು ಸಮ್ಮತಿ ಒಪ್ಪಂದಕ್ಕೆ ಸಹಿ ಮಾಡಿವೆ.
ಈ ವಿಷಯವನ್ನು ಇಲ್ಲಿ ಮತ್ತು ಈಗ ಏಕೆ ಪ್ರಸ್ತಾಪಿಸಲಾಗುತ್ತಿದೆ ಎಂಬ ಪ್ರಶ್ನೆ ಏಳುವುದು ಸಹಜ. ಇದಕ್ಕೆ ಉತ್ತರ ಕೂಡ ಸರಳ. ಕರ್ನಾಟಕದಲ್ಲಿ ಕೂಡ, ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (Government Film and Television Institute GFTI ) ಒಂದಿದೆ. ಈ ಸಂಸ್ಥೆ ಇರುವುದೇ ಬಹುಮಂದಿಗೆ ಗೊತ್ತಿಲ್ಲ. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆ ಗೊತ್ತಾಗುವಂಥ ಸಾಧನೆಯಾವುದನ್ನೂ ಮಾಡಿಲ್ಲ. ಹಾಗಾಗಿ ಹೀಗೊಂದು ಸಂಸ್ಥೆ ಇದೆ. ಅದು ಒಂದಿಷ್ಟು ವಿದ್ಯಾರ್ಥಿಗಳಿಗೆ ʼಚಲನಚಿತ್ರ-ದೂರದರ್ಶನʼ ಕುರಿತು ತಿಳುವಳಿಕೆ ಮತ್ತು ತರಬೇತಿ ನೀಡುತ್ತಿದೆ ಎಂದು ಹೇಳಬಹುದು.
ಪ್ರತಿಷ್ಠಿತ ಸರ್ಕಾರಿ ಫಿಲಂ ಸಂಸ್ಥೆಗಳು
ದೇಶದಲ್ಲಿ ಪುಣೆಯಲ್ಲಿರುವ The Film and Televsion Institute (FTII) ಹಾಗೂ ಕೋಲ್ಕತಾದ The Satyajit Ray Film Television Institute (SRFTI) ಎರಡೂ ಸಂಸ್ಥೆಗಳನ್ನು ಹೊರತು ಪಡಿಸಿದರೆ, ಅಸ್ಸಾಮಿನಲ್ಲಿ ಡಾ. ಭೂಪೇನ್ ಹಜಾರಿಕಾ ಪ್ರಾಂತೀಯ ಸರ್ಕಾರಿ ಚಲನ ಚಿತ್ರ ಮತ್ತು ದೂರದರ್ಶನ ಸಂಸ್ಥೆ (Dr Bhupen Hazarika Regional Government Film and Television Institute (DBHRGFTI) ಎಂಬ ಸಂಸ್ಥೆ ಇದೆ. ಇವುಗಳ ಜೊತೆಗೆ ಚೆನ್ನೈನಲ್ಲಿ ಎಂಜಿಆರ್ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆ (MGR Government Film and Television Training Institute) ಹಾಗೂ ರಾಜ್ಯ ಸರ್ಕಾರದ ಚಲನಚಿತ್ರ ಮತ್ತು ದೂರದರ್ಶನ ಮತ್ತು ಕೆ. ಆರ್ ನಾರಾಯಣನ್ ರಾಷ್ಟ್ರೀಯ ದೃಶ್ಯ ವಿಜ್ಞಾನ ಮತ್ತು ಕಲೆ ಸಂಸ್ಥೆಗಳಿವೆ. ಇವುಗಳೊಂದಿಗೆ ಕರ್ನಾಟಕದ GFTI ಕೂಡ ಇದೆ. ಉಳಿದೆಲ್ಲ ಸಂಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವಾಗ ನಮ್ಮ GFTI ಮಾತ್ರ ಇತ್ತೀಚಿನ ವರ್ಷಗಳಲ್ಲಿ ʻಅಲ್ಲೇ ಕುಂತವ್ರೆʼ ಎಂದು ಇದ್ದೂ ಇರದಂತಿದೆ.
ಭವ್ಯ ಇತಿಹಾಸ
“ಹಾಗೆಂದು GFTI ಒಂದು ಸಾಧಾರಣ ಸಂಸ್ಥೆ ಏನಲ್ಲ. ಇದಕ್ಕೊಂದು ಭವ್ಯ ಇತಿಹಾಸವೇ ಇದೆ” ಎನ್ನುತ್ತಾರೆ ಖ್ಯಾತ ಸಿನೆಮೆಟೋಗ್ರಾಫರ್ ಬಸವರಾಜ್. “ಒಂದು ಕಾಲದಲ್ಲಿ ದಕ್ಷಿಣ ಏಷಿಯಾದ ಅತಿ ಪುರಾತನವಾದ Film Institute ಎನ್ನಿಸಿಕೊಂಡಿದ್ದ GFTI ಇತ್ತೀಚಿನ ದಿನಗಳಲ್ಲಿ ತನ್ನ ಬಣ್ಣ ಕಳೆದುಕೊಂಡು ʼಸೇಪಿಯಾʼ (ಕಂದು) ಬಣ್ಣಕ್ಕೆ ತಿರುಗಿದೆ. ಇದಕ್ಕೆ ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳೇ ಕಾರಣ” ಎನ್ನುತ್ತಾರೆ ಬಸವರಾಜ್.
ಹೌದು. ಅವರ ಮಾತಿನಲ್ಲಿ ಗೂಢಾರ್ಥವೇನಿಲ್ಲ. ಕಪ್ಪು-ಬಿಳುಪು ಬಣ್ಣದಷ್ಟೇ ಅವರ ಮಾತು ಸ್ಪಷ್ಟವಾಗಿದೆ. ಈಗಿನ GFTI ಈ ಹಿಂದೆ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಎಂದು ಕರೆಸಿಕೊಳ್ಳುತ್ತಿತ್ತು. ಆಗಿನ ಮೈಸೂರು ಪ್ರಾಂತದ ದಿವಾನರಾಗಿದ್ದ, ವಿಶ್ವೇಶ್ವರಾಯ ಅವರ ಉದಾರ ಕೊಡುಗೆಯ ಕಾರಣ, ಈ ಸಂಸ್ಥೆ ತಲೆ ಎತ್ತಿ, ನಿಂತಿತ್ತು.
ದಕ್ಷಿಣ ಏಷಿಯಾದ ಪ್ರತಿಷ್ಠಿತ ಸಂಸ್ಥೆ
ಎಂಭತ್ತೆರಡು ವರ್ಷಗಳ ಹಿಂದೆ ಅಂದರೆ 1943ರಲ್ಲಿ ಆರಂಭವಾದ ಈ ಸಂಸ್ಥೆ, ಸಿನಿಮ್ಯಾಟೋಗ್ರಫಿ ಮತ್ತು ಸೌಂಡ್ ಎಂಜಿನಿಯರಿಂಗ್ ತರಬೇತಿಯಲ್ಲಿ ದಕ್ಷಿಣ ಏಷಿಯಾದಲ್ಲೇ ಅಗ್ರಸ್ಥಾನದಲ್ಲಿತ್ತು. ಸೆಪ್ಟೆಂಬರ್ 1996ರಲ್ಲಿ ಸಿನಿಮ್ಯಾಟೋಗ್ರಫಿ ಮತ್ತು ಸೌಂಡ್ ಎಂಜಿನಿಯರಿಂಗ್ ತರಬೇತಿಯನ್ನು ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ (ನಂತರ ಇದು ಸಿಲ್ವರ್ ಜುಬಿಲಿ ಪಾಲಿಟೆಕ್ನಿಕ್ –Silver Jubilee Polytechnique SJP ಎಂದು ಮರುನಾಮಕರಣಗೊಂಡಿತು) ಕರ್ನಾಟಕ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಎಂದು ಹೊಸರೂಪ ಪಡೆಯಿತು. ಇದಕ್ಕಾಗಿ ವಿಶ್ವ ಬ್ಯಾಂಕ್ ಯೋಜನೆಯಡಿಯಲ್ಲಿ ಇಂದಿನ ಹೇಸರಘಟ್ಟ ಪ್ರದೇಶದ ಇಪ್ಪತ್ತೈದು ಎಕರೆ ಹಸಿರಹೊನ್ನಿನ ನಡುವೆ ಕಲಾತ್ಮಕ ಕಟ್ಟಡವೂ ಸಿದ್ಧವಾಯಿತು.
ಬಡವರ ಬಾದಾಮಿ ಕಡಲೇಕಾಯಿ
SJP ಮತ್ತು GFTI ಒಂದಾಗಿ ಇದುವರೆಗೆ ದೇಶದ ಅಪೂರ್ವ ಪ್ರತಿಭೆಗಳನ್ನು ಸೃಷ್ಟಿ ಮಾಡಿರುವುದು ಇಂದು ಇತಿಹಾಸ. ಸಿನಿಮಾಟೋಗ್ರಫಿಗಾಗಿಯೇ ದೇಶದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ವಿ. ಕೆ. ಮೂರ್ತಿ, ದೇಶದ ಉತ್ತಮ ಚಿತ್ರ ನಿರ್ಮಾತೃಗಳಲ್ಲಿ ಒಬ್ಬರಾದ ಗೋವಿಂದ ನಿಹಲಾನಿ, ಖ್ಯಾತ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ, ಆರ್ ಎನ್. ಕೆ. ಪ್ರಸಾದ, ಎನ್. ವಿ. ಶ್ರೀನಿವಾಸ್, ಬಿ.ಎಸ್. ಬಸವರಾಜ್, ಎಸ್. ಕೃಷ್ಣ , ಸತ್ಯಾ ಹೆಗಡೆ, ಸಂತೋಷ ಕುಮಾರ್ ಪಾತಾಜೆ. ಆರ್. ಪ್ರಸಾದ. ಮುಂತಾದವರು ಇಲ್ಲಿ ಕಲಿತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರು. ಇಂದು ದಿನಕ್ಕೊಂದರಂತೆ ಬಾಗಿಲು ತೆರೆಯುತ್ತಾ, ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಚಲನಚಿತ್ರದ ವಿವಿಧ ಆಯಾಮಗಳ ತರಬೇತಿ ನೀಡುವ, ಬಹು ವೆಚ್ಚದ ಇನ್ ಸ್ಟಿಟ್ಯೂಟ್‌ಗಳಿಗೆ ಪ್ರವೇಶ ಪಡೆಯಲು ಅಸಾಧ್ಯವಾಗಿರುವ ಸಂದರ್ಭದಲ್ಲಿ GFTI ನಂಥ ಸಂಸ್ಥೆ ಬಡವರಾದರೂ, ಚಲನಚಿತ್ರ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಲೇ ಬೇಕು ಎಂದು ಪಣತೊಟ್ಟ ಪ್ರತಿಭಾವಂತರಿಗೆ ʼಬಾದಾಮಿʼ ಕಡಲೆಕಾಯಿಯಾಗಿ ನೆರವಿಗೆ ನಿಂತಿತ್ತು.
ಕಲಿಯುವುದಾದರೂ ಹೇಗೆ?
“ಆದರೆ ಇಂದು ಸರಿಯಾಗಿ ಚಿತ್ರ ನಿರ್ಮಾಣದ ವಿವಿಧ ಆಯಾಮಗಳನ್ನು ಕಲಿಸುವವರಿಲ್ಲದೆ, ಅನಾಥವಾಗಿರುವ GFTI ವಿದ್ಯಾರ್ಥಿಗಳಿಗೆ ಕಲಿಯಲು ಸರಿಯಾದ ಗುರುಗಳಿಲ್ಲ. ಕಲಿಯಲು ಅಗತ್ಯವಾದ ಸಾಧನಗಳಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಉತ್ತರಿಸಲು ಸರಿಯಾದ ಅಧಿಕಾರಿಗಳೇ ಇಲ್ಲ. ಎನ್ನುವಂಥ ಪರಿಸ್ಥಿತಿ ಇದೆ” ಎನ್ನುತ್ತಾರೆ ಬಸವರಾಜ್. “ಪರಿಸ್ಥಿತಿ ಹೀಗಿರುವಾಗ ಕನ್ನಡಕ್ಕೆ ಮತ್ತೊಬ್ಬ ಗಿರೀಶ್ ಕಾಸರವಳ್ಳಿಯನ್ನೋ, ಗೋವಿಂದ ನಿಹಲಾನಿಯನ್ನೋ, ವಿ.ಕೆ ಮೂರ್ತಿಯವರನ್ನು ಸೃಷ್ಟಿಸಲು ಸಾಧ್ಯವಾಗುವುದಾದರೂ ಹೇಗೆ? ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಕಂಪ್ಯೂಟರ್ ಆಧಾರಿತ ಎಡಿಟಿಂಗ್ ವ್ಯವಸ್ಥೆ ಇಲ್ಲ. ಸೌಂಡ್ ಮಿಕ್ಸಿಂಗ್ ಸ್ಟೂಡಿಯೋ ಇಲ್ಲ. ಇಲ್ಲಿ ಕಲಿಯುವುದಾದರೂ ಹೇಗೆ? ಎಂಬ ಪ್ರಶ್ನೆ ವಿದ್ಯಾರ್ಥಿಗಳದ್ದು.
ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ GFTI ಪ್ರವೇಶಕ್ಕೆ ಅರ್ಹತೆಯ ಮಾನದಂಡಗಳನ್ನು ಕಡಿತಗೊಳಿಸಿರುವುದರಿಂದ ಇಂದು ಸಂಸ್ಥೆ ತನ್ನ ಸಿನಿಮಾ ಲಕ್ಷಣಗಳನ್ನು ಮತ್ತು ಅಸ್ಮಿತೆಯನ್ನೇ ಕಳೆದುಕೊಂಡಿದೆ. ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಪಠ್ಯ ರೂಪಿಸುವ ಸಮಿತಿ ಮೂಲ ವಿಷಯಗಳಾದ ಸಿನಿಮಾ ಕಲಿಕೆ, ದೃಶ್ಯವಿನ್ಯಾಸ ತಿಳುವಳಿಕೆ ಶಬ್ದ ಗ್ರಹಣದಂಥ ವಿಷಯಗಳಿಗೆ ಮಾನ್ಯತೆ ನೀಡದೆ, ಎಂಜಿನೀಯರಿಂಗ್ ವಿಷಯಗಳನ್ನು ತುರುಕಿ, ವಿದ್ಯಾರ್ಥಿಗಳ ದಾರಿ ತಪ್ಪಿಸಿದ್ದಾರೆ. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಮಾಡಿದ ಈ ಫಜೀತಿಗಳಿಂದ ಮುನಿದೆದ್ದ ವಿದ್ಯಾರ್ಥಿಗಳ ಏಪ್ರಿಲ್ 2016ರಲ್ಲಿ ಪ್ರತಿಭಟನೆಗೆ ಇಳಿದರು. ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ಮಾದರಿಯಲ್ಲಿ ಪಠ್ಯವನ್ನು ರೂಪಿಸಬೇಕು. ತಜ್ಞರನ್ನ ಬೋಧನೆಗೆ ನೇಮಿಸಬೇಕು. ಜೊತೆಯಲ್ಲಿ ಕಲಿಕಾ ಉಪಕರಣಗಳನ್ನು ಒದಗಿಸಬೇಕೆಂದು ಬೇಡಿಕೆಗಳನ್ನು ಮಂಡಿಸಿ ಹೋರಾಟಕ್ಕೆ ಇಳಿದರು. ವಿದ್ಯಾರ್ಥಿಗಳು ನ್ಯಾಯಾಲಯದ ಕದ ತಟ್ಟಿದರು. ವಿದ್ಯಾರ್ಥಿಗಳ ಅರ್ಥಪೂರ್ಣವಾದ ಬೇಡಿಕೆಗಳನ್ನು ಈಡೇರಿಸುವಂತೆ ನ್ಯಾಯಾಲಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯಕ್ಕೆ ಸೂಚಿಸಿದರೂ, ಯಾವುದೇ ಪ್ರಯೋಜವಾಗಲಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ನೆರವಿಗೆ ಬಂದ ಗಿರೀಶ್ ಕಾಸರವಳ್ಳಿ, ಸಿನಿಮಾ ತಜ್ಞೆ ದೀಪಾ ಧನರಾಜ್, ಖ್ಯಾತ ಛಾಯಾಗ್ರಾಹಕ ಜಿ.ಎಸ್ ಭಾಸ್ಕರ್ ಮುಂತಾದವರು ವಿದ್ಯಾರ್ಥಿಗಳ ಪರವಾಗಿ ನಿಂತರು. ವಿದ್ಯಾರ್ಥಿಗಳಿಗೆ ತಾಂತ್ರಿಕ ಪಾಠಗಳನ್ನು ಹೇಳಿಕೊಟ್ಟರು. ಆದರೂ, ಸರ್ಕಾರವಾಗಲಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯಕ್ಕಾಗಲಿ ಅರಿವು ಮೂಡಲಿಲ್ಲ ಎಂದರೆ, ಆ ವ್ಯವಸ್ಥೆಗಳ ಚರ್ಮ ಎಷ್ಟು ದಪ್ಪವಿರಬೇಕೆಂದು ಯಾರಾದರೂ ಊಹಿಸಿಕೊಳ್ಳಬಹುದು.
ಗೊರ್ಕಲ್ಲಮೇಲೆ ನೂರ್ಕಾಲ ಮಳೆಗೆರೆದರೆ
ಕರ್ನಾಟಕ ಸರ್ಕಾರ ಚಿತ್ರಗಳಿಗೆ ಸಬ್ಸಿಡಿ ನೀಡುವುದು, ಪ್ರಶಸ್ತಿ ವಿಜೇತ ಚಿತ್ರಗಳಿಗೆ ಪ್ರಶಸ್ತಿಗಳನ್ನು ವಿತರಿಸುವುದನ್ನು ಹೊರತು ಪಡಿಸಿದರೆ, ಬೇರೆ ಯಾವುದರ ಬಗ್ಗೆಯೂ ತಲೆ ಕಡೆಸಿಕೊಂಡಂತಿಲ್ಲ. ಉತ್ತಮ ಚಲನಚಿತ್ರ ಸಂಸ್ಕೃತಿಗೆಂದೇ ರೂಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ರಾಜಕೀಯ ಗಂಜಿ ಕೇಂದ್ರವಾಗಿ, ವರ್ಷಕ್ಕೊಮ್ಮೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟಿಸುವುದನ್ನು ಹೊರತು ಪಡಿಸಿದರೆ, ಮತ್ತೇನನ್ನೂ ಮಾಡಿರುದರ ಕುರುಹಿಲ್ಲ. ಕನ್ನಡ ಚಿತ್ರರಂಗಕ್ಕೆ ತೊಂಭತ್ತು ವರ್ಷವಾಗಿರುವುದನ್ನೇ ಮರೆತಿರುವ ಸರ್ಕಾರ ಮತ್ತು ಅಕಾಡೆಮಿಯಿಂದ ಇನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ. ಕರ್ನಾಟಕದ್ದೆ ಆದ ಕನ್ನಡ ಚಿತ್ರ ಭಂಡಾರ, ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯದ ಸ್ಥಾಪನೆ ಕುರಿತು ವರದಿ ನೀಡುವಂತೆ ಈ ಹಿಂದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಮಿತಿಯೊಂದನ್ನು ರೂಪಿಸಿತ್ತು. ಆ ಸಮಿತಿ ಅಕಾಡೆಮಿಗೆ ತನ್ನ ವಿಸ್ತೃತ ವರದಿ ಸಲ್ಲಿಸಿ ಮೂರು ವರ್ಷವಾಗಿದ್ದರೂ, ಈಗಿನ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲ ಅವರಿಗೆ ಅದನ್ನು ಗಮನಿಸುವಷ್ಟು ಪುರಸೊತ್ತಿಲ್ಲ. ಆದರೆ, ಹಿಂದಿನ ಅಧ್ಯಕ್ಷರಲ್ಲಿ ಕೆಲವರಾದ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ನಾಗಾಭರಣ, ಈ ಕುರಿತು ಸಾಕಷ್ಟು ಪ್ರಯತ್ನ ನಡೆಸಿದ್ದರು. GFTI ಅನ್ನು ಅಕಾಡೆಮಿಗೆ ಬಿಟ್ಟುಕೊಟ್ಟರೆ, ಅದನ್ನು ಒಂದು ಮಾದರಿ ವಿಶ್ವವಿದ್ಯಾಲಯವಾಗಿ ರೂಪಿಸುವುದಾಗಿ ಹೇಳಿದ್ದರು. ಅದಕ್ಕೂ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಈ ಬಗ್ಗೆ ಪತ್ರಿಕೆಗಳು ಎಷ್ಟು ಬಾರಿ ಬರೆದರೂ, ಅದು ಗೋರ್ಕಲ್ಲಮೇಲೆ ನೂರ್ಕಾಲ ಮಳೆಗೆರೆದರೆ ಗೋರ್ಕಲ್ಲು ನಿರ್ಗೊಂಬುದೇ….ಎಂಬಂಥ ಸ್ಥಿತಿಯಲ್ಲಿ ಸರ್ಕಾರ, ಅಕಾಡೆಮಿಗಳಿವೆ.
ಕನ್ನಡ ಚಿತ್ರರಂಗ ತನ್ನ ತೊಂಭತ್ತರ ಹರೆಯದಲ್ಲಿರುವಾಗ, ಇತರ ಭಾಷಾ ಚಿತ್ರಗಳೊಂದಿಗೆ ಸೆಣಸಲಾರದೆ ಬಸವಳಿದಿದೆ. ಶೇ. ನಾಲ್ಕರಷ್ಟು ಚಿತ್ರಗಳು ಕೂಡ ಯಶಸ್ವಿಯಾಗುತ್ತಿಲ್ಲ. ಆದರೆ. ಸರ್ಕಾರ ಇದಕ್ಕೆ ಕಾರಣ ಹುಡುಕುವ ಬದಲು, ಕೆಲವರ ʼnut and boltś ಬಿಗಿಮಾಡಲು ಹೊರಟಂತಿದೆ. ಇಂಥ ಮಹನೀಯರು ಸರ್ಕಾರದಲ್ಲಿರುವಾಗ. ಅವರ ಬಾಲಂಗೋಚಿಯಂಥ ಕರ್ನಾಟಕ ಚಲನಚಿತ್ರ ಮಂಡಳಿ, ಕೇವಲ ಆಶ್ವಾಸನೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿದೆ.
ಉತ್ತಮ ಹೆಜ್ಜೆ?
ಸಂದರ್ಭ ಹೀಗಿರುವಾಗ ಎಲ್ಲರಿಗೂ ಪಾಠವಾಗುವಂಥ ರೀತಿಯಲ್ಲಿ, ಕೇಂದ್ರ ಸರ್ಕಾರ ಪುಣೆಯಲ್ಲಿರುವ The Film and Televsion Institute (FTII) ಹಾಗೂ ಕೋಲ್ಕತಾದ The Satyajit Ray Film Television Institute (SRFTI) ಎರಡೂ ಸಂಸ್ಥೆಗಳಿಗೆ ಇತ್ತೀಚೆಗೆ ವಿಶ್ವವಿದ್ಯಾಲಯವೆಂದು ಭಾವಿಸಲಾದ ಸಂಸ್ಥೆಯ ಸ್ಥಾನಮಾನ ನೀಡಿದೆ. ಈಗಾಗಲೇ, National Film Archives of India (NFAI) Film Division ̧ National Film Development Corporation ಹಾಗೂ, Children Film Society of India ವನ್ನು ಒಗ್ಗೂಡಿಸಿ, ಅವಾಂತರ ಸೃಷ್ಟಿಮಾಡಿರುವ ಕೇಂದ್ರ ಸರ್ಕಾರದ ಈ ಎರಡೂ ಸಂಸ್ಥೆಗಳಿಗೆ ಭಾವಿಸಲಾದ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಮಹಾರಾಷ್ಟ್ರದಲ್ಲಿರು ಬಿಜೆಪಿ ಸರ್ಕಾರಕ್ಕೆ ಸಹಾಯ ಮಾಡುವ ಮತ್ತು ಬರುವ ಚುನಾವಣೆಯಲ್ಲಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳಲ್ಲಿ ಇದೊಂದು ಹೆಜ್ಜೆ ಎಂದೇ ʼಭಾವಿಸಲಾದ ವಿಶ್ವವಿದ್ಯಾ್ಯ ಸ್ಥಾನಮಾನದ ಬೆಳವಣಿಗೆಯನ್ನು ನೋಡಲಾಗುತ್ತಿದೆ. ಆದರೆ, ಅದೇನೇ ಇರಲಿ, ಇದರಿಂದ ಸಿನಿಮಾ ಬೆಳವಣಿಗೆಗೆ ಅನುಕೂಲವಾಗುವ ಸಾಧ್ಯತೆಗಳೇ ಹೆಚ್ಚು.
ಕರ್ನಾಟಕ ಸರ್ಕಾರಕ್ಕೆ, ಕರ್ನಾಟಕ ಚಲನಚಿತ್ರ ಅಕಾಡೆಮಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಳಿಗೆ ಹಿಂದೂಸ್ತಾನ್ ಟೈಮ್ಸ್ʼ ನ ಕಳಕಳಿ ಅರ್ಥವಾಗುತ್ತದೆ ಎಂದುಕೊಳ್ಳಬಹುದೇನೋ!
ಬರಹ: ಮುರಳೀಧರ ಖಜಾನೆ, ಹಿರಿಯ ಪತ್ರಕರ್ತರು