Kannada Serials: ನಿಂತ ನೀರಿನಂತೆ, ಸೂತ್ರ ಹರಿದ ಗಾಳಿಪಟದಂತೆ ಇರುವ ಧಾರಾವಾಹಿಗಳು ಬದಲಾಗೋದು ಯಾವಾಗ? ಕೆ ಎ ಸೌಮ್ಯ ಬರಹ
ಜನ ಬದಲಾಗುವುದಿಲ್ಲ ಅಂತ ಅಂತಹಾ ಕಥೆಯನ್ನು ಧಾರಾವಾಹಿ ಮಾಡುತ್ತಾರೆಯೋ ಅಥವಾ ಧಾರಾವಾಹಿ ನೋಡಿ ಜನರು ಆ ರೀತಿ ಬದಲಾಗದೇ ಉಳಿದಿದ್ದಾರೋ ಗೊತ್ತಿಲ್ಲ. ನಿಂತ ನೀರಿನಂತೆ, ಸೂತ್ರ ಹರಿದ ಗಾಳಿಪಟದಂತಾಗಿದೆ.

ಯಾವುದೇ ಒಂದು ವಿಷಯಕ್ಕಾಗಲಿ ಅಥವಾ ವಿಚಾರಕ್ಕಾಗಲೀ, ಪರ ಅಥವಾ ವಿರೋಧ ಎಂಬ ಎರಡು ಅಭಿಪ್ರಾಯಗಳು ಇರುತ್ತದೆ. ಆದರೆ ಭಾರತದಲ್ಲಿನ ಒಂದು ವಿಚಾರಕ್ಕೆ ಮಾತ್ರ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳಿವೆ. ಜನಸಾಮಾನ್ಯರಿಂದ ಅತ್ಯಂತ ಹೀನಾಯವಾಗಿ ತೆಗಳಿಸಿಕೊಂಡರೂ, ಈ ವಿಷಯದ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಸಿದಿಲ್ಲ. ಬದಲಿಗೆ ಹೆಚ್ಚುತ್ತಲೇ ಇದೆ. ಅದು ಮತ್ಯಾವುದೂ ಅಲ್ಲ.. ಸೀರಿಯಲ್ ಎಂಬ ಮಾಯಾಜಾಲ!
ಧಾರಾವಾಹಿಯೆಂಬ ಮಾಯಾಜಾಲ
ಆದರೆ ಈ ಮಾಯಾಜಾಲ ಮೊದಲು ಹೇಗಿತ್ತೋ, ಈಗಲೂ ಹಾಗೆಯೇ ಇದೆ. ಕಾಲ ಬದಲಾಗಿರಬಹುದು. ಜನರೂ ಬದಲಾಗಿರಬಹುದು. ಆದರೆ ಈ ಧಾರಾವಾಹಿ ತಯಾರಿಸುವ ಪುಣ್ಯಾತ್ಮರ ಯೋಚನೆ ಮಾತ್ರ ಬದಲಾಗಿಲ್ಲ. ಅದು ಬದಲಾಗುವುದೂ ಇಲ್ಲ.
ಹಾಗಂತ ಶುರುವಿನಿಂದಲೂ ಇದೇ ರೀತಿ ಇತ್ತು ಎನ್ನುವ ಹಾಗಿಲ್ಲ. ಏಕೆಂದರೆ ದೂರದರ್ಶನ ಶುರುವಾದ ಹೊಸದರಲ್ಲಿ ಅತ್ಯುತ್ತಮವಾದ ಧಾರಾವಾಹಿಗಳು ಬರುತ್ತಿದ್ದವು. ಎಂಬತ್ತರ ದಶಕದವರಾದ ನಾವು ಪ್ರತಿಯೊಂದು ಧಾರಾವಾಹಿಯನ್ನೂ ಸಂಭ್ರಮದಿಂದಲೇ ನೋಡುತ್ತಿದ್ದೆವು. ಜೊತೆಗೆ ಆ ಧಾರಾವಾಹಿಗಳು ಜನರಿಗೆ ಏನಾದರೂ ಒಂದು ಸಂದೇಶವನ್ನೂ ಕೂಡಾ ಕೊಡುತ್ತಿದ್ದವು. ಆದರೆ ಆ ಧಾರಾವಾಹಿಗಳಿಗೆ ಕಾಲಮಿತಿ ಇರುತ್ತಿತ್ತು. ಜೊತೆಗೆ ವಾರಕ್ಕೆ ಒಂದು ಎಪಿಸೋಡ್ ಮಾತ್ರ ಪ್ರಸಾರವಾಗುತ್ತಿತ್ತು. ಮುಂದಿನ ಸಂಚಿಕೆ ನೋಡಬೇಕೆಂದರೆ ನಾವುಗಳು ಒಂದು ವಾರ ಕಾಯಬೇಕಿತ್ತು. ನಾವೂ ಸಹ ಬೇಸರವಿಲ್ಲದೇ ಖುಷಿಯಿಂದಲೇ ಕಾಯುತ್ತಿದ್ದೆವು.
ಧಾರಾವಾಹಿಗಳ ಕಾಲಮಿತಿ ಹೆಚ್ಚತೊಡಗಿತು
ನಂತರ ನಿಧಾನವಾಗಿ ಖಾಸಗಿ ಚಾನೆಲ್‌ಗಳು ಶುರುವಾದ ನಂತರ ಧಾರಾವಾಹಿಗಳ ಕಾಲಮಿತಿ ಹೆಚ್ಚತೊಡಗಿತು. ಜೊತೆಗೆ ಕೆಲವು ಧಾರಾವಾಹಿಗಳಂತೂ ಶನಿವಾರ, ಭಾನುವಾರ ಕೂಡಾ ಪ್ರಸಾರವಾಗಲು ತೊಡಗಿದವು. ನಮ್ಮ ಅಮ್ಮ-ಅಜ್ಜಿಯರು ಈ ಧಾರಾವಾಹಿಗಳಿಗೆ ಎಷ್ಟು ಅಂಟಿಕೊಂಡಿದ್ದರು ಎಂದರೆ, ವಾರಾಂತ್ಯದಲ್ಲಿ ಯಾವುದಾದರೂ ಫಂಕ್ಷನ್ನಿಗೆ ಹೋಗಿದ್ದರೂ ಈ ಧಾರಾವಾಹಿ ಶುರುವಾಗುವ ಹೊತ್ತಿಗೆ ಮನೆಗೆ ವಾಪಸ್ ಬಂದಿರಬೇಕಿತ್ತು.
ಸೂತ್ರವಿಲ್ಲದ ಗಾಳಿಪಟದಂತ ಧಾರಾವಾಹಿಗಳು
ಯಾವಾಗಲೂ ಒಂದು ಕಾಲಮಿತಿಯನ್ನು ಹಾಕಿ ಒಂದು ಕಥೆಯನ್ನು ಹೇಳಲು ಹೊರಟರೆ, ನಿರೂಪಣೆ ಸಹ ಸೊಗಸಾಗಿರುತ್ತದೆ. ಆದರೆ ಅದೇ ಕಥೆಯನ್ನು ಸಾವಿರಗಟ್ಟಲೆ ಎಪಿಸೋಡ್ ಮಾಡಲು ಹೊರಟರೆ, ಅದು ಸೂತ್ರವಿಲ್ಲದ ಗಾಳಿಪಟದ ಹಾಗೆ ದಿಕ್ಕು ದೆಸೆಯಿಲ್ಲದೇ ಸಾಗುತ್ತದೆ. ಈ ಧಾರಾವಾಹಿಗಳಿಗೆ ಆಗಿದ್ದೂ ಅದೇ.
ಮುಖ್ಯಪಾತ್ರಗಳನ್ನು ಇಟ್ಟುಕೊಂಡು, ಒಂದು ಸೊಗಸಾದ ಕಥೆಯ ಎಳೆಯಿಂದ ಶುರುವಾಗುವ ಈ ಧಾರಾವಾಹಿಗಳು, ನಂತರ ಹಿಗ್ಗಿಸುವ ಸಲುವಾಗಿ ಮುಖ್ಯಪಾತ್ರಗಳನ್ನೇ ಬದಿಗೆ ಸರಿಸಿ, ಕಥೆಗೊಂದು ಉಪಕಥೆ, ಅದಕ್ಕೊಂದು ಹಿನ್ನೆಲೆ ಅಂತ ತೋರಿಸುತ್ತಾ, ತಾನು ಹೇಳುತ್ತಿರುವ ಕಥೆಯ ದಿಕ್ಕನ್ನೇ ಬದಲಾಯಿಸಿಕೊಂಡು ಬಿಡುತ್ತವೆ.
ಆದರೆ ವಿಪರ್ಯಾಸ ಏನೆಂದರೆ, ಈ ಧಾರಾವಾಹಿಗಳು ಹೇಗೇ ಬದಲಾದರೂ ವೀಕ್ಷಕರು ನೋಡುವುದನ್ನು ನಿಲ್ಲಿಸುವುದಿಲ್ಲ. ಹೊರಗೆ ಎಷ್ಟೇ ಖಂಡಿಸಿದರೂ, ಒಳಗಿಂದೊಳಗೆ ಅದೇ ಜನರು ತಾವು ಖಂಡಿಸುವ ಧಾರಾವಾಹಿಗಳನ್ನು ನೋಡುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಧಾರಾವಾಹಿಗಳಿಗೆ ಅಷ್ಟೇ ಜನಪ್ರಿಯತೆ ಇದೆ.
ಈಗಲೂ ಧಾರಾವಾಹಿಗಳು ಶುರು ಆಗುವಾಗ, ಪ್ರತಿಯೊಂದು ಕಥೆಯೂ ವಿಭಿನ್ನವಾಗಿರುತ್ತದೆ. ಎಲ್ಲಿಯೂ ಕಂಡಿರದ ಮತ್ತು ಕೇಳಿರದ ಕಥೆಯನ್ನೇ ನಿರ್ದೇಶಕರು ಹೊತ್ತು ತಂದಿರುತ್ತಾರೆ. ನಾವೂ ಸಹ ಹೊಸದೇನೋ ತೋರಿಸಲು ಹೊರಟಿದ್ದಾರೆ ಅಂತ ಖುಷಿಯಿಂದಲೇ ನೋಡಲು ಶುರು ಮಾಡುತ್ತೇವೆ. ಆದರೆ ಒಂದು ಮಿತಿ ಮುಗಿಯುತ್ತಿದ್ದಂತೆಯೇ, ಇದೂ ಸಹ ಬೇರೆಲ್ಲಾ ಧಾರಾವಾಹಿಗಳ ದಾರಿಯನ್ನೇ ಹಿಡಿಯುತ್ತದೆ. ಅಂದರೆ ಮಹಿಳಾ ಖಳ ಪಾತ್ರಧಾರಿ, ಎರಡು ಸಂಬಂಧ ಇಟ್ಟುಕೊಂಡಿರುವ ನಾಯಕ, ಮದುವೆಯಾದರೂ ಅದನ್ನು ಮುಚ್ಚಿಟ್ಟುಕೊಂಡು ಬದುಕುತ್ತಿರುವ ಪ್ರಪಂಚದ ಅತ್ಯಂತ ಅಮಾಯಕ ನಾಯಕಿ, ಅವಳ ರಾಕ್ಷಸಿ ಚಿಕ್ಕಮ್ಮ, ನಾಯಕನಿಗೆ ಬಲೆ ಬೀಸುವ ಆ ಚಿಕ್ಕಮ್ಮನ ಮಗಳು.... ಹೀಗೆ! ಯಾವುದೇ ಕಥೆ ಶುರುವಾದರೂ ಇದು ಬಂದು ನಿಲ್ಲುವುದು ಇಲ್ಲಿಗೇ.
ಯಾಕೆಂದರೆ ಜನ ನೋಡುವುದೂ ಇಂಥದ್ದನ್ನೇ ಅನ್ನುವುದು ಧಾರಾವಾಹಿ ತಯಾರಿಸುವವರ ಅಭಿಪ್ರಾಯ. ಮೂರ್ನಾಲ್ಕು ವರ್ಷಗಳ ಕೆಳಗೆ ಒಂದು ಧಾರಾವಾಹಿಯಲ್ಲಿ ಮಾವನ ಮಗನ ಪ್ರೀತಿ ಪಡೆಯಲು, ನಾಯಕಿ ದೇವರಿಗೆ ಸಾವಿರ ಕೊಡದ ಅಭಿಷೇಕ, ಸಾವಿರದ ಒಂದು ಉರುಳುಸೇವೆ ಹೀಗೇ ಏನೇನೋ ಮಾಡ್ತಾಳೆ. ಅದನ್ನು ನೋಡಿ ನಾನು ಸಾಮಾಜಿಕ ಜಾಲತಾಣದಲ್ಲಿ, ಆಕೆ ಇಷ್ಟೆಲ್ಲಾ ಕಷ್ಟಪಡುವ ಬದಲು ಕೆಎಎಸ್ ಅಂತಾ ಐಎಎಸ್ ಬರೆದು ಪಾಸ್ ಆಗಿದ್ದರೆ ಮಾವನ ಮಗ ತಾನಾಗಿಯೇ ಬರುತ್ತಿದ್ದ ಅಂತ ಪೋಸ್ಟ್ ಹಾಕಿದೆ.
ಆದರೆ ಅದಕ್ಕೆ ಬಂದ ಪ್ರತಿಕ್ರಿಯೆ ಆಘಾತಕರವಾಗಿತ್ತು. ನೂರಕ್ಕೆ ತೊಂಬತ್ತರಷ್ಟು ಜನ ನನ್ನ ಹೇಳಿಕೆಯನ್ನು ವಿರೋಧಿಸಿದರು. ಆ ಧಾರಾವಾಹಿಗೆ ಸಂಬಂಧಿಸಿದವರು ಕಾಮೆಂಟ್ ಬಾಕ್ಸಿಗೆ ಬಂದು, 'ತಾವು ಇಲ್ಲದೇ ಇರುವುದನ್ನು ತೋರಿಸುತ್ತಿಲ್ಲ, ಬದಲಿಗೆ ಇರುವುದನ್ನೇ ತೋರಿಸುತ್ತಿದ್ದೇವೆ' ಅಂತ ಸಮರ್ಥಿಸಿಕೊಂಡರು. ನನಗೆ ಅಯೋಮಯವಾಯ್ತು.
ಬದಲಾವಣೆಯ ಮೊದಲ ಹೆಜ್ಜೆ ಯಾರು ಇಡುತ್ತಾರೆ?
ಹಾಗಾದರೆ ಬದಲಾಗಿರುವುದು ಮತ್ತು ಯೋಚನೆಗಳನ್ನು ಬದಲಾಯಿಸಿಕೊಂಡಿರುವುದು ನಾನೊಬ್ಬಳೇ ಇರಬೇಕು ಅಂತನ್ನಿಸಿತು. ಏಕೆಂದರೆ ಪ್ರಪಂಚ ಇರುವ ಹಾಗೆಯೇ ಧಾರಾವಾಹಿ ತೆಗೆಯುತ್ತಿರುವುದರಿಂದಲೇ, ಇಂದಿಗೂ ಅವು ಯಶಸ್ವಿಯಾಗುತ್ತಿರುವುದು. ಜನ ತಮ್ಮದೇ ಕಥೆ ಎನ್ನುವಂತೆ ನೋಡುತ್ತಿರುವುದು. ಹಾಗಾದರೆ ಈ ಜನ ಬದಲಾಗುವುದೇ ಇಲ್ವಾ ಅಂತನ್ನಿಸಿ ಬೇಸರವಾಯ್ತು.
ಆದರೆ ಜನ ಬದಲಾಗುವುದಿಲ್ಲ ಅಂತ ಅಂತಹಾ ಕಥೆಯನ್ನು ಧಾರಾವಾಹಿ ಮಾಡುತ್ತಾರೆಯೋ ಅಥವಾ ಧಾರಾವಾಹಿ ನೋಡಿ ಜನರು ಆ ರೀತಿ ಬದಲಾಗದೇ ಉಳಿದಿದ್ದಾರೋ ಅಂತ ನನಗೆ ಅರ್ಥವಾಗುತ್ತಿಲ್ಲ. ಇದೊಂದು ರೀತಿ ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಯಂತಿದೆ. ಬದಲಾವಣೆಯ ಮೊದಲ ಹೆಜ್ಜೆ ಯಾರು ಇಡುತ್ತಾರೆ ಅಂತ ನೋಡಬೇಕಿದೆ.
ಬರಹ: -ಕೆ.ಎ.ಸೌಮ್ಯ, ಮೈಸೂರು
ಇದನ್ನೂ ಓದಿ: ಕನ್ನಡಕ್ಕೆ ಡಬ್ ಆಗುತ್ತಿದೆ ಬಿಗ್ ಬಾಸ್ ಸ್ಪರ್ಧಿ ನಟನೆಯ ತೆಲುಗು ಧಾರಾವಾಹಿ; ಶೀರ್ಷಿಕೆಯೂ ಅಂತಿಮ
