Kannada Movie: ಕಾರ್ ಕಾರ್ ಎಲ್ನೋಡಿ ಕಾರ್ ಹಾಡಿನ ನೆನಪಿದೆಯೇ? ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನನ್ನ ಪ್ರೀತಿಯ ಹುಡುಗಿಗೆ 24 ವರ್ಷ
Nanna Preethiya Hudugi Movie: ನನ್ನ ಪ್ರೀತಿಯ ಹುಡುಗಿ ಸಿನಿಮಾ ಬಿಡುಗಡೆಯಾಗಿ 24 ವರ್ಷಗಳಾಗಿವೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಫೇಸ್‌ಬುಕ್‌ನಲ್ಲಿ ಈ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾದ ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡು ಸೂಪರ್‌ಹಿಟ್ ಆಗಿತ್ತು.

Nanna Preethiya Hudugi Movie: ನನ್ನ ಪ್ರೀತಿಯ ಹುಡುಗಿ ಸಿನಿಮಾ ನೆನಪಿದೆಯೇ? ಈ ಕಾಲದ ಬಹುತೇಕರಿಗೆ ಈ ಹೆಸರು ನೆನಪಾಗುವುದು ಕಷ್ಟ. ಆದರೆ, ಹಳೆಯ ಸಿನಿಮಾಗಳ ಗುಂಗಿನಲ್ಲಿ ಇರುವವರಿಗೆ ನನ್ನ ಪ್ರೀತಿಯ ಹುಡುಗಿ ಸಿನಿಮಾ ನೆನಪಿರಬಹುದು. ಆದರೆ, ಕಾರ್ ಕಾರ್ ಎಲ್ ನೋಡಿ ಕಾರ್ ಎಂಬ ಹಾಡು ನೆನಪಿದೆಯೇ? ಎಂದು ಕೇಳಿದರೆ ಖಂಡಿತಾವಾಗಿಯೂ ಈ ಜಮಾನದವರಿಗೂ ನೆನಪಿದೆ ಎನ್ನಬಹುದು. ಏಕೆಂದರೆ, ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡು ಈಗಲೂ ಮೋಡಿ ಮಾಡುವಂತೆ ಇದೆ. ಬಿ ಜಯಶ್ರೀ ಕಂಚಿನ ಕಂಠದಲ್ಲಿ ಈ ಹಾಡು ಅದ್ಭುತವಾಗಿ ಮೂಡಿ ಬಂದಿತ್ತು. ಆ ಕಾಲದಲ್ಲಿ ಇ-ಕಾಲ ತೋರಿಸಿದ ಹಾಡು ಇದು ಎಂದರೆ ತಪ್ಪಾಗದು. ಅಂದಹಾಗೆ, ನನ್ನ ಪ್ರೀತಿಯ ಹುಡುಗಿ ಸಿನಿಮಾ ಬಂದು ಇಂದಿಗೆ (ಏಪ್ರಿಲ್ 6) ಬರೋಬ್ಬರಿ 24 ವರ್ಷಗಳು ಕಳೆದಿವೆ. ಇಷ್ಟು ವರ್ಷವಾಯ್ತೇ ಎಂದು ಕೆಲವರಿಗೆ ಅಚ್ಚರಿಯಾಗಬಹುದು. ಕೆಲವರಿಗೆ ಇದು ನಿನ್ನೆ ಮೊನ್ನೆ ನೋಡಿದ ಸಿನಿಮಾದಂತೆ ನೆನಪಾಗಬಹುದು.
ನನ್ನ ಪ್ರೀತಿಯ ಹುಡುಗಿನ ನೆನಪಿಸಿಕೊಂಡ ನಾಗತಿಹಳ್ಳಿ ಚಂದ್ರಶೇಖರ್
ಫೇಸ್‌ಬುಕ್‌ನಲ್ಲಿ ಸಿನಿಮಾ ನಿರ್ದೇಶಕ "ನನ್ನ ಪ್ರೀತಿಯ ಹುಡುಗಿ" ಸಿನಿಮಾಕ್ಕೆ 24 ವರ್ಷವಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. "24 ವರ್ಷಗಳ ಹಿಂದೆ ದೈತ್ಯ ಕಪಾಲಿಯಲ್ಲಿ ೪೦ ವಾರ ಪ್ರದರ್ಶನಗೊಂಡ ಅದ್ದೂರಿ ಚಿತ್ರ. ಈಗ ಕಪಾಲಿಯ ಜತೆಗೆ ಅವನ ಸರೀಕ ಗೆಳೆಯ ಗೆಳತಿಯರೆಲ್ಲ ನೆಲಸಮಗೊಂಡಿದ್ದಾರೆ. ಉಳಿದಿರುವುದು ಮಧುರ ನೆನಪು ಮಾತ್ರ. ಅಮೆರಿಕಾದ ಫ್ರೀವೇಗಳಲ್ಲಿ ಒಮ್ಮೆ ಗುನುಗಿಕೊಂಡದ್ದು ಜನಪ್ರಿಯ ಹಾಡಾಗಿ ರೂಪುತಳೆಯಿತು. ‘ಕಾರ್ ಕಾರ್ ಕಾರ್ ಎಲ್ ನೋಡಿ ಕಾರ್..!’. ನಿರ್ಮಾಪಕರಾದ ತುಮಕೂರು ದಯಾನಂದ್, ವಿದ್ಯಾಶಂಕರ್, ಸಂಗೀತ ನಿರ್ದೇಶಕ ಮನೋಮೂರ್ತಿ, ಗಾಯಕಿ, ಗಾಯಕರಾದ ಬಿ ಜಯಶ್ರೀ, ಸುರೇಶ್ ಪೀಟರ್, ಸಿನಿಮಾಟೋಗ್ರಫರ್ ಚಿನ್ನಿ ಪ್ರಕಾಶ್ ಮತ್ತು ಇತರೆ ಎಲ್ಲರಿಗೂ ಧನ್ಯವಾದಗಳು" ಎಂದು ನಾಗತಿಹಳ್ಳಿ ಚಂದ್ರಶೇಖರ್ ಫೇಸ್‌ಬುಕ್‌ನಲ್ಲಿ "ನನ್ನ ಪ್ರೀತಿಯ ಹುಡುಗಿ"ನ ನೆನಪಿಸಿಕೊಂಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ನಾಗತಿಹಳ್ಳಿ ಚಂದ್ರಶೇಖರ್ ಹಂಚಿಕೊಂಡ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಸಾಕಷ್ಟು ಜನರು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಚಿತ್ರ ರಸಿಕರಿಗೆ ಎಂಥಾ ಅದ್ದೂರಿ ದಿನಗಳು ಅವು! ಈಗ್ಯಾಕೆ ಬದಲಾಗಿ ಹೋಯಿತು ಅನ್ನುವುದೇ ದೊಡ್ಡ ನೋವು. ನಮ್ಮ ಬದುಕಿನ ಒಂದು ಪ್ರಮುಖ ಅಂಗವನ್ನೇ ಕಳೆದುಕೊಂಡಂತೆ ಅನಿಸುತ್ತದೆ", "ದೊಡ್ಡ ದೊಡ್ಡ ಚಿತ್ರ ಮಂದಿರಗಳು, ತಿಂಗಳಾನುಗಟ್ಟಳೆ ಚಿತ್ರ ಪ್ರದರ್ಶನ, ನೂರಾರು ಅಡಿ ಎತ್ತರದ ಕಟೌಟ್ ಗಳು, ಅವುಗಳಿಗೆ ಬೃಹತ್ ಹೂವಿನ ಹಾರಗಳು, ಸ್ಟಾರ್ ಗಳ ಅಲಂಕಾರ, ಚಿತ್ರ ಮಂದಿರ ತುಂಬಿದ್ದು ಅಷ್ಟೇ ಸಂಖ್ಯೆಯ ಜನಸಂದಣಿ, ಶತದಿನೋತ್ಸವ, ರಜತೋತ್ಸವ, ಸ್ವರ್ಣ ಮಹೋತ್ಸವ, ವಜ್ರ ಮಹೋತ್ಸವ ಸಮಾರಂಭಗಳು, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಚಿತ್ರ ಪ್ರದರ್ಶನ ಮೆರವಣಿಗೆಗಳು, ಅಬ್ಬಬ್ಬ ಎಂತ್ತೆಂತ ನೆನಪುಗಳು ನಮ್ಮೊಂದಿಗೆ ಆರಂಭವಾಗಿ ನಮ್ಮ ಪೀಳಿಗೆಯೂಂದಿಗೆ ಮುಕ್ತಾಯವಾಗಿದೆ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
"ಈಗಿನ ಸಿನಿಮಾಗಳಲ್ಲಿ ಬರೀ ಹೊಡಿ ಬಡಿ ನಾಲ್ಕು ಕಾರ್ ಬ್ಲಾಸ್ಟ್ 5 ಫೈಟಿಂಗ್ ಅಷ್ಟೇ", "ಸರ್, ಆಗ ಥಿಯೇಟರ್ ನಲ್ಲಿ ಸಿನಿಮಾ ನೋಡದಿದ್ದರೂ ನಿಮ್ಮ ಸಾಹಿತ್ಯಕ್ಕಾಗಿ ಕ್ಯಾಸೆಟ್ ಕೊಂಡುಕೊಂಡಿದ್ದೆ. ಇಂದು ಕ್ಯಾಸೆಟ್ ಸಂಸ್ಕೃತಿ ನೆಲಸಮವಾಗಿರುವುದರಿಂದ ಬರೆಯುವ ಕೈಗಳಿಗೆ ಕೆಲಸವಿಲ್ಲ, ಹಂಸಲೇಖ, ವಿ ಮನೋಹರ್, ಕೆ ಕಲ್ಯಾಣ್ ರಂತಹ ಜನಪ್ರಿಯ ಸಿನಿಮಾ ಸಾಹಿತಿಗಳು ಸುಮ್ಮನೇ ಕುಳಿತಿರುವುದರಿಂದಾಗಿ FM ಮತ್ತು ಟಿವಿಗಳಲ್ಲಿ ಹಾಕಿದ್ದನ್ನು ಕೇಳಬೇಕಾದ ಪರಿಸ್ಥಿತಿಯಲ್ಲಿ ಕೇಳುಗರಿದ್ದಾರೆ". ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
"ಅಮೇರಿಕ ಅಮೇರಿಕ ಮತ್ತು ನನ್ನ ಪ್ರೀತಿಯ ಹುಡುಗಿ ನೋಡಿ ಎದೆಗಿಳಿಸಿಕೊಂಡು ಕಣ್ತೆರೆದು ನೋಡುವಾಗ ಅಮೇರಿಕೆಯ ಯೂನಿರ್ವಸಿಟಿಯೊಂದರಲ್ಲಿ ಕಲಿಯುತ್ತಿದ್ದೆ. ಅಷ್ಟರ ಮಟ್ಟಿಗೆ, ಅದೆಷ್ಟೊ ಸಲ ಅಸೆಕಂಗಳಿಂದ ನೋಡಿದ ಸಿನಿಮಾ". "ಅದು ಸಿನಿಮಾವಲ್ಲ . ರಸಿಕರ ಪಾಲಿನ ರಸಭರಿತ ಮಾವು", "ಮಂಜುನಾಥ. ಎನ್ ಲಗ್ಗೆರೆ ನಾನು ಕೂಡ ಕಪಾಲಿಯಲ್ಲಿ ಈ ಚಿತ್ರ ನೊಡಿದ್ದೆ ಬಹಳ ಸೊಗಸಾದ ಚಿತ್ರ ಸರ್. ಇತ್ತಿಚೆಗೆ ನಿಮ್ಮ ನಿರ್ದೇಶನದಲ್ಲಿ ಯಾವ ಚಿತ್ರಗಳು ಬರುತ್ತಿಲ್ಲ ಸರ್ ದಯವಿಟ್ಟು ಬೇಗ ನಿಮ್ಮ ನಿರ್ದೇಶನದ ಚಿತ್ರಕ್ಕಾಗಿ ಕಾಯ್ತ ಇದ್ದೀವಿ", "ಆಗಿನ ಕಾಲ ಪಡ್ಡೆ ಹುಡುಗ ಹುಡುಗಿಯ ನಿದ್ದೆ ಕೆಡಿಸಿದ ಸಿನಿಮಾ. ಈಗಲೂ ಸೂಜಿಗಲ್ಲಿನಂತೆ ಸೆಳೆಯುವ ಸುಮಧುರ ಹಾಡುಗಳು, ಸಂಗೀತ, ಅಭಿನಯ, ಸಂಭಾಷಣೆ, ನಿರ್ದೇಶನ ಎಲ್ಲವೂ ಬೊಂಬಾಟ್" ಎಂದೆಲ್ಲ ನನ್ನ ಪ್ರೀತಿಯ ಹುಡುಗಿಯನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.
"ಎಲ್ಲಿ ಹೋದವು ಆ ದಿನಗಳು... ಸಿನಿಮಾಗಾಗಿ ವಾರಗಟ್ಟಲೆ ಕಾಯುತ್ತಿದ್ದವು... ಕಣ್ ಮುಂದೆ ಬರುತ್ತಿದ್ದರೂ , ಕಣ್ಮನ ಸೆಳೆಯದ ಈಗಿನ ಸಿನಿಮಾಗಳು", "ಇಂದಿಗೂ ಈ ಸಿನಿಮಾ ನೋಡಿದ ನೆನಪು, ಆ ಹದಿವಯಸ್ಸಿನ ಪ್ರೇಮದ ಬಿಸುಪು ಎದೆಯಲ್ಲಿ ಹಾಗೆಯೇ ಇದೆ", "ನನಗೆ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್.. ಈ ಹಾಡು ಎಂಪಿ3 ಕೇಳಿದಾಗಿನಿಂದ ಹೆಚ್ಚು ಇಷ್ಟವಾಗ ತೊಡಗಿದ್ದು ಇದರ ವಿಡಿಯೋ ಸಾಂಗು ಸರ್. ಇಡೀ ಸಿನಿಮಾ ನೋಡಿದ ಮೇಲೆ "ಮೂಡಲ್ ಕುಣಿಗಲ್ ಕೆರೆ, ನೋಡೋರಿಗೊಂದ್..." ಕೂಡ ಮನಸಿನಲ್ಲಿ ಅಚ್ಚೊತ್ತಿದೆ.
ಒಳ್ಳೆಯ ಲಿರಿಕ್ಸ್, ಮ್ಯೂಸಿಕ್ಕು, ಗಾಯನ, ಪಾಯಸಕ್ಕೆ ನಿರ್ದೆಶನ ಅನ್ನೋ ತುಪ್ಪ ಸೇರಿಸಿದ್ದೀರಿ. ಚಪ್ಪರಿಸಿಕೊಂಡು ಸವಿಯುವಂಥ ಚಿತ್ರ ಕೊಟ್ಟಿದ್ದಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳು", "ಅಭಿನಂದನೆಗಳು ಇಡೀ ನನ್ನ ಪ್ರೀತಿಯ ಹುಡುಗಿ ತಂಡಕ್ಕೆ.ಇಡೀ ಸಿನಿಮಾ ವಿಭಿನ್ನ ಪ್ರಯೋಗದಿಂದ ಕೂಡಿದ್ದು ಅಚ್ಚುಕಟ್ಟಾದ ನಿರೂಪಣೆ, ಹದವರಿತ ನಟನೆ,ಹಿತವಾದ ಸಂಗೀತ, ಇವೆಲ್ಲವುಗಳ ಕಾರಣ ಕನ್ನಡದ ವಿಶಿಷ್ಟವಾದ ಸಿನಿಮಾ ಆಯಿತು. ನೀವು ಅಂದು ತೋರಿಸಿದ್ದ ಅಮೇರಿಕದಲ್ಲಿನ ಸ್ಥಿತಿ ಇಂದು ಭಾರತಕ್ಕೂ ಕಾಲಿಟ್ಟಿವೆ. ಕಾರ್ ಕಾರ್ ಕಾರ್ ಹಾಡನ್ನು ಭಾರತೀಯ ರಸ್ತೆಯ ವ್ಯವಸ್ಥೆಗೂ ಅನ್ವಯಿಸಿ ಹಾಡಬಹುದು ಸರ್" ಹೀಗೆ ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ.
