Kannada Thriller Movies: ಒಟಿಟಿಯಲ್ಲಿ ನೋಡಬಹುದಾದ ಕನ್ನಡದ 10 ಬೆಸ್ಟ್ ಥ್ರಿಲ್ಲರ್ ಸಿನಿಮಾಗಳು; ಬ್ಲಿಂಕ್‌ನಿಂದ ಶಾಖಾಹಾರಿವರೆಗೆ
ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳು ಮಲಯಾಳಂನಲ್ಲಷ್ಟೇ ಅಲ್ಲ, ಕನ್ನಡದಲ್ಲೂ ಸಾಕಷ್ಟಿವೆ. ಒಟಿಟಿಯಲ್ಲಿ ನೋಡಬಹುದಾದ ಕನ್ನಡದ 10 ಬೆಸ್ಟ್ ಥ್ರಿಲ್ಲರ್ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ. ಥ್ರಿಲ್ಲರ್ ಸಿನಿಮಾ ಇಷ್ಟ ಅಂದ್ರೆ ಈಗಲೇ ನೋಡಿ.

ಇತ್ತೀಚಿನ ಬಹುತೇಕ ಸಿನಿ ಪ್ರೇಮಿಗಳಿಗೆ ಕ್ರೈಂ, ಥ್ರಿಲ್ಲರ್ ಸಿನಿಮಾಗಳು ಹೆಚ್ಚು ಇಷ್ಟವಾಗುತ್ತಿವೆ. ಮಲಯಾಳಂ, ತಮಿಳು, ಹಿಂದಿಯಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಸಾಕಷ್ಟು ಥ್ರಿಲ್ಲರ್ ಸಿನಿಮಾಗಳು ಬಿಡುಗಡೆಯಾಗಿವೆ. ಕೆಲವು ಸಿನಿಮಾಗಳು ಹೆಸರು ಮಾಡಿದ್ದರೂ ಕೆಲವು ಸಿನಿಮಾಗಳು ಸಾಕಷ್ಟು ಹೆಸರು ಮಾಡಿಲ್ಲದೇ ಇರಬಹುದು. ಕನ್ನಡದಲ್ಲೂ ನೀವು ಥ್ರಿಲ್ಲರ್ ಸಿನಿಮಾ ನೋಡಬೇಕು ಅಂತಿದ್ದರೆ ಒಟಿಟಿಯಲ್ಲಿ ನೋಡಬಹುದು.
ವಿವಿಧ ಒಟಿಟಿ ವೇದಿಕೆಗಳಲ್ಲಿ ಲಭ್ಯವಿರುವ ಕನ್ನಡದ ಬೆಸ್ಟ್ 10 ಥ್ರಿಲ್ಲರ್ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ. ವಾರಾಂತ್ಯದಲ್ಲಿ ನೋಡಿ ನಿಮ್ಮ ದಿನವನ್ನು ಥ್ರಿಲ್ಲಿಂಗ್ ಆಗಿಸಿ.
ಶಾಖಾಹಾರಿ
2024ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕೊಲೆ ರಹಸ್ಯ ಆಧಾರಿತ ಕಥೆಯನ್ನು ಹೊಂದಿದೆ. ಸಂದೀಪ್ ಸುಂಕದ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ವಿನಯ್ ಯುಜೆ, ನಿಧಿ ಹೆಗಡೆ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಮಯೂರ್ ಅಂಬೇಕಲ್ಲು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಐಎಂಡಿಬಿಯಲ್ಲಿ 7.6ರೇಟಿಂಗ್ ಪಡೆದಿರುವ ಈ ಸಿನಿಮಾವನ್ನು ಪ್ರೈಮ್ ವಿಡಿಯೊ ಹಾಗೂ ಆಹಾ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.
ಬ್ಲಿಂಕ್
ಇದು ಕೂಡ 2024ರಲ್ಲಿ ಬಿಡುಗಡೆಯಾದ ಕನ್ನಡದ ಬೆಸ್ಟ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದು. ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಸಿನಿಮಾಕ್ಕೆ ಚೈತ್ರ ಜೆ. ಆಚಾರ್ ನಾಯಕಿ. ಶ್ರೀನಿಧಿ ಬೆಂಗಳೂರು ಈ ಸಿನಿಮಾಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ವಿರ್ಮಶಕರಿಂದ ಮೆಚ್ಚುಗೆ ಪಡೆದಿತ್ತು. ಜನನಿ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಪ್ರೈಮ್ ವಿಡಿಯೊ ಹಾಗೂ ಆಹಾ ವೇದಿಕೆಯಲ್ಲಿ ನೋಡಬಹುದು.
o2
2024ರಲ್ಲಿ ತೆರೆ ಕಂಡ o2 ಸಿನಿಮಾ ವೈದ್ಯಕೀಯ ಕಥಾಹಂದರದ ಹಿನ್ನೆಲೆಯುಳ್ಳ ಸಿನಿಮಾವಾಗಿದೆ. ರಾಘವ ನಾಯಕ್ ಹಾಗೂ ಪ್ರಶಾಂತ್ ರಾಜ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನಿತ್ ರಾಜ್‌ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ತೇಜ್, ಆಶಿಕಾ ರಂಗನಾಥ್, ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಬಹುದು.
ವಿಂಡೋಸೀಟ್
2022ರಲ್ಲಿ ಬಿಡುಗಡೆಯಾದ ವಿಂಡೋಸೀಟ್ ಸಿನಿಮಾವು ನಿಗೂಢ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ನಿರೂಪಕಿ, ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತಾ ಅಯಂಗಾರ್ ಈ ಸಿನಿಮಾದಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಂಡೋಸೀಟ್ ಸಿನಿಮಾವನ್ನು ಜೀ 5ನಲ್ಲಿ ವೀಕ್ಷಿಸಬಹುದು.
ಟೋಬಿ
ಟೋಬಿ ಸಿನಿಮಾವು 2023ರಲ್ಲಿ ಬಿಡುಗಡೆಯಾಗಿತ್ತು. ಗ್ಯಾಂಗಸ್ಟರ್ ಹಿನ್ನೆಲೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ಚೈತ್ರಾ ಜೆ ಆಚಾರ್, ಸಂಯುಕ್ತ ಹೊರನಾಡು, ದೀಪಕ್ ಶೆಟ್ಟಿ, ಗೋಪಾಲ್ ದೇಶಪಾಂಡೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಸಿಲ್ ಅಲ್ಚಲಕ್ಕಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಟೋಬಿ ಚಿತ್ರವನ್ನು ಸೋನಿ ಲಿವ್ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಿಸಬಹುದು.
ಶಿವಾಜಿ ಸುರತ್ಕಲ್
ರಮೇಶ್ ಅರವಿಂದ್ ನಾಯಕನಾಗಿ ನಟಿಸಿರುವ ಶಿವಾಜಿ ಸುರತ್ಕಲ್ ನಿಗೂಢ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ. 2020ರಲ್ಲಿ ಬಿಡುಗಡೆಯಾಗಿರುವ ಸಿನಿಮಾ ಇದಾಗಿದೆ. ಅಕ್ಷ ಶ್ರೀವಾಸ್ತವ್ ನಿರ್ದೇಶಕ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಜೀ 5 ನಲ್ಲಿ ವೀಕ್ಷಿಸಬಹುದು.
ಬೆಲ್‌ಬಾಟಂ
ಜಯತೀರ್ಥ ನಿರ್ದೇಶನದ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಟನೆಯ ಥ್ರಿಲ್ಲರ್ ಸಿನಿಮಾವಿದು. ಈ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು. ರಿಷಭ್ ಶೆಟ್ಟಿ ಜೊತೆ ಹರಿಪ್ರಿಯಾ, ಪ್ರಮೋದ್ ಶೆಟ್ಟಿ, ಅಚ್ಚುತ್ ಕುಮಾರ್, ಯೋಗರಾಜ್ ಭಟ್, ಪ್ರಕಾಶ್ ತುಮ್ಮಿನಾಡು ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಆಹಾ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.
6-5=2
ಕನ್ನಡದಲ್ಲಿ ಬಂದಂತಹ ಒಂದು ಅಪರೂಪದ ಥ್ರಿಲ್ಲರ್ ಸಿನಿಮಾ 6-5=2. ಹೆಸರಿಗೆ ತಕ್ಕಂತೆ ಸಿನಿಮಾ ಕೂಡ ಬಹಳ ಕುತೂಹಲಕಾರಿಯಾಗಿದೆ. ಕ್ಷಣಕ್ಷಣಕ್ಕೂ ರೋಚಕ ಅಂಶಗಳನ್ನು ಹೊಂದಿರುವ ಈ ಸಿನಿಮಾವು 2013ರಲ್ಲಿ ಬಿಡುಗಡೆಯಾದ ಸಿನಿಮಾ. ಇದನ್ನು ನೀವು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.
ಸಪ್ಲೈಯರ್ ಶಂಕರ
ರಂಜಿತ್ ಸಿಂಗ್ ರಜಪೂತ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಪ್ಲೈಯರ್ ಶಂಕರ ಸಿನಿಮಾವು ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ನಿಶ್ಚಿತ್ ಕೊರೊಡಿ, ದೀಪಿಕಾ ಆರಾಧ್ಯ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.
ಕೇಸ್ ಆಫ್ ಕೊಂಡಣ್ಣ
ಇದು 2024ರಲ್ಲಿ ಬಿಡುಗಡೆಯಾದ ಸಿನಿಮಾ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಹಾಗೂ ಭಾವನಾ ಮೆನನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಬಹುದು.