ಕ್ಷಮಿಸಲು ಸಾಧ್ಯವಿಲ್ಲ! ಪಹಲ್‌ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ ಶಿವರಾಜ್‌ಕುಮಾರ್, ಅಕ್ಷಯ್ ಕುಮಾರ್, ಸಂಜಯ್ ದತ್
ಮಂಗಳವಾರ ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರನ್ನು ಹತ್ಯೆ ಮಾಡಿದ್ದಾರೆ. ಈ ಹೇಯ ಕೃತ್ಯದ ಬಗ್ಗೆ ಕನ್ನಡದ ನಟ ಶಿವರಾಜ್‌ಕುಮಾರ್, ಅಕ್ಷಯ್ ಕುಮಾರ್, ಸಂಜಯ್ ದತ್, ಅನುಪಮ್ ಖೇರ್ ಸೇರಿದಂತೆ ಬಾಲಿವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಕಾಶ್ಮೀರದ ಪಹಲ್‌ಗಾಮ್ ಪ್ರದೇಶದಲ್ಲಿ ಮಂಗಳವಾರ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 26 ಜನರನ್ನು ಸಾವನ್ನಪ್ಪಿದ್ದಾರೆ. ಈ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ದಾಳಿ ಹಿಂದಿರುವವರನ್ನು ಹುಟ್ಟಡಗಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಸಿನಿಮಾ ಸೆಲೆಬ್ರಿಟಿಗಳೂ ಸಹ ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ರವಾನಿಸಿದ್ದಾರೆ. ತ್ವರಿತ ಕ್ರಮಕ್ಕೆ ಮುಂದಾಗಿ ಎಂದು ಪ್ರಧಾನಿ ಮೋದಿ ಬಳಿ ವಿನಂತಿಸಿದ್ದಾರೆ.
ನಟ ಶಿವರಾಜ್‌ಕುಮಾರ್ ಏನಂದ್ರು?
ಈ ಬಗ್ಗೆ ನಟ ಶಿವರಾಜ್‌ಕುಮಾರ್ ಸಹ ಪೋಸ್ಟ್ ಹಂಚಿಕೊಂಡಿದ್ದಾರೆ. “ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ.ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ.” ಎಂದಿದ್ದಾರೆ.
ಅಕ್ಷಯ್ ಕುಮಾರ್ ಪೋಸ್ಟ್
ನಟ ಅಕ್ಷಯ್ ಕುಮಾರ್ X ಖಾತೆಯಲ್ಲಿ “ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ಏನೂ ತಪ್ಪು ಮಾಡದ ಜನರನ್ನು ಹೀಗೆ ಕೊಲ್ಲುವುದು ಶುದ್ಧ ದುಷ್ಟತನ. ಅವರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು.” ಎಂದಿದ್ದಾರೆ.
ನಟ ಶಿವರಾಜ್‌ಕುಮಾರ್ ಪೋಸ್ಟ್
ಬಾಲಿವುಡ್ ತಾರೆಗಳು ಪಹಲ್ಗಾಂ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ
“ಕಾಶ್ಮೀರದ ಪಹಲ್ಗಾಂನಲ್ಲಿ ನಿರಪರಾಧ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಭಯೋತ್ಪಾದನೆಗೆ ನಾಗರಿಕ ಜಗತ್ತಿನಲ್ಲಿ ಯಾವುದೇ ಸ್ಥಾನವಿಲ್ಲ ಮತ್ತು ಈ ಕೃತ್ಯ ಅಸಹ್ಯಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಗಾಯಗೊಂಡವರ ಬೇಗನೆ ಚೇತರಿಸಿಕೊಳ್ಳಲು ಪ್ರಾರ್ಥನೆಗಳು. ಓಂ ಸಾಯಿರಾಮ್,” ಎಂದು ಸೋನು ಸೂದ್ ಹೇಳಿದ್ದಾರೆ.
ತುಷಾರ್ ಕಪೂರ್, “ಪಹಲ್‌ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ, ಭಯೋತ್ಪಾದಕರಿಗೆ ಭಾರತ ಸೂಕ್ತವಾದ ಉತ್ತರ ನೀಡುತ್ತದೆ! ಗಾಯಗೊಂಡವರಿಗೆ ಮತ್ತು ಅಸುನೀಗಿದ ಕುಟುಂಬಗಳಿಗೆ ಪ್ರಾರ್ಥನೆಗಳು!” ಎಂದಿದ್ದಾರೆ.
ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ, ಸಂಜಯ್ ದತ್ ಟ್ವಿಟ್ ಮಾಡಿದ್ದಾರೆ. “ಅವರು ನಮ್ಮ ಜನರನ್ನು ರಕ್ತದಲ್ಲಿ ಕೊಂದಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ, ನಾವು ಪ್ರತೀಕಾರ ತೀರಿಸಿಕೊಳ್ಳಬೇಕು, ನಮ್ಮ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು ಅವರಿಗೆ ಅರ್ಹವಾದದ್ದನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ.” ಎಂದಿದ್ದಾರೆ.
ಅನುಪಮ್ ಖೇರ್ ದಾಳಿಯ ಬಗ್ಗೆ ಸ್ವಯಂ ಚಿತ್ರೀಕರಿಸಿದ ವೀಡಿಯೊವನ್ನು ಪೋಸ್ಟ್ ಮಾಡಿ, ತಮ್ಮ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಅನ್ನು ಜನರಿಗೆ ಮತ್ತೊಮ್ಮೆ ನೆನಪಿಸಿದ್ದಾರೆ.
ರವೀನಾ ಟಂಡನ್ ದಾಳಿಯ ಸುದ್ದಿಗೆ ಪ್ರತಿಕ್ರಿಯಿಸಿ, “ಓಂ ಶಾಂತಿ. ಸಂತಾಪ. ಆಘಾತ ಮತ್ತು ಕೋಪ. ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ದುರ್ಬಲರಿಗೆ ಪ್ರಾರ್ಥನೆಗಳು ಮತ್ತು ಶಕ್ತಿ. ನಾವು ಸಣ್ಣಪುಟ್ಟ ಜಗಳಗಳನ್ನು ಬಿಟ್ಟು, ಒಗ್ಗೂಡಿ ನಿಜವಾದ ಶತ್ರುವನ್ನು ಅರಿತುಕೊಳ್ಳುವ ಸಮಯ” ಎಂದಿದ್ದಾರೆ.
ಸೆಲೆಬ್ರಿಟಿಗಳ ಪೋಸ್ಟ್..
ದಂಗಲ್ ಚಿತ್ರದ ಮೂಲಕ ಹೆಸರು ಮಾಡಿದ ನಟಿ ಜೈರಾ ವಸೀಂ ಕೂಡ ದಾಳಿಯನ್ನು ಖಂಡಿಸಿದ್ದಾರೆ. “ಬೈಸಾರಾನ್, ಪಹಲ್ಗಾಂನಲ್ಲಿ ನಡೆದ ಭಯಾನಕ ಘಟನೆಯಿಂದ ನನಗೆ ತುಂಬ ದುಃಖವಾಗಿದೆ. ಇದು ಅನ್ಯಾಯ ಮತ್ತು ಅತ್ಯಂತ ತೀವ್ರ ಪದಗಳಲ್ಲಿ ಖಂಡನೀಯವಾಗಿದೆ. ಈ ನೋವಿನಲ್ಲಿ ಸಿಲುಕಿರುವ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು.” ಎಂದಿದ್ದಾರೆ.
ರಾಯಿಟರ್ಸ್ ಪ್ರಕಾರ, “ಕಾಶ್ಮೀರ್ ರೆಸಿಸ್ಟೆನ್ಸ್” ಎಂಬ ಉಗ್ರವಾದಿ ಗುಂಪು ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ವಿಭಾಗ