Guruprasad Death: ಪತಿ ಗುರುಪ್ರಸಾದ್ ಸಾವಿನ ಬಗ್ಗೆ ಪತ್ನಿ ಸುಮಿತ್ರಾಗೆ ಇರುವ ಅನುಮಾನವೇನು, ದೂರಿನಲ್ಲಿ ಏನಿದೆ?
Guruprasad Death: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬೆನ್ನಲ್ಲೇ, ಎರಡನೇ ಪತ್ನಿ ಸುಮಿತ್ರಾ ಇದೀಗ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಆ ದೂರಿನಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇಲ್ಲಿದೆ ಆ ದೂರಿನ ವಿವರ.
Guruprasad Death: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬೆನ್ನಲ್ಲೇ ಅವರ ಬಗ್ಗೆ ಪಾಸಿಟಿವ್ ವಿಚಾರಕ್ಕಿಂತ ನೆಗೆಟಿವ್ ಮಾತುಗಳೇ ಚಾಲ್ತಿಯಲ್ಲಿವೆ. ಈ ನಡುವೆ ಇದೇ ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದ ಗುರುಪ್ರಸಾದ್, ಕಳೆದ ಕೆಲ ವರ್ಷಗಳ ಹಿಂದೆ ಕರೊನಾ ಸಂದರ್ಭದಲ್ಲಿ ಸರಳವಾಗಿಯೇ ಸುಮಿತ್ರಾ ಅವರನ್ನು ವರಿಸಿದ್ದರು. ಈ ಜೋಡಿಗೆ ಒಂದು ಒಬ್ಬ ಹೆಣ್ಣು ಮಗಳಿದ್ದಾಳೆ. ಈಗ ಇದೇ ಸುಮಿತ್ರಾ ತನ್ನ ಪತಿಯ ಈ ಆತ್ಮಹತ್ಯೆ ಬಗ್ಗೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುಮಿತ್ರಾ ನೀಡಿದ ದೂರಿನಲ್ಲಿ ಏನಿದೆ?
‘ನಾನು 4 ವರ್ಷದ ಹಿಂದೆ ಅಂದರೆ 2020ರಲ್ಲಿ ಗುರುಪ್ರಸಾದ್ ಅವರನ್ನು ವಿವಾಹವಾಗಿರುತ್ತೇನೆ. ನಮಗೆ ನಗು ಶರ್ಮಾ ಎಂಬ 4 ವರ್ಷದ ಹೆಣ್ಣು ಮಗು ಇದೆ. ಈ ಹಿಂದೆ ಗುರುಪ್ರಸಾದ್ ಅವರಿಗೆ ಆರತಿ ಎಂಬುವರರ ಜೊತೆ ಮದುವೆಯಾಗಿದ್ದು, ಸದರಿ ಮದುವೆಯು ವಿಚ್ಚೇದನವಾಗಿರುತ್ತದೆ. ಅವರು ಸಿನಿಮಾ ನಿರ್ದೇಶಕ ಆದ್ದರಿಂದ ಮದುವೆ ಆದಾಗಿನಿಂದಲೂ 4 ವರ್ಷ ಜೊತೆಗಿದ್ದು ಕನಕಪುರ ರಸ್ತೆಯಲ್ಲಿ, ಎನ್.ಎ.ಪಿ.ಎ ವ್ಯಾಲೆ, ರಾಜರಾಜೇಶ್ವರಿ ನಗರದ ಈಸಿ ಡಿವೈನ್ ಬ್ಲಾಕ್ ಹಾಗೂ ಬಸವೇಶ್ವರನಗರದ ಬಾಲಾಜಿ ರೆಸಿಡೆನ್ಸಿಯಲ್ಲಿ ಜೀವನ ಸಾಗಿಸುತ್ತಿದೆವು.
ಇದಾದ ನಂತರ ನಾನು, ನನ್ನ ಯಜಮಾನರು ಈ 6 ತಿಂಗಳಿಂದ ಮನೆ ಖಾಲಿ ಮಾಡಿಕೊಂಡು ದಾಸನಪುರ ರಸ್ತೆಯಲ್ಲಿರುವ ಟಾಟಾ ನ್ಯೂ ಹೆವನ್ ಅಪಾರ್ಟ್ಮೆಂಟ್ ಟವರ್ ನಂ.27ರಲ್ಲಿನ ಮನೆ ನಂಬರ್ 11, ಮೊದಲನೆಯ ಮಹಡಿಯಲ್ಲಿ ಬಾಡಿಗೆಗೆ ವಾಸವಾಗಿದ್ದೇವು. ನನಗೆ ಹುಷಾರಿಲ್ಲದ ಕಾರಣ ಯಜಮಾನರು ನನ್ನನ್ನ ತಾಯಿಯ ಮನೆಯಲ್ಲಿ ಇರಲು ಹೇಳಿ ಕಳಿಸಿಕೊಟ್ಟಿದ್ದರು. ನಾವು ಲೋಕಸಭಾ ಚುನಾವಣೆಯಲ್ಲಿ ಕೊನೆಯ ಬಾರಿ ಸಿಕ್ಕಿದ್ದೆವು. ನಮ್ಮ ಯಜಮಾನರನ್ನ ಚಲನಚಿತ್ರದ ಕೆಲಸದಲ್ಲಿ ಬಿಜಿಯಾಗಿದ್ದರಿಂದ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೆವು. ದಿನಾಂಕ 25-10-2024 ರಂದು ನನ್ನ ಯಜಮಾನರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು ಅವರು ಕರೆಯನ್ನು ಸ್ವೀಕರಿಸಲಿಲ್ಲ. ಅವರು ಕರೆಯನ್ನು ಸ್ವೀಕರಿಸದಿದ್ದಾಗ ಬಿಜಿ ಇದ್ದಾರೆ ಎಂದು ಸುಮ್ನೆ ಅದೆ.
ದಿನಾಂಕ 3-11-2024 ರಂದು ಬೆಳಗ್ಗೆ ಒಂದು ಗಂಟೆಗೆ ಅಪಾರ್ಟ್ಮೆಂಟ್ ನಿವಾಸಿ ಜಯರಾಮ್ ಕರೆ ಮಾಡಿ ತಿಳಿಸಿದರು. ನಿಮ್ಮ ಮನೆಯ ಬಾಗಿಲ ಬಳಿ ದುರ್ವಾಸನೆ ಬರುತ್ತಾ ಇದೆ, ಮನೆಯ ಬಾಗಿಲ ಬಳಿ ಬಾಗಿಲು ತಟ್ಟಿದ್ದರೂ ಯಾರೂ ಬಾಗಿಲು ತೆಗೆಯುತ್ತಿಲ್ಲ. ನಾನು ಗಾಬರಿಯಿಂದ ನಮ್ಮ ಕುಟುಂಬದವರು ಬಂದು ನೋಡಿದಾಗ ಮನೆಯ ಬಾಗಿಲು ಹಾಕಿತ್ತು. ಕಿಟಕಿಯಲ್ಲಿ ಇಣುಕಿ ನೋಡಿದರೆ ನಮ್ಮ ಯಜಮಾನರು ಆತ್ಮಹತ್ಯೆಗೆ ಶರಣಾಗಿದ್ದರು. ಪಕ್ಕದ ಮನೆಯವರ ಸಹಾಯದಿಂದ ಹಾಗೂ ಪೊಲೀಸರ ನೆರವಿನೊಂದಿಗೆ ಬಾಗಿಲನ್ನು ಹೊಡೆದು ಒಳಗೆ ನೋಡಿದ್ದೇವೆ. ನನ್ನ ಗಂಡ ಗುರುಪ್ರಸಾದ್ ನೇಣಿಗೆ ಶರಣಾಗಿದ್ದರು.
ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡಿದ್ದರು. ಈ ವಿಚಾರ ತಿಳಿಸಿದ್ದು, ನಾನು ನಮ್ಮ ಯಜಮಾನರಿಗೆ ಸಾಲವನ್ನು ತೀರಿಸೋಣ ಎಂದು ಧೈರ್ಯ ಹೇಳುತ್ತಿದ್ದೆ. ಆದರೂ ನನ್ನ ಮಾತನ್ನು ಲೆಕ್ಕಿಸದೇ ನನ್ನ ಗಂಡ ಸಾಲದ ಬಾಧೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು 3\4 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ನೂಲಿನ ಹಗ್ಗದಿಂದ ನೇಣಿಗೆ ಶರಣಾಗಿದ್ದಾರೆ.
ಮಹಡಿಯ ಕಬ್ಬಿಣದ ಕೊಕ್ಕೆಗೆ ಕಟ್ಟಿಕೊಂಡು ಕುಣಿಕೆ ಮಾಡಿ ಕತ್ತನ್ನು ಜೀರಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ನನ್ನ ಗಂಡನ ಸಾವಿನಲ್ಲಿ ಅನುಮಾನ ಇಲ್ಲ. ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಕೈಗೊಳ್ಳಿ. ನೇಣು ಹಾಕೊಂಡಿರುವ ಬಗ್ಗೆ ನಿಖರವಾದ ಕಾರಣ ತನಿಖೆ ಮಾಡಬೇಕೆಂದು ದೂರು ನೀಡುತ್ತಿದ್ದೇನೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.