ಎಐ ತಂತ್ರಜ್ಞಾನದಲ್ಲಿ ಮೂಡಿಬಂತು ‘ಲವ್ ಯು’; ಇದು ಕನ್ನಡದ ಮೊದಲ ಕೃತಕ ಬುದ್ಧಿಮತ್ತೆಯ ಚಿತ್ರ
ಕನ್ನಡ ಸುದ್ದಿ  /  ಮನರಂಜನೆ  /  ಎಐ ತಂತ್ರಜ್ಞಾನದಲ್ಲಿ ಮೂಡಿಬಂತು ‘ಲವ್ ಯು’; ಇದು ಕನ್ನಡದ ಮೊದಲ ಕೃತಕ ಬುದ್ಧಿಮತ್ತೆಯ ಚಿತ್ರ

ಎಐ ತಂತ್ರಜ್ಞಾನದಲ್ಲಿ ಮೂಡಿಬಂತು ‘ಲವ್ ಯು’; ಇದು ಕನ್ನಡದ ಮೊದಲ ಕೃತಕ ಬುದ್ಧಿಮತ್ತೆಯ ಚಿತ್ರ

ಕನ್ನಡದಲ್ಲಿ ಸಂಪೂರ್ಣವಾಗಿ ಎಐ ಬಳಸಿಕೊಂಡು ಒಂದು ಚಿತ್ರ ಸದ್ದಿಲ್ಲದೆ ತಯಾರಾಗಿರುವುದಷ್ಟೇ ಅಲ್ಲ, ಈ ಚಿತ್ರ ಸೆನ್ಸಾರ್‌ ಸಹ ಆಗಿ ಭಾರತದ ಮೊದಲ ಎಐ ಚಿತ್ರ ಎಂಬ ಪ್ರಮಾಣಪತ್ರವನ್ನೂ ಪಡೆದಿದೆ. ಈ ಚಿತ್ರದ ಹೆಸರು ‘ಲವ್ ಯೂ’. ಈ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಎಸ್‍. ನರಸಿಂಹಮೂರ್ತಿ. (ವರದಿ: ಚೇತನ್‌ ನಾಡಿಗೇರ್‌)

ಎಐ ತಂತ್ರಜ್ಞಾನದಲ್ಲಿ ಮೂಡಿಬಂತು ‘ಲವ್ ಯು’; ಇದು ಕನ್ನಡದ ಮೊದಲ ಕೃತಕ ಬುದ್ಧಿಮತ್ತೆಯ ಚಿತ್ರ
ಎಐ ತಂತ್ರಜ್ಞಾನದಲ್ಲಿ ಮೂಡಿಬಂತು ‘ಲವ್ ಯು’; ಇದು ಕನ್ನಡದ ಮೊದಲ ಕೃತಕ ಬುದ್ಧಿಮತ್ತೆಯ ಚಿತ್ರ

ನಟ-ನಿರ್ದೇಶಕ ರವಿಚಂದ್ರನ್‍ ಅವರು ತಮ್ಮ ಮುಂದಿನ ಚಿತ್ರಕ್ಕೆ ವ್ಯಾಪಕವಾಗಿ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುತ್ತಿರುವುದಾಗಿ ಹೇಳುತ್ತಲೇ ಇದ್ದಾರೆ. ಹೀಗಿರುವಾಗಲೇ, ಕನ್ನಡದಲ್ಲಿ ಸಂಪೂರ್ಣವಾಗಿ ಎಐ ಬಳಸಿಕೊಂಡು ಒಂದು ಚಿತ್ರ ಸದ್ದಿಲ್ಲದೆ ತಯಾರಾಗಿರುವುದಷ್ಟೇ ಅಲ್ಲ, ಈ ಚಿತ್ರ ಸೆನ್ಸಾರ್‍ ಸಹ ಆಗಿ ಭಾರತದ ಮೊದಲ ಎಐ ಚಿತ್ರ ಎಂಬ ಪ್ರಮಾಣಪತ್ರವನ್ನೂ ಪಡೆದಿದೆ.

ಈ ಚಿತ್ರದ ಹೆಸರು ‘ಲವ್ ಯೂ’. ಈ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಎಸ್‍. ನರಸಿಂಹಮೂರ್ತಿ. ಇನ್ನು, ಈ ಚಿತ್ರವನ್ನು ಎಐ ಮೂಲಕ ಸೃಷ್ಟಿಸಿರುವುದು ನೂತನ್‍. ಈಗಾಗಲೇ ಕೆಲವು ಚಿತ್ರಗಳ ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎಐ ಬಳಸಲಾಗುತ್ತಿದೆ. ಆದರೆ, ಈ ಚಿತ್ರತಂಡವು ಸಂಪೂರ್ಣವಾಗಿ ಎಐ ಮೂಲಕವೇ ಇಡೀ ಚಿತ್ರವನ್ನು ಸಂಪೂರ್ಣವಾಗಿ ಸೃಷ್ಟಿ ಮಾಡಿದೆ.

ಈ ಚಿತ್ರದ ಕುರಿತು ಮಾತನಾಡುವ ನರಸಿಂಹಮೂರ್ತಿ, ‘ಕಥೆ, ಸಾಹಿತ್ಯ, ಸಂಭಾಷಣೆ ಹೊರತುಪಡಿಸಿದರೆ, ಮಿಕ್ಕೆಲ್ಲವನ್ನೂ ಎಐ ತಂತ್ರಜ್ಞಾನದ ಮೂಲಕವೇ ಮಾಡಿರುವುದು ಈ ಚಿತ್ರದ ವಿಶೇಷತೆ. ಚಿತ್ರದಲ್ಲೀ ಬರುವ ಪ್ರತಿ ಪಾತ್ರಗಳು, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂಎಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೂತನ್ ಎಂಬ ಎಐ ನೇತೃತ್ವದಲ್ಲಿ ಚಿತ್ರವನ್ನು ರೂಪಸಿಲಾಗಿದೆ’ ಎನ್ನುತ್ತಾರೆ.

ಈ ಚಿತ್ರವನ್ನು ಒಂದು ರೂಮಿನಲ್ಲಿ, ಒಂದು ಕಂಪ್ಯೂಟರ್‌ ಇಟ್ಟುಕೊಂಡು, 20-30 ಎಐ ಸಾಫ್ಟ್‌ವೇರ್‌ಗಳನ್ನು ಬಳಸಿ ಸೃಷ್ಟಿಸಲಾಗಿದೆಯಂತೆ. ಕ್ಯಾಮೆರಾ ಬಳಸದೆಯೇ ಚಿತ್ರೀಕರಣವಾದ ಚಿತ್ರವಿದು. ಈ ಕುರಿತು ಮಾತನಾಡುವ ನೂತನ್‍, ‘ಚಿತ್ರದ ಅವಧಿ 95 ನಿಮಿಷಗಳಾದರೂ, ಸುಮಾರು ಸಾವಿರ ಗಂಟೆಯ ವೇಸ್ಟ್ ಇದೆ. ನಾವು ಕೇಳಿದ್ದನ್ನೆಲ್ಲಾ ಅದು ಕೊಡುವುದಿಲ್ಲ. ಅದು ಕೊಟ್ಟಿದ್ದರಲ್ಲ ನಾವು ಅತ್ಯುತ್ತಮವಾದುದನ್ನು ಬಳಸಿಕೊಳ್ಳಬೇಕು. ಹಾಗಾಗಿ, ಸಾಕಷ್ಟು ಸಮಯವಾಗುತ್ತದೆ. ಅದರ ಜೊತೆಗೆ ಕಡಿಮೆ ಅವಧಿಯಲ್ಲಾಗುತ್ತದೆ. ಸದ್ಯಕ್ಕೆ ಈ ತಂತ್ರಜ್ಞಾನ ಬಾಲ್ಯಾವಸ್ಥೆಯಲ್ಲಿದೆ. ಜಗತ್ತಿನಾದ್ಯಂತ ಸಾಕಷ್ಟು ಪ್ರಯೋಗಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ‘ಬಾಹುಬಲಿ’ ತರಹದ ಚಿತ್ರಗಳನ್ನು ಸುಲಭವಾಗಿ ಚಿತ್ರಗಳನ್ನು ಸೃಷ್ಟಿಸಬಹುದು’ ಎನ್ನುತ್ತಾರೆ. ಇದಕ್ಕೂ ಮೊದಲು ಅವರು ಕೆಲವು ಚಿತ್ರಗಳಿಗೆ ಗ್ರಾಫಿಕ್ಸ್ ಕೆಲಸಗಳನ್ನು ಮಾಡುವುದರ ಜೊತೆಗೆ ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ.

ಎಲ್ಲಾ ಪಾತ್ರಧಾರಿಗಳೂ ಎಐ ಸೃಷ್ಟಿಯಾದರೆ, ಪಾತ್ರಧಾರಿಗಳ ಹೆಸರೇನು ಎಂಬ ಪ್ರಶ್ನೆ ಸಹಜ. ಈ ಚಿತ್ರದ ನಾಯಕನಿಗೆ ನೂತನ್‍ ಎಐ ಎಂಬ ಹೆಸರು ಇಡಲಾಗಿದೆಯಂತೆ. ಇನ್ನು, ನಾಯಕಿಗೆ ಅಶ್ವಿನಿ ಎಐ ಎಂದು ನಾಮಕರಣ ಮಾಡಲಾಗಿದೆಯಂತೆ. ಚಿತ್ರದಲ್ಲಿ ಒಟ್ಟು 15 ಪಾತ್ರಗಳಿವೆಯಂತೆ. ಅವೆಲ್ಲವೂ ಎಐ ಜನರೇಟೆಡ್‍ ಪಾತ್ರಗಳಾದರೂ ಯಾವುದಕ್ಕೂ ಟೈಟಲ್‍ ಕಾರ್ಡ್‍ನಲ್ಲಿ ಹೆಸರು ನೀಡಲಾಗಿಲ್ಲ. ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯ ಸದಸ್ಯರು, ಮೊದಲು ಫ್ಯಾಂಟಸಿ ಪ್ರಮಾಣ ಪತ್ರ ಕೊಡುತ್ತೇವೆ ಎಂದರಂತೆ. ಚಿತ್ರತಂಡದ ಒತ್ತಾಯದ ಮೇರೆಗೆ ಎಐ ಪ್ರಮಾಣ ಪತ್ರ ನೀಡಲಾಗಿದೆ. ಈ ಮೂಲಕ ಭಾರತದ ಮೊದಲ ಎಐ ಪ್ರಮಾಣ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿರುವ ‘ಲವ್‍ ಯೂ’ ಚಿತ್ರವು ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ಮಧ್ಯೆ, ಪಂಜಾಬಿ ಭಾಷೆಯಲ್ಲಿ ‘ಮಹಾರಾಜ ಎಂಬ ಡೆನಿಮ್ಸ್’ ಎಂಬ ಸಂಪೂರ್ಣ ಎಐ ಮೂಲಕ ಸೃಷ್ಟಿಯಾದ ಚಿತ್ರವು ತಯಾರಾಗಿದ್ದು, ಕಳೆದ ವರ್ಷ ಚಿತ್ರದ ಟ್ರೇಲರ್‍ ಸಹ ಬಿಡುಗಡೆಯಾಗಿತ್ತು. ಈ ಚಿತ್ರವು ಖುಷ್ವಂತ್‍ ಸಿಂಗ್‍ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಚಿತ್ರವಾಗಿದ್ದು, ಈ ಚಿತ್ರವು ಜೂನ್‍ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮೊದಲು ‘ಲವ್‍ ಯೂ’ ಚಿತ್ರದ ಬಿಡುಗಡೆಯಾದರೆ, ಭಾರತದ ಮೊದಲ ಎಐ ಚಿತ್ರ ಕನ್ನಡದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. (ವರದಿ: ಚೇತನ್‌ ನಾಡಿಗೇರ್‌)

 

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner