Rishab Shetty: ಕಾಂತಾರ ಚಾಪ್ಟರ್ 1ರಿಂದ ಜೈ ಹನುಮಾನ್ ತನಕ; ರಿಷಬ್ ಶೆಟ್ಟಿ ಮುಂದಿನ ಸಿನಿಮಾಗಳ ಪಟ್ಟಿ, ದೈವಿಕ ಅನುಭೂತಿ ಖಾತ್ರಿ
Rishab Shetty Movie: ಕಾಂತಾರ ಚಾಪ್ಟರ್ 1ರಿಂದ ಜೈ ಹನುಮಾನ್ ತನಕ ರಿಷಬ್ ಶೆಟ್ಟಿ ನಟನೆಯ ಹಲವು ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ನಟರಾಗಿ, ಬರಹಗಾರರಾಗಿ, ನಿರ್ದೇಶಕರಾಗಿ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಹೆಮ್ಮೆಯ ತಾರೆ ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಮುಂಬರುವ ಚಿತ್ರಗಳ ವಿವರ ಇಲ್ಲಿ ನೀಡಲಾಗಿದೆ.

Rishab Shetty Movie: ಕಾಂತಾರ ಚಾಪ್ಟರ್ 1ರಿಂದ ಜೈ ಹನುಮಾನ್ ತನಕ ರಿಷಬ್ ಶೆಟ್ಟಿ ನಟನೆಯ ಹಲವು ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇವುಗಳಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಕೊಳ್ಳೆ ಹೊಡೆಯುವ ಯೋಜನೆಯಲ್ಲಿದೆ. ಇದೇ ಸಮಯದಲ್ಲಿ ಹನುಮಾನ್ ಸಿನಿಮಾದ ಮುಂದುವರೆದ ಭಾಗ ಜೈ ಹನುಮಾನ್‌ನಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ರೀತಿ ಛತ್ರಪತಿ ಶಿವಾಜಿಯ ಐತಿಹಾಸಿಕ ಪಾತ್ರದಲ್ಲಿಯೂ ಶೆಟ್ರು ಮಿಂಚಲಿದ್ದಾರೆ. ಸಿನಿಮಾ ನಟರಾಗಿ, ಬರಹಗಾರರಾಗಿ, ನಿರ್ದೇಶಕರಾಗಿ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಹೆಮ್ಮೆಯ ತಾರೆ ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಮುಂಬರುವ ಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳೋಣ.
ಕಾಂತಾರ ಚಾಪ್ಟರ್ 1
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಬಹುನಿರೀಕ್ಷಿತ ಚಿತ್ರವಿದು. ಮತ್ತೊಮ್ಮೆ ದೈವದ ವೋ ಎಂಬ ಧ್ವನಿ ಕೇಳಲು ಪ್ರೇಕ್ಷಕರು ಕಾತರದಿಂದ ಇದ್ದಾರೆ. ಈ ಸಿನಿಮಾವು 2025ರ ಅಕ್ಟೋಬರ್ 2ರಂದು ತೆರೆ ಕಾಣಲಿದೆ. ಇದು ಕಾಂತಾರ ಸಿನಿಮಾದ ಹಿಂದಿನ ಕಥೆ. ಈ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾವು ದೊಡ್ಡಮಟ್ಟದಲ್ಲಿ ಗಳಿಕೆ ಮಾಡುವ ಸಾಧ್ಯತೆ ಕುರಿತು ಟ್ರೇಡ್ ವಿಶ್ಲೇಷಕರು ಈಗಲೇ ಲೆಕ್ಕ ಹಾಕುತ್ತಿದ್ದಾರೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಮಾರ್ಷಯಲ್ ಆರ್ಟ್ಸ್, ಕಲಾರಿಪಟ್ಟು ಇತ್ಯಾದಿಗಳನ್ನೂ ಕಲಿತಿದ್ದಾರೆ. ತುಳುನಾಡಿನ ದೈವಗಳ ಮೂಲದ ಕಥೆಯನ್ನು ತೆರೆಗೆ ಹೇಗೆ ರೋಮಾಂಚನಕಾರಿಯಾಗಿ ತರಲಿದ್ದಾರೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೆಲಸಗಳು ಮುಂದುವರೆದಿದ್ದು, ಇನ್ನೊಂದು ಗ್ಲಿಂಪ್ಸ್, ಟೀಸರ್ ಬಿಡುಗಡೆಯಾಗುವುದೇ ಎಂದೂ ಜನರು ಕಾಯುತ್ತಿದ್ದಾರೆ.
ಜೈ ಹನುಮಾನ್
ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಹನುಮಾನ್ ಸಿನಿಮಾವು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರದ ಯಶಸ್ಸಿನಿಂದ ಜೈ ಹನುಮಾನ್ ಸಿನಿಮಾದ ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದವು. ವಿಶೇಷವಾಗಿ ಈ ಸಿನಿಮಾದಲ್ಲಿ ಹನುಮಂತನ ಪಾತ್ರಕ್ಕೆ ರಿಷಬ್ ಶೆಟ್ಟಿಯನ್ನು ಆಯ್ಕೆ ಮಾಡಿದಾಗ ಕಾಂತಾರ ಅಭಿಮಾನಿಗಳು ರೋಮಾಂಚನಗೊಂಡಿದ್ದರು. ತೆಲುಗು ಚಿತ್ರರಂಗದ ಪ್ರಮುಖ ನಟರನ್ನು ಬಿಟ್ಟು ಸ್ಯಾಂಡಲ್‌ವುಡ್‌ನ ರಿಷಬ್ ಶೆಟ್ಟಿ ಆಯ್ಕೆ ಮಾಡಿದ್ದು ಚರ್ಚೆಗೂ ಕಾರಣವಾಗಿತ್ತು. ಈಗಾಗಲೇ ಅಭಿಮಾನಗಳಿಂದ ಡಿವೈನ್ ಸ್ಟಾರ್ ಎಂದು ಬಿರುದು ಪಡೆದಿರುವ ರಿಷಬ್ ಶೆಟ್ಟಿಯನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿರುವುದು ಪ್ಯಾನ್ ಇಂಡಿಯಾ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡಿರುವುದು ಸುಳ್ಳಲ್ಲ.
ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್
ರಿಷಬ್ ಶೆಟ್ಟಿ ಅವರು ದೇಶಪ್ರೇಮಿ, ರಾಜ, ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಐತಿಹಾಸಿಕ ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೇಗಿರಲಿದ್ದಾರೆ ಎಂಬ ಪೋಸ್ಟರ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಜನವರಿ 21, 2027ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ.
ತುಘಲಕ್, ಅಟ್ಟಹಾಸ, ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅಂಬಿ ನಿಂಗೆ ವಯಸ್ಸಾಯ್ತೋ, ಬೆಲ್ ಬಾಟಮ್, ಕಥಾ ಸಂಗಮ, ಅವನೇ ಶ್ರೀಮನ್ನಾರಾಯಣ, ಹೀರೋ, ಶ್ರೀ ಕೃಷ್ಣ ಜೀಮೇಲ್ ಕಾಂ, ಗರುಡ ಗಮನ ವೃಷಭ ವಾಹನ, ಮಿಷನ್ ಇಂಪಾಸಿಬಲ್, ಹರಿಕಥೆ ಅಲ್ಲ ಗಿರಿಕಥೆ ಮುಂತಾದ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್ ಗಮನ ಸೆಳೆದ ರಿಷಬ್ ಶೆಟ್ಟಿಯ ಸಿನಿಮಾಕ್ಕೆ ಈಗ ದೇಶ ವಿದೇಶದ ಪ್ರೇಕ್ಷಕರು ಕಾಯುತ್ತಿದ್ದಾರೆ.
