ಆಡಿಷನ್‌ಗೆ ತೆರಳುತ್ತಿದ್ದ ಮಾರ್ಗಮಧ್ಯೆ ಭೀಕರ ಅಪಘಾತ; 'ಧರ್ತಿಪುತ್ರ ನಂದಿನಿ' ಧಾರಾವಾಹಿ ನಟನ ದುರಂತ ಅಂತ್ಯ
Aman Jaiswal: ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ಆಡಿಷನ್‌ಗೆ ತೆರಳುತ್ತಿದ್ದಾಗ ಮುಂಬೈನ ಜೋಗೇಶ್ವರಿ ಹೆದ್ದಾರಿಯಲ್ಲಿ ಅವರ ಬೈಕ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಮುಂಬೈ: ಹಿಂದಿ ಕಿರುತೆರೆ ನಟ, ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಮನ್ ಜೈಸ್ವಾಲ್ ಮುಂಬೈನ ಜೋಗೇಶ್ವರಿ ಪಶ್ಚಿಮ ಪ್ರದೇಶದಲ್ಲಿ ಶುಕ್ರವಾರ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೀರಿಯಲ್ ಆಡಿಷನ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಆಕ್ಸಿಡೆಂಟ್ ಸಂಭವಿಸಿದೆ.
ಮಧ್ಯಾಹ್ನ 3.15ರ ಸುಮಾರಿಗೆ ಹಿಲ್ ಪಾರ್ಕ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಜೈಸ್ವಾಲ್ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಟ್ರಕ್ ಗುದ್ದಿದ ರಭಸಕ್ಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಹತ್ತಿರದ ಕಾಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಆಡಿಷನ್‌ಗೆ ತೆರಳುತ್ತಿದ್ದಾಗ ಅಪಘಾತ
ಅಮನ್ ಜೈಸ್ವಾಲ್ ಆಡಿಷನ್‌ಗೆ ತೆರಳುತ್ತಿದ್ದಾಗ ಜೋಗೇಶ್ವರಿ ಬಳಿ ಅವರ ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಧರ್ತಿಪುತ್ರ ನಂದಿನಿ ಲೇಖಕ ಧೀರಜ್ ಮಿಶ್ರಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಅಪಘಾತ ಸಂಬಂಧ ಟ್ರಕ್ ಚಾಲಕ ಪೊಲೀಸ್ ವಶದಲ್ಲಿದ್ದಾರೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಉತ್ತರ ಪ್ರದೇಶದ ಬಾಲಿಯಾದ ಅಮನ್ ಜೈಸ್ವಾಲ್ ಧರ್ತಿಪುತ್ರ ನಂದಿನಿ ಸೀರಿಯಲ್ ಮೂಲಕವೇ ಖ್ಯಾತಿ ಪಡೆದರು. ರವಿ ದುಬೆ ಮತ್ತು ಸರ್ಗುನ್ ಮೆಹ್ತಾ ನಿರ್ಮಿಸಿದ ಜನಪ್ರಿಯ ಶೋ ಉದಯರಿಯಾನ್ ಅಲ್ಲಿಯೂ ಕಾಣಿಸಿಕೊಂಡರು. ನಟನೆಗೂ ಮುನ್ನ ಫ್ಯಾಷನ್ ಮತ್ತು ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಿದರು. ನಟನ ಸಾವಿಗೆ ಹಿಂದಿ ಕಿರುತೆರೆ ಮತ್ತು ಧರ್ತಿಪುತ್ರ ನಂದಿನಿ ಸೀರಿಯಲ್ ತಂಡ ಕಂಬನಿ ಮಿಡಿದಿದೆ.
