Film News: ವಿದೇಶಿ ನೆಲದಲ್ಲಿ ಕನ್ನಡದ ಕಂಪು, ಫಾರಿನ್ ಚಿತ್ರಮಂದಿರಗಳಲ್ಲಿ ಕೆಜಿಎಫ್ ಸಿನಿಮಾ ಓಡ್ತಾ ಉಂಟು, RRR ಪಠಾಣ್‌ಗೂ ಬೇಡಿಕೆ
Indian films overseas: ಭಾರತದಲ್ಲಿ ಧೂಳೆಬ್ಬಿಸಿದ ಕೆಲವು ಸಿನಿಮಾಗಳು ಜಪಾನ್, ರಷ್ಯಾ ಸೇರಿದಂತೆ ವಿದೇಶಿ ಥಿಯೇಟರ್‌ಗಳಲ್ಲಿ ಕನ್ನಡ ಸೇರಿದಂತೆ ಭಾರತದ ಸಿನಿಮಾಗಳು ಈಗಲೂ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಸದ್ಯ ವಿದೇಶದಲ್ಲಿ ಹೆಚ್ಚು ಆದಾಯ ಗಳಿಸುತ್ತಿರುವ ಭಾರತದ ಸಿನಿಮಾಗಳು ಯಾವುವು ಎಂದು ನೋಡೋಣ.
ಕಳೆದ ಕೆಲವು ವಾರಗಳಲ್ಲಿ ಜಪಾನ್, ರಷ್ಯಾ ಸೇರಿದಂತೆ ವಿವಿಧೆಡೆ ಭಾರತದ ಕೆಲವು ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಕಳೆದ ಕೆಲವು ವಾರಗಳಿಂದ, ಕೆಲವು ತಿಂಗಳಿನಿಂದ ಅತ್ಯುತ್ತಮ ಗಳಿಕೆ ಕಾಣುತ್ತಿವೆ. ಪಿಂಕ್‌ವಿಲ್ಲಾ (pinkvilla) ವರದಿ ಪ್ರಕಾರ ಭಾರತದ ಸಿನಿಮಾಗಳ ವಿದೇಶಿ ಗಳಿಕೆ ಈ ಮುಂದಿನಂತೆ ಇದೆ.
ಆರ್‌ಆರ್‌ಆರ್
ಮೇ ತಿಂಗಳಿನಲ್ಲಿ ಬಿಡುಗಡೆಯಾದ ಆರ್‌ಆರ್‌ಆರ್ ಸಿನಿಮಾವು ಜಪಾನ್‌ನಲ್ಲಿ ಕಳೆದ 200 ದಿನಗಳನ್ನು ಪೂರೈಸಿದೆ. ಈ ಸಿನಿಮಾದ ಮೂಲಕ 16.65 ಶತಕೋಟಿ ಡಾಲರ್ ಅಥವಾ 136.70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆರ್‌ಆರ್‌ಆರ್ ಸಿನಿಮಾವು ವಿದೇಶಿ ನೆಲದಲ್ಲಿಯೇ ಅಂದರೆ ಜಾಗತಿಕವಾಗಿ 1252 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನೊಂದು ಖುಷಿಯ ಸಂಗತಿಯೆಂದರೆ ಆರ್‌ಆರ್‌ಆರ್ ಸಿನಿಮಾವು ಈ ವಾರ ಜಪಾನ್ ಭಾಷೆಯಲ್ಲಿ ಡಬ್ಬಿಂಗ್ ವರ್ಷನ್‌ನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ, ಇನ್ನೂ ಒಂದು ವರ್ಷ ಆರ್‌ಆರ್‌ಆರ್ ಸಿನಿಮಾ ಜಪಾನ್‌ನಲ್ಲಿ ಬೇಡಿಕೆ ಪಡೆಯುವ ನಿರೀಕ್ಷೆಯಿದೆ.
ಪಠಾಣ್ ಸಿನಿಮಾಕ್ಕೂ ಬೇಡಿಕೆ
ಶಾರೂಖ್ ಖಾನ್ ನಾಯಕನಾಗಿ ನಟಿಸಿದ ಪಠಾಣ್ ಚಿತ್ರವು ಮೇ ತಿಂಗಳಲ್ಲಿ ಬಾಂಗ್ಲಾದಲ್ಲಿ ಬಿಡುಗಡೆಯಾಗಿತ್ತು. ರಷ್ಯಾದಲ್ಲಿ ಕಳೆದ ವಾರ ಬಿಡುಗಡೆಯಾಗಿತ್ತು. ಬಾಂಗ್ಲಾದೇಶದಲ್ಲಿ ಈ ಸಿನಿಮಾದ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಅಂದರೆ, ಅಲ್ಲಿ ಅವತಾರ್ ಸಿನಿಮಾಕ್ಕಿಂತಲೂ ಹೆಚ್ಚು ಗಳಿಕೆ ಮಾಡಿದೆ. ರಷ್ಯಾದಲ್ಲಿ ಪಠಾಣ್ ಡಬ್ಬಿಂಗ್ ವರ್ಷನ್ ಬಿಡುಗಡೆಯಾಗಿ ಇಲ್ಲಿಯವರೆಗೆ 52 ಸಾವಿರ ಡಾಲರ್ ಗಳಿಕೆಯಾಗಿದೆ. ಜಗತ್ತಿನಾದ್ಯಂತ 1041 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ರಂಗಸ್ಥಳಂ
2018ರ ತೆಲುಗು ಸಿನಿಮಾ ರಂಗಸ್ಥಳಂ ಕೂಡ ಈಗ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಆರ್‌ಆರ್‌ಆರ್ ಜನಪ್ರಿಯತೆಯಿಂದಾಗಿ ರಾಮ್ ಚರಣ್ ನಟನೆಯ ರಂಗಸ್ಥಳಂ ಸಿನಿಮಾವು ಜಪಾನ್‌ನಲ್ಲಿ ಕಳೆದ ವಾರ ಬಿಡುಗಡೆ ಮಾಡಲಾಗಿತ್ತು. ಇದು ಅಲ್ಲಿ 140000 ಡಾಲರ್ ಗಳಿಕೆ ಮಾಡಿದೆ. ಐದು ವರ್ಷ ಹಳೆಯ ಸಿನಿಮಾವೊಂದಕ್ಕೆ ಇಷ್ಟು ಗಳಿಕೆಯಾದದ್ದು ವಿಶೇಷ.
ಕೆಜಿಎಫ್
ಕನ್ನಡದ ಕೆಜಿಎಫ್ ಈಗಾಗಲೇ ಜಾಗತಿಕವಾಗಿ ಸದ್ದು ಮಾಡಿದೆ. ಕೆಜಿಎಫ್ ಭಾಗ ಒಂದು ಮತ್ತು ಎರಡು ಸಿನಿಮಾಗಳು ಒಟ್ಟಾರೆಯಾಗಿ 10 ಮಿಲಿಯನ್ ಜಪಾನೀಸ್ ಅಂದರೆ ಸುಮಾರು 70 ಸಾವಿರ ಡಾಲರ್ ಗಳಿಕೆ ಮಾಡಿದೆ. ಕೆಜಿಎಫ್ 2 ಸಿನಿಮಾವು ಜಾಗತಿಕವಾಗಿ ಹೆಚ್ಚು ಗಳಿಕೆ ಮಾಡಿದೆ.
ಯಾವ ಸಿನಿಮಾ ಅತ್ಯಧಿಕ ಗಳಿಕೆ
ವಿದೇಶಿ ಗಳಿಕೆಯಲ್ಲಿ ದಂಗಲ್ ಸಿನಿಮಾವು ಟಾಪ್ 1 ಸ್ಥಾನದಲ್ಲಿದೆ. 216 ದಶಲಕ್ಷ ಡಾಲರ್ ಗಳಿಕೆ ಮಾಡಿತ್ತು. ಸೀಕ್ರೇಟ್ ಸೂಪರ್‌ಸ್ಟಾರ್ ಸಿನಿಮಾವು 118.70 ದಶಲಕ್ಷ ಡಾಲರ್, ಭಜರಂಗಿ ಬಾಯಿಜಾನ್ ಸಿನಿಮಾವು 70.80 ದಶಲಕ್ಷ ಡಾಲರ್, ಬಾಹುಬಲಿ (ಕನ್‌ಕ್ಲೂಷನ್) ಸಿನಿಮಾವು 61.5 ದಶಲಕ್ಷ ಡಾಲರ್ ಗಳಿಕೆ ಮಾಡಿತ್ತು. ಪಠಾಣ್ ಸಿನಿಮಾವು 49.20 ದಶಲಕ್ಷ ಡಾಲರ್, ಪಿಕೆ 46.80 ದಶಲಕ್ಷ ಡಾಲರ್, ಆರ್‌ಆರ್‌ಆರ್ ಸಿನಿಮಾವು 45.00 ದಶಲಕ್ಷ ಡಾಲರ್ ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾವು 27.50 ಡಾಲರ್ ಗಳಿಕೆ ಮಾಡಿದೆ.