ನರಸಿಂಹ ಜಯಂತಿ ಪ್ರಯುಕ್ತ ʻಮಹಾವತಾರ್ ನರಸಿಂಹʼ ಅನಿಮೇಷನ್ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಹೊಂಬಾಳೆ ಫಿಲಂಸ್
ನರಸಿಂಹ ಜಯಂತಿ ಪ್ರಯುಕ್ತ ಅನಿಮೇಷನ್ ʻಮಹಾವತಾರ್ ನರಸಿಂಹʼ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ ಹೊಂಬಾಳೆ ಫಿಲಂಸ್. ಕಿರು ಟೀಸರ್ ಝಲಕ್ ಮೂಲಕ ಈ ಚಿತ್ರ ಅದ್ಯಾವಾಗ ತೆರೆಗೆ ಬರಲಿದೆ ಎಂಬುದನ್ನು ತಿಳಿಸಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಸಿನಿಮಾ ಘೋಷಣೆ ಮಾಡಿ, ಸಂಕ್ರಾಂತಿ ಹಬ್ಬಕ್ಕೆ ಕಿರು ಟೀಸರ್ ಮೂಲಕವೇ ʻಮಹಾವತಾರ್ ನರಸಿಂಹʼ ಚಿತ್ರದ ಟೀಸರ್ ಝಲಕ್ ಬಿಡುಗಡೆ ಮಾಡಿದ್ದ ಹೊಂಬಾಳೆ ಫಿಲಂಸ್ ಇದೀಗ, ನರಸಿಂಹ ಜಯಂತಿ ಪ್ರಯುಕ್ತ ಅದೇ ಅನಿಮೇಷನ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಮೂಲಕ ಇನ್ನೇನು ಮುಂದಿನ ಎರಡು ತಿಂಗಳಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಚಿತ್ರಮಂದಿರಕ್ಕೆ ಎಂಟ್ರಿಕೊಡಲಿದೆ. ಹಾಗಾದರೆ ʻಮಹಾವತಾರ್ ನರಸಿಂಹʼ ಅನಿಮೇಷನ್ ಸಿನಿಮಾದ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ.
ಹೌದು, ಪೌರಾಣಿಕ ಹಿನ್ನೆಲೆಯ ʻಮಹಾವತಾರ್ ನರಸಿಂಹʼ ಎಂಬ ಅನಿಮೇಷನ್ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್. ಇದೇ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಐದು ಭಾಷೆಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಸರ್ಪ್ರೈಸ್ ನೀಡಿದ್ದ ಹೊಂಬಾಳೆ ಫಿಲಂಸ್, ಇದೀಗ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಿದೆ. ಈಗಾಗಲೇ ಹಲವು ಅನಿಮೇಷನ್ ಸಿನಿಮಾ ನಿರ್ಮಿಸಿದ ಅನುಭವ ಹೊಂದಿರುವ ʻಕ್ಲಿಂʼ ಹೆಸರಿನ ಸಂಸ್ಥೆ ಹೊಂಬಾಳೆ ಫಿಲಂಸ್ ಜೊತೆಗೆ ನಿರ್ಮಾಣದಲ್ಲಿ ಕೈ ಜೋಡಿಸಿದೆ.
ಏನಿರಲಿದೆ ಈ ಅನಿಮೇಷನ್ ಸಿನಿಮಾದಲ್ಲಿ?
ʻಕ್ಲಿಂʼ ಸಂಸ್ಥೆ ಅಶ್ವಿನ್ ಕುಮಾರ್ ʻಮಹಾವತಾರ್ ನರಸಿಂಹʼ ಅನಿಮೇಷನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾವು ಈಗಾಗಲೇ ನೋಡಿರುವಂತೆ ಮತ್ತು ಓದಿ ತಿಳಿದುಕೊಂಡಿರುವಂತೆ, ಪ್ರಹ್ಲಾದನ ತಂದೆ ಹಿರಣ್ಯಕಶಿಪು ಮತ್ತು ವಿಷ್ಣುವಿನ ನಡುವಿನ ಕಾಳಗದ ಕುರಿತ ಕಥೆ ಇದಾಗಿದೆ. ಅನಿಮೇಟೆಡ್ ಸಿನಿಮಾ ಆಗಿರುವುದರಿಂದ ಕಾಲ್ಪನಿಕ ಲೋಕದ ವೈಭವನ್ನು ಇಲ್ಲಿ ಅಷ್ಟೇ ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕರು.
ಯಾವಾಗ ಬಿಡುಗಡೆ?
ಮೂಲ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಅನಿಮೇಷನ್ ಸಿನಿಮಾ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಜುಲೈ 25ರಂದು ಚಿತ್ರಮಂದಿರಗಳಲ್ಲಿಯೇ ಈ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ ಈ ಮೊದಲು ಏಪ್ರಿಲ್ 5ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ಕಾರಣಾಂತರಗಳಿಂದ ಹೇಳಿದ ದಿನದಂದು ಸಿನಿಮಾ ತೆರೆಗೆ ಬರಲಿಲ್ಲ. ಇದೀಗ ಜುಲೈ 25ಕ್ಕೆ ಫಿಕ್ಸ್ ಮಾಡಿದೆ.
ʻಮಹಾವತಾರ್ ನರಸಿಂಹʼ ಸಿನಿಮಾಕ್ಕೆ ಸ್ಯಾಮ್ ಸಿಎಸ್ ಮತ್ತು ಶ್ಲೋಕ ಸಂಗೀತ ನೀಡಿದ್ದು, ಅಜಯ್ ವರ್ಮಾ, ಅಶ್ವಿನ್ ಕುಮಾರ್ ಸಂಕಲನ, ಜಯಪೂರ್ಣ ದಾಸ್ ಅವರ ಬರವಣಿಗೆ, ಶ್ಲೋಕ, ಸೌರಭ್ ಮಿತ್ತಲ್, ಟ್ವಿಂಕಲ್ ಸಾಹಿತ್ಯ ಬರೆದಿದ್ದಾರೆ.