ನಾನು ಕ್ಯಾಪ್ ಹಾಕಿದರೆ, ಅದು ಬೇರೆ ಲೆವೆಲ್‍ಗೆ ಇರುತ್ತದೆ; ಕಬ್ಜ ನಿರ್ದೇಶಕ ಆರ್ ಚಂದ್ರು ಮಾತಿನ ಮರ್ಮವೇನು?
ನಾನು ಕ್ಯಾಪ್ ಹಾಕಿದರೆ, ಅದು ಬೇರೆ ಲೆವೆಲ್‍ಗೆ ಇರುತ್ತದೆ. ಮೊದಲ ಭಾಗ ಒಂದು ಪ್ರಯೋಗ ಅಷ್ಟೇ. ಮುಂದುವರೆದ ಭಾಗ ಮಾಡಿದರೆ ಅದರ ಯಶಸ್ಸು ಗ್ಯಾರಂಟಿ ಎಂದ ಆರ್. ಚಂದ್ರು. ಸುದೀಪ್ ಮತ್ತು ಚಂದ್ರು ಜೋಡಿಯ ಚಿತ್ರ ಬರುತ್ತಾ ಎಂಬ ಪ್ರಶ್ನೆ ಎಲ್ಲರದು.
ಸುದೀಪ್ ಅಭಿನಯದಲ್ಲಿ ಆರ್. ಚಂದ್ರು ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಅಷ್ಟೇ ಅಲ್ಲ, ‘ಕಬ್ಜ’ ಚಿತ್ರವನ್ನು ಚಂದ್ರು ಮುಂದುವರೆಸುತ್ತಾರೆ ಎಂದು ಚಿತ್ರದ ಕೊನೆಯಲ್ಲಿ ಹೇಳಲಾಗಿತ್ತು. ಆದರೆ, ಎರಡೂ ಚಿತ್ರಗಳು ಇನ್ನೂ ಶುರುವಾಗಿಲ್ಲ. ನಿಜಕ್ಕೂ ಸುದೀಪ್ ಅಭಿನಯದಲ್ಲಿ ಚಂದ್ರು ಚಿತ್ರ ಮಾಡುತ್ತಾರಾ? ಇಂಥದ್ದೊಂದು ಪ್ರಶ್ನೆ ಗುರುವಾರ ರಾತ್ರಿ ನಡೆದ ‘ಫಾದರ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕೇಳಿಬಂತು. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ಸುದೀಪ್. ಹಾಗಾಗಿ, ಸಹಜವಾಗಿಯೇ ಸುದೀಪ್ ಮತ್ತು ಚಂದ್ರು ಜೋಡಿಯ ಚಿತ್ರ ಬರುತ್ತದಾ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.
ನಾನು ಕ್ಯಾಪ್ ಹಾಕಿದರೆ, ಅದು ಬೇರೆ ಲೆವೆಲ್‍ಗೆ ಇರುತ್ತದೆ
ಈ ಕುರಿತು ಮಾತನಾಡಿದ ಚಂದ್ರು, ‘ಕನ್ನಡ ಚಿತ್ರರಂಗದಲ್ಲಿ ನನ್ನ ದುಡ್ಡು ಹಾಕಿ ದೊಡ್ಡ ಸಿನಿಮಾ ಮಾಡಿದ್ದೇನೆ. ನನ್ನ ಚಿತ್ರದ ವ್ಯಾಪಾರದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದೇನೆ. ಚಂದ್ರು ಯಾವತ್ತೂ ಹೆಜ್ಜೆ ಹಿಂದೆ ಇಡುವುದಿಲ್ಲ. ಐದು ಸಿನಿಮಾಗಳನ್ನು ಒಂದೇ ವೇದಿಕೆಯಲ್ಲಿ ಘೋಷಣೆ ಮಾಡಿದ್ದೇನೆ. ಅದರಲ್ಲಿ ಒಂದು ಚಿತ್ರ ಮುಗಿದಿದೆ. ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಚಿತ್ರಗಳು ಬಿಡುಗಡೆಯಾಗಲಿವೆ. ಆ ಚಿತ್ರ ಇನ್ನೂ ದೊಡ್ಡ ಮಟ್ಟದಲ್ಲಿ ಇರುತ್ತದೆ. ನಾನು ಕ್ಯಾಪ್ ಹಾಕಿದರೆ, ಅದು ಬೇರೆ ಲೆವೆಲ್‍ಗೆ ಇರುತ್ತದೆ. ಮೊದಲ ಭಾಗ ಒಂದು ಪ್ರಯೋಗ ಅಷ್ಟೇ. ಮುಂದುವರೆದ ಭಾಗ ಮಾಡಿದರೆ ಅದು ಯಶಸ್ಸು ಗ್ಯಾರಂಟಿ ಎಂದಿದ್ದಾರೆ.
ಯಾವ ಕೆಲಸ ಮಾಡಿದರೂ, ಚೆನ್ನಾಗಿ ಮಾಡುತ್ತೇನೆ ಎಂದ ಚಂದ್ರು, 'ಯಾವಾಗಲೂ ಅಷ್ಟೇ. ‘ಫಾದರ್’ ಮೋಷನ್ ಪೋಸ್ಟರ್ ನೋಡಿದವರೆಲ್ಲಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಚಿಕ್ಕದಾಗಿ ಮಾಡಿದರೂ, ಚಂದ್ರು ಚೆನ್ನಾಗಿ ಮಾಡುತ್ತಾನೆ. ನೂರು ಜನ ಮಾತಾಡಿದರೂ, ಕೆಲಸ ಹಾಗೆಯೇ ಮಾಡುತ್ತೇನೆ. ಎಲ್ಲರ ಸಹಕಾರ ಸಿಕ್ಕರೆ ಬೇರೆ ಲೆವೆಲ್‍ನ ಚಿತ್ರ ಮಾಡುತ್ತೇನೆ. ಯಾವಾಗಲೂ ಏನಾದರೊಂದು ಪ್ರಯತ್ನ ಮಾಡುತ್ತಲೇ ಇರುತ್ತೇನೆ’ ಎಂದರು.
ಇನ್ನು, ‘ಫಾದರ್’ ಚಿತ್ರವು ಯಾವುದಾದರೂ ಚಿತ್ರದ ರೀಮೇಕಾ? ಅಥವಾ ಯಾವುದಾದರೂ ಚಿತ್ರದಿಂದ ಸ್ಫೂರ್ತಿ ಪಡೆದಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ನಾನು ‘ಚಾರ್ಮಿನಾರ್’ ಚಿತ್ರ ಮಾಡಿದ್ದೆ. ತಮಿಳಿನಲ್ಲಿ ಬಂದ ‘1996’ ಚಿತ್ರವೂ ಅದೇ ತರಹ ಇತ್ತು. ಆದರೆ, ಅದೇ ಬೇರೆ, ಇದೇ ಬೇರೆ. ಈ ಚಿತ್ರಕ್ಕೆ ಯಾವುದೇ ಸ್ಫೂರ್ತಿಯೂ ಇಲ್ಲ, ಹೋಲಿಕೆಯೂ ಇಲ್ಲ. ‘ಫಾದರ್’ ಇವತ್ತಿನ ಟ್ರೆಂಡ್‍ನ ಸಿನಿಮಾ. ನಿಜಕ್ಕೂ ಕಾಡುತ್ತದೆ. ಅಪ್ಪ-ಮಗ ಪರಸ್ಪರ ಪ್ರೀತಿಸುವವರನ್ನು ಕಾಡುತ್ತದೆ’ ಎಂದರು.
ಸಿನಿಮಾ ತಂಡ
‘ಫಾದರ್’ ಚಿತ್ರಕ್ಕೆ ರಾಜ್ ಮೋಹನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜ್ಞಾನಮೂರ್ತಿ ಛಾಯಾಗ್ರಹಣ ‘ಹನುಮಾನ್’ ಖ್ಯಾತಿಯ ಗೌರಾ ಹರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರೈ ಮತ್ತು ‘ಡಾರ್ಲಿಂಗ್’ ಕೃಷ್ಣ ಅಪ್ಪ-ಮಗನಾಗಿ ಕಾಣಿಸಿಕೊಂಡಿದ್ದು, ಅಮೃತಾ ಅಯ್ಯಂಗಾರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: UI ಮತ್ತು ಮ್ಯಾಕ್ಸ್ ಸಿನಿಮಾ ಬಗ್ಗೆ ಮಾತನಾಡಿದ ಉಪೇಂದ್ರ; ಬಾಕ್ಸ್ ಆಫೀಸ್ ಕ್ಲಾಷ್ ಬಗ್ಗೆ ಹೇಳಿದ್ದೇನು ನೋಡಿ