BBK 11 TRP: ಕಿಚ್ಚನ ಪಂಚಾಯ್ತಿಗೆ ಭರಪೂರ್ ರೇಟಿಂಗ್; ಬಿಗ್ ಬಾಸ್ ಕನ್ನಡ 11ರ ಮನೆಯಲ್ಲಿ ನಡೆದ ಕಿತ್ತಾಟಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು?
Bigg Boss Kannada 11 TRP: ಟಿಆರ್‌ಪಿ ವಿಚಾರದಲ್ಲಿ ಬಿಗ್ ಬಾಸ್ ಕನ್ನಡ 11ರ ಸೀಸನ್ ವೀಕ್ಷಕರಿಂದ ಹೆಚ್ಚೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮ ಎನಿಸುತ್ತಿದೆ. ಆರಂಭದಿಂದ ಹಿಡಿದು, ಇದೀಗ ಮೂರನೇ ವಾರದ ಟಿಆರ್‌ಪಿಯಲ್ಲಿಯೂ ಏರಿಕೆ ಕಂಡಿದೆ. ಅದರಲ್ಲೂ ಕಿಚ್ಚನ ವಾರಾಂತ್ಯದ ಏಪಿಸೋಡ್‌ಗಳು ದಾಖಲೆ ಬರೆಯುತ್ತಿವೆ.
Bigg Boss Kannada 11 TRP: ಸೆಪ್ಟೆಂಬರ್ 29ರಿಂದ ಕನ್ನಡದ ಬಿಗ್‌ಬಾಸ್ ಸೀಸನ್ 11 ಶುರುವಾಗಿತ್ತು. ಎಂದಿನಂತೆ ಈ ಸಲ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಕಳೆದ ಬಿಗ್‌ಬಾಸ್ ಸೀಸನ್ 10 ನಿರೀಕ್ಷೆಗೂ ಮೀರಿ ಒಳ್ಳೆಯ ರೆಸ್ಪಾನ್ಸ್ ಪಡೆದಿತ್ತು. ಅದೇ ಹಾದಿಯಲ್ಲಿ ಈ ಸಲದ 11ನೇ ಸೀಸನ್ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಅದರಂತೆ ಆರಂಭವಾದ ಈ ಸಲದ ಬಿಗ್‌ಬಾಸ್ ವೀಕ್ಷಕರ ಗಮನ ಸೆಳೆಯುತ್ತಿದೆ. ಗ್ರ್ಯಾಂಡ್ ಓಪನಿಂಗ್‌ನ ಟಿಆರ್‌ಪಿ ಬಂದ ಬಳಿಕ ಅಷ್ಟೇ ಗ್ರ್ಯಾಂಡ್ ಆಗಿಯೇ ಸೆಲೆಬ್ರೇಟ್ ಮಾಡಿತ್ತು ಸುದೀಪ್ ಮತ್ತು ಕಲರ್ಸ್ ಟೀಮ್. ಇದೀಗ ಮೂರನೇ ವಾರದ ಟಿಆರ್‌ಪಿ ಹೊರಬಿದ್ದಿದೆ.
ಬಿಗ್‌ಬಾಸ್ ಮೊದಲ ವಾರ 9.9 ಟಿಆರ್‌ಪಿ ರೇಟಿಂಗ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿತ್ತು. ಅದಾದ ಬಳಿಕ ಎರಡನೇ ವಾರದ ಟಿಆರ್‌ಪಿಯಲ್ಲಿ ಕಿಚ್ಚ ಸುದೀಪ್ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ರಂಪಾಟ ಮಾಡಿದ್ದ ಜಗದೀಶ್ ಅವರಿಗೆ ಕಿಚ್ಚ ಸುದೀಪ್ ಚೆನ್ನಾಗಿಯೇ ಬಿಸಿ ಮುಟ್ಟಿಸಿದ್ದರು. ಆ ಕಾರಣಕ್ಕೂ ಆ ವಾರಾಂತ್ಯದ ಟಿಆರ್‌ಪಿ ಏರಿಕೆ ಕಂಡಿತ್ತು. ಇದೀಗ ಮೂರನೇ ವಾರದಲ್ಲಿಯೂ ಏರಿಕೆ ಹಾದಿಯಲ್ಲಿದೆ ಬಿಗ್‌ಬಾಸ್ ಟಿಆರ್‌ಪಿ.
ಕಿಚ್ಚನಿಗೆ ಸಿಕ್ಕ ಟಿಆರ್‌ಪಿಯೇ ಅಧಿಕ
ಶನಿವಾರ ಮತ್ತು ಭಾನುವಾರ ಹೊರತುಪಡಿಸಿದರೆ ಇನ್ನುಳಿದ ಐದು ದಿನಗಳಲ್ಲಿ 7.2 ಟಿವಿಆರ್ ಸಿಕ್ಕಿದೆ. ಆ ಪೈಕಿ ಶನಿವಾರ ಒಂದೇ ದಿನದ ಕಿಚ್ಚನ ಪಂಚಾಯ್ತಿಗೆ 8.8 ಟಿಆರ್‌ಪಿ ಸಿಕ್ಕರೆ, ಭಾನುವಾರದ ವಾರದ ಪಂಚಾಯ್ತಿಗೆ 9.2 ಟಿಆರ್‌ಪಿ ಸಿಕ್ಕಿತ್ತು. ಶನಿವಾರ ಮತ್ತು ಭಾನುವಾರದ ಎರಡೂ ದಿನದ ರೇಟಿಂಗ್ 9.0 ಬಂದಿದೆ. ಈ ಮೂಲಕ ಬಿಗ್ ಬಾಸ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ವಾರದ ಐದು ದಿನಗಳಿಗೆ ಹೋಲಿಸಿದರೆ, ವಾರಾಂತ್ಯದ ಕಿಚ್ಚನ ಏಪಿಸೋಡ್‌ಗೆ ವೀಕ್ಷಕರು ಹೆಚ್ಚಾಗಿದ್ದಾರೆ. ಅದೇ ರೀತಿ ವಾರದ ಐದು ದಿನಗಳಲ್ಲಿ ಈ ಶೋಗೆ ಸಿಕ್ಕ ನಂಬರ್ ಎಷ್ಟು ಇಲ್ಲಿದೆ ವಿವರ.
ಕಳೆದ ವಾರದ ಐದು ದಿನಗಳ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?
ಸೋಮವಾರ (ಅಕ್ಟೋಬರ್ 7) 7.46 ಟಿಆರ್‌ಪಿ ಸಿಕ್ಕಿದೆ.
ಮಂಗಳವಾರ (ಅಕ್ಟೋಬರ್ 8) 6.8 ಟಿಆರ್‌ಪಿ ಸಿಕ್ಕಿದೆ.
ಬುಧವಾರ (ಅಕ್ಟೋಬರ್ 9) 6.23 ಟಿಆರ್‌ಪಿ ಸಿಕ್ಕಿದೆ.
ಗುರುವಾರ (ಅಕ್ಟೋಬರ್ 10) 7.6 ಟಿಆರ್‌ಪಿ ಸಿಕ್ಕಿದೆ.
ಶುಕ್ರವಾರ (ಅಕ್ಟೋಬರ್ 11) 7.0 ಟಿಆರ್‌ಪಿ ಸಿಕ್ಕಿದೆ.
ಜಗಳ ಕಿತ್ತಾಟ; ವೀಕ್ಷಕರಿಗೆ ಕಿರಿಕಿರಿ
ಕಳೆದ ಬಿಗ್‌ಬಾಸ್ ಸೀಸನ್ 10ರಲ್ಲಿ ಅತಿ ಹೆಚ್ಚು ಗಲಾಟೆ ನಡೆದರೂ, ಅದು ನೋಡುಗರಿಗೆ ಒಂದು ರೀತಿ ಮಜ ಎನಿಸಿತ್ತು. ಆ ಜಗಳದಲ್ಲಿ ಅಷ್ಟೇ ಗಟ್ಟಿಯಾದ ಕಾರಣಗಳಿದ್ದವು. ಆದರೆ, ಈ ಸಲದ ಸೀಸನ್ 11ರಲ್ಲಿ ಬೇಕು ಅಂತಲೇ ಜಗಳಗಳು ನಡೆಯುತ್ತಿವೆ ಎಂಬುದು ವೀಕ್ಷಕರ ಅಭಿಪ್ರಾಯ. ಸುಖಾ ಸುಮ್ಮನೆ ಕಾಲು ಕೆರದುಕೊಂಡು ಜಗಳ ಆಡುವ ಮೂಲಕ ವೀಕ್ಷಕರಿಗೆ ಕಿರಿಕಿರಿ ಅನಿಸಿದ್ದಾರೆ ಜಗದೀಶ್. ಜಗದೀಶ್ ಹಾವಳಿಗೆ ಉಳಿದ ಮನೆಮಂದಿಯೂ ರೋಸಿ ಹೋಗಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ಬಂದು ನಿಂತಿದೆ. ವೀಕ್ಷಕ ವಲಯದಿಂದಲೂ ಈ ಸಲದ ಶೋ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಿದೆ.
ವಿಭಾಗ