ಕಂಗುವಾ ಬಿಡುಗಡೆ ದಿನವೇ ಹೊರಬಿತ್ತು ಒಟಿಟಿ ಅಪ್‌ಡೇಟ್; ಯಾವಾಗ, ಯಾವ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಸೂರ್ಯ ಅಭಿನಯದ ಸಿನಿಮಾ?
ಶಿವ ನಿರ್ದೇಶನದಲ್ಲಿ ಸೂರ್ಯ ಅಭಿನಯದ ಕಂಗುವಾ ಸಿನಿಮಾ ನವೆಂಬರ್ 14 ರಂದು 8 ಭಾಷೆಗಳಲ್ಲಿ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆ ಆದ ದಿನವೇ ಒಟಿಟಿ ಅಪ್‌ಡೇಟ್ ಕೂಡಾ ಹೊರ ಬಿದ್ದಿದೆ. ಕಂಗುವಾ, ಅಮೆಜಾನ್ ಪ್ರೈಮ್ ವಿಡಿಯೋಗೆ 100 ಕೋಟಿ ರೂಗೆ ಮಾರಾಟವಾಗಿದ್ದು ಡಿಸೆಂಬರ್ 3ನೇ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆ ಇದೆ.
ಸೂರ್ಯ ಅಭಿನಯದ ಬಹುನಿರೀಕ್ಷಿತ ಕಂಗುವಾ ಸಿನಿಮಾ ಇಂದು(ನ 14) ವಿಶ್ವಾದ್ಯಂತ ರಿಲೀಸ್ ಆಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿ ವಿವಿಧ ವಿದೇಶಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ವಿಶ್ವಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್‌ಗಳಲ್ಲಿ ಕಂಗುವಾ 2ಡಿ ಹಾಗೂ 3ಡಿ ವರ್ಷನ್‌ಗಳಲ್ಲಿ ಪ್ರದರ್ಶನವಾಗುತ್ತಿದೆ.
ವೇಟ್ಟೈಯನ್ ದಾಖಲೆ ಮುರಿಯಲಿದೆಯಾ ಕಂಗುವಾ?
ಸುಮಾರು 2 ವರ್ಷಗಳ ನಂತರ ಸೂರ್ಯ ಫ್ಯಾಂಟಸಿ ಆಕ್ಷನ್ ಸಿನಿಮಾ ಮೂಲಕ ಮತ್ತೆ ಸಿನಿಪ್ರಿಯರ ಮುಂದೆ ಬಂದಿದ್ದಾರೆ. ಸಿನಿಮಾಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಮುನ್ನವೇ ಸುಮಾರು 15 ಕೋಟಿ ರೂ ಮುಂಗಡ ಬುಕ್ಕಿಂಗ್ ಗಳಿಸಿದೆ. ರಜನಿಕಾಂತ್ ಅಭಿನಯದ ವೇಟ್ಟೈಯನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ದಿನದಂದು 70 ಕೋಟಿ ರೂ. ಗಳಿಸಿತ್ತು. ಅದರೆ ಕಂಗುವಾ ಸಿನಿಮಾ ಚಿತ್ರವನ್ನು ಮೀರಿಸಿ, ಅದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. ಇದು ಸೂರ್ಯ ವೃತ್ತಿ ಜೀವನದಲ್ಲಿ ಅತ್ಯಂತ ದೊಡ್ಡ ಸಿನಿಮಾ ಕೂಡಾ ಹೌದು. ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಇದೆ.
100 ಕೋಟಿ ರೂ. ಮೊತ್ತಕ್ಕೆ ಸೇಲ್
ಈ ನಡುವೆ ಕಂಗುವಾ ಒಟಿಟಿ ರಿಲೀಸ್ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಯಾವ ಒಟಿಟಿ ಪ್ಲಾಟ್‌ಫಾರ್ಮ್ ಈ ಚಿತ್ರದ ಡಿಜಿಟಲ್ ರೈಟ್ಸ್ ಪಡೆದಿದೆ. ಸಿನಿಮಾ ಯಾವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಕುತೂಹಲ ಕಾಡುತ್ತಿದೆ. ಮಾಹಿತಿ ಪ್ರಕಾರ, ಕಂಗುವ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋಗೆ 100 ಕೋಟಿ ರೂ ಮೊತ್ತಕ್ಕೆ ಸೇಲ್ ಆಗಿದೆ. ಸಾಮಾನ್ಯವಾಗಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ತಿಂಗಳ ನಂತರ ಒಟಿಟಿಯಲ್ಲಿ ರಿಲೀಸ್ ಆಗುವ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದರಂತೆ ಕಂಗುವಾ, ಬಹುಶ: ಡಿಸೆಂಬರ್ 3ನೇ ವಾರದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಸಿನಿಮಾ ಅಧಿಕೃತ ಒಟಿಟಿ ರಿಲೀಸ್ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅನೌನ್ಸ್ ಮಾಡಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ
ಕಂಗುವಾ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಹಾಗೂ ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿ ಕೆಇ ಜ್ಞಾನವೇಲ್ ರಾಜ, ವಂಶಿ ಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಾಲಪತಿ ಜೊತೆ ಸೇರಿ ನಿರ್ಮಿಸಿದ್ದು ಶಿವ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಕಂಗುವ ಚಿತ್ರವನ್ನು ಹಂಚಿಕೆ ಮಾಡಿದೆ. ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಬಿ ಡಿಯೋಲ್, ದಿಶಾ ಪಟಾನಿ, ರವಿಕುಮಾರ್, ಯೋಗಿಬಾಬು, ಕೊವೈ ಸರಳ, ಬೋಸ್ ವೆಂಕಟ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಇಂಗ್ಲೀಷ್, ಸ್ಪಾನಿಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ರಿಲೀಸ್ ಆಗಿದೆ.