John Cena: ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿ ಕೊಡಿ ಅಂದ್ರೆ ಬೆತ್ತಲಾಗಿ ಬಂದ, ಆಸ್ಕರ್ ವೇದಿಕೆಯಲ್ಲಿ ಜಾನ್ ಸೆನಾ ಹುಡುಗಾಟ
Oscar shocker: 96ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ನೀಡಲು ಜಾನ್ ಸೇನಾ ಬೆತ್ತಲಾಗಿ ಆಗಮಿಸಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಆಸ್ಕರ್ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಜಾನ್ ಸೇನಾ ನಗ್ನರಾಗಿ ಬಂದಿರುವ ಫೋಟೋ, ವಿಡಿಯೋ ವೈರಲ್ ಆಗಿವೆ.
ಈ ಬಾರಿಯ ಅತ್ಯುತ್ತಮ ವಸ್ತ್ರ ವಿನ್ಯಾಸ (ಬೆಸ್ಟ್ ಕಾಸ್ಟ್ಯೂಮ್ ಡಿಸೈನ್) ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ವಿತರಣೆ ಮಾಡಲು ಆಗಮಿಸಿದ ಡಬ್ಲ್ಯುಡಬ್ಲ್ಯುಇ ಸ್ಟಾರ್ ಜಾನ್ ಸೆನಾ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಕಾರ್ಯಕ್ರಮ ನಡೆಸಿಕೊಡುವ ಜಿಮ್ಮಿ ಕಿಮ್ಮೆಲ್ ಸೂಚನೆಯ ಮೇರೆಗೆ ಜಾನ್ ಸೆನಾ ಅವರು ನಗ್ನರಾಗಿ ಆಗಮಿಸಿ ಪ್ರಶಸ್ತಿ ನೀಡಿದ್ದಾರೆ.
ನಗ್ನರಾಗಿ ವೇದಿಕೆಗೆ ಬಂದ ಜಾನ್ ಸೆನಾ
ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಪ್ರಶಸ್ತಿಯನ್ನು ನೀಡಲು ಜಾನ್ ಸೆನಾ ಅವರ ಹೆಸರನ್ನು ಕೂಗಿದಾಗ ವೇದಿಕೆಯಲ್ಲಿ ತನ್ನ ತಲೆಯನ್ನು ಮಾತ್ರ ಹೊರಹಾಕಿದರು. ಇವರು ಡಬ್ಲ್ಯುಡಬ್ಲ್ಯುಇ ಕುಸ್ತಿಪಟು. ಕುಸ್ತಿಪಟುಗಳು ನಗ್ನರಾಗಿಯೇ ಕುಸ್ತಿಯಾಡಬೇಕು ಎಂದು ಕಿಮ್ಮೆಲ್ ಸೂಚಿಸಿದರು. "ನಾನು ಬೆತ್ತಲಾಗಿ ಕುಸ್ತಿಯಾಡುವುದಿಲ್ಲ. ಜೋರ್ಟ್ಸ್ ಬಳಸುವೆ" ಎಂದು ಹೇಳಿದರು. ಜೋರ್ಟ್ಸ್ ಬೆತ್ತಲೆಯಾಗುವುದಕ್ಕಿಂತ ಕೆಟ್ಟದಾಗಿರುತ್ತದೆ ಎಂದು ಕಿಮ್ಮೆಲ್ ಹೇಳಿದರು. ಇದಾದ ಬಳಿಕ ಒಂದು ಪುಟ್ಟ ಟವಲ್‌ನಷ್ಟು ಗಾತ್ರದ ಎನ್‌ವಲಪ್ ಕವರ್ ಅಡ್ಡ ಹಿಡಿದುಕೊಂಡು ಹಿಡಿದುಕೊಂಡು ಇವರು ನಗ್ನರಾಗಿಯೇ ವೇದಿಕೆಗೆ ಆಗಮಿಸಿದರು.
ಕಾಸ್ಟ್ಯೂಮ್ ತುಂಬಾ ಅಗತ್ಯ
ಈ ಹಂತದಲ್ಲಿ ಕಾಸ್ಟ್ಯೂಮ್ ವಿನ್ಯಾಸದಲ್ಲಿ ಗೆಲುವು ಪಡೆದವರ ಹೆಸರು ಇರುವ ಎನ್‌ವಲಪ್ ಕವರ್ ಅನ್ನು ತನ್ನ ಮಾನಮುಚ್ಚಲು ಬಳಸಿಕೊಂಡಿದ್ದರು. ಈ ರೀತಿ ನಗ್ನರಾಗಿ ಜಾನ್ ಆಗಮಿಸಿದಾಗ ಎಲ್ಲರಿಗೂ ಅಚ್ಚರಿಯಾಯಿತು. ಇದಾದ ಬಳಿಕ ವೇದಿಕೆಗೆ ಆಗಮಿಸಿದ ಜಾನ್ ಸಿನಾ ಅವರು "ವಸ್ತ್ರವಿನ್ಯಾಸ ತುಂಬಾ ಅಗತ್ಯ. ವಸ್ತ್ರಗಳು ತುಂಬಾ ಅಗತ್ಯ" ಎಂದು ಹೇಳಿದರು.
ಅತ್ಯುತ್ತಮ ವಸ್ತ್ರವಿನ್ಯಾಸ ವಿಭಾಗದಲ್ಲಿ ನಾಮನಿರ್ದೇಶನಗೊಂಡವರ ಹೆಸರನ್ನು ಜಾನ್ ಓದುವ ಸಮಯದಲ್ಲಿ ಎಲ್ಲಾ ಲೈಟ್‌ಗಳು ಡಿಮ್ ಆದವು. ಈ ಮೂಲಕ ಎನ್‌ವಲಪ್‌ಕವರ್ ತೆಗೆಯುವುದನ್ನು ಪ್ರೇಕ್ಷಕರು ನೋಡುವುದು ತಪ್ಪಿದೆ. ಪೂವರ್ ಥಿಂಗ್ಸ್ ಸಿನಿಮಾದ ಹಾಲಿ ವೆಡ್ಡಿಂಗ್‌ಟನ್ ಅವರು ವಿನ್ನರ್ ಎಂದು ಘೋಷಿಸಿದರು.
ಆಸ್ಕರ್ ವೇದಿಕೆಗೆ ಜಾನ್ ಸೆನಾ ಬೆತ್ತಲಾಗಿ ಬಂದಿರುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ರೀತಿ ಬಂದಿರುವುದು ಎಷ್ಟು ಸರಿ? ಆಸ್ಕರ್ ವೇದಿಕೆಯಲ್ಲಿ ಈ ರೀತಿ ನಡೆದುಕೊಳ್ಳಬಹುದೇ? ಎಂದೆಲ್ಲ ಚರ್ಚಿಸುತ್ತಿದ್ದಾರೆ. ಒಟ್ಟಾರೆ ವಸ್ತ್ರವಿನ್ಯಾಸ ವಿಭಾಗದಲ್ಲಿ ಪ್ರಶಸ್ತಿ ನೀಡಲು ವಸ್ತ್ರಧರಿಸದೆ ಬರುವ ಮೂಲಕ ಸೆನಾ ಸುದ್ದಿಯಲ್ಲಿದ್ದಾರೆ.
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಇಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಇವರೆಲ್ಲ ಹಲವು ತಿಂಗಳಿನಿಂದ ರೆಡಿಯಾಗುತ್ತಾರೆ. ಅಂದರೆ, ಯಾವ ಉಡುಗೆ ತೊಡಬೇಕು? ಎಂದೆಲ್ಲ ಚಿಂತಿಸಿ ಫ್ಯಾಷನ್ ಡಿಸೈನರ್‌ಗೆ ಹಲವು ಲಕ್ಷ ಸುರಿಯುತ್ತಾರೆ. ಇಷ್ಟೆಲ್ಲ ಖರ್ಚು ಮಾಡಿ ಬಂದವರಿಗಿಂತ ಏನೂ ಉಡುಗೆ ತೊಡದೆ ಆಗಮಿಸಿದ ಜಾನ್ ಸೆನಾ ಈಗ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ.