ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ, ಈ ವೀಕೆಂಡ್‌ಗೆ ಕನ್ನಡ ಚಿತ್ರ ನೋಡಿ
ಮನದ ಕಡಲು ಒಟಿಟಿ ಬಿಡುಗಡೆ: ಯೋಗರಾಜ್ ಭಟ್ ನಿರ್ದೇಶನದ ಹೊಸಬರಾದ ಸುಮುಖ, ಅಂಜಲಿ ಅನೀಶ್ ಮತ್ತು ರಶಿಕಾ ಶೆಟ್ಟಿ ನಟಿಸಿರುವ 'ಮನದ ಕಡಲು' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಯಾವ ಒಟಿಟಿಯಲ್ಲಿ ನೋಡಬಹುದು ಎಂದು ತಿಳಿದುಕೊಳ್ಳೋಣ.

ಮನದ ಕಡಲು ಒಟಿಟಿ ಬಿಡುಗಡೆ: ಯೋಗರಾಜ್ ಭಟ್ ಕನ್ನಡದ ಖ್ಯಾತ ನಿರ್ದೇಶಕರು. ಇವರ ಸಿನಿಮಾಗಳಿಗೆ ಸಾಕಷ್ಟು ಜನರು ಕಾಯುತ್ತ ಇರುತ್ತಾರೆ. ರಂಗ ಎಸ್‌ಎಸ್‌ಎಲ್‌ಸಿ, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ , ಡ್ರಾಮಾ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮುಂಗಾರು ಮಳೆ ಸಿನಿಮಾವಂತೂ ಸಖತ್ ಹಿಟ್ ಆಗಿತ್ತು. ವಾಸ್ತು ಪ್ರಕಾರ, ದಾನ ಕಾಯೋನು, ಕ್ವಾಟ್ಲೆ ಸತೀಶ, ಮುಗುಳು ನಗೆ, ಪಂಚತಂತ್ರ, ಗಾಳಿಪಟ 2, ಗರಡಿ ಮತ್ತು ಕರಟಕ ದಮನಕ ಮುಂತಾದ ಸಿನಿಮಾಗಳನ್ನೂ ಮರೆಯುವಂತೆ ಇಲ್ಲ. ಇದೀಗ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಮನದ ಕಡಲು ಸಿನಿಮಾವನ್ನು ಒಟಿಟಿಯಲ್ಲಿ ನೋಡಿ
ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ ಜತೆ ಸೇರಿ ಯೋಗರಾಜ್ ಭಟ್ ಮನದ ಕಡಲು ಸಿನಿಮಾ ಮಾಡಿದ್ದರು. ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಬಿಡುಗಡೆಯಾದ ಈ ಚಿತ್ರದ ಕುರಿತು ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಮನದ ಕಡಲು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌ನ ಪ್ರೇಕ್ಷಕರಿಗೆ ಈ ಸಿನಿಮಾ ಲಭ್ಯವಿತ್ತು. ಇದೀಗ ಭಾರತೀಯ ಪ್ರೇಕ್ಷಕರಿಗೆ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಇತ್ತೀಚೆಗೆ ವಾಮನ ಸಿನಿಮಾವು ಮೊದಲು ವಿದೇಶಿ ಪ್ರೇಕ್ಷಕರಿಗೆ ಬಿಡುಗಡೆಯಾಗಿತ್ತು.
ಮನದ ಕಡಲು ಸಿನಿಮಾ ವಿಮರ್ಶೆ
ಹಿಂದೂಸ್ತಾನ್ ಟೈಮ್ಸ್ ಕನ್ನಡದ ವಿಮರ್ಶಕರು ಈಗಾಗಲೇ ಮನದ ಕಡಲು ಸಿನಿಮಾ ನೋಡಿ ವಿಮರ್ಶೆ ಮಾಡಿದ್ದಾರೆ. "ಸುಮುಖ ಒಬ್ಬ ಮೆಡಿಕಲ್ ವಿದ್ಯಾರ್ಥಿ. ಒಂದು ದುರ್ಘಟನೆಯ ಬಳಿಕ ಆತನಿಗೆ ವೈದ್ಯಕೀಯ ವೃತ್ತಿ ಬಗ್ಗೆ ತಿರಸ್ಕಾರ ಬಂದು ಓದುವುದನ್ನೇ ನಿಲ್ಲಿಸುತ್ತಾನೆ. ಇಂತಹ ಸಮಯದಲ್ಲಿ ರಾಶಿಕಾ ಎಂಬ ಹುಡುಗಿ ಮೇಲೆ ಲವ್ ಆಗುತ್ತದೆ. ಅವಳು ಕ್ರಿಕೆಟ್ ಆಟಗಾರ್ತಿ. ಇವನ ಲವ್ ಪ್ರಪೋಸಲ್‌ಗೆ ಅವಳು ಆರು ತಿಂಗಳ ನಂತರ ನೋಡೋಣ ಎಂದು ಹೇಳಿ ಕಳುಹಿಸುತ್ತಾಳೆ. ಆರು ತಿಂಗಳು ಮುಗಿಯುವುದರೊಳಗೆ ಕಾಣೆಯಾಗುತ್ತಾಳೆ. ಅವಳನ್ನು ಹುಡುಕಿಕೊಂಡು ದೋಣಿದುರ್ಗ ಎಂಬ ಊರಿಗೆ ಹೋಗುವ ಸುಮುಖನಿಗೆ ಅಂಜಲಿ ಎಂಬ ಇನ್ನೊಂದು ಹುಡುಗಿಯ ಪರಿಚಯ ಆಗುತ್ತದೆ. ಸುಮುಖನಿಗೆ ರಾಶಿಕಾಳ ಮೇಲೆ ಪ್ರೀತಿಯಾದರೆ, ಅಂಜಲಿಗೆ ಸುಮುಖನ ಮೇಲೆ ಪ್ರೀತಿಯಾಗುತ್ತದೆ. ಸಿನಿಮಾ ತ್ರಿಕೋನ ಪ್ರೇಮಕಥೆಯಾಗುತ್ತದೆ. ಮುಂದೇನಾಗುತ್ತದೆ ಎಂಬುದಕ್ಕೆ ಚಿತ್ರ ನೋಡಬೇಕು. ಮನದ ಕಡಲು ಸಿನಿಮಾದ ಪೂರ್ತಿ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಸಿನಿಮಾವನ್ನು ಸುಂದರವಾಗಿ ಸಂತೋಷ್ ರೈಪಾತಾಜೆ ಶೂಟಿಂಗ್ ಮಾಡಿದ್ದಾರೆ. ಇಡೀ ಚಿತ್ರವನ್ನು ಸಂತೋಷ್ ಕ್ಯಾಮೆರಾ ಕಣ್ಣುಗಳಲ್ಲಿ ನೋಡುವುದೇ ಚೆಂದ. ಕಲಾ ನಿರ್ದೇಶನವೂ ಚೆನ್ನಾಗಿದೆ. ರಂಗಾಯಣ ರಘು ಇಡೀ ಚಿತ್ರದಲ್ಲಿ ಇದ್ದಾರಾದರೂ ನಟನೆಗೆ ಅವಕಾಶ ಕಡಿಮೆಯೇ. ದತ್ತಣ್ಣ ಅವರ ಪಾತ್ರ ತೂಕದ್ದಾಗಿದ್ದು, ಅವರು ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ರು ಸಮಕಾಲೀನ ಸಂಬಂಧಗಳ ಚಲನಶೀಲತೆಯ ಬಗ್ಗೆ ಮತ್ತು ಹಿಂದಿನ ದಿನಗಳ ಸಂವೇದನೆಗಳ ಬಗ್ಗೆ ತಮ್ಮ ಟ್ರೇಡ್‌ಮಾರ್ಕ್ ತಾತ್ವಿಕ ದೃಷ್ಟಿಕೋನಗಳನ್ನು ಈ ಸಿನಿಮಾದಲ್ಲಿ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿಯಾದರೂ ಮಿಸ್ ಮಾಡದೆ ನೋಡಬಹುದು.