OTT Cyber Thriller: ಎಐ ಸುಳಿಗೆ ಸಿಲುಕಿ ‘ಕಂಟ್ರೋಲ್’ ಕಳೆದುಕೊಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ!
CTRL Movie Trailer: ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟನೆಯ ಕಂಟ್ರೋಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸೈಬರ್ ಮತ್ತು ಎಐ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ನೆಟ್‌ಫ್ಲಿಕ್ಸ್ ಒಟಿಟಿ ಅಂಗಳಕ್ಕೆ ಬರಲಿದೆ.
CTRL Movie Trailer: ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ವಿಹಾನ್ ಸಾಮ್ರಾಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಕಂಟ್ರೋಲ್ (CTRL). ಥ್ರಿಲ್ಲರ್ ಚಿತ್ರಗಳಿಂದಲೇ ಫೇಮಸ್ ಆಗಿರುವ ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. AI ಟೆಕ್ನಾಲಜಿ ಮತ್ತು ಸೋಷಿಯಲ್ ಮೀಡಿಯಾಗಳ ಬಳಕೆಯನ್ನೇ ಆಧಾರವಾಗಿಟ್ಟುಕೊಂಡು ಥ್ರಿಲ್ಲರ್ ಶೈಲಿಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದೀಗ ನೆಟ್‌ಫ್ಲಿಕ್ಸ್ ಈ ಚಿತ್ರದ ಟ್ರೈಲರ್‌ಅನ್ನು ಇಂದು (ಸೆಪ್ಟೆಂಬರ್ 25) ಬಿಡುಗಡೆ ಮಾಡಿದೆ.
ಥ್ರಿಲ್ಲಿಂಗ್ ಆಗಿದೆ ಚಿತ್ರದ ಟ್ರೈಲರ್
ಕಂಟ್ರೋಲ್ ಚಿತ್ರದಲ್ಲಿ ನೆಲ್ಲಾ ಅವಸ್ಥಿಯಾಗಿ ಅನನ್ಯ ಪಾಂಡೆ ಮತ್ತು ಜೋ ಮಸ್ಕರೇನ್ಸ್ ಪಾತ್ರದಲ್ಲಿ ವಿಹಾನ್ ಸಾಮ್ರಾಟ್ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಈ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಟ್ರೇಲರ್ ತೋರಿಸುತ್ತದೆ. ಬಳಿಕ ಲವ್ ಫೇಲ್ಯೂರ್ ಸಹ ಆಗುತ್ತದೆ. ಆ ನೋವಿನಿಂದ ಹೊರಬರಲು ನೆಲ್ಲಾ ಅವಸ್ಥಿ, ಎಐ ತಂತ್ರಜ್ಞಾನದ ಮೊರೆ ಹೋಗುತ್ತಾಳೆ. ಮುಂದೇನಾಗುತ್ತದೆ ಎಂಬುದೇ ಈ ಸಿನಿಮಾದ ಒಂದೆಳೆ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಆಧರಿತ ಪೂರ್ಣ ಪ್ರಮಾಣದ ಸಿನಿಮಾ ಮೂಡಿಬಂದಿಲ್ಲ. ಇದೀಗ ಕೇವಲ ಟೆಕ್ನಾಲಜಿಯನ್ನೇ ವಿಷಯವಸ್ತುವನ್ನಾಗಿಸಿಕೊಂಡು, ಕಂಟ್ರೋಲ್ ಸಿನಿಮಾ ಸಿದ್ಧವಾಗಿದೆ. ಥ್ರಿಲ್ಲರ್ ಎಳೆಯ ಮೂಲಕ ಹೊಸ ಬಗೆಯ ಕಥೆಯನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ಸದ್ಯ ಟ್ರೇಲರ್ ಕುತೂಹಲ ಮೂಡಿಸಿದೆ. ಹಾಗಾದರೆ ಈ ಸಿನಿಮಾ ಯಾವಾಗ ಸ್ಟ್ರೀಮಿಂಗ್ ಆಗಲಿದೆ?
ಸ್ಟ್ರೀಮಿಂಗ್ ದಿನಾಂಕ ಹೀಗಿದೆ
ಕಂಟ್ರೋಲ್ ಸಿನಿಮಾ ಅಕ್ಟೋಬರ್ 4 ರಂದು ನೆಟ್‌ಫ್ಲಿಕ್ಸ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸದ್ಯಕ್ಕೆ ಹಿಂದಿಯಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಆದರೆ, ಆರಂಭದಲ್ಲಿ ಈ ಸಿನಿಮಾ ನೋಡಲು ನೀವು 199 ರೂಪಾಯಿ ಪಾವತಿಸಬೇಕಿದೆ. ಅದಾಗಿ ಒಂದಷ್ಟು ದಿನಗಳ ಬಳಿಕ ಈ ಸಿನಿಮಾವನ್ನು ಎಲ್ಲ ನೆಟ್‌ಫ್ಲಿಕ್ಸ್ ಚಂದಾದಾರರೂ ವೀಕ್ಷಿಸಬಹುದು.
ಪಾತ್ರಧಾರಿಗಳು
ಅನನ್ಯ ಪಾಂಡೆ, ವಿಹಾನ್ ಜೊತೆಗೆ ದೇವಿಕಾ ವತ್ಸ, ಕಾಮಾಕ್ಷಿ ಭಟ್, ಸಚಿತಾ ತ್ರಿವೇದಿ, ಅಪರಶಕ್ತಿ ಖುರಾನಾ, ಸಮೀತ್ ಗಂಭೀರ್ ಮತ್ತು ರವೀಶ್ ದೇಸಾಯಿ ಕಂಟ್ರೋಲ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಿಖಿಲ್ ದ್ವಿವೇದಿ ಮತ್ತು ಆರ್ಯ ಮೆನನ್ ಈ ಚಿತ್ರವನ್ನು ಸ್ಯಾಫ್ರನ್ ಮ್ಯಾಜಿಕ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.