‘ಬಘೀರ’ ಟು ‘ಭೂಲ್‌ ಭುಲ್ಲಯ್ಯಾ 3’; ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರಮಂದಿರಕ್ಕೆ ಬರ್ತಿವೆ ಬಹುನಿರೀಕ್ಷಿತ ಸಿನಿಮಾಗಳು
ಕನ್ನಡ ಸುದ್ದಿ  /  ಮನರಂಜನೆ  /  ‘ಬಘೀರ’ ಟು ‘ಭೂಲ್‌ ಭುಲ್ಲಯ್ಯಾ 3’; ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರಮಂದಿರಕ್ಕೆ ಬರ್ತಿವೆ ಬಹುನಿರೀಕ್ಷಿತ ಸಿನಿಮಾಗಳು

‘ಬಘೀರ’ ಟು ‘ಭೂಲ್‌ ಭುಲ್ಲಯ್ಯಾ 3’; ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರಮಂದಿರಕ್ಕೆ ಬರ್ತಿವೆ ಬಹುನಿರೀಕ್ಷಿತ ಸಿನಿಮಾಗಳು

Diwali 2024 Movies: ಈ ಸಲದ ದೀಪಾವಳಿ ಸಿನಿಮಾ ಪ್ರೇಮಿಗಳಿಗೆ ಹಬ್ಬದ ಹೋಳಿಗೆ ಬಡಿಸಲಿದೆ. ಅಂದರೆ, ಪ್ರತಿ ಸಿನಿಮಾ ಇಂಡಸ್ಟ್ರಿಯಿಂದಲೂ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಈ ಮಾಸಾಂತ್ಯಕ್ಕೆ ದೀಪಾವಳಿ ಪ್ರಯುಕ್ತ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲಿವೆ.
ಈ ಮಾಸಾಂತ್ಯಕ್ಕೆ ದೀಪಾವಳಿ ಪ್ರಯುಕ್ತ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲಿವೆ. (Imdb)

Diwali 2024 Releasing Movies: ಇನ್ನೇನು ಬೆಳಕಿನ ಹಬ್ಬ ದೀಪಾವಳಿಗೆ ಹೆಚ್ಚು ದಿನ ಉಳಿದಿಲ್ಲ. ಮುಂದಿನ ವಾರವೇ ಸಂಭ್ರಮದಿಂದ ಆಚರಿಸುವ ಈ ಹಬ್ಬದ ಆಗಮನವಾಗಲಿದೆ. ಈ ನಡುವೆ ಇದೇ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ನಾ ಮುಂದು ತಾ ಮುಂದು ಎಂದು ಸಾಲುಗಟ್ಟಿ ಬರಲು ಸನ್ನದ್ಧವಾಗಿ ನಿಂತಿವೆ, ಬಹುನಿರೀಕ್ಷಿತ ಸಿನಿಮಾಗಳು. ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ, ತಮಿಳು, ಮಲಯಾಳಂ ಚಿತ್ರೋದ್ಯಮದಲ್ಲಿಯೂ ಒಂದಷ್ಟು ಸಿನಿಮಾಗಳು ಈ ಸಲದ ದೀಪಾವಳಿಗೆ ಬಿಡುಗಡೆ ಆಗಲಿವೆ. ಹಾಗಾದರೆ, ಆ ಸಿನಿಮಾಗಳು ಯಾವವು, ಇಲ್ಲಿದೆ ಮಾಹಿತಿ.

ಕನ್ನಡದಲ್ಲಿ ಬಘೀರನ ಅಬ್ಬರ

ದೀಪಾವಳಿ ಹಬ್ಬದ ಪ್ರಯುಕ್ತ ಈ ಮಾಸಾಂತ್ಯಕ್ಕೆ ಕನ್ನಡದಲ್ಲಿ ಬಘೀರನ ಅಬ್ಬರ ಶುರುವಾಗಲಿದೆ. ರೋರಿಂಗ್‌ ಸ್ಟಾರ್‌ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಸಿನಿಮಾ, ಸದ್ಯ ಬಹು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ. ಕನ್ನಡ ಮತ್ತು ತೆಲುಗಿನಲ್ಲಿ ಮೊದಲಿಗೆ ಈ ಸಿನಿಮಾ ಬಿಡುಗಡೆ ಆಗಲಿದೆ. ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಪ್ರಶಾಂತ್‌ ನೀಲ್‌ ಬರೆದ ಕಥೆಗೆ, ಡಾ. ಸೂರಿ ಅವರ ನಿರ್ದೇಶನವಿದೆ. ಇನ್ನುಳಿದಂತೆ, ರುಕ್ಮಿಣಿ ವಸಂತ್‌ , ಶ್ರೀಮುರಳಿಗೆ ನಾಯಕಿಯಾಗಿದ್ದಾರೆ. ಈ ಚಿತ್ರ ಅಕ್ಟೋಬರ್‌ 31ರಂದು ತೆರೆಗೆ ಬರಲಿದೆ.

ಬಾಲಿವುಡ್‌ನಲ್ಲಿ ಈ ವರ್ಷ ದೊಡ್ಡ ಕ್ಲ್ಯಾಷ್‌

ನವೆಂಬರ್ 1 ರಂದು ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಮೊದಲನೆಯದು ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 3' ಮತ್ತು ಎರಡನೆಯದು ಅಜಯ್ ದೇವಗನ್ ಅವರ 'ಸಿಂಗಮ್ ಅಗೇನ್'. ಈ ವರ್ಷದ ಅತಿದೊಡ್ಡ ಕ್ಲ್ಯಾಷ್‌ ಎಂದೂ ಇದನ್ನು ಪರಿಗಣಿಸಲಾಗಿದೆ. ಆ ಪೈಕಿ ಈಗಾಗಲೇ 'ಭೂಲ್ ಭುಲೈಯಾ 3' ಸಿನಿಮಾದ ಮುಂಗಡ ಟಿಕೆಟ್‌ ಬುಕಿಂಗ್‌ ಸಹ ಆರಂಭವಾಗಿದ್ದು, ಸಿಂಗಂ ಅಬ್ಬರವೂ ಶುರುವಾಗಲಿದೆ.

ಬಾಲಿವುಡ್‌ನಲ್ಲಿ ಬಹು ನಿರೀಕ್ಷೆ ಹುಟ್ಟಿಹಾಕಿರುವ ಈ ಎರಡೂ ಸಿನಿಮಾಗಳು, ಈ ಹಿಂದಿ ಸಿನಿಮಾಗಳ ಸೀಕ್ವೆಲ್ಸ್‌. 2014ರಲ್ಲಿ ತೆರೆಗೆ ಬಂದಿದ್ದ ಸಿಂಗಂ ರಿಟರ್ನ್ಸ್‌ ಚಿತ್ರದ ಮುಂದುವರಿದ ಭಾಗವಾಗಿ, ಸಿಂಗಂ ಅಗೇನ್‌ ಈ ದೀಪಾವಳಿಗೆ ತೆರೆಗೆ ಬರಲಿದೆ. ಈ ಸಲ ಅಜಜಯ್‌ ದೇವಗನ್‌ ಜತೆಗೆ, ಅಕ್ಷಯ್‌ ಕುಮಾರ್, ರಣವೀರ್‌ ಸಿಂಗ್‌, ಟೈಗರ್‌ ಶ್ರಾಫ್‌, ದೀಪಿಕಾ ಪಡುಕೋಣೆ ಸೇರಿ ಇನ್ನೂ ಹಲವು ಘಟನಾನುಘಟಿಗಳು ನಟಿಸಿದ್ದಾರೆ. ರೋಹಿತ್‌ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇತ್ತ ಭೂಲ್‌ ಭುಲ್ಲಯ್ಯಾ 3 ಸಿನಿಮಾ ಸಹ ಟ್ರೇಲರ್‌ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿದೆ. ಅನೀಸ್‌ ಬಜ್ಮಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಹಾರರ್‌ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದೆ. ಕಾರ್ತಿಕ್‌ ಆರ್ಯನ್‌ ಮುಖ್ಯಭೂಮಿಕೆಯಲ್ಲಿದ್ದರೆ, ವಿದ್ಯಾ ಬಾಲನ್‌, ಮಾಧುರಿ ದೀಕ್ಷಿತ್‌, ತೃಪ್ತಿ ದಿಮ್ರಿ ಸೇರಿ ಇನ್ನೂಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಟಿ ಸಿರೀಸ್‌ನ ಭೂಷಣ್‌ ಕುಮಾರ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ತಮಿಳಿನಲ್ಲಿ ಅಮರನ್‌

ರಾಜ್‌ಕುಮಾರ್‌ ವಾರಿಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದ ತಮಿಳು ಸಿನಿಮಾ ಅಮರನ್. ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಭಾರತೀಯ ಸೇನೆಯ ಸೈನಿಕನ ಹಿನ್ನೆಲೆಯ ನೈಜ ಕಥೆಯಾಗಿದೆ. ಕಮಲ್‌ ಹಾಸನ್‌ ಆರ್‌ ಮಹೇಂದ್ರನ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೇಲರ್‌ ಮೂಲಕವೇ ಈ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿದೆ. ಈ ಸಿನಿಮಾ ಅಕ್ಟೋಬರ್‌ 31ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.

ಬ್ರದರ್‌ ಜೊತೆ ಲಕ್ಕಿ ಭಾಸ್ಕರ್‌

ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಲಕ್ಕಿ ಭಾಸ್ಕರ್‌. ಮಲಯಾಳಿ ನಟ ದುಲ್ಖರ್‌ ಸಲ್ಮಾನ್‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಪಿರಿಯಡ್‌ ಕ್ರೈಂ ಥ್ರಿಲ್ಲರ್‌ ಎಳೆಯ ಸಿನಿಮಾ ಇದಾಗಿದೆ. ವೆಂಕಿ ಅಲ್ಲುರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಮೀನಾಕ್ಷಿ ಚೌದರಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಸಹ ದೀಪಾವಳಿ ಹಬ್ಬದಂದು ಬಿಡುಗಡೆ ಆಗಲಿದೆ. ಇತತ ತಮಿಳಿನಲ್ಲಿ ಜಯಂ ರವಿ ನಾಯಕನಾಗಿ ನಟಿಸಿರುವ ಬ್ರದರ್‌ ಸಿನಿಮಾ ಸಹ ಇದೇ ಹಬ್ಬಕ್ಕೆ ತೆರೆಗೆ ಬರಲಿದೆ. ಎಂ ರಾಜೇಶ್‌ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.