‘ಶಾಖಾಹಾರಿ’ ವೆಜಿಟೇರಿಯನ್‍ ಆದರೆ, ಧೀರೇನ್‍ ರಾಮ್‍ಕುಮಾರ್‌‍ ನಟನೆಯ ‘ಪಬ್ಬಾರ್’ ನಾನ್‍ ವೆಜಿಟೇರಿಯನ್‍ ಎಂದ ಶಿವಣ್ಣ
ಕನ್ನಡ ಸುದ್ದಿ  /  ಮನರಂಜನೆ  /  ‘ಶಾಖಾಹಾರಿ’ ವೆಜಿಟೇರಿಯನ್‍ ಆದರೆ, ಧೀರೇನ್‍ ರಾಮ್‍ಕುಮಾರ್‌‍ ನಟನೆಯ ‘ಪಬ್ಬಾರ್’ ನಾನ್‍ ವೆಜಿಟೇರಿಯನ್‍ ಎಂದ ಶಿವಣ್ಣ

‘ಶಾಖಾಹಾರಿ’ ವೆಜಿಟೇರಿಯನ್‍ ಆದರೆ, ಧೀರೇನ್‍ ರಾಮ್‍ಕುಮಾರ್‌‍ ನಟನೆಯ ‘ಪಬ್ಬಾರ್’ ನಾನ್‍ ವೆಜಿಟೇರಿಯನ್‍ ಎಂದ ಶಿವಣ್ಣ

‘ಪಬ್ಬಾರ್‌’ ಚಿತ್ರಕ್ಕೆ ಸಂದೀಪ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನವನ್ನೂ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಹ್ಯಾಟ್ರಿಕ್‌ ಹೀರೋ ಶಿವ ರಾಜ್‌ಕುಮಾರ್‌ ಮಾತನಾಡಿದ್ದಾರೆ. (ವರದಿ: ಚೇತನ್‌ ನಾಡಿಗೇರ್‌)

‘ಶಾಖಾಹಾರಿ’ ವೆಜಿಟೇರಿಯನ್‍ ಆದರೆ, ಧೀರೇನ್‍ ರಾಮ್‍ಕುಮಾರ್‌‍ ನಟನೆಯ ‘ಪಬ್ಬಾರ್’ ನಾನ್‍ ವೆಜಿಟೇರಿಯನ್‍ ಎಂದ ಶಿವಣ್ಣ
‘ಶಾಖಾಹಾರಿ’ ವೆಜಿಟೇರಿಯನ್‍ ಆದರೆ, ಧೀರೇನ್‍ ರಾಮ್‍ಕುಮಾರ್‌‍ ನಟನೆಯ ‘ಪಬ್ಬಾರ್’ ನಾನ್‍ ವೆಜಿಟೇರಿಯನ್‍ ಎಂದ ಶಿವಣ್ಣ

ಧೀರೇನ್‍ ರಾಮ್‍ಕುಮಾರ್‌ ಅಭಿನಯದಲ್ಲಿ ಒಂದು ಚಿತ್ರ ನಿರ್ಮಿಸುತ್ತಿರುವುದಾಗಿ ಶಿವರಾಜಕುಮಾರ್ ಮತ್ತು ಗೀತಾ ಶಿವ ರಾಜಕುಮಾರ್‌, ಡಿಸೆಂಬರ್ 06ರಂದು ಘೋಷಿಸಿದ್ದರು. ಅಂದೇ ಘೋಷಿಸುವುದಕ್ಕೆ ಕಾರಣವೂ ಇದೆ. ಅಂದು ಪಾರ್ವತಮ್ಮ ರಾಜಕುಮಾರ್‌ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ತಮ್ಮ ಸೋದರಳಿಯನ ಅಭಿನಯದಲ್ಲಿ ಚಿತ್ರ ಘೋಷಿಸಿದ್ದರು. ಈಗ ಆ ಚಿತ್ರಕ್ಕೆ ‘ಪಬ್ಬಾರ್‌’ ಎಂದು ಹೆಸರಿಡಲಾಗಿದ್ದು, ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಹಾಲಕ್ಷ್ಮೀ ಲೇಔಟ್‍ನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ.

ಈ ಮುಹೂರ್ತದಲ್ಲಿ ಶಿವರಾಜಕುಮಾರ್, ಗೀತಾ ಶಿವ ರಾಜಕುಮಾರ್‌, ರಾಮ್‍ಕುಮಾರ್‌, ಪೂರ್ಣಿಮಾ ರಾಮ್‍ಕುಮಾರ್‌, ನಾಗಶೇಖರ್,‍ ಶ್ರೀನಗರ ಕಿಟ್ಟಿ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್‌, ‘ಬೇರೆ ಭಾಷೆಗಳ ಜೊತೆಗೆ ಸ್ಪರ್ಧಿಸಬೇಕು ಎಂದರೆ, ಹೊಸ ತರಹದ ಚಿತ್ರಗಳು ಬರಬೇಕು. ಪ್ರಯತ್ನವೇ ಮಾಡದಿದ್ದರೆ ಹೇಗೆ? ನಾನು 40 ವರ್ಷದಿಂದ ಚಿತ್ರಗಳನ್ನು ಮಾಡುತ್ತಿದ್ದೇನೆ. ಎಷ್ಟು ವರ್ಷ ಮಾಡುತ್ತೇನೆ ಗೊತ್ತಿಲ್ಲ. ಹೊಸ ಪೀಳಿಗೆ ಬರಬೇಕು. ಹೊಸ ತರಹದ ಸಿನಿಮಾಗಳು ಬರಬೇಕು. ಸಂದೀಪ್‍ ಬಂದು ಕಥೆ ಹೇಳಿದಾಗ, ಬಹಳ ಖುಷಿ ಆಯ್ತು. ‘ಶಾಖಾಹಾರಿ’ ವೆಜಿಟೇರಿಯನ್‍ ಆಗಿತ್ತು. ಇದು ನಾನ್‍-ವೆಜಿಟೇರಿಯರನ್‍. ಏಕೆಂದರೆ, ಚಿತ್ರದಲ್ಲಿ ಎಲ್ಲಾ ತರಹದ ಅಂಶಗಳು ಇವೆ. ನನಗೆ ಕಥೆ ಇಷ್ಟವಾಯ್ತು. ಕಥೆಯಲ್ಲಿ ಏನು ಹುಡುಕುತ್ತೇವೆ ಎನ್ನುವುದು ಬಹಳ ಮುಖ್ಯ. ಕಥೆ ಸುಮ್ಮನೆ ಕೇಳಿದೆವು. ಇಷ್ಟವಾದ ಮೇಲೆ ಇದನ್ನು ನಾವೇ ನಿರ್ಮಿಸೋಣ ಎಂದು ತೀರ್ಮಾನಿಸಿದೆವು. ನಮ್ಮಮ್ಮ ಇದ್ದಿದ್ದರೆ ಖಂಡಿತಾ ಧೀರೇನ್‍ ಅಭಿನಯದಲ್ಲಿ ಚಿತ್ರ ಮಾಡಿರುತ್ತಿದ್ದರು. ಹಾಗಾಗಿ, ಅವರ ಹುಟ್ಟುಹಬ್ಬದಂದು ಚಿತ್ರದ ಘೋಷಣೆ ಮಾಡಿದೆವು’ ಎಂದರು.

ಇದೊಂದು ಅಡ್ವೆಂಚರಸ್‍ ಕ್ರೈಮ್‍ ಥ್ರಿಲ್ಲರ್‌ ಎನ್ನುವ ನಿರ್ದೇಶಕ ಸಂದೀಪ್‍ ಸುಂಕದ್, ‘ಈ ಚಿತ್ರದಲ್ಲಿ ಧೀರೇನ್‍ ಪೊಲೀಸ್‍ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಎರಡು ತರಹದ ಪ್ರಯಾಣಗಳಿವೆ. ಒಂದು ಕೇಸ್‍ ಜರ್ನಿಯಾದರೆ, ಇನ್ನೊಂದು ವೈಯಕ್ತಿಕ ಜರ್ನಿಯೂ ಇದೆ. ಇದರ ಜೊತೆಗೆ ಪಬ್ಬಾರ್‌ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಪಬ್ಬರ್‌ ಎಂದರೆ ಹಿಮಾಚಲ ಪ್ರದೇಶದ ಒಂದು ಕಣಿವೆ. ಅದು ನದಿ ತೀರ. ಅದು ನಮ್ಮ ಸಿನಿಮಾದ ಮುಖ್ಯ ಪಾತ್ರ’ ಎಂದರು.

