Kanguva OTT: ತಮಿಳಿನ ಕಂಗುವ ಒಟಿಟಿ ಬಿಡುಗಡೆ ದಿನ ಲಾಕ್; ಯಾವ ವೇದಿಕೆ, ಯಾವಾಗಿನಿಂದ ಪ್ರಸಾರ?
Kanguva OTT Realease Date: ಕಾಲಿವುಡ್ ನಟ ಸೂರ್ಯ ಅವರ ವೃತ್ತಿಜೀವನದ ಬಿಗ್ ಬಜೆಟ್‌ನ ಚಿತ್ರ ಕಂಗುವ, ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲುಂಡಿದೆ. ಈ ನಡುವೆ ಇದೇ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
Kanguva OTT: ಕಾಲಿವುಡ್ ನಟ ಸೂರ್ಯ ಅವರಿಗ್ಯಾಕೋ ಗೆಲುವು ಸುಲಭಕ್ಕೆ ದಕ್ಕುತ್ತಿಲ್ಲ. ಮಾಡುತ್ತಿರುವ ಸಿನಿಮಾಗಳೆಲ್ಲ ಪ್ಲಾಪ್ ಆಗುತ್ತಿವೆ. ಸ್ವತಃ ಹೂಡಿಕೆ ಮಾಡಿ ನಿರ್ಮಿಸಿದ ಸಿನಿಮಾಗಳೂ ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತಿವೆ. ಈ ನಡುವೆ ನಾಯಕನಾಗಿ ನಟಿಸಿದ ಸಿನಿಮಾಗಳೂ ಅದೇ ಹಾದಿಯಲ್ಲಿ ಸೋಲಿನತ್ತ ಸಾಗುತ್ತಿವೆ. ಇತ್ತೀಚೆಗಷ್ಟೇ ಬಹುಕೋಟಿ ವೆಚ್ಚದ ಕಂಗುವ ಸಿನಿಮಾ ಚಿತ್ರಮಂದಿರಗಳಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದರೂ, ಗಳಿಕೆಯಲ್ಲಿ ಮಕಾಡೆ ಮಲಗಿತ್ತು. ಈಗ ಇದೇ ಸಿನಿಮಾ ಒಟಿಟಿಯತ್ತ ಮುಖ ಮಾಡಿದೆ.
ಶಿವ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಸಿನಿಮಾ ಕಂಗುವ ನವೆಂಬರ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ತಮಿಳಿನ ಬಾಹುಬಲಿ ಎಂದೇ ಸಾಕಷ್ಟು ಮಂದಿ ಕಂಗುವ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಹೇಳಿಕೊಳ್ಳುವಂಥ ನಿರೀಕ್ಷೆ ಮಟ್ಟ ತಲುಪದೇ, ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋತಿತ್ತು.
ಕಂಗುವಾ ಚಿತ್ರದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದರೆ, ಸೂರ್ಯ ಎದುರು ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದ್ದಾರೆ. ಯೋಗಿ ಬಾಬು, ನಟರಾಜನ್ ಸೇರಿ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ, ಈ ಚಿತ್ರವನ್ನು ಕನ್ನಡ, ತೆಲುಗು ಪ್ರೇಕ್ಷಕ ಮಾತ್ರವಲ್ಲದೆ, ತಮಿಳಿಗರೇ ಒಪ್ಪಿಕೊಂಡಿರಲಿಲ್ಲ. ಈ ನಡೆ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಕೊಟ್ಟಿತ್ತು.
ನಿರ್ದೇಶಕ ಶಿವ ಸಾವಿರ ವರ್ಷಗಳ ಹಿಂದಿನ ಕಥೆಯನ್ನು ವರ್ತಮಾನಕ್ಕೆ ತರುವ ಪ್ರಯತ್ನ ಮಾಡಿದ್ದರು. ಚಿತ್ರದ ಮೊದಲ 20 ನಿಮಿಷ ತೀರಾ ನೀರಸವಾಗಿ ಮೂಡಿಬಂದಿತ್ತು. ದೇವಿ ಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತವೂ ಕೆಟ್ಟದಾಗಿ ಟ್ರೋಲ್ ಆಗಿತ್ತು. ಕಥೆಯ ಅಗತ್ಯವಿಲ್ಲದಿದ್ದರೂ, ಐದು ರಾಜವಂಶಗಳ ಬಗ್ಗೆ ಹೇಳುವ ನಿರ್ದೇಶಕರ ಪ್ರಯತ್ನ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿತ್ತು. ಈ ಕಾರಣಕ್ಕೆ ಪ್ರೇಕ್ಷಕರಿಗೆ ಬೇಸರವಾಗಿತ್ತು.
ಬಜೆಟ್ ಎಷ್ಟು, ಬಂದಿದ್ದೆಷ್ಟು?
ಕಂಗುವ ಚಿತ್ರವನ್ನು 350 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ, ಕಂಗುವ ಇದುವರೆಗೆ ವಿಶ್ವಾದ್ಯಂತ 110 ಕೋಟಿ ರೂ. ಸಂಗ್ರಹಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಸೂರ್ಯ ಅವರ ಕಂಗುವ ಚಿತ್ರವು ಬಜೆಟ್‌ನ ಅರ್ಧದಷ್ಟು ಸಹ ಕಲೆಕ್ಷನ್ ಮಾಡಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆಗಳೇ ಹೆಚ್ಚು ಕೇಳಿಬಂದವು.
ಕಂಗುವ ಒಟಿಟಿ ಎಂಟ್ರಿ ಯಾವಾಗ
ಕಂಗುವಾ ಬಿಡುಗಡೆಗೆ ಮೊದಲು ಸೃಷ್ಟಿಯಾದ ಕ್ರೇಜ್‌ನಿಂದಾಗಿ, ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಒಳ್ಳೆಯ ಫ್ಯಾನ್ಸಿ ದರಕ್ಕೆ ಖರೀದಿ ಮಾಡಿದೆ. ಆದ್ದರಿಂದ ಈ ಚಿತ್ರವು ಒಂದು ತಿಂಗಳೊಳಗೆ ಸ್ಟ್ರೀಮಿಂಗ್ ಆಗಲಿದೆ. ಅದರಂತೆ ಡಿಸೆಂಬರ್ 13ರಿಂದ ಪ್ರೈಂನಲ್ಲಿ ಈ ಸಿನಿಮಾ ವೀಕ್ಷಿಸಬಹುದು. ಕನ್ನಡ, ತಮಿಳು, ತೆಲುಗು , ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ.