Gagana Bhari: ಕಿರುತೆರೆ ವೀಕ್ಷಕರ ಮನಗೆದ್ದ ಮಹಾನಟಿ ಗಗನ; ಯಾರೇ ನೀನು ಚಿತ್ರದುರ್ಗದ ಚೆಲುವೆ
Gagana Bhari Profile: ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಮೂಲಕ ಕರುನಾಡ ಜನತೆಗೆ ಪರಿಚಯವಾಗಿ, ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಮಿಂಚುತ್ತಿರುವ ಗಗನ ಭಾರಿ ಹಿನ್ನೆಲೆಯೇನು, ಅವರು ಎಲ್ಲಿಯವರು, ಓದಿದ್ದೇನು ಎಂಬಿತ್ಯಾದಿ ವಿವರ ಇಲ್ಲಿದೆ.

ಗಗನಾ ಭಾರಿ... ಇತ್ತೀಚಿಗೆ ಈ ಹೆಸರು ಕನ್ನಡ ಕಿರುತೆರೆ ವಲಯದಲ್ಲಿ ಸಖತ್ ಫೇಮಸ್. ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಮೂಲಕ ಟಿವಿ ಪರದೆಯಲ್ಲಿ ಕಾಣಿಸಿದ ಗಗನ ಈಗ ಕರುನಾಡ ಜನರಿಗೆ ಚಿರಪರಿಚಿತರು. ಮಹಾನಟಿ ನಂತರ ಆಕೆ ಡಾನ್ಸ್ ಕರ್ನಾಟಕ ಡಾನ್ಸ್, ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲೂ ಭಾಗವಹಿಸುತ್ತಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್ ಪ್ರತಾಪ್‌ಗೆ ಜೋಡಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.
ಭರ್ಜರಿ ಬ್ಯಾಚುಲರ್ ವೇದಿಕೆಯಲ್ಲಿ ವಿವಿಧ ಟಾಸ್ಕ್‌ಗಳಲ್ಲಿ ಸಖತ್ ಆಗಿ ಪರ್ಫಾಮೆನ್ಸ್ ಕೊಡುವ ಮೂಲಕ ಜನರಿಗೆ ಇಷ್ಟವಾಗುತ್ತಿದೆ ಪ್ರತಾಪ್–ಗಗನಾ ಜೋಡಿ. ಈ ನಡುವೆ ಜೀ ಕನ್ನಡ ಟಿಆರ್‌ಪಿ ಕಿಂಗ್ ಎಂದೇ ಪ್ರೇಕ್ಷಕರಿಂದ ಕರೆಸಿಕೊಳ್ಳುವ ಗಿಲ್ಲಿ ನಟ ಗಗನಾಳನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಗಿಲ್ಲಿ ನಟ ಪಂಚಿಂಗ್ ಡೈಲಾಗ್‌ಗಳನ್ನು ಹೇಳುತ್ತಾ ಗಗನಾಳ ಕಾಲೆಳೆಯುವುದು ನೋಡಲು ಮಜಾ ಇರುತ್ತದೆ. ಗಗನ ಹಾಗೂ ಗಿಲ್ಲಿ ಇಬ್ಬರು ಜೀ ಕನ್ನಡಕ್ಕೆ ಟಿಆರ್‌ಪಿ ತಂದುಕೊಡುವವರು ಎಂದು ಕಿರುತೆರೆ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಯಾರು ಎಂದೂ ಗೊತ್ತಿಲ್ಲದ ಹುಡುಗಿ ಗಗನಾ ಈಗ ಗಗನದೆತ್ತರಕ್ಕೆ ಬೆಳೆದಿದ್ದಾಳೆ. ಮಹಾನಟಿ ರಿಯಾಲಿಟಿ ಷೋದಿಂದ ಬಂದ ಗಗನ ಮಹಾನಟಿಯಾಗಿ ಬೆಳೆಯಲಿದ್ದಾರೆ ಎಂದು ಕಿರುತೆರೆ ಪ್ರೇಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ. ಹಾಗಾದರೆ ಯಾರು ಈ ಗಗನ, ಅವಳ ಹಿನ್ನೆಲೆಯೇನು ಎಂಬಿತ್ಯಾದಿ ವಿವರ ಇಲ್ಲಿದೆ.
ಗಗನ ಎಲ್ಲಿಯವರು, ಹಿನ್ನೆಲೆಯೇನು?
ಗಗನ ಭಾರಿ ಚಿತ್ರದುರ್ಗ ಮೂಲದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಆಕೆ ಎಂಜಿನಿಯರಿಂಗ್ ಪದವಿಧರೆ. ಆಕೆಗೆ ಮೊದಲಿನಿಂದಲೂ ನಟನೆಯ ಮೇಲೆ ಒಲವಿತ್ತು. ಶಾಲಾ, ಕಾಲೇಜು ದಿನಗಳಲ್ಲೂ ಆಕೆಗೆ ಡಾನ್ಸ್, ಆ್ಯಕ್ಟಿಂಗ್ ಅಂತ ಎಲ್ಲದರಲ್ಲೂ ಭಾಗವಹಿಸುತ್ತಿದ್ದರು. ರಿಯಾಲಿಟಿ ಷೋ ವೇದಿಕೆಯಲ್ಲಿ ಆಕೆ ಹೇಳಿಕೊಂಡಂತೆ ಗಣೇಶನ ಹಬ್ಬದ ಸಮಯದಲ್ಲಿ ಆಕೆ ತಮಗೆ ಖುಷಿ ಬಂದ ಸ್ಟೆಪ್ ಹಾಕಿ ಡಾನ್ಸ್ ಮಾಡುತ್ತಿದ್ದರಂತೆ, ತಮಟೆ ಡಾನ್ಸ್ ಮಾಡೋದ್ರಲ್ಲಿ ಆಕೆ ಸದಾ ಮುಂದಿರುತ್ತಿದ್ದರು. ಓದು ಮುಗಿಸಿದ ನಂತರ ಆಕೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಆ ಹೊತ್ತಿಗೆ ಆಕೆಗೆ ಬಯಸದೇ ಬಂದ ಭಾಗ್ಯ ಎಂಬಂತೆ ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಬಗ್ಗೆ ತಿಳಿಯುತ್ತದೆ.
ಮಹಾನಟಿಗೆ ಆಯ್ಕೆಯಾದ ಗಗನ
ಮಹಾನಟಿ ರಿಯಾಲಿಟಿ ಷೋ ಆಡಿಷನ್‌ನಲ್ಲಿ ಭಾಗವಹಿಸುವ ಆಕೆ ಆಯ್ಕೆಯಾಗುತ್ತಾರೆ. ತನ್ನ ಫಿಲ್ಟರ್ ಇಲ್ಲದ ಮಾತುಗಳಿಂದಲೇ ಗಮನ ಸೆಳೆಯುತ್ತಿದ್ದ ಗಗನ, ನಟನೆಯಲ್ಲೂ ಹಿಂದೆ ಬೀಳಿಲ್ಲ. ಕೆಲವರು ಇವರನ್ನು ಓವರ್ ಆ್ಯಕ್ಟಿಂಗ್ ಕ್ವೀನ್ ಎನ್ನುತ್ತಿದ್ದರೆ, ಕೆಲವರು ಆಕೆ ಇರೋದೇ ಹಾಗೆ, ನಿಜಕ್ಕೂ ಮುಗ್ಧೆ ಗಗನಾ ಎನ್ನುತ್ತಿದ್ದರು. ಎಂಥ ನಟನೆಗೂ ಸೈ ಎನ್ನುವಂತಿದ್ದ ಗಗನ ಮಹಾನಟಿ ಷೋದಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮಾತ್ರವಲ್ಲ ಇವರು ಮಹಾನಟಿ ಸೀಸನ್ 1ರಲ್ಲಿ 3 ಸ್ಥಾನ ಗಳಿಸುತ್ತಾರೆ. ನಂತರ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಷೋನಲ್ಲೂ ಭಾಗವಹಿಸುತ್ತಾರೆ.
ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ ಗಿಲ್ಲಿ–ಗಗನ ಮಜಾ
ಮಹಾನಟಿ ಬಳಿಕ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಷೋದಲ್ಲಿ ಭಾಗವಹಿಸುತ್ತಾರೆ. ಈ ಷೋನಲ್ಲಿ ಗಿಲ್ಲಿ ನಟ ಕೂಡ ಇರುತ್ತಾರೆ. ಈ ಷೋ ಅಲ್ಲಿ ಗಿಲ್ಲಿ–ಗಗನ ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಫೇಮಸ್ ಆಗುತ್ತಾರೆ. ಆಮೇಲೆ ಗಿಲ್ಲಿ–ಗಗನಾ ಸ್ಟೇಜ್ ಜೋಡಿ ಸ್ಟೇಜ್ ಮೇಲೆ ಬಂತು ಅಂದ್ರೆ ಆ ದಿನ ನಗುವಿಗೆ ಕೊರತೆ ಇಲ್ಲ ಎನ್ನುವಷ್ಟು ಗಿಲ್ಲಿ ಪಂಚಿಂಗ್ ಡೈಲಾಗ್‌ಗಳನ್ನು ಹೇಳುವ ಮೂಲಕ ಗಗನಾಳಿಗೆ ಕಾಲೆಳೆಯುತ್ತಿರುತ್ತಾರೆ. ಹೀಗೆ ಈ ಜೋಡಿ ಹಾಗೂ ಕಾಮಿಡಿ ನೋಡುವ ಸಲುವಾಗಿ ಶನಿವಾರ–ಭಾನುವಾರ ಟಿವಿ ಮುಂದೆ ಬರುವವರು ಇದ್ದಾರೆ. ಅದಾದ ನಂತರ ಭರ್ಜರಿ ಬ್ಯಾಚುಲರ್ಸ್‌ನತ್ತ ಗಗನ ಹಾದಿ ಸಾಗುತ್ತದೆ.
ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಡ್ರೋನ್‌ಗೆ ಗಗನ ಜೋಡಿ
ಜೀ ಕನ್ನಡದಲ್ಲಿ ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಡೆಯುತ್ತಿದ್ದು ಡ್ರೋನ್ ಪ್ರತಾಪ್‌ಗೆ ಗಗನಾ ಜೋಡಿಯಾಗಿದ್ದಾರೆ. ಆದರೂ ಆಗಾಗ ಈ ಷೋಗೆ ಬಂದು ಗಗನಾ ಕಾಲೆಳೆಯುವುದನ್ನು ಬಿಟ್ಟಿಲ್ಲ ಗಿಲ್ಲಿ. ಗಗನ ಹಾಗೂ ಪ್ರತಾಪ್ ಡಾನ್ಸ್ ಹಾಗೂ ವಿವಿಧ ಟಾಸ್ಕ್‌ಗಳ ಮೂಲಕ ತೀರ್ಪುಗಾರರ ಮನ ಗೆಲ್ಲುತ್ತಿದ್ದಾರೆ. ಈ ಸೀಸನ್‌ನಲ್ಲಿ ಯಾರು ವಿನ್ ಆಗುತ್ತಾರೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.
ಈ ನಡುವೆ ಮಧ್ಯಮ ವರ್ಗದಿಂದ ಬಂದು ಇಷ್ಟೆಲ್ಲಾ ಸಾಧನೆ ಮಾಡಿ ಮೇಲೆ ಬಂದಿರುವ ಗಗನಾ ಬಗ್ಗೆ ವೀಕ್ಷಕರು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾರೆ. ಮಾತ್ರವಲ್ಲ ಗಗನಾಗೆ ಇನ್ನಷ್ಟು ಅವಕಾಶಗಳು ಸಿಗಬೇಕು ಎನ್ನುತ್ತಿದ್ದಾರೆ.
