Chandan Shetty: ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್ ‘ಕಾಟನ್ ಕ್ಯಾಂಡಿ’ ರಿಲೀಸ್; ಹೊಸ ವರ್ಷದ ಪಾರ್ಟಿಗೆ ಇದೇ ಹಾಡು ಫಿಕ್ಸ್ ಎಂದ ಫ್ಯಾನ್ಸ್
ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್ ‘ಕಾಟನ್ ಕ್ಯಾಂಡಿ' ರಿಲೀಸ್ ಆಗಿದೆ. 2024ರ ಅಂತ್ಯದ ವೇಳೆ ಈ ಹಾಡು ಬಿಡುಗಡೆಯಾಗಿದ್ದು ಹೊಸ ವರ್ಷದ ಆರಂಭಕ್ಕೆ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. 2024ರ ಅಂತ್ಯದ ವೇಳೆ ಈ ಹಾಡು ಬಿಡುಗಡೆಯಾಗಿದ್ದು ಹೊಸ ವರ್ಷದ ಆರಂಭದ ಪಾರ್ಟಿಗಳಿಗೆ ಇದೇ ಸಾಂಗ್ ಹಾಕ್ತೀವಿ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಹಾಡುಗಳನ್ನು ಬಾಯಿಪಾಠ ಮಾಡಿದ ಅದೆಷ್ಟೋ ಜನ ಇದ್ದಾರೆ. ಅಷ್ಟರ ಮಟ್ಟಿನ ಕ್ರೇಜ್ ಅವರ ಅಭಿಮಾನಿಗಳಲ್ಲಿದೆ. ಈ ಹಿಂದೆಯೂ ಸಾಕಷ್ಟು ರ್ಯಾಪ್ ಸಾಂಗ್‌ಗಳನ್ನು ಅವರು ಬಿಡುಗಡೆ ಮಾಡಿದ್ದು. ಪಕ್ಕಾ ಚಾಕ್ಲೆಟ್ ಗರ್ಲ್, ಪಾರ್ಟಿ ಫ್ರೀಕ್, ಟಾಪ್ ಟು ಬಾಟಮ್ ಗಾಂಚಾಲಿ, ಲಕ ಲಕ ಲಂಬರ್ಗಿನ್ನಿ, ಗೊಂಬೆ- ಗೊಂಬೆ ಹೀಗೆ ಸಾಕಷ್ಟು ರ್ಯಾಪ್ ಸಾಂಗ್‌ಗಳನ್ನು ಹಾಡುವುದರೊಟ್ಟಿಗೆ ಸಿನಿಮಾಗಳಿಗೂ ಹಾಡು ಹಾಡಿದ್ದಾರೆ.
ಡಿಸೆಂಬರ್ ಕೊನೆ ವಾರದಲ್ಲಿ ಇವರು ಬಿಡುಗಡೆ ಮಾಡಿದ ಮತ್ತೊಂದು ಹೊಸ ಹಾಡು 'ಕಾಟನ್ ಕ್ಯಾಂಡಿ' ಈ ಹಾಡು ಕೂಡ ಇದೀಗ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಈ ಹಾಡನ್ನು ಮೆಚ್ಚಿಕೊಂಡು ಸ್ಟೇಟಸ್ ಮಾಡಿಕೊಂಡಿದ್ದಾರೆ. ನಿವೇದಿತಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಬಿಡುಗಡೆಯಾದ ಈ ಸಾಂಗ್‌ನಲ್ಲಿಯೂ "ಇಟ್ಸ್ ಬ್ರೋಕ್ ಅಪ್" ಎಂಬ ಸಾಲುಗಳು ಆರಂಭದಲ್ಲಿಯೇ ಇದೆ.
ಈ ಆಲ್ಬಂ ಸಾಂಗ್‌ನಲ್ಲಿ ಸುಶ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಯಾವ ಬಾರಿ ಹೊಸ ಸಾಂಗ್ ಮಾಡಿದರೂ ಅದರಲ್ಲೊಂದು ಹೊಸ ನಟಿ ಇರುತ್ತಾರೆ. ಈ ಬಾರಿ ಸುಶ್ಮಿತಾ ಗೋಪಿನಾಥ್ ಚಂದನ್ ಶೆಟ್ಟಿ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಚಂದನ್ ಶೆಟ್ಟಿಯ ಶೈಲಿಯಲ್ಲೇ ಮೂಡಿ ಬಂದಿದ್ದು ನೀವು ಮಾಡೋ ಆಲ್ಬಮ್ ಸಾಂಗ್ಸ್ ತುಂಬಾ ಇಷ್ಟ, ಈ ಹಾಡು ಕೇಳಿ ಖುಷಿ ಆಯ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಚಂದನ್ ಶೆಟ್ಟಿ ಇನ್ನಷ್ಟು ಹಾಡು ಬಿಡುಗಡೆ ಮಾಡಲಿ ಎಂದು ಕೋರಿಕೊಂಡವರೂ ಇದ್ದಾರೆ. ಕಂಬ್ಯಾಕ್ ಅಂದ್ರೆ ಇದು ಒಳ್ಳೆಯ ಹಾಡು ಎಂದು ಕಾಮೆಂಟ್ ಮಾಡಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಚಂದನ್ ಶೆಟ್ಟಿ ಶೇರ್ ಮಾಡಿದ ಈ ಹಾಡನ್ನು ಈಗಾಗಲೇ ಸಾಕಷ್ಟು ಜನ ವೀಕ್ಷಿಸಿದ್ದಾರೆ.
ವಿಭಾಗ