Emergency Trailer 2: ಎಮರ್ಜೆನ್ಸಿ ಟ್ರೇಲರ್ ರಿಲೀಸ್; ಇಂದಿರಾ ಈಸ್ ಇಂಡಿಯಾ ಎಂದ ಕಂಗನಾ ರನೌತ್
ಕಂಗನಾ ರನೌತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ' ಬಿಡುಗಡೆಗೆ ಸಿದ್ಧವಾಗಿದೆ. ಜೀ ಸ್ಟುಡಿಯೋ ಇನ್ನೊಂದು ಟ್ರೇಲರ್ ರಿಲೀಸ್ ಮಾಡಿದೆ. ಕಂಗನಾ ಡೈಲಾಗ್‌ಗಳು ಸಂಚಲನ ಸೃಷ್ಟಿಸುವಂತಿದೆ.
ಕಂಗನಾ ರನೌತ್ ಅಭಿನಯದ ಬಹು ನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ಎರಡನೇ ಟ್ರೇಲರ್ ರಿಲೀಸ್ ಆಗಿದೆ. ಕಂಗನಾ ತಮ್ಮ ಎಕ್ಸ್ ಖಾತೆಯಲ್ಲಿ ಟ್ರೇಲರ್ ಹಂಚಿಕೊಂಡಿದ್ದಾರೆ. ಜೀ ಸ್ಟುಡಿಯೋ ಕೂಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯ ಟ್ರೇಲರ್ ಇದಾಗಿದ್ದು ಕುತೂಹಲಕಾರಿಯಾಗಿದೆ. ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದಾರೆ ಎಂಬ ವಿಚಾರ ಹಲವು ದಿನಗಳ ಹಿಂದಿನಿಂದಲೇ ಸುದ್ದಿಯಾಗಿತ್ತು. ಇದೀಗ ಚಿತ್ರದ ಎರಡನೇ ಟ್ರೇಲರ್ ಕೂಡ ಬಿಡುಗಡೆಯಾಗಿದೆ.
ಟ್ರೇಲರ್ ಹೇಗಿದೆ?
ಸತ್ಯವನ್ನು ಒಪ್ಪಿಕೊಳ್ಳುವ ಏಕೈಕ ಮಾರ್ಗವೆಂದರೆ ಯುದ್ಧ ಮಾಡುವುದು ಎಂದು ಅಸೆಂಬ್ಲಿಯಲ್ಲಿ ಹೇಳುವ ಸೀನ್ ಟ್ರೇಲರ್‌ನಲ್ಲಿದೆ. ಸಾಕಷ್ಟು ಜನರ ನೋವು, ಯುದ್ಧದ ದೃಶ್ಯ, ಕೋವಿ, ಬಂದೂಕಿನ ಸದ್ದು ಕಿವಿಗಪ್ಪಳಿಸುತ್ತದೆ. ನಾನೇ ಕ್ಯಾಬಿನೇಟ್ ಎಂದು ಕಂಗನಾ ಹೇಳುವ ದೃಶ್ಯವೊಂದು ಸಂಚಲನ ಮೂಡಿಸುವಂತಿದೆ. ಕಂಗನಾ ಲುಕ್ ಭಾರೀ ಮೆಚ್ಚುಗೆ ಪಡೆದಿದೆ. ಜೈಲಿನಿಂದ ಪತ್ರ ಬರೆಯುವ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ ಕಾಣಿಸಿಕೊಂಡಿದ್ದಾರೆ.
ಹಿಂಸಾಚಾರ, ಸಾವು ಮತ್ತು ಅವ್ಯವಸ್ಥೆಯಲ್ಲಿ ಮುಳುಗಿ ದೇಶವು ತತ್ತರಿಸುತ್ತಿರುವ ಚಿತ್ರಣವನ್ನು ನೀಡಿದ್ದಾರೆ. "ಇಂದಿರಾ ಈಸ್ ಇಂಡಿಯಾ" ಎಂದು ಕಂಗನಾ ತಮ್ಮ ಧ್ವನಿಯಲ್ಲಿ ಹೇಳಿದ ಮಾತು ಗಟ್ಟಿತನವನ್ನು ಎತ್ತಿ ತೋರುವಂತಿದೆ. ಸೂಕ್ಷ್ಮವಾದ ವಿಚಾರಗಳನ್ನು ತೀಕ್ಷ್ಣವಾಗಿ ಈ ಟ್ರೇಲರ್‌ನಲ್ಲಿ ತೋರಿಸಿದ್ದಾರೆ..
ಸಿನಿಮಾ ಬಿಡುಗಡೆ ಯಾವಾಗ?
ಜನವರಿ 17 ರಂದು ಥಿಯೇಟರ್‌ಗಳಲ್ಲಿ ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾಗಲಿದೆ. 1975 ರಿಂದ 1977 ರವರೆಗೆ 21 ತಿಂಗಳ ಕಾಲ ತುರ್ತು ಪರಿಸ್ಥಿತಿ ಹೇಗಿತ್ತು ಮತ್ತು ಅದರ ನಂತರದ ಪರಿಣಾಮಗಳೇನು ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಪಾತ್ರವರ್ಗ
ಚಿತ್ರದಲ್ಲಿ ಪುಪುಲ್ ಜಯಕರ್ ಆಗಿ ಮಹಿಮಾ ಚೌಧರಿ, ಮೊರಾರ್ಜಿ ದೇಸಾಯಿಯಾಗಿ ಅಶೋಕ್ ಛಾಬ್ರಾ, ಸಂಜಯ್ ಗಾಂಧಿಯಾಗಿ ವಿಶಾಕ್ ನಾಯರ್ ಮತ್ತು ಜಗಜೀವನ್ ರಾಮ್ ಆಗಿ ದಿವಂಗತ ಸತೀಶ್ ಕೌಶಿಕ್ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವನ್ನು ಈ ಹಿಂದೆ ಸೆಪ್ಟೆಂಬರ್ 6, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ ಅನುಮತಿ ಪಡೆಯಲು ವಿಫಲವಾದ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಹಾಗಾಗಿ ಈ ವರ್ಷ ಬಿಡುಗಡೆಯಾಗುತ್ತಿದೆ.