ʻಕನ್ನಡ ಚಿತ್ರರಂಗದಲ್ಲಿ ನನಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂಬ ಬೇಸರ, ಕೊರಗು ಇದೆʼ; ಅಜೇಯ್ ರಾವ್
ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನನಗೂ ಕೊಡುಗೆ ಕೊಡಬೇಕು ಎಂಬ ಆಸೆ ಇದೆ. ಅವರೆಲ್ಲರಿಂದ ನಾನು ಬಹಳ ಇನ್‍ಸ್ಪೈರ್ ಆಗಿದ್ದೇನೆ. ಅವರೆಲ್ಲರೂ ನಾನು ಬಂದ ನಂತರ ಬಂದವರು. ಈ ಕಾರಣಕ್ಕೆ ನಾನು ಮುಂಚೂಣಿಗೆ ಬರಬೇಕು ಎಂಬ ಆಸೆ ಇದೆ ಎಂದಿದ್ದಾರೆ ಅಜಯ್ ರಾವ್

Ajay Rao: ಅಜೇಯ್ ರಾವ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳೇ ಆಗಿವೆ. ಈ ಮಧ್ಯೆ, ಅವರು ‘ಯುದ್ಧಕಾಂಡ’ ಎಂಬ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದರು. ಆದರೆ, ಇತ್ತೀಚೆಗೆ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರ ಕೊನೆಗೂ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಏಪ್ರಿಲ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು KVN ಪ್ರೊಡಕ್ಷನ್ಸ್ ಸಂಸ್ಥೆ ವಿತರಣೆ ಮಾಡುತ್ತಿದೆ.
ಈ ಚಿತ್ರ ಭಾರತದಾದ್ಯಂತ ಎಲ್ಲರಿಗೂ ತಲುಪಬೇಕು ಎನ್ನುವ ಅಜೇಯ್, ‘ಇದು ತುಂಬಾ ದೊಡ್ಡ ಬಜೆಟ್‍ನ ಚಿತ್ರವೂ ಅಲ್ಲ, ತೀರಾ ಕಡಿಮೆ ಬಜೆಟ್‍ನ ಚಿತ್ರವೂ ಅಲ್ಲ. ನನ್ನ ಶಕ್ತಿ ಪ್ರಕಾರ, ಚೆನ್ನಾಗಿ ಮಾಡಿದ್ದೇನೆ. ಇದು ಭಾರತದಾದ್ಯಂತ ಸುದ್ದಿ ಮಾಡಬೇಕು ಎಂಬ ಹಠ ನನ್ನದು. ಮಲಯಾಳಂ, ತೆಲುಗಿನಲ್ಲಿ ಕಡಿಮೆ ಬಜೆಟ್‍ನಲ್ಲಿ ತಯಾರಾದ ಚಿತ್ರಗಳು ದೊಡ್ಡ ದಾಖಲೆ ಮಾಡಿವೆ. 100 ಕೋಟಿ ರೂ. ಗಳಿಕೆ ಮಾಡಿವೆ. ಇಲ್ಲಿ ಬಜೆಟ್‍ಗಿಂತ ಈ ವಿಷಯ ಎಲ್ಲರಿಗೂ ತಲುಪಬೇಕು. ಈ ಚಿತ್ರ ಎಲ್ಲರಿಗೂ ಮಾದರಿ ಆಗಬೇಕು ಮತ್ತು ಒಬ್ಬ ಕಲಾವಿದನಾಗಿ ಫ್ರಂಟ್‍ಲೈನ್ ಹೀರೋಗಳ ಪೈಕಿ ಬಂದು ನಿಲ್ಲಬೇಕು ಎಂಬ ಎರಡು ಸ್ವಾರ್ಥ ಇದೆ’ ಎನ್ನುತ್ತಾರೆ ಅಜೇಯ್ ರಾವ್.
ನನಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ
ನನಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂಬ ಬೇಸರ, ಕೊರಗು ಇದೆ ಎನ್ನುವ ಅಜೇಯ್ ರಾವ್, ‘ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ಯಾರೂ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ಯಾರೂ ಬಳಸಿಕೊಳ್ಳದಿದ್ದಾಗ, ನಾವೇ ಆ ಪ್ರಯತ್ನ ಮಾಡಬೇಕು ಎಂದು ನಂಬಿರುವವನು ನಾನು. ನನ್ನನ್ನು ನಾನೇ ಸೃಷ್ಟಿ ಮಾಡಿಕೊಳ್ಳಬೇಕು, ನನ್ನ ಭವಿಷ್ಯವನ್ನು ನಾನೇ ಬರೆದುಕೊಳ್ಳಬೇಕು, ಯಾರನ್ನೂ ನನ್ನ ಭವಿಷ್ಯ ಏನು ಎಂದು ಕೇಳುವುದಕ್ಕಿಂತ ನನ್ನ ಜಾತಕವನ್ನು ನಾನೇ ಬರೆದುಕೊಳ‍್ಳಬೇಕು ಎಂದು ನಿರ್ಧಾರ ಮಾಡಿ, ಈ ಚಿತ್ರಕ್ಕೆ ಕೈ ಹಾಕಿದೆ. ನಾನು ಬೆಳೆಯಬೇಕು ಎಂಬ ಸ್ವಾರ್ಥದಿಂದ ಈ ಚಿತ್ರ ಮಾಡಿದೆ. ಇನ್ನೊಂದು ವಿಷಯವೇನೆಂದರೆ, ಮಧ್ಯಮ ಬಜೆಟ್‍ನ ಕನ್ನಡ ಚಿತ್ರವೊಂದು ಇಡೀ ದೇಶದಲ್ಲಿ ಸುದ್ದಿಯಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು ಎಂಬುದು ನನ್ನ ಹಠ’ ಎನ್ನುತ್ತಾರೆ ಅವರು.
ಒಬ್ಬ ನಟನಾಗಿ ಸಾಕಷ್ಟು ಪ್ರೂವ್ ಮಾಡಿದ್ದೇನೆ ಎನ್ನುವ ಅವರು, ‘ನನ್ನ ಚಿತ್ರಗಳ ಸೋಲು-ಗೆಲುವು ಏನೇ ಇರಬಹುದು. ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿರುವುದೇ ಆ ಚಿತ್ರಗಳು. ಸಿನಿಮಾ ನಿರ್ಮಾಣ ಮಾಡುವುದಕ್ಕೆ ಸಾಮರ್ಥ್ಯ ನೀಡಿದ್ದೇ ಆ ಚಿತ್ರಗಳು. ಮುಂಚೂಣಿಗೆ ಬಂದರೆ ನನಗೆ ಶಕ್ತಿ ಜಾಸ್ತಿ ಬರುತ್ತದೆ. ಒಬ್ಬ ನಟನಾಗಿ ನಾನು ಪ್ರೂವ್ ಮಾಡಿದ್ದೇನೆ. ಸೋತಿರುವ ಚಿತ್ರಗಳಲ್ಲೂ ನಾನು ಅದೇ ಪ್ರಯತ್ನ ಹಾಕಿದ್ದೇನೆ. ಗೆದ್ದಿರುವ ಚಿತ್ರಗಳಲ್ಲೂ ಅದೇ ಎಫರ್ಟ್ ಹಾಕಿರುತ್ತೇನೆ. ನಾನು ಚೆನ್ನಾಗಿ ಮಾಡಿದ್ದಕ್ಕೆ ಚಿತ್ರ ಗೆದ್ದಿರುವುದಿಲ್ಲ ಅಥವಾ ನಾನು ಕೆಟ್ಟದಾಗಿ ನಟಿಸಿದ್ದಕ್ಕೆ ಚಿತ್ರ ಸೋತಿರುವುದಿಲ್ಲ. ಎಲ್ಲ ಚಿತ್ರಗಳಲ್ಲೂ ಶಕ್ತಿ ಮೀರಿ ನಟಿಸಿದ್ದೀನಿ. ಮುಂಚೂಣಿಗೆ ಬರಬೇಕೆಂದರೆ, ಇಡೀ ಚಿತ್ರ ಗೆಲ್ಲಬೇಕು. ಇಡೀ ಸಿನಿಮಾ ವ್ಯಾಪಾರ ದೃಷ್ಟಿಯಲ್ಲಿ ಗೆದ್ದರೆ, ಮುಂದಿನ ಚಿತ್ರಕ್ಕೆ ಭರವಸೆ ಮೂಡಿಸುತ್ತದೆ. ಆ ಭರವಸೆಯನ್ನು ಕೆಡಿಸಿಕೊಳ್ಳದೆ ಮುಂದಿನ ಸಿನಿಮಾ ಮಾಡಬೇಕು. ಅದಕ್ಕೆ ಹೂಡಕೆದಾರರು ಬರಬೇಕು. ನನ್ನನ್ನು ನಂಬಿ ಬರುವವರು ಬೇಕು. ಅವರಿಗೆ ಹಣಕಾಸಿನ ವ್ಯವಹಾರವಾದರೆ, ನನಗೆ ಸಮಾಜಕ್ಕೆ ಏನಾದರೂ ಕೊಡಬೇಕು ಎಂದಿರುತ್ತದೆ. ಸಮಾಜಕ್ಕೆ ಏನಾದರೂ ಕೊಡಬೇಕು ಎಂದರೆ ಶಕ್ತಿ ಬರಬೇಕು. ದೊಡ್ಡ ಹುದ್ದೆಯಲ್ಲಿದ್ದರೆ, ಸಹಜವಾಗಿಯೇ ಅಧಿಕಾರ ಸಿಗುತ್ತದೆ’ ಎಂಬುದು ಅಜೇಯ್ ಅಭಿಪ್ರಾಯ.
ರಕ್ಷಿತ್ ಶೆಟ್ಟಿ, ರಿಷಬ್‌ಗೂ ಮುಂಚೆ ಬಂದಿದ್ದೀನಿ, ಆದರೂ..
ಬರೀ ನಟನೆ ಮಾಡಿಕೊಂಡಿರುತ್ತೇನೆ, ಬಂದ ದುಡ್ಡಲ್ಲಿ ಮನೆ ನೋಡಿಕೊಂಡಿದ್ದರೆ ಸಾಕು ಎಂದರೆ ಆರಾಮಾಗಿ ಇರಬಹುದು ಎನ್ನುವ ಅಜೇಯ್, ‘ನನಗೆ ನಿರ್ಮಾಣ ಅಥವಾ ಹೋರಾಟ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ನಾನು ಸಹ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡಬೇಕು ಎಂಬ ಆಸೆ. ಈಗಾಗಲೇ ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮುಂತಾದವರು ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನನಗೂ ಕೊಡುಗೆ ಕೊಡಬೇಕು ಎಂಬ ಆಸೆ ಇದೆ. ಅವರೆಲ್ಲರಿಂದ ನಾನು ಬಹಳ ಇನ್‍ಸ್ಪೈರ್ ಆಗಿದ್ದೇನೆ. ಅವರೆಲ್ಲರೂ ನಾನು ಬಂದ ನಂತರ ಬಂದವರು. ಈ ಕಾರಣಕ್ಕೆ ನಾನು ಮುಂಚೂಣಿಗೆ ಬರಬೇಕು ಎಂಬ ಆಸೆ ಇದೆಯೇ ಹೊರತು, ಕೋಟಿ ಕೋಟಿ ಸಂಭಾವನೆ ಪಡೆದು ಮೆರೆಯಬೇಕು ಎಂಬ ಆಸೆ ಇಲ್ಲ’ ಎನ್ನುತ್ತಾರೆ ಅಜೇಯ್.
ವರದಿ; ಚೇತನ್ ನಾಡಿಗೇರ್