ದೈವ ದಾನವನ ಕಾಳಗ ಕಣ್ತುಂಬಿಕೊಳ್ಳಲು ಅಣಿಯಾಗಿ; ಹೊಂಬಾಳೆ ಫಿಲಂಸ್‌ ಬತ್ತಳಿಕೆಯಿಂದ ಬರ್ತಿದೆ ‘ಮಹಾವತಾರ್‌ ನರಸಿಂಹ’ ಅನಿಮೇಷನ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ದೈವ ದಾನವನ ಕಾಳಗ ಕಣ್ತುಂಬಿಕೊಳ್ಳಲು ಅಣಿಯಾಗಿ; ಹೊಂಬಾಳೆ ಫಿಲಂಸ್‌ ಬತ್ತಳಿಕೆಯಿಂದ ಬರ್ತಿದೆ ‘ಮಹಾವತಾರ್‌ ನರಸಿಂಹ’ ಅನಿಮೇಷನ್‌ ಸಿನಿಮಾ

ದೈವ ದಾನವನ ಕಾಳಗ ಕಣ್ತುಂಬಿಕೊಳ್ಳಲು ಅಣಿಯಾಗಿ; ಹೊಂಬಾಳೆ ಫಿಲಂಸ್‌ ಬತ್ತಳಿಕೆಯಿಂದ ಬರ್ತಿದೆ ‘ಮಹಾವತಾರ್‌ ನರಸಿಂಹ’ ಅನಿಮೇಷನ್‌ ಸಿನಿಮಾ

Mahavatar Narsimha: ಪೌರಾಣಿಕ ಹಿನ್ನೆಲೆಯ ಮಹಾವತಾರ್‌ ನರಸಿಂಹ ಎಂಬ ಅನಿಮೇಷನ್‌ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್‌. ಐದು ಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾದ ಫಸ್ಟ್‌ಲುಕ್‌ ಜತೆಗೆ ಶೀರ್ಷಿಕೆ ಸಹ ರಿವೀಲ್‌ ಆಗಿದೆ.

ಮಹಾವತಾರ್‌ ನರಸಿಂಹ ಅನಿಮೇಷನ್‌ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ
ಮಹಾವತಾರ್‌ ನರಸಿಂಹ ಅನಿಮೇಷನ್‌ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

Mahavatar Narsimha: ಹೊಂಬಾಳೆ ಫಿಲಂಸ್‌ ಸಂಸ್ಥೆ ಕನ್ನಡದ ಜತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನೂ ನಿರ್ಮಾಣ ಮಾಡುತ್ತಿದೆ. ಈ ನಡುವೆ ಇತ್ತೀಚೆಗಷ್ಟೇ ಟಾಲಿವುಡ್‌ ನಟ ಪ್ರಭಾಸ್‌ ಜತೆಗೆ ಒಟ್ಟು ಮೂರು ಸಿನಿಮಾಗಳನ್ನು ಘೋಷಣೆ ಮಾಡಿದೆ. ಈ ನಡುವೆ ಬೇರೆ ಬೇರೆ ಪ್ರಾಜೆಕ್ಟ್‌ಗಳ ಮಾತುಕತೆಗಳೂ ನಡೆಯುತ್ತಿವೆ. ಹೀಗಿರುವಾಗಲೇ ಅಚ್ಚರಿಯ ಮತ್ತು ವಿಶೇಷ ಎನಿಸುವ ಸುದ್ದಿಯೊಂದನ್ನು ರಿವೀಲ್‌ ಮಾಡಿದೆ ಹೊಂಬಾಳೆ ಫಿಲಂಸ್. ಅದೇನೆಂದರೆ, ಈ ಸಲ ಅನಿಮೇಷನ್‌ ಸಿನಿಮಾವನ್ನು ನಿರ್ಮಾಣ ಮಾಡಿದೆ ಹೊಂಬಾಳೆ ಸಂಸ್ಥೆ.

ಪೌರಾಣಿಕ ಹಿನ್ನೆಲೆಯ ಮಹಾವತಾರ್‌ ನರಸಿಂಹ ಎಂಬ ಅನಿಮೇಷನ್‌ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್‌. ಸೋಷಿಯಲ್‌ ಮೀಡಿಯಾದಲ್ಲಿ ಮಹಾವತಾರ್‌ ನರಸಿಂಹ ಅನಿಮೇಷನ್‌ ಚಿತ್ರದ ಮೊದಲ ಶೀರ್ಷಿಕೆ ಟೀಸರ್‌ ಬಿಡುಗಡೆ ಮಾಡಿ, ಸರ್ಪ್ರೈಸ್‌ ನೀಡಿದೆ. ಉಗ್ರ ನರಸಿಂಹನ ಅವತಾರ ನಿಜಕ್ಕೂ ಅಷ್ಟೇ ಕುತೂಹಲ ಮೂಡಿಸಿದೆ. ಹೊಂಬಾಳೆ ಫಿಲಂಸ್‌ ಸಂಸ್ಥೆ ಜತೆಗೆ ಕ್ಲಿಂ ಸಂಸ್ಥೆ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಈಗಾಗಲೇ ಹಲವು ಅನಿಮೇಷನ್‌ ಸಿನಿಮಾ ನಿರ್ಮಿಸಿದ ಅನುಭವ ಈ ತಂಡಕ್ಕಿದೆ.

ಐದು ಭಾಷೆಗಳಲ್ಲಿ ಬಿಡುಗಡೆ

ಕ್ಲಿಂನ ಅಶ್ವಿನ್‌ ಕುಮಾರ್‌ ಮಹಾವತಾರ್‌ ನರಸಿಂಹ ಅನಿಮೇಷನ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ಬೃಹತ್‌ ಗಾತ್ರದ ನರಸಿಂಹ ಅವತಾರ ನೋಡುಗರ ಕಣ್ಣರಳಿಸುವಂತಿದೆ. ಆ ನರಸಿಂಹನ ಎದುರು ಹಿರಣ್ಯ ಕಶಿಪು ಸಹ ಖಡ್ಗ ಹಿಡಿದು ನಿಂತಿದ್ದಾನೆ. ಮೂಲ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಅನಿಮೇಷನ್‌ ಸಿನಿಮಾ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ.

ಶೀಘ್ರದಲ್ಲಿ ಚಿತ್ರಮಂದಿರಕ್ಕೆ

ಚಿತ್ರದ ಶೀರ್ಷಿಕೆ ಟೀಸರ್‌ ಬಿಡುಗಡೆ ಮಾಡಿರುವ ಹೊಂಬಾಳೆ ಫಿಲಂಸ್‌, "ನಂಬಿಕೆಗೆ ಸವಾಲು ಎದುರಾದಾಗ, ಅವನು ಕಾಣಿಸಿಕೊಳ್ಳುತ್ತಾನೆ. ಕತ್ತಲು ಮತ್ತು ಅವ್ಯವಸ್ಥೆಯಡಿ ಸಿಲುಕಿದ ಈ ಜಗತ್ತಿನಲ್ಲಿ.. ಉಗ್ರ ನರಸಿಂಹನ ಅವತಾರದಲ್ಲಿ ಭಗವಾನ್‌ ವಿಷ್ಣು ಮಹಾವತಾರ ಎತ್ತುತ್ತಾನೆ. 3ಡಿ ಅನಿಮೇಷನ್‌ನಲ್ಲಿ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಮಹಾಕಾವ್ಯದ ಯುದ್ಧವನ್ನು ಅನುಭವಿಸಿ. ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಶೀಘ್ರದಲ್ಲೇ ಬರಲಿದೆ!" ಎಂದಿದೆ.

ಹಲವು ಭಾಗಗಳಲ್ಲಿ ತೆರೆಗೆ

ಸಿನಿಮಾಕ್ಕೆ ಸ್ಯಾಮ್ ಸಿಎಸ್ ಮತ್ತು ಶ್ಲೋಕ ಅರುಗಳು ಸಂಗೀತ ನೀಡಿದ್ದು, ಮಹಾವತಾರ್‌ ಸಿರೀಸ್‌ನ ಮೊದಲ ಭಾಗವಾಗಿ ಮಹಾವತಾರ್‌ ನರಸಿಂಹ ಅನಿಮೇಷನ್‌ ಸಿನಿಮಾ ಮೂಡಿಬಂದಿದೆ. ಸದ್ಯ ಶೀರ್ಷಿಕೆ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರದ ವಿಶೇಷತೆಗಳು ಮುಂದಿನ ದಿನಗಳಲ್ಲಿ ಒಂದೊಂದಾಗಿ ಹೊರಬೀಳಲಿವೆ.

2012ರಲ್ಲಿ ಆರಂಭವಾದ ಹೊಂಬಾಳೆ ಫಿಲ್ಮ್ಸ್‌

2012ರಲ್ಲಿ ವಿಜಯ್‌ ಕಿರಗಂದೂರು ಹಾಗೂ ಚೆಲುವೆಗೌಡ ಜೊತೆ ಸೇರಿ ಹೊಂಬಾಳೆ ಫಿಲ್ಮ್ಸ್‌ ಆರಂಭಿಸಿದರು. 2014ರಲ್ಲಿ ಮೊದಲ ಬಾರಿಗೆ ನಿನ್ನಿಂದಲೇ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫರ್ನಾಂಡಿಸ್‌ ಜೊತೆಯಾಗಿ ನಟಿಸಿದ್ದರು. ಇದುವರೆಗೂ ಮಾಸ್ಟರ್‌ ಪೀಸ್‌, ರಾಜಕುಮಾರ್‌, ಕೆಜಿಎಫ್‌ , ಕೆಜಿಎಫ್‌ 2, ಯುವರತ್ನ, ಕಾಂತಾರ, ರಾಘವೇಂದ್ರ ಸ್ಟೋರ್ಸ್‌, ಧೂಮಂ, ಸಲಾರ್‌, ಯುವ, ರಘುತಾತ, ಬಘೀರ ಸಿನಿಮಾಗಳು ಈ ಸಂಸ್ಥೆ ಮೂಲಕ ತಯಾರಾಗಿವೆ. ಸದ್ಯಕ್ಕೆ ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣ ನಡೆಯುತ್ತಿದೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು , ಮಲಯಾಳಂ ಭಾಷೆಗಳಲ್ಲಿ ಹೊಂಬಾಳೆ ಸಂಸ್ಥೆಯಿಂದ ಸಿನಿಮಾ ನಿರ್ಮಾಣವಾಗಿದೆ.

Whats_app_banner