KGF Chapter 3: ʻಕೆಜಿಎಫ್‌ ಚಾಪ್ಟರ್‌ 2ʼ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷ; ಚಾಪ್ಟರ್‌ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌
ಕನ್ನಡ ಸುದ್ದಿ  /  ಮನರಂಜನೆ  /  Kgf Chapter 3: ʻಕೆಜಿಎಫ್‌ ಚಾಪ್ಟರ್‌ 2ʼ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷ; ಚಾಪ್ಟರ್‌ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌

KGF Chapter 3: ʻಕೆಜಿಎಫ್‌ ಚಾಪ್ಟರ್‌ 2ʼ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷ; ಚಾಪ್ಟರ್‌ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌

ʻಕೆಜಿಎಫ್ ಚಾಪ್ಟರ್‌ 2ʼ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್‌ 14) ಮೂರು ವರ್ಷಗಳಾದವು. ಈ ನಿಮಿತ್ತ ವಿಡಿಯೋ ತುಣುಕೊಂದನ್ನು ಶೇರ್‌ ಮಾಡಿರುವ ಹೊಂಬಾಳೆ ಫಿಲಂಸ್‌, ʻಕೆಜಿಎಫ್ ಚಾಪ್ಟರ್‌ 3ʼ ಬಗ್ಗೆಯೂ ಸಣ್ಣ ಸುಳಿವು ನೀಡಿದ್ದಾರೆ.

ಕೆಜಿಎಫ್‌ ಚಾಪ್ಟರ್‌ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌
ಕೆಜಿಎಫ್‌ ಚಾಪ್ಟರ್‌ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌

KGF Chapter 3:‌ ಕನ್ನಡದ ಹೆಮ್ಮೆಯ ʻಕೆಜಿಎಫ್ ಚಾಪ್ಟರ್‌ 2ʼ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್‌ 14) ಮೂರು ವರ್ಷಗಳಾದವು. ಬಾಕ್ಸ್‌ ಆಫೀಸ್‌ನಲ್ಲಿ ಹಲವು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿ ದೊಡ್ಡ ಮೈಲಿಗಲ್ಲು ತಲುಪಿತ್ತು. ರಾಕಿಂಗ್‌ ಸ್ಟಾರ್‌ ಯಶ್‌ ಕೆರಿಯರ್‌ಗೂ ಈ ʻಕೆಜಿಎಫ್ ಚಾಪ್ಟರ್‌ 2ʼ ದೊಡ್ಡ ಹಿಟ್‌ ನೀಡಿತ್ತು. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಂಗದೂರು ನಿರ್ಮಾಣ ಮಾಡಿದ ಈ ಸಿನಿಮಾವನ್ನು ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡಿದರೆ, ರವಿ ಬಸ್ರೂರು ಅವರ ಸಂಗೀತ, ಭುವನ್‌ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್‌ ಕಲಾನಿರ್ದೇಶನ ಚಿತ್ರದ ಯಶಸ್ಸಿಗೆ ಸಾಥ್‌ ನೀಡಿತ್ತು.

ʻಕೆಜಿಎಫ್ ಚಾಪ್ಟರ್‌ 2ʼ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಚಾಪ್ಟರ್‌ 3 ಸುಳಿವು ನೀಡಿದ್ದರು ನಿರ್ದೇಶಕ ಪ್ರಶಾಂತ್‌ ನೀಲ್.‌ ಅದರಂತೆ, ಅಂದಿನಿಂದ ಮೂರನೇ ಭಾಗದ ಮೇಲೆ ದೊಡ್ಡ ನಿರೀಕ್ಷೆ ಮೂಡಿದೆ. ಆದರೆ, ಈ ವರೆಗೂ ಚಾಪ್ಟರ್‌ 3 ಬಗ್ಗೆ ಯಾವುದೇ ಅಪ್‌ಡೇಟ್‌ ಹೊರಬಿದ್ದಿಲ್ಲ. ಸಿನಿಮಾ ಆಗುವುದಂತೂ ಖಚಿತ ಎಂದಷ್ಟೇ ಹೊಂಬಾಳೆ ಫಿಲಂಸ್‌ ಈ ಹಿಂದೆ ಹೇಳಿಕೊಂಡಿತ್ತು. ಇದೀಗ ʻಕೆಜಿಎಫ್ ಚಾಪ್ಟರ್‌ 2ʼ ಚಿತ್ರಕ್ಕೆ 3 ವರ್ಷ ತುಂಬಿದ ಬೆನ್ನಲ್ಲೇ ʻಕೆಜಿಎಫ್ ಚಾಪ್ಟರ್‌ 3ʼ ಚಿತ್ರದ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದೆ ಹೊಂಬಾಳೆ ಫಿಲಂಸ್‌.

ಚಾಪ್ಟರ್‌ 3 ಬಗ್ಗೆ ಸಿಕ್ತು ಸುಳಿವು

ʻಕೆಜಿಎಫ್ ಚಾಪ್ಟರ್‌ 2ʼ ಚಿತ್ರ ಮೂರು ವರ್ಷ ತುಂಬಿದ ಬೆನ್ನಲ್ಲೇ ಹೊಂಬಾಳೆ ಫಿಲಂಸ್‌ ಸಂಸ್ಥೆ, ತನ್ನ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ʻ3ʼ ಅನ್ನೋ ನಂಬರ್‌ ಹೆಚ್ಚು ಕಾಣಿಸಿದೆ. ಮೂರು ವರ್ಷ ತುಂಬಿರುವುದಕ್ಕೂ, 3ನೇ ಚಾಪ್ಟರ್‌ ಬಗ್ಗೆಯೂ ಪರೋಕ್ಷವಾಗಿಯೇ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದಂತಿದೆ. ʻಚಾಪ್ಟರ್‌ 3ʼ ಎಂಬ ಬರಹದ ಮೂಲಕ ಸಿಯೂ ಸೂನ್‌ ಎಂದಿದೆ. ಅಲ್ಲಿಗೆ ಇನ್ನೇನು ಶೀಘ್ರದಲ್ಲಿ ʻಚಾಪ್ಟರ್‌ 3ʼ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಗುವ ಸಾಧ್ಯತೆ ಇದೆ.

1200 ಕೋಟಿ ಕಲೆಕ್ಷನ್

ಯಶ್‌, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸೇರಿ ಹತ್ತಾರು ಕಲಾವಿದರು ನಟಿಸಿದ್ದ ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ʻಕೆಜಿಎಫ್‌ ಚಾಪ್ಟರ್‌ 2ʼ ತೆರೆಗೆ ಬಂದಿತ್ತು. 2020ರ ಏಪ್ರಿಲ್‌ 14ರಂದು ತೆರೆಕಂಡಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 1200 ಕೋಟಿ ರೂಪಾಯಿ ಬಾಚಿಕೊಂಡ ಮೊದಲ ಕನ್ನಡದ ಸಿನಿಮಾ ಎಂಬ ವಿಶೇಷಣ ಪಡೆದಿತ್ತು.

2029ಕ್ಕೆ ಬರುತ್ತಾ ಕೆಜಿಎಫ್‌ 3?

ಹೊಂಬಾಳೆ ಫಿಲಂಸ್‌ ಬೇರೆ ಬೇರೆ ಸಿನಿಮಾಗಳ ನಿರ್ಮಾಣ ಕೆಲಸದಲ್ಲಿ ಬಿಜಿಯಾಗಿದೆ. ಇತ್ತ ನಿರ್ದೇಶಕ ಪ್ರಶಾಂತ್‌ ನೀಲ್‌ ಜೂನಿಯರ್‌ ಎನ್‌ಟಿಆರ್‌ ಅವರ ಸಿನಿಮಾ ಜತೆಗೆ, ಸಲಾರ್‌ ಪಾರ್ಟ್‌ 2 ಸಹ ಮಾಡಬೇಕಿದೆ. ಸಲಾರ್‌ಗೂ ಮೊದಲು ಕೆಜಿಎಫ್‌ 3 ಸಿನಿಮಾ ಮಾಡಬೇಕಿದೆ. ಇತ್ತ ನಟ ಯಶ್‌ ಟಾಕ್ಸಿಕ್‌ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇನ್ನೇನು 2026ರ ಏಪ್ರಿಲ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಆ ಸಿನಿಮಾ ಮುಗಿದ ಬಳಿಕ ಕೆಜಿಎಫ್‌ 3 ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಒಂದು ವೇಳೆ 2026ರಲ್ಲಿ ಸೆಟ್ಟೇರಿದ್ದೇ ಆದರೆ 2029ರಲ್ಲಿ ರಿಲೀಸ್‌ ಆಗಬಹುದು. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತ ಘೋಷಣೆ ಮಾಡಬೇಕಿದೆ. 

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner