ಜೂನ್ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳು; ಯುದ್ಧಕಾಂಡದಿಂದ ರುದ್ರ ಗರುಡ ಪುರಾಣ ತನಕ
ಜೂನ್ 2025ರಲ್ಲಿ ಯುದ್ಧಕಾಂಡ ಚಾಪ್ಟರ್ 2 ಸೇರಿದಂತೆ ಕೆಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಜಿಯೋಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5, ಸೋನಿ ಲಿವ್ ಸೇರಿದಂತೆ ಹಲವು ಒಟಿಟಿಗಳಲ್ಲಿ ನೋಡಬಹುದಾದ ಕನ್ನಡ ಸಿನಿಮಾಗಳ ವಿವರ ಇಲ್ಲಿದೆ.

ಈ ವರ್ಷದ ಮೊದಲ ಆರು ತಿಂಗಳುಗಳು ಕಳೆಯುತ್ತಿದೆ. ಈ ಸಮಯದಲ್ಲಿ ಬಿಡುಗಡೆಯಾದ ಸಿನಿಮಾಗಳು ಸುಮಾರು ನೂರು ಆಗಬಹುದು. ಕೆಲವೊಂದು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿದವು. ಇನ್ನು ಕೆಲವು ಸಿನಿಮಾಗಳನ್ನು ನೋಡಲು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನರು ಥಿಯೇಟರ್‌ಗೆ ಆಗಮಿಸಿದ್ದರು. ಚಿತ್ರಮಂದಿರಗಳಲ್ಲಿ ಲಾಭ ಗಳಿಸಿದ ಸಿನಿಮಾಗಳ ಲೆಕ್ಕ ಬೆರಳೆಣಿಕೆಯಷ್ಟೇ ಇರುತ್ತದೆ. ಆದರೆ, ಈ ವರ್ಷ ಕನ್ನಡದ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಕನ್ನಡ ಚಿತ್ರಗಳಿಗೆ ಒಟಿಟಿಗಳು ಸಿಗುತ್ತಿಲ್ಲ ಎಂಬ ಬೇಸರವನ್ನು ಕೆಲವು ಕನ್ನಡ ಸಿನಿಮಾಗಳು ನೀಗಿಸಿವೆ. ಕನ್ನಡದ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾದಗ ಭಾರತದ ಹಲವು ಭಾಷೆಯ ಪ್ರೇಕ್ಷಕರು ಆ ಸಿನಿಮಾಗಳನ್ನು ನೋಡಿ ಆನಂದಿಸಿದ್ದಾರೆ. ಸ್ಯಾಂಡಲ್‌ವುಡ್ ಚಿತ್ರಗಳು ಒಟಿಟಿ ಜಗತ್ತಿನಲ್ಲಿ ಹೆಚ್ಚು ಜನರಿಗೆ ತಲುಪಿವೆ. ಇದೇ ಕಾರಣಕ್ಕೆ ಜಿಯೋಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5, ಸೋನಿ ಲಿವ್ ಸೇರಿದಂತೆ ಹಲವು ಒಟಿಟಿಗಳಲ್ಲಿ ಯಾವ ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿದೆ ಎಂದು ಸಿನಿಮಾ ಪ್ರೇಮಿಗಳು ಕಾಯುತ್ತಿರುತ್ತಾರೆ. ಜೂನ್ ತಿಂಗಳಲ್ಲಿ ವಿವಿಧ ಒಟಿಟಿಗಳಲ್ಲಿ ಯಾವೆಲ್ಲ ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿವೆ (ಬಿಡುಗಡೆಯಾಗಬಹುದು) ಎಂಬ ವಿವರ ಇಲ್ಲಿದೆ.
ಜೂನ್ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು
ಯುದ್ಧಕಾಂಡ ಚಾಪ್ಟರ್ 2
ಕೃಷ್ಣ ಅಜೇಯ್ ರಾವ್ ಅವರ ನಿರ್ಮಾಣ ಮತ್ತು ನಟನೆಯ ಯುದ್ಧಕಾಂಡ ಚಾಪ್ಟರ್ 2 ಸಿನಿಮಾವು ಜೂನ್ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಿನಿಮಾಕ್ಕೆ ಪವನ್ ಭಟ್ ನಿರ್ದೇಶನವಿದೆ. ಈ ಸಿನಿಮಾದ ಶೋ ಸದ್ಯ ಬೆಂಗಳೂರಿನ ಒಂದೇ ಒಂದು ಚಿತ್ರಮಂದಿರದಲ್ಲಿ ಮಾತ್ರ ನಡೆಯುತ್ತಿದೆ. ಹೀಗಾಗಿ, ಈ ಸಿನಿಮಾ ಶೀಘ್ರದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಈ ಸಿನಿಮಾವು ಏಪ್ರಿಲ್ 18ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ನ್ಯಾಯಕ್ಕಾಗಿ ಹೋರಾಡುವ ಕಥೆಯಿರುವ ಈ ಕೋರ್ಟ್ ಡ್ರಾಮಾವು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸುಮಾರು 5-6 ಕೋಟಿ ರೂಪಾಯಿ ಗಳಿಸಿರಬಹುದು ಎಂದು ವರದಿಗಳು ತಿಳಿಸಿವೆ. ಥಿಯೇಟರ್‌ನಲ್ಲಿ ಕಳೆದುಕೊಂಡ ಹಣವು ಅಜೇಯ್ ರಾವ್‌ಗೆ ಒಟಿಟಿ ಮೂಲಕವಾದರೂ ದೊರಕುವ ನಿರೀಕ್ಷೆಯಿದೆ. ಈಗಾಗಲೇ ಅಜೇಯ್ ರಾವ್ ನಟನೆಯ ಅತ್ಯುತ್ತಮ ಸಿನಿಮಾಗಳಾದ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ ಸಿನಿಮಾಗಳು ಸನ್‌ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಹೀಗಾಗಿ, ಯುದ್ದಕಾಂಡ ಚಾಪ್ಟರ್ 2 ಕೂಡ ಇದೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವುದಾಗಿ ನಿರೀಕ್ಷಿಸಬಹುದು. ಆದರೆ, ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ ಸಿನಿಮಾಗಳು ಹೆಚ್ಚುತ್ತಿವೆ. ಪ್ರೈಮ್ ವಿಡಿಯೋಗೆ ವೀಕ್ಷಕರ ಬಳಗವೂ ದೊಡ್ಡದಿದೆ. ಹೀಗಾಗಿ, ಎಲ್ಲಾದರೂ ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದರೂ ಅಚ್ಚರಿಯಿಲ್ಲ.
ರುದ್ರ ಗರುಡ ಪುರಾಣ
ಕವಲುದಾರಿ ಮತ್ತು ನೋಡಿ ಸ್ವಾಮಿ ಇವನು ಇರೋದೆ ಹೀಗೆ ಖ್ಯಾತಿಯ ನಟ ರಿಷಿ ಅವರ ತನಿಖಾ ಸಿನಿಮಾ ರುದ್ರ ಗರುಡ ಪುರಾಣ ಕೂಡ ಜೂನ್ ತಿಂಗಳಲ್ಲಿ ಒಟಿಟಿಗೆ ಆಗಮಿಸಲಿದೆ. ಈ ಸಿನಿಮಾದಲ್ಲಿ ಎಂಎಲ್‌ಎ ಒಬ್ಬರ ಮಗ ನಿಗೂಢವಾಗಿ ಕಾಣೆಯಾಗುತ್ತಾನೆ. ಆತ ಕೊನೆಯ ಬಾರಿ ಸರಕಾರಿ ಬಸ್ ಒಂದಕ್ಕೆ ಹತ್ತುವುದನ್ನು ಜನರು ನೋಡಿರುತ್ತಾರೆ. ಆದರೆ, ತನಿಖೆಯ ಸಮಯದಲ್ಲಿ ತಿಳಿಯುವುದೇನೆಂದರೆ ಹೇಳಲಾದ ದಾರಿಯಲ್ಲಿ ಆ ಬಸ್ ಹೋಗದೇ ಕಾಲು ಶತಮಾನದ ಹಿಂದೆ ಆ ಬಸ್ ಆ ರೂಟ್‌ನಲ್ಲಿ ಹೋಗುತ್ತಿತ್ತು. ಹಾಗಾದರೆ ಈತ ಕಾಣೆಯಾಗಿರುವುದು ಹೇಗೆ? ಇಂತಹ ವಿಶೇಷ ಪ್ರಕರಣದ ತನಿಖೆಯನ್ನು ರಿಷಿ ಹೇಗೆ ಮಾಡುತ್ತಾನೆ ಎನ್ನುವುದೇ ಸಿನಿಮಾದ ಕಥೆ. ಈ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ಇದು ಮೂರು ಸಣ್ಣ ಕಥೆಗಳಿರುವ ಆಂಥಾಲಜಿ ಸಿನಿಮಾ. ಈ ಸಿನಿಮಾ ಕೂಡ ಮುಂದಿನ ತಿಂಗಳು ಒಟಿಟಿಯಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ದಿಲೀಪ್ ರಾಜ್, ಶಿಲ್ಪಾ ಮಂಜುನಾಥ್, ಅಪೂರ್ವ ಭಾರದ್ವಾಜ್, ಪ್ರಸನ್ನ ಶೆಟ್ಟಿ ಮತ್ತು ಇತರರು ನಟಿಸಿದ್ದಾರೆ.