ಈ ಸಿನಿಮಾದಲ್ಲಿ ಹಲವು ವಿಷಯಗಳಿವೆ ಎನ್ನುವ ಸಂದೀಪ್‍, ‘ಚಿತ್ರದಲ್ಲಿ ಒಂದು ಗಟ್ಟಿ ಕಥೆ ಇದೆ. ದೊಡ್ಡ ಜವಾಬ್ದಾರಿ ಇದೆ. ನವೆಂಬರ್‌ 28 ಎಂಥಾ ದಿನ ಎಂದರೆ ರಾತ್ರಿ 11ಕ್ಕೆ ಶಿವಣ್ಣ ಕಾಲ್‍ ಮಾಡಿ, ನಾವು ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ ಎಂದಾಗ ಮಾತು ಹೊರಡಲಿಲ್ಲ, ನಿದ್ದೆಯೂ ಬರಲಿಲ್ಲ. ಧೀರೇನ್‍ ಅವರಿಗೆ ಎರಡು ಕಥೆ ಹೇಳಿದ್ದೆ. ಎರಡರ ಪೈಕಿ ಇದು ಇಷ್ಟ ಆಯ್ತು. ಆರ್‌.ಪಿ.ಸಿ. ಲೇಔಟ್‍ನಲ್ಲಿ ಆದ ನಮ್ಮ ಮೊದಲ ಭೇಟಿ ಈಗ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಚಿತ್ರದ ಮುಹೂರ್ತವಾಗುವವರೆಗೂ ಬಂದಿದೆ’ ಎಂದರು.

ಇದು ತಮಗೆ ಪುನರ್ಜನ್ಮ ಎನ್ನುವ ಧೀರೇನ್‍, ‘ನಮ್ಮ ಮಾವಂಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನವೆಂಬರ್‌ 28 ಜೀವನದಲ್ಲಿ ಮರೆಯಲ್ಲ. ಕಥೆ ಕೇಳಿ ಸಿನಿಮಾ ಮಾಡುತ್ತೇನೆ ಎಂದರು. ತುಂಬಾ ಖುಷಿ ಆಯ್ತು. ಇವೆಲ್ಲವೂ ಕನಸು ಎಂಬ ಭಾವನೆ ಬರುತ್ತಿದೆ. ನನಗೆ ಸಾಕ್ಷಾತ್ ಶಿವ-ಪಾರ್ವತಿ ಇದ್ದ ಹಾಗೆ. ಅವರ ನಿರ್ಮಾಣ ಸಂಸ್ಥೆಯಿಂದ ಇನ್ನಷ್ಟು ಚಿತ್ರಗಳು ಬರಲಿ. ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರವಿದೆ. ಈ ಚಿತ್ರಕ್ಕೆ 10 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದರು.

‘ಪಬ್ಬಾರ್‌’ ಚಿತ್ರಕ್ಕೆ ಸಂದೀಪ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನವನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಶ್ವಜಿತ್‍ ರಾವ್‍ ಛಾಯಾಗ್ರಹಣ ಮತ್ತು ಮಯೂರ್‌ ಅಂಬೆಕಲ್ಲು ಅವರ ಸಂಗೀತವಿದೆ. ಧೀರೇನ್‍ ಎದುರು ನಾಯಕಿಯಾಗಿ ‘ನೆನಪಿರಲಿ’ ಪ್ರೇಮ್‍ ಮಗಳು ಅಮೃತಾ ಪ್ರೇಮ್‍ ಅಭಿನಯಿಸುತ್ತಿದ್ದಾರೆ. (ವರದಿ: ಚೇತನ್‌ ನಾಡಿಗೇರ್‌)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in