ಕ್ಯಾನ್ಸರ್‌ನಲ್ಲಿ ಮೃತಪಟ್ಟ ಅಮ್ಮನ ನೆನಪಿನಲ್ಲಿ ದಾಕ್ಷಾಯಿಣಿ ಟಾಕೀಸ್ ಆರಂಭಿಸಿದೆ, ಅಜ್ಞಾತವಾಸಿ ಕರ್ನಾಟಕದ ಗಡಿ ದಾಟಬಲ್ಲದು: ಹೇಮಂತ್ ರಾವ್
Interview: ಹೇಮಂತ್ ರಾವ್ "ಅಜ್ಞಾತವಾಸಿ" ಕನ್ನಡ ಸಿನಿಮಾದ ಕುರಿತು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಕರ್ನಾಟಕದ ಗಡಿ ದಾಟಿಸಲು ಅಜ್ಞಾತವಾಸಿ ನೆರವಾಗಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಜತೆಗಿನ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹೇಮಂತ್ ರಾವ್ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸಿನಿಮಾ ನಿರ್ದೇಶನ, ನಿರ್ಮಾಣ, ಬರವಣಿಗೆ ಸೇರಿದಂತೆ ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇವರು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮೂಲಕ ಕನ್ನಡ ಸಿನಿಮಾಪ್ರಿಯರ ಗಮನ ಸೆಳೆದಿದ್ದರು. ಇವರ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ' ಮತ್ತು 'ಸೈಡ್ ಬಿ' ಕರ್ನಾಟಕದ ಗಡಿ ದಾಟಿ ಜನಪ್ರಿಯತೆ ಪಡೆಯಿತು. ಇದೀಗ ಇವರು ಅಜ್ಞಾತವಾಸಿ ಎಂಬ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 11ರಂದು ಬಿಡುಗಡೆಯಾದ ಅಜ್ಞಾತವಾಸಿ ಸಿನಿಮಾದ ಕುರಿತು ಹಿಂದೂಸ್ತಾನ್ ಟೈಮ್ಸ್ ಜತೆಗೆ ಹೇಮಂತ್ ರಾವ್ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ ಮತ್ತು ಸಿದ್ದು ಮೂಲಿಮನಿ ಮುಂತಾದವರು ನಟಿಸಿದ್ದಾರೆ.
"ನನ್ನಮ್ಮ 2024ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದರು. ಅವರ ನನೆಪಿನಲ್ಲಿ ದಾಕ್ಷಾಯಿಣಿ ಟಾಕೀಸ್ ಆರಂಭಿಸಿದೆ. ನನಗೆ ಅಮ್ಮ ಪುಸ್ತಕಗಳನ್ನು ಓದಲು ಕಲಿಸಿದರು. ನನಗೆ, ಉತ್ತಮ ಕಥೆ ಹೇಳುವಿಕೆಯ ಮೇಲೆ ಆಸಕ್ತಿಯಿದೆ. ಅಜ್ಞಾತವಾಸಿ ಚಿತ್ರವನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ. ನನಗೆ ಸ್ಕ್ರಿಪ್ಟ್ ನಿಜವಾಗಿಯೂ ಇಷ್ಟವಾಯಿತು. ಇದು ಒಂದು ಕೊಲೆ ರಹಸ್ಯದ ಕಥೆ. ಇದು ಪ್ರೇಕ್ಷಕರ ಮನಸ್ಸಲ್ಲಿ ಕಾಡುವ ಸಿನಿಮಾ ಎಂದುಕೊಂಡಿದ್ದೇನೆ" ಎಂದು ಅವರು ಹೇಳಿದ್ದಾರೆ.
ಮಲಯಾಳಂ ಸಿನಿಮಾ ರಂಗವು ಕೆಲವು ಅತ್ಯುತ್ತಮ ಥ್ರಿಲ್ಲರ್‌ಗಳು ಮತ್ತು ಪೊಲೀಸ್ ಸ್ಟೋರಿಗಳನ್ನು ಪರಿಚಯಿಸಿದೆ. ಅವು ಪ್ಯಾನ್-ಇಂಡಿಯಾ ಜನಪ್ರಿಯತೆಯನ್ನು ಗಳಿಸಿವೆ. ಅಜ್ಞಾತವಾಸಿಯೂ ಇದೇ ರೀತಿ ಖ್ಯಾತಿ ಪಡೆಯಬಹುದೇ? ಎಂಬ ಪ್ರಶ್ನೆಗೆ ಹೇಮಂತ್ ರಾವ್ ಹೀಗೆ ಉತ್ತರಿಸಿದ್ದಾರೆ.
"ಖಂಡಿತ ನಾನು ಹಾಗೆ ಭಾವಿಸುತ್ತೇನೆ. ಅದು ಗಡಿಗಳನ್ನು ದಾಟಿ ಎಲ್ಲೆಡೆ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸಿದರೆ ಒಳ್ಳೆಯದು. ಇದನ್ನು ಮುಂದೆ ಕೊಂಡೊಯ್ಯುವುದು ಜನರಿಗೆ ಬಿಟ್ಟದ್ದು" ಎಂದರು.
2025ರಲ್ಲಿ 70ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಬಹುತೇಕ ಬಾಕ್ಸ್ ಆಫೀಸ್‌ನಲ್ಲಿ ದಯಾನೀಯವಾಗಿ ಸೋತಿವೆ. ಆದರೆ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳು ಭಾರತದಾದ್ಯಂತ ಸೂಪರ್‌ಹಿಟ್ ಸಿನಿಮಾಗಳನ್ನು ನೀಡುತ್ತಿವೆ. ಕನ್ನಡ ಚಿತ್ರರಂಗ ವಿಫಲವಾಗುತ್ತಿದೆ. ಯಾಕೆ?
"ಹೌದು, ನಾನು ಒಪ್ಪುತ್ತೇನೆ. ಆದರೆ ನಾನು ಇದರ ಬಗ್ಗೆ ದೂರು ನೀಡಲು ಬಯಸುವುದಿಲ್ಲ. ವಿಭಿನ್ನ ರೀತಿಯ ಸಿನಿಮಾಗಳು ಕೆಲವೊಮ್ಮೆ ಹಿಟ್ ಆಗುತ್ತವೆ. ನಮ್ಮ ಅಜ್ಞಾತವಾಸಿಯು ಅಂತಹ ಪ್ರಯತ್ನದ ಭಾಗವಾಗಿದೆ. ಹೆಚ್ಚಿನ ಪ್ರೇಕ್ಷಕರು ಟೆಂಟ್‌ಪೋಲ್ ಚಲನಚಿತ್ರಗಳನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಬರುತ್ತಾರೆ. ಉತ್ತಮ ಕಥೆ ಹೇಳುವಿಕೆ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರಬಹುದು. ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರಲು ನಾನು ಸ್ಟೋರಿ ಟೆಲ್ಲಿಂಗ್ ಮೇಲೆ ಹೆಚ್ಚಿನ ಗಮನ ನೀಡುವೆ" ಎಂದು ಹೇಮಂತ್ ರಾವ್ ಹೇಳಿದ್ದಾರೆ.
ಸಿನಿಮಾವೊಂದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಲು ಸ್ಟಾರ್‌ಗಳ ಅಗತ್ಯವಿದೆ ಎಂದು ಭಾವಿಸುವಿರಾ? ಎಂಬ ಪ್ರಶ್ನೆಗೆ ಹೇಮಂತ್ ರಾವ್ ಉತ್ತರಿಸಿದ್ದಾರೆ.
"ಈಗ ಹಿಂದಿನಂತೆ ಇಲ್ಲ. ಪ್ರೇಕ್ಷಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಟಾರ್ ಮೌಲ್ಯದ ಆಧಾರದ ಮೇಲೆ ಒಂದು ಚಿತ್ರವು ಮೊದಲ ಎರಡು ದಿನಗಳಲ್ಲಿ ಉತ್ತಮ ಗಳಿಕೆ ಮಾಡುತ್ತದೆ. ಉತ್ತಮ ಕಂಟೆಂಟ್ ಜತೆ ಸಂಯೋಜಿಸಿ ಚಿತ್ರ ತಂದರೆ ಚೆನ್ನಾಗಿ ಗಳಿಕೆ ಮಾಡುತ್ತದೆ ಎಂದು ಹೇಮಂತ್ ಹೇಳಿದ್ದಾರೆ.
ಚಿತ್ರಮಂದಿರಗಳ ಅವಸಾನದ ಕಾಲವೇ?
ಥಿಯೇಟರ್‌ಗಳು ಡೆಡ್ ಆಗಿವೆ ಎಂದು ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ಸಹ ಸಿಇಒ ಟೆಡ್ ಸರಾಂಡೋಸ್ ಹೇಳಿದ್ದರು. ಕೋವಿಡ್ ನಂತರ ಚಿತ್ರಮಂದಿರಗಳು ಮೊದಲಿನಂತೆ ಆಗುವುದಿಲ್ಲ ಎಂದಿದ್ದರು. ಚಲನಚಿತ್ರ ನಿರ್ಮಾಪಕರಾಗಿ ಇದನ್ನು ನೀವು ಒಪ್ಪುವಿರಾ?
ಈ ಪ್ರಶ್ನೆಗೆ ನಗುತ್ತಾ ಹೇಮಂತ್ ರಾವ್ ಹೀಗೆ ಹೇಳಿದ್ದಾರೆ. “ಇದು ನದಿ ವಿಷಪೂರಿತವಾಗಿದೆ ಎಂದು ಜನರಿಗೆ ಹೇಳುವ ಮೂಲಕ ಬಾಟಲಿ ನೀರನ್ನು ಮಾರಾಟ ಮಾಡುವ ಮಾರಾಟಗಾರನಂತೆ. ಟೆಡ್ ಸರಾಂಡೋಸ್ ಹೇಳಿಕೆ ಇದೇ ರೀತಿಯದು ಎಂದು ನಾನು ಭಾವಿಸುವೆ. ಸಿನಿಮಾ ಸಾಯುವುದಿಲ್ಲ - ಕನಿಷ್ಠ ಇನ್ನೂ 100 ವರ್ಷಗಳವರೆಗೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಅನುಭವ ಅದ್ಭುತವಾದದ್ದು. ಚಿತ್ರಮಂದಿರಗಳಿಗೆ ಒಟಿಟಿ ಪರ್ಯಾಯವಾಗದು. ದೊಡ್ಡ ಪರದೆಯ ಮೇಲೆ ಸಿನಿಮಾ ನೋಡುವ ಅನುಭವವೇ ಬೇರೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
