Bagheera Vs Amaran: ಬೆಂಗಳೂರಲ್ಲಿ ಕನ್ನಡದ ‘ಬಘೀರ’ನಿಗೆ 415 ಶೋ, ತಮಿಳಿನ ಅಮರನ್ ಚಿತ್ರಕ್ಕೆ 400 ಶೋ!
Bagheera Vs Amaran: ಬಘೀರ ಸಿನಿಮಾ ಅಕ್ಟೋಬರ್ 31ರಂದು ಕನ್ನಡದ ಜತೆಗೆ ತೆಲುಗಿನಲ್ಲಿಯೂ ಬಿಡುಗಡೆ ಆಗುತ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ, ಮೊದಲ ದಿನ ಒಳ್ಳೆಯ ಶೋಗಳನ್ನೇ ತೆಕ್ಕೆಗೆ ಹಾಕಿಕೊಂಡಿದೆ. ಈ ಸಿನಿಮಾ ಜತೆಗೆ ತಮಿಳಿನ ಅಮರನ್ ಚಿತ್ರಕ್ಕೂ ಬೆಂಗಳೂರಲ್ಲಿ ಸರಿ ಸಮ ಶೋಗಳು ಸಿಕ್ಕಿವೆ.

Bagheera Vs Amaran: ಸ್ಯಾಂಡಲ್‌ವುಡ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಘೀರ ಸಿನಿಮಾ ಬಿಡುಗಡೆ ಆಗುತ್ತಿದೆ. ಬಘೀರ ಸಿನಿಮಾದ ಜತೆ ಜತೆಗೆ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳೂ ತೆರೆಗೆ ಬರುತ್ತಿವೆ. ಹಿಂದಿಯಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಅಗೇನ್, ತಮಿಳಿನಲ್ಲಿ ಶಿವಕಾರ್ತಿಕೇಯನ್ ನಟನೆಯ ಅಮರನ್ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅದರಲ್ಲೂ ಬೆಂಗಳೂರಿನ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಟ್ರಾಫಿಕ್ ಜಾಸ್ತಿಯಾಗುತ್ತಿದೆ. ಇಷ್ಟೆಲ್ಲ ಗದ್ದಲದ ನಡುವೆಯೇ ಬೆಂಗಳೂರಿನಲ್ಲಿ ಬಘೀರ ಸಿನಿಮಾಕ್ಕೆ ಮೊದಲ ದಿನ ಸಿಕ್ಕ ಶೋಗಳೆಷ್ಟು, ಅಮರನ್ ಸಿನಿಮಾಕ್ಕೆ ಸಿಕ್ಕ ಶೋಗಳೆಷ್ಟು ಇಲ್ಲಿದೆ ಮಾಹಿತಿ.
ದೀಪಾವಳಿ ಹಬ್ಬದ ಪ್ರಯುಕ್ತ ಈ ಮಾಸಾಂತ್ಯಕ್ಕೆ ಕನ್ನಡದಲ್ಲಿ ಬಘೀರನ ಅಬ್ಬರ ಶುರುವಾಗಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ, ಸದ್ಯ ಬಹು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ಬರೆದ ಕಥೆಗೆ, ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್ , ಶ್ರೀಮುರಳಿಗೆ ಜೋಡಿಯಾಗಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಬಘೀರ ಚಿತ್ರಕ್ಕೆ ಒಳ್ಳೆಯ ಶೋಗಳೇ ಸಿಕ್ಕಿವೆ.
ಬಘೀರ Vs ಅಮರನ್
ಬಘೀರ ಸಿನಿಮಾಕ್ಕೆ ಬೆಂಗಳೂರಿನಲ್ಲಿ 400 ಪ್ಲಸ್ ಶೋ ಸಿಕ್ಕಿವೆ. ಇದೇ ಬಘೀರ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು, ಹೈದರಾಬಾದ್‌ನಲ್ಲಿ 200 ಪ್ಲಸ್ ಶೋಗಳು ಸಿಕ್ಕಿವೆ. ಇದೇ ಚಿತ್ರಕ್ಕೆ ತಮಿಳಿನಲ್ಲಿ ಕೇವಲ ನಾಲ್ಕೈದು ಶೋಗಳು ಮಾತ್ರ ಪ್ರಾಪ್ತವಾಗಿವೆ. ಆದರೆ, ಅದೇ ತಮಿಳಿನ ಸಿನಿಮಾ ಅಮರನ್ ಕರ್ನಾಟಕದಲ್ಲಿ ಕನ್ನಡದ ಜತೆಗೆ ತಮಿಳು ಭಾಷೆಯಲ್ಲಿಯೂ ಬಿಡುಗಡೆ ಆಗುತ್ತಿದ್ದು, ಬೆಂಗಳೂರಿನಲ್ಲಿ ಮೂಲ ತಮಿಳು ವರ್ಷನ್ 400ಕ್ಕೂ ಅಧಿಕ ಶೋಗಳನ್ನು ಗಿಟ್ಟಿಸಿಕೊಂಡಿದೆ. (ಅ. 30ರ ಮಧ್ಯಾಹ್ನ 1: 15ರ ಮಾಹಿತಿ)
ಎರಡು ಶೇಡ್‌ನಲ್ಲಿ ಬಘೀರ
ಬಘೀರ ಚಿತ್ರದಲ್ಲಿ ಶ್ರೀಮುರಳಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಪೊಲೀಸ್ ಅಧಿಕಾರಿಯಾದರೆ, ಮತ್ತೊಂದರಲ್ಲಿ ಮುಖಕ್ಕೆ ಮುಖವಾಡ ಧರಿಸಿದ ಬಘೀರನಾಗಿದ್ದಾರೆ. ಪೊಲೀಸ್ ವೇಷದಲ್ಲಿದ್ದುಕೊಂಡು, ಸಮಾಜದ ಕೆಟ್ಟ ಮುಖಗಳನ್ನು ಸರ್ವನಾಶ ಮಾಡಲು ಬಘೀರ ವೇಷದಲ್ಲಿ ಎಂಟ್ರಿಕೊಡುವವನಾಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಬರೆದ ಬಘೀರ ಚಿತ್ರದ ಕಥೆಗೆ ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದಲ್ಲಿ ಬಘೀರ ಚಿತ್ರ ಮತ್ತಷ್ಟು ಮೊನಚಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಮೋಡಿ ಈಗಾಗಲೇ ರುಧಿರ ಧಾರಾ ಹಾಡಿನ ಮೂಲಕ ಕೇಳುಗನ ಕಿವಿಗೆ ಬಿದ್ದಿದೆ. ಈಗ ಇದೇ ಸಿನಿಮಾ ಟ್ರೇಲರ್ ಮೂಲಕ ಆಗಮಿಸಿ, ಕುತೂಹಲದ ಕಿಡಿ ಹೊತ್ತಿಸಿದೆ.

ವಿಭಾಗ