ʻತಮಿಳಿನವರು ನಾವು ದಕ್ಷಿಣ ಭಾರತದ ಯಜಮಾನರು ಅನ್ನುವಂತೆ ವರ್ತಿಸುವುದು ಹೊಸದೇನು ಅಲ್ಲʼ
ಡಾ. ರಾಜ್‌ಕುಮಾರ್ ಅವರ ಆಪ್ತ ಹಾಗೂ ಸಿನಿಮಾ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಇದೇ ಕಮಲ್ ಹಾಸನ್ ಹೇಳಿಕೆಗೆ ಕೊಂಚ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ತಮಿಳುನಾಡಿನ ಶಾಲೆಗಳಲ್ಲಿ "ತಮಿಳು ದ್ರಾವಿಡ ಭಾಷೆಗಳ ತಾಯಿ" ಅಂತ ಏನಾದರು ಪಾಠ ಮಾಡುತ್ತಾರೋ? ಅನ್ನುವ ಅನುಮಾನ ನನಗೆ" ಎಂದು ಜಾಲತಾಣದಲ್ಲಿ ಸುದೀರ್ಘ ಬರಹವನ್ನು ಪೋಸ್ಟ್ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿದ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ಸಹ ಮುಂದುವರಿದಿದೆ. ಇದರ ಬೆನ್ನಲ್ಲೇ ಡಾ. ರಾಜ್‌ಕುಮಾರ್ ಅವರ ಆಪ್ತ ಹಾಗೂ ಸಿನಿಮಾ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಇದೇ ಕಮಲ್ ಹಾಸನ್ ಹೇಳಿಕೆಗೆ ಕೊಂಚ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ತಮಿಳುನಾಡಿನ ಶಾಲೆಗಳಲ್ಲಿ "ತಮಿಳು ದ್ರಾವಿಡ ಭಾಷೆಗಳ ತಾಯಿ" ಅಂತ ಏನಾದರು ಪಾಠ ಮಾಡುತ್ತಾರೋ? ಅನ್ನುವ ಅನುಮಾನ ನನಗೆ" ಎಂದು ಜಾಲತಾಣದಲ್ಲಿ ಸುದೀರ್ಘ ಬರಹವನ್ನು ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಮೇಹು ಪೋಸ್ಟ್‌ನಲ್ಲಿ ಏನಿದೆ?
"ಅಣ್ಣಾವ್ರನ್ನ ಬಿಟ್ಟರೆ ನಾನು ಇಷ್ಟಪಡುವ ನಟ ಕಮಲಹಾಸನ್. ಅವರ ವೈಚಾರಿಕ ಚಿಂತನೆಯ ಪರ ನಾನು. ಆದರೆ ಅವರ ಈ ಸ್ಟೇಟ್ಮೆಂಟ್ ತುಂಬಾ ಬಾಲಿಶವಾದದ್ದು ಅಥವಾ ಅಧ್ಯಯನದ ಕೊರತೆ ಇರಬಹುದು! "ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದು ಉತ್ತರದವರು ನಂಬಿಸಿರುವಂತೆ, ತಮಿಳುನಾಡಿನ ಶಾಲೆಗಳಲ್ಲಿ "ತಮಿಳು ದ್ರಾವಿಡ ಭಾಷೆಗಳ ತಾಯಿ" ಅಂತ ಏನಾದರು ಪಾಠ ಮಾಡುತ್ತಾರೋ? ಅನ್ನುವ ಅನುಮಾನ ನನಗೆ!! ತಮಿಳಿನವರು ನಾವು ದಕ್ಷಿಣ ಭಾರತದ ಯಜಮಾನರು ಅನ್ನುವಂತೆ ವರ್ತಿಸುವುದು ಹೊಸದೇನು ಅಲ್ಲ" ಎಂದಿದ್ದಾರೆ.
"ಇಡೀ ದಕ್ಷಿಣ ಭಾರತೀಯರನ್ನು "ಮದ್ರಾಸಿ" ಅಂತಲೇ ಉತ್ತರದವರು ಕರೆಯುವುದು!!! ಒಂದಂತು ನಿಜ ದ್ರಾವಿಡದ ಅಸ್ಮಿತೆಯನ್ನು ಉಳಿದ ದ್ರಾವಿಡ ರಾಜ್ಯಗಳಿಗಿಂತ ಹೆಚ್ಚಾಗಿ ಉಳಿಸಿಕೊಂಡಿರುವುದು ತಮಿಳುನಾಡೆ, ಅದರಲ್ಲಿ ಅನುಮಾನವಿಲ್ಲ. ಮತ್ತು ತಮಿಳು ಭಾಷೆ ಮೂಲ ದ್ರಾವಿಡ ಭಾಷೆಯನ್ನು ಆದಷ್ಟು ಹಾಗೇ ಉಳಿಸಿಕೊಂಡಿದೆ ಅನ್ನುವುದೂ ನಿಜ. ಅಂದಮಾತ್ರಕ್ಕೆ ಅದು ತಾಯಿ ಭಾಷೆಯಾಗುವುದಿಲ್ಲ, ಸಹೋದರ ಭಾಷೆ ಅಂತ ಕರೆಯಬಹುದು. ಇನ್ನೂ ಚಲನಚಿತ್ರ ರಂಗಕ್ಕೆ ಸಂಬಂಧಿಸಿದಂತೆ ಹೇಳಬೇಕೆಂದರೆ ಇಡೀ ದಕ್ಷಿಣ ಭಾರತದ ಸಿನಿಮಾಗಳಿಗೆ ಮದ್ರಾಸೇ ಕೇಂದ್ರಸ್ಥಾನವಾಗಿತ್ತು ಅನ್ನುವುದು ಸತ್ಯ. ಆ ಕಾರಣಕ್ಕೆ ಅಲ್ಲಿನ ಸಿನಿಮಾ ಮಂದಿಗೆ ಈ ರೀತಿಯ ಭ್ರಮೆಗಳಿರಬಹುದು" ಎಂದಿದ್ದಾರೆ.
"ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಅಂತ ಉತ್ತರ ಭಾರತೀಯರಿಗೆ ಮನದಟ್ಟು ಮಾಡುವುದರ ಜೊತೆಗೆ ಈಗ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದಲ್ಲ ಅನ್ನುವುದನ್ನೂ ತಮಿಳಿನವರಿಗೆ ತಿವಿದು ಹೇಳುವ ಕಾಲ ಬಂದಿದೆ. ಇನ್ನೂ ನಮ್ಮ ಶಿವರಾಜ್‌ಕುಮಾರ್ ಅವರ ವಿಷಯಕ್ಕೆ ಬಂದರೆ, ಬಹುಶಃ ಅವರಿಗೆ ಕಮಲಹಾಸನ್ ಏನು ಹೇಳಿದರು ಅನ್ನುವುದು ಅರ್ಥವಾಗಿಲ್ಲ. ಅರ್ಥವಾಗಿದ್ದರು, "ಅವರು ಹೇಳುತ್ತಿರುವುದು ಸುಳ್ಳು" ಅನ್ನುವ ಸತ್ಯ ಶಿವಣ್ಣನವರಿಗೆ ಗೊತ್ತಿರಲಿಕ್ಕಿಲ್ಲ" ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.