HT Kannada Exclusive: ಸದ್ಯದಲ್ಲೇ ಶುರುವಾಗಲಿದೆ ಕಿಚ್ಚ ಸುದೀಪ್ ನಟನೆಯ ʻಮ್ಯಾಕ್ಸ್ 2ʼ; ʻಬಿಲ್ಲ ರಂಗ ಬಾಷʼ ಚಿತ್ರಕ್ಕೂ ಮೊದಲೇ ಬಿಡುಗಡೆ
ಕಿಚ್ಚ ಸುದೀಪ್ ನಟನೆಯ ʻಮ್ಯಾಕ್ಸ್ʼ ಸಿನಿಮಾ ಕಳೆದ ವರ್ಷದ ಡಿಸೆಂಬರ್ 25ರಂದು ತೆರೆಗೆ ಬಂದಿತ್ತು. ಹಿಟ್ ಪಟ್ಟ ಪಡೆದಿದ್ದ ಈ ಸಿನಿಮಾ ಇದೀಗ ಪ್ರೀಕ್ವೆಲ್ ಆಗುವ ಹಂತಕ್ಕೆ ಬಂದಿದೆ. ʻಮ್ಯಾಕ್ಸ್ 2ʼ ಚಿತ್ರದಲ್ಲಿ ಸುದೀಪ್ ತಮ್ಮ ಅರ್ಜುನ್ ಮಹಾಕ್ಷಯ್ ಪಾತ್ರವನ್ನು ಮುಂದುವರೆಸಲಿದ್ದಾರೆ. ಈ ಬಗ್ಗೆ ಇಲ್ಲಿದೆ ಎಕ್ಸ್‌ಕ್ಲೂಸಿವ್ ಮಾಹಿತಿ.

ಸುದೀಪ್ ಅಭಿನಯದ ʻಮ್ಯಾಕ್ಸ್ʼ ಚಿತ್ರದ ಮುಂದುವರೆದ ಭಾಗ ಬರುವ ಸಾಧ್ಯತೆ ಇದೆ ಎಂಬ ಮಾತು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ʻಮ್ಯಾಕ್ಸ್ 2ʼ ಬರುವುದು ನಿಜವಷ್ಟೇ ಅಲ್ಲ, ಅದು ‘ಬಿಲ್ಲ ರಂಗ ಬಾಷ’ ಚಿತ್ರಕ್ಕೂ ಮೊದಲೇ ಬಿಡುಗಡೆಯಾಗಲಿದೆ. ಹೌದು, ʻಮ್ಯಾಕ್ಸ್ 2ʼ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಮೊದಲ ಭಾಗ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.
ʻಮ್ಯಾಕ್ಸ್ 2ʼ ಚಿತ್ರದಲ್ಲಿ ಸುದೀಪ್ ತಮ್ಮ ಅರ್ಜುನ್ ಮಹಾಕ್ಷಯ್ ಪಾತ್ರವನ್ನು ಮುಂದುವರೆಸಲಿದ್ದಾರೆ. ಮೊದಲ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್. ಧನು ಮತ್ತು ಸುದೀಪ್ ಜೊತೆಯಾಗಿ ನಿರ್ಮಾಣ ಮಾಡಿದ್ದರು. ʻಮ್ಯಾಕ್ಸ್ 2ʼ ಚಿತ್ರವನ್ನು ಯಾರು ನಿರ್ಮಾಣ ಮಾಡಲಿದ್ದಾರೆ ಎಂಬ ವಿಷಯ ಸದ್ಯದಲ್ಲೇ ಹೊರಬೀಳಲಿದೆ. ಈ ಕುರಿತು ಮುಂದಿನ ಒಂದೆರಡು ದಿನಗಳಲ್ಲಿ ತೀರ್ಮಾನವಾಗಲಿದ್ದು, ಆ ನಂತರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ತೆರೆದುಕೊಳ್ಳಲಿದೆ ಅರ್ಜುನ್ ಮಹಾಕ್ಷಯ್ ಹಿನ್ನೆಲೆ
ʻಮ್ಯಾಕ್ಸ್ 2ʼ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದು ‘ಮ್ಯಾಕ್ಸ್’ ಚಿತ್ರದ ಮುಂದುವರೆದ ಭಾಗ ಎಂದೆನಿಸಬಹುದು. ಆದರೆ, ಇದು ಸೀಕ್ವೆಲ್ ಅಲ್ಲ. ಅದರ ಪ್ರೀಕ್ವೆಲ್ ಎಂದು ಹೇಳಲಾಗುತ್ತಿದೆ. ʻಮ್ಯಾಕ್ಸ್ʼ ಚಿತ್ರದಲ್ಲಿ ಸುದೀಪ್ ಸಸ್ಪೆಂಡ್ ಆಗಿ ನಂತರ ಡ್ಯೂಟಿಗೆ ಮರಳಿರುತ್ತಾರೆ. ‘ಮ್ಯಾಕ್ಸ್ 2’ನಲ್ಲಿ ಅದರ ಹಿಂದಿನ ಕಥೆಯನ್ನು ಹೇಳಲಾಗುತ್ತದಂತೆ. ಸುದೀಪ್ ಅವರ ಮಹಾಕ್ಷಯ್ ಪಾತ್ರ ಯಾಕೆ ಸಸ್ಪೆಂಡ್ ಆಗಿರುತ್ತದೆ ಮತ್ತು ಅದರ ಹಿಂದೆ ಏನೆಲ್ಲಾ ಘಟನೆಗಳು ನಡೆದಿರುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಮುಂದುವರೆಯಲಿದ್ದು, ಮಿಕ್ಕಂತೆ ಬಹಳಷ್ಟು ಹೊಸ ಪಾತ್ರಗಳು ಸೇರಿಕೊಳ್ಳಲಿವೆ. ಈ ಚಿತ್ರದ ಚಿತ್ರೀಕರಣ ಸಹ ಮಹಾಬಲಿಪುರಂ ಸುತ್ತಮುತ್ತ ನಡೆಯುತ್ತದೆ ಎಂದು ಹೇಳಲಾಗಿದೆ.
ಬಿಲ್ಲ ರಂಗ ಬಾಷ ಕಥೆ ಏನು?
‘ಬಿಲ್ಲ ರಂಗ ಭಾಷಾ’ ಚಿತ್ರದ ಮುಹೂರ್ತ ಏಪ್ರಿಲ್ 16ರಂದು ನಡೆದಿತ್ತು. ಅಲ್ಲಿಂದ ಸುಮಾರು 10 ದಿನಗಳ ಕಾಲ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಸದ್ಯ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡನೇ ಹಂತದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ನೈಸ್ ರಸ್ತೆಯ ಬಳಿ ಚಿತ್ರಕ್ಕೆಂದೆ ದೊಡ್ಡ ಸೆಟ್ ನಿರ್ಮಿಸಲಾಗುತ್ತಿದ್ದು, ಅಲ್ಲಿ ಮಹತ್ವದ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲಿ ‘ಹನುಮಾನ್’ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ, ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
‘ಬಿಲ್ಲ ರಂಗ ಭಾಷ’ ಚಿತ್ರದ ಗ್ಯಾಪ್‍ನಲ್ಲೇ ‘ಮ್ಯಾಕ್ಸ್ 2’ ಚಿತ್ರದ ಚಿತ್ರೀಕರಣ ನಡೆಯಲಿದ್ದು, ʻಮ್ಯಾಕ್ಸ್ 2ʼ ಮೊದಲು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವರದಿ: ಚೇತನ್ ನಾಡಿಗೇರ